ಮುಂಬೈ: ಜುಲೈ ತಿಂಗಳಲ್ಲಿ ದೇಶದ ಜವಳಿ ಮತ್ತು ಸಿದ್ಧ ಉಡುಪುಗಳ ರಫ್ತು ಪ್ರಮಾಣವು ಶೇ 4.73ರಷ್ಟು ಏರಿಕೆಯಾಗಿದೆ ಎಂದು ಭಾರತೀಯ ಜವಳಿ ಉದ್ಯಮ ಒಕ್ಕೂಟ (ಸಿಐಟಿಐ) ಗುರುವಾರ ತಿಳಿಸಿದೆ.
2023ರ ಜುಲೈನಲ್ಲಿ ₹23.55 ಕೋಟಿ ಮೌಲ್ಯದಷ್ಟು ಜವಳಿ ಮತ್ತು ಸಿದ್ಧ ಉಡುಪುಗಳ ರಫ್ತಾಗಿತ್ತು. ಈಗ ₹24.65 ಕೋಟಿಯಷ್ಟು ರಫ್ತಾಗಿದೆ ಎಂದು ತಿಳಿಸಿದೆ.
ಸಿದ್ಧ ಉಡುಪು ರಫ್ತು ₹10.72 ಕೋಟಿಯಷ್ಟಾಗಿದ್ದು, ಶೇ 11ರಷ್ಟು ಏರಿಕೆಯಾಗಿದೆ. ಜವಳಿ ರಫ್ತು ಪ್ರಮಾಣದ ಮೌಲ್ಯವು ₹13.93 ಕೋಟಿಯಾಗಿದೆ ಎಂದು ತಿಳಿಸಿದೆ.
‘ಅಮೆರಿಕ, ಐರೋಪ್ಯ ಒಕ್ಕೂಟ ಮತ್ತು ಬ್ರಿಟನ್‌ನಲ್ಲಿ ದೇಶದ ಸಿದ್ಧ ಉಡುಪುಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ರಫ್ತು ಪ್ರಮಾಣದಲ್ಲಿ ಏರಿಕೆಯಾಗಿದೆ’ ಎಂದು ಸಿಐಟಿಐ ಅಧ್ಯಕ್ಷ ರಾಕೇಶ್ ಮೆಹ್ರಾ ಹೇಳಿದ್ದಾರೆ.