ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಿಸ್‌ ಬ್ಯಾಂಕ್‌: ಭಾರತೀಯರ ಠೇವಣಿ ಪ್ರಮಾಣದಲ್ಲಿ ಇಳಿಕೆ

ಸ್ವಿಸ್‌ ನ್ಯಾಷನಲ್‌ ಬ್ಯಾಂಕ್‌ನ ಅಂಕಿ ಅಂಶ
Last Updated 26 ಜೂನ್ 2020, 12:38 IST
ಅಕ್ಷರ ಗಾತ್ರ

ನವದೆಹಲಿ / ಜೂರಿಚ್‌: ಸ್ವಿಟ್ಜರ್ಲೆಂಡ್‌ನ ಬ್ಯಾಂಕ್‌ಗಳಲ್ಲಿ ಭಾರತೀಯರು ಇರಿಸುವ ಹಣದ ಪ್ರಮಾಣವು ಕಡಿಮೆಯಾಗಿದ್ದು, ಠೇವಣಿ ಮೊತ್ತ ಆಧರಿಸಿದ ಶ್ರೇಯಾಂಕದಲ್ಲಿ ಭಾರತ ಈಗ 77ನೇ ಸ್ಥಾನಕ್ಕೆ ಇಳಿದಿದೆ.

ಸ್ವಿಟ್ಜರ್ಲೆಂಡ್‌ನ ಕೇಂದ್ರೀಯ ಬ್ಯಾಂಕ್‌ ಬಿಡುಗಡೆ ಮಾಡಿರುವ ವರದಿ ಪ್ರಕಾರ, 2019ರ ಅಂತ್ಯಕ್ಕೆ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿದ ದೇಶಗಳ ಪೈಕಿ ಇಂಗ್ಲೆಂಡ್‌ ಮೊದಲ ಸ್ಥಾನದಲ್ಲಿ ಇದೆ. ಹಿಂದಿನ ವರ್ಷದಲ್ಲಿ ಭಾರತ 74ನೇ ಸ್ಥಾನದಲ್ಲಿತ್ತು.

ಸ್ವಿಸ್‌ ನ್ಯಾಷನಲ್‌ ಬ್ಯಾಂಕ್‌ (ಎಸ್‌ಎನ್‌ಬಿ) ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಭಾರತೀಯರು ಮತ್ತು ಭಾರತದ ಉದ್ದಿಮೆಗಳು ಸ್ವಿಟ್ಜರ್ಲೆಂಡ್‌ ಬ್ಯಾಂಕ್‌ಗಳ ಭಾರತದಲ್ಲಿನ ಶಾಖೆಗಳ ಮೂಲಕ ಹಣ ಠೇವಣಿ ಇರಿಸಿದ ಮೊತ್ತವು ತುಂಬ ಕಡಿಮೆ ಇದೆ. ಸ್ವಿಟ್ಜರ್ಲೆಂಡ್‌ ಮೂಲದ ಬ್ಯಾಂಕ್‌ಗಳಲ್ಲಿ ವಿದೇಶಿಯರು ಠೇವಣಿ ಇರಿಸಿರುವ ಒಟ್ಟಾರೆ ಮೊತ್ತದಲ್ಲಿ ಭಾರತೀಯರ ಪಾಲು ಕೇವಲ ಶೇ 0.06ರಷ್ಟಿದೆ. ಈ ವಿಷಯದಲ್ಲಿ ಇಂಗ್ಲೆಂಡ್‌ ಮೊದಲ ಸ್ಥಾನದಲ್ಲಿದ್ದು ಶೇ 27ರಷ್ಟು ಪಾಲು ಹೊಂದಿದೆ.

2019ರಲ್ಲಿ ಭಾರತೀಯರು ಇರಿಸಿರುವ ಠೇವಣಿಯು ಶೇ 5.8ರಷ್ಟು ಕಡಿಮೆಯಾಗಿ ₹ 6,625 ಕೋಟಿಗಳಷ್ಟಿದೆ. ವ್ಯಕ್ತಿಗಳು, ಬ್ಯಾಂಕ್‌ ಮತ್ತು ಉದ್ದಿಮೆಗಳಿಗೆ ಸ್ವಿಸ್‌ ಬ್ಯಾಂಕ್‌ಗಳ ಒಟ್ಟಾರೆ ಬಾಧ್ಯತೆ ಇದಾಗಿದೆ. ಸ್ವಿಸ್‌ ಬ್ಯಾಂಕ್‌ಗಳು ‘ಎಸ್‌ಎನ್‌ಬಿ’ಗೆ ನೀಡಿರುವ ಅಧಿಕೃತ ಅಂಕಿ ಅಂಶ ಇದಾಗಿದೆ. ವ್ಯಾಪಕ ಚರ್ಚೆಗೆ ಒಳಗಾಗಿರುವ ಭಾರತೀಯರು ಸ್ವಿಟ್ಜರ್ಲೆಂಡ್‌ನಲ್ಲಿ ಇರಿಸಿದ್ದಾರೆ ಎನ್ನಲಾದ ಕಪ್ಪು ಹಣವನ್ನು ಈ ವಿವರಗಳು ಸೂಚಿಸುವುದಿಲ್ಲ.

ಭಾರತೀಯರು, ಅನಿವಾಸಿ ಭಾರತೀಯರು (ಎನ್‌ಆರ್‌ಐ) ಅಥವಾ ಇತರರು ಮೂರನೇ ದೇಶದ ಸಂಸ್ಥೆಗಳ ಹೆಸರಿನಲ್ಲಿ ಠೇವಣಿ ಇರಿಸಿರುವ ಮಾಹಿತಿಯನ್ನೂ ಈ ಅಂಕಿ ಅಂಶಗಳು ಒಳಗೊಂಡಿರುವುದಿಲ್ಲ.

ಮೊದಲ 5 ದೇಶಗಳು: ವಿದೇಶಿಯರು ಇರಿಸಿರುವ ಠೇವಣಿ ಶ್ರೇಯಾಂಕದಲ್ಲಿ ಇಂಗ್ಲೆಂಡ್‌, ಅಮೆರಿಕ, ವೆಸ್ಟ್‌ ಇಂಡೀಸ್‌, ಫ್ರಾನ್ಸ್‌ ಮತ್ತು ಹಾಂಗ್‌ಕಾಂಗ್‌ ಮೊದಲ ಸ್ಥಾನದಲ್ಲಿ ಇವೆ.

₹ 6,625 ಕೋಟಿ- ಸ್ವಿಸ್‌ ಬ್ಯಾಂಕ್‌ಗಳಲ್ಲಿನ ಭಾರತೀಯರ ಠೇವಣಿ

77- ಠೇವಣಿ ಮೊತ್ತ ಆಧರಿಸಿದ ಶ್ರೇಯಾಂಕದಲ್ಲಿ ಭಾರತದ ಸ್ಥಾನ

5.8 %- 2019ರಲ್ಲಿ ಠೇವಣಿ ಪ್ರಮಾಣದಲ್ಲಿನ ಕುಸಿತ

74- 2018ರಲ್ಲಿನ ಭಾರತದ ಸ್ಥಾನ

0.06 %- ಬ್ಯಾಂಕ್‌ ಠೇವಣಿಗಳ ಒಟ್ಟಾರೆ ಮೊತ್ತದಲ್ಲಿ ಭಾರತೀಯರ ಪಾಲು

27 %- ಇಂಗ್ಲೆಂಡ್‌ನ ಪಾಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT