ಬುಧವಾರ, ಆಗಸ್ಟ್ 21, 2019
24 °C

‘ತೆರಿಗೆ ಭಯೋತ್ಪಾದನೆ ತಡೆಗೆ ಸರ್ಕಾರ ವಿಫಲ’

Published:
Updated:
Prajavani

ಬೆಂಗಳೂರು: ‘ದೇಶದಲ್ಲಿ ಸುಲಲಿತವಾಗಿ ಉದ್ದಿಮೆ ವಹಿವಾಟು ನಡೆಸುವುದಕ್ಕೆ ತೆರಿಗೆ ಭಯೋತ್ಪಾದನೆ ಅತಿದೊಡ್ಡ ಅಡಚಣೆಯಾಗಿದೆ’ ಎಂದು ಇನ್ಫೊಸಿಸ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಟಿ.ವಿ. ಮೋಹನ್‌ದಾಸ್‌ ಪೈ ಟೀಕಿಸಿದ್ದಾರೆ.

‘ಉದ್ಯಮಿಗಳ ವಿರುದ್ಧ ಅನಗತ್ಯವಾಗಿ ತೆರಿಗೆ ಮೊಕದ್ದಮೆ ದಾಖಲಿಸುವುದು ಅವ್ಯಾಹತವಾಗಿ ನಡೆಯುತ್ತಿದೆ. ಇದರಿಂದ ಭಾರತವು ಆರ್ಥಿಕ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಉದ್ಯಮಶೀಲರಿಗೆ  ತೆರಿಗೆ ಪಾವತಿ ಸಂಬಂಧ ನೀಡುವ ಕಿರುಕುಳ ತಡೆಗಟ್ಟಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ’ ಎಂದು ಖಾಸಗಿ ಸುದ್ದಿ ವಾಹಿನಿ ‘ಎನ್‌ಡಿಟಿವಿ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕೆಫೆ ಕಾಫಿ ಡೇ ಪ್ರವರ್ತಕರಾಗಿದ್ದ ವಿ. ಜಿ. ಸಿದ್ಧಾರ್ಥ ಅವರು ತಮ್ಮ ಸಾವಿನ ಮುಂಚೆ ಬರೆದಿದ್ದರು ಎನ್ನಲಾದ ಪತ್ರದಲ್ಲಿ  ತೆರಿಗೆ ಅಧಿಕಾರಿಗಳು ತಮಗೆ ಕಿರುಕುಳ ನೀಡಿದ್ದರು. ಷೇರುಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದ್ದರು ಎಂದು ಆರೋಪಿಸಿದ್ದರು. ಅವರ ಈ ‘ತೆರಿಗೆ ಭಯೋತ್ಪಾದನೆ’ ವಾದವನ್ನು ಬೆಂಬಲಿಸಿ ಮೋಹನ್‌ ದಾಸ್‌ ಪೈ ಮತ್ತು ಬಯೊಕಾನ್‌ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಶಾ ಮಾತನಾಡಿದ್ದಾರೆ.

‘ಉದ್ಯಮಿಗಳಿಗೆ ಆದಾಯ ತೆರಿಗೆ ಕಿರುಕುಳ ನೀಡುತ್ತಿರುವುದರ ಬಗ್ಗೆ ಮಾತನಾಡಬಾರದು ಎಂದು ಸರ್ಕಾರದ ಅಧಿಕಾರಿಯೊಬ್ಬರು ಕಿರಣ್‌ ಮಜುಂದಾರ್ ಶಾ ಅವರಿಗೆ ಹೇಳಿರುವುದು ನಿಜ’ ಎಂದೂ ಪೈ ತಿಳಿಸಿದ್ದಾರೆ.  ಇದನ್ನು ಶಾ ಅವರೂ ದೃಢೀಕರಿಸಿದ್ದಾರೆ ಎಂದು ‘ದಿ ಟೆಲಿಗ್ರಾಫ್‌’ ವರದಿ ಮಾಡಿದೆ.

Post Comments (+)