ಸೋಮವಾರ, ನವೆಂಬರ್ 18, 2019
25 °C
ದೀಪಾವಳಿಗೂ ಮುನ್ನ ಏರುಗತಿಯಲ್ಲಿರುವ ಸೂಚ್ಯಂಕ

'ಮಹಾ' ಚುನಾವಣೆ; ಷೇರುಪೇಟೆ ವಹಿವಾಟಿಗೆ ರಜೆ

Published:
Updated:
ಷೇರುಪೇಟೆ

ಮುಂಬೈ: ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ ಸೋಮವಾರ(ಅ.21) ಮತದಾನ ನಡೆಯುತ್ತಿದ್ದು, ದೇಶದ ಷೇರುಪೇಟೆ ವಹಿವಾಟು ಕಾರ್ಯನಿರ್ವಹಿಸುತ್ತಿಲ್ಲ. ಚುನಾವಣೆಯ ಕಾರಣದಿಂದ ಇಂದು ಷೇರುಪೇಟೆ ವಹಿವಾಟು ಚಟುವಟಿಕೆಗಳಿಗೆ ರಜೆ ಘೋಷಿಸಲಾಗಿದೆ. 

ಮುಂಬೈ ಷೇರುಪೇಟೆ(ಬಿಎಸ್‌ಇ) ಮತ್ತು ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ)ಯಲ್ಲಿ ಫ್ಯೂಚರ್ಸ್‌ ಮತ್ತು ಆಪ್ಷನ್ಸ್‌ ಸೇರಿದಂತೆ ಯಾವುದೇ ವಹಿವಾಟು ನಡೆಯುತ್ತಿಲ್ಲ. ಸರಕು (ಕಮಾಡಿಟಿ)ವಿನಿಮಯ ಮಾರುಕಟ್ಟೆಯು ಸಂಜೆಯ ವಹಿವಾಟಿಗೆ ಮಾತ್ರ ತೆರೆಯಲಿದೆ ಎಂದು ಬಿಸಿನೆಸ್‌ ಟುಡೇ ವರದಿ ಮಾಡಿದೆ. 

ಇದನ್ನೂ ಓದಿ: ಹರಿಯಾಣದಲ್ಲಿ ಶೇ.22.25, ಮಹಾರಾಷ್ಟ್ರದಲ್ಲಿ ಶೇ.14.54 ಮತದಾನ

ಮಂಗಳವಾರ(ಅ.22) ಷೇರುಪೇಟೆ ವಹಿವಾಟು ಚಟುವಟಿಕೆಗಳು ಮತ್ತೆ ಆರಂಭವಾಗಲಿದೆ. ಇನ್ನೂ ಮೊದಲ ಹಂತದಲ್ಲಿರುವ ಅಮೆರಿಕ ಮತ್ತು ಚೀನಾ ವಾಣಿಜ್ಯ ಒಪ್ಪಂದ, ಹೊಸ ಬ್ರೆಕ್ಸಿಟ್‌ ಒಪ್ಪಂದಕ್ಕೆ ಸಮ್ಮತಿ ಸೂಚಿಸಲು ಬ್ರಿಟನ್‌ ಸಂಸತ್ತಿನ ವಿಳಂಬ ವ್ಯಕ್ತವಾಗಿರುವುದು ದೇಶೀಯ ಷೇರುಪೇಟೆ ಮೇಲೆಯೂ ಪರಿಣಾಮ ಬೀರಬಹುದಾಗಿದೆ. 

ಅಮೆರಿಕದ ಫೆಡರಲ್‌ ರಿಸರ್ವ್ ಸಭೆಯು ಅಕ್ಟೋಬರ್‌ 29–30ರಂದು ನಡೆಯಲಿದ್ದು, ಬಡ್ಡಿದರ ಕಡಿತ ಸಾಧ್ಯತೆಯನ್ನು ಜಾಗತಿಕ ಹೂಡಿಕೆದಾರರು ಎದುರು ನೋಡುತ್ತಿದ್ದಾರೆ. 

ಇದನ್ನೂ ಓದಿ: ಉತ್ತಮ ಗಳಿಕೆಯ ವಾರ

ಶುಕ್ರವಾರ ಬಿಡುಗಡೆಯಾಗಿರುವ ರಿಲಯನ್ಸ್ ಇಂಡಸ್ಟ್ರೀನ್‌(ಆರ್‌ಐಎಲ್‌) ತ್ರೈಮಾಸಿಕ ಫಲಿತಾಂಶ, ಶನಿವಾರ ಬಿಡುಗಡೆಯಾಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ ಫಲಿತಾಂಶ ಹಾಗೂ ಸೋಮವಾರ ಪ್ರಕಟವಾಗಲಿರುವ ಆಕ್ಸಿಸ್‌ ಬ್ಯಾಂಕ್‌ ಫಲಿತಾಂಶಗಳೂ ದೇಶಿಯ ಷೇರುಪೇಟೆ ಪರಿಣಾಮ ಬೀರಲಿವೆ. 

ಇದನ್ನೂ ಓದಿ: ಷೇರುಪೇಟೆ: ಐದು ತಿಂಗಳಲ್ಲೇ ಉತ್ತಮ ಗಳಿಕೆ

ಕಳೆದ ವಾರ ವಿಶ್ವಬ್ಯಾಂಕ್‌ ಮತ್ತು ಐಎಂಎಫ್‌ ವಾರ್ಷಿಕ ಸಭೆಯಲ್ಲಿ ಭಾಗಿಯಾಗಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಭಾರತ ಮತ್ತು ಅಮೆರಿಕ ನಡುವಿನ ವಾಣಿಜ್ಯ ವಹಿವಾಟು ಮಾತುಕತೆಗೆ ವೇಗ ಸಿಕ್ಕಿದೆ ಎಂದು ಹೇಳಿದ್ದರು. ಇದು ಷೇರುಪೇಟೆ ಮೇಲೆ ಸಕಾರಾತ್ಮ ಪ್ರಭಾವ ಬೀರಬಹುದಾಗಿದೆ.  

ದೀಪಾವಳಿಗೂ ಮುನ್ನ ಷೇರುಪೇಟೆ ಸೂಚ್ಯಂಕ ಏರಿಕೆಯ ಹಾದಿಯಲ್ಲಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರಲ್ಲಿ ಖರೀದಿ ಉತ್ಸಾಹ ಕಂಡುಬಂದಿದೆ. ಶುಕ್ರವಾರ 39,298 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 3 ರಷ್ಟು ಏರಿಕೆ ದಾಖಲಿಸಿದ್ದರೆ, 11,661 ಅಂಶಗಳಲ್ಲಿ ವಹಿವಾಟು ಮುಗಿಸಿದ ನಿಫ್ಟಿ ಶೇ 3.2 ರಷ್ಟು ಏರಿಕೆ ಕಂಡಿದೆ. ಕಳೆದ ಐದು ತಿಂಗಳ ಅವಧಿಯಲ್ಲಿನ ಉತ್ತಮ ಗಳಿಕೆ ಇದಾಗಿದೆ.

ಪ್ರತಿಕ್ರಿಯಿಸಿ (+)