ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ: ವರ್ಷದ ಕೊನೆಯ ವಹಿವಾಟಿನಲ್ಲಿ ಸೆನ್ಸೆಕ್ಸ್‌, ನಿಫ್ಟಿ ಕುಸಿತ

Published 29 ಡಿಸೆಂಬರ್ 2023, 15:59 IST
Last Updated 29 ಡಿಸೆಂಬರ್ 2023, 15:59 IST
ಅಕ್ಷರ ಗಾತ್ರ

ಮುಂಬೈ: ಪ್ರಸಕ್ತ ವರ್ಷದ ಕೊನೆಯ ದಿನವಾದ ಶುಕ್ರವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ ಹಾಗೂ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಕುಸಿತ ದಾಖಲಿಸಿವೆ. ಆದರೂ, ಈ ವರ್ಷದಲ್ಲಿ ಮಾರುಕಟ್ಟೆಯು ಶೇ 20ರಷ್ಟು ವರಮಾನ ಕಂಡಿದೆ.

ಸತತ ಐದು ದಿನಗಳಿಂದ ಷೇರುಪೇಟೆಯು ಏರಿಕೆಯ ಹಾದಿ ಹಿಡಿದಿತ್ತು. ಎನರ್ಜಿ, ಬ್ಯಾಂಕಿಂಗ್‌ ಮತ್ತು ಐ.ಟಿ ಷೇರುಗಳ ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಕುಸಿತದ ಹಾದಿ ಹಿಡಿಯಿತು.

ಸೆನ್ಸೆಕ್ಸ್‌ 170 ಅಂಶ ಕುಸಿಯುವ ಮೂಲಕ 72,240ಕ್ಕೆ ವಹಿವಾಟನ್ನು ಮುಕ್ತಾಯಗೊಳಿಸಿತು. ದಿನದ ಆರಂಭಿಕ ವಹಿವಾಟಿನಲ್ಲಿ 327 ಅಂಶ ಕುಸಿದು, 72,082ಕ್ಕೆ ತಲುಪಿತ್ತು. ನಿಫ್ಟಿಯು 47 ಅಂಕ ಕುಸಿದು, 21,732 ಅಂಶಗಳಲ್ಲಿ ವಹಿವಾಟನ್ನು ಮುಗಿಸಿತು.

ಪ್ರಸಕ್ತ ವರ್ಷದಲ್ಲಿ ಸೆನ್ಸೆಕ್ಸ್‌ 11,399 ಅಂಶ (ಶೇ 18.73) ಏರಿಕೆಯಾಗಿದ್ದರೆ, ನಿಫ್ಟಿ 3,626 ಅಂಶ ಏರಿಕೆ (ಶೇ 20) ಕಂಡಿದೆ. ಹೂಡಿಕೆದಾರರ ಪಾಲಿಗೆ ಈ ವರ್ಷ ಉತ್ತಮ ಫಲ ನೀಡಿದ್ದು, ಒಟ್ಟು 81.90 ಲಕ್ಷ ಕೋಟಿ ಆದಾಯ ಗಳಿಸಿದ್ದಾರೆ.

‘ಸ್ಥೂಲ ಆರ್ಥಿಕತೆ ಅಂಶಗಳು, ಮೂರು ರಾಜ್ಯಗಳಲ್ಲಿ ಬಿಜೆ‍ಪಿ ಅಧಿಕಾರದ ಗದ್ದುಗೆ ಏರಿದ್ದು, ಕಾರ್ಪೊರೇಟ್ ವಲಯದಲ್ಲಿನ ಆದಾಯ ಗಳಿಕೆ, ಅಮೆರಿಕದ ಫೆಡರಲ್ ರಿಸರ್ವ್‌ ಬಡ್ಡಿದರದಲ್ಲಿ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿದ್ದು ಮಾರುಕಟ್ಟೆ ಏರಿಕೆಗೆ ಕಾರಣವಾಗಿದೆ’ ಎಂದು ಷೇರುಪೇಟೆ ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT