ಗುರುವಾರ , ಆಗಸ್ಟ್ 5, 2021
21 °C

₹ 9 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಿದ ಸ್ವಿಗ್ಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೋಟೆಲ್ ಮತ್ತು ರೆಸ್ಟೊರೆಂಟ್‌ಗಳಿಂದ ತಿಂಡಿ, ತಿನಿಸುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸೇವೆ ನೀಡುವ ಸ್ವಿಗ್ಗಿ ಕಂಪನಿಯು ₹ 9,326 ಕೋಟಿ ಮೊತ್ತದ ಬಂಡವಾಳ ಸಂಗ್ರಹ ಪೂರ್ಣಗೊಳಿಸಿರುವುದಾಗಿ ಮಂಗಳವಾರ ತಿಳಿಸಿದೆ.

‘ಆಹಾರ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಭಾರತದ ಕಂಪನಿಯಲ್ಲಿ ಸಾಫ್ಟ್‌ಬ್ಯಾಂಕ್‌ ವಿಷನ್ ಫಂಡ್‌ 2 ಹೂಡಿಕೆ ಮಾಡಿರುವುದು ಇದೇ ಮೊದಲು’ ಎಂದು ಸ್ವಿಗ್ಗಿ ಪ್ರಕಟಣೆ ಹೇಳಿದೆ. ಕತಾರ್ ಹೂಡಿಕೆ ಪ್ರಾಧಿಕಾರ, ಫಾಲ್ಕನ್ ಎಜ್ ಕ್ಯಾಪಿಟಲ್, ಅಮಾನ್ಸಾ ಕ್ಯಾಪಿಟಲ್, ಗೋಲ್ಡ್‌ಮನ್‌ ಸ್ಯಾಚ್ಸ್‌, ಥಿಂಕ್‌ ಇನ್ವೆಸ್ಟ್‌ಮೆಂಟ್‌ ಕಂಪನಿಗಳು ಕೂಡ ಈಗ ಸ್ವಿಗ್ಗಿಯಲ್ಲಿ ಹೂಡಿಕೆ ಮಾಡಿವೆ.

‘ದೂರದೃಷ್ಟಿ ಇರುವ ಜಾಗತಿಕ ಮಟ್ಟದ ಹೂಡಿಕೆ ಕಂಪನಿಗಳು ನಮ್ಮ ಬಂಡವಾಳ ಸಂಗ್ರಹ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು ನಮ್ಮ ವಿಶ್ವಾಸವನ್ನು ಹೆಚ್ಚಿಸಿವೆ. ಆಹಾರ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ವಹಿವಾಟಿಗೆ ಭಾರತದಲ್ಲಿ ಬಹಳ ಅವಕಾಶಗಳಿವೆ. ಈ ವಹಿವಾಟನ್ನು ವಿಸ್ತರಿಸಲು ನಾವು ಮುಂದಿನ ಕೆಲವು ವರ್ಷಗಳವರೆಗೆ ಹೆಚ್ಚು ಹೂಡಿಕೆ ಮಾಡಲಿದ್ದೇವೆ’ ಎಂದು ಸ್ವಿಗ್ಗಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶ್ರೀಹರ್ಷ ಮಾಜೆಟಿ ಹೇಳಿದ್ದಾರೆ.

‘ಆಹಾರ ವಸ್ತುಗಳಿಗೆ ಸಂಬಂಧಿಸಿರದ, ಇತರ ಸೇವೆಗಳಲ್ಲಿ ಕೂಡ ನಾವು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಲಿದ್ದೇವೆ. ಈ ಸೇವೆಗಳು ಬಹಳ ಕಡಿಮೆ ಅವಧಿಯಲ್ಲಿ ಗ್ರಾಹಕರ ಪ್ರೀತಿಗೆ ಕಾರಣವಾಗಿವೆ, ಬೆಳವಣಿಗೆ ಸಾಧಿಸಿವೆ’ ಎಂದೂ ಶ್ರೀಹರ್ಷ ಹೇಳಿದ್ದಾರೆ.

ಸ್ವಿಗ್ಗಿಯಂತಹ ಕಂಪನಿಗಳಿಗೆ ಮುಂದಿನ 10ರಿಂದ 15 ವರ್ಷಗಳು ಜೀವಮಾನದಲ್ಲಿ ಒಮ್ಮೆ ಮಾತ್ರ ಸಿಗುವಂತಹ ಅವಕಾಶವನ್ನು ಸೃಷ್ಟಿಸಿಕೊಡಲಿವೆ. ದೇಶದಲ್ಲಿ ಮಧ್ಯಮ ವರ್ಗಕ್ಕೆ ಸೇರಿದವರ ಸಂಖ್ಯೆ ಹೆಚ್ಚಲಿದೆ ಎಂದು ಶ್ರೀಹರ್ಷ ಅವರು ಅಂದಾಜಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು