ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ ಬೆಲೆ ಕುಸಿತ: ರೈತರಿಗೆ ಸಂಕಷ್ಟ

ಎಪಿಎಂಸಿಯಲ್ಲಿ 15 ಕೆ.ಜಿ ಬಾಕ್ಸ್‌ ಟೊಮೆಟೊ ₹ 50ರಿಂದ ₹ 200ಕ್ಕೆ ಬಿಕರಿ
Last Updated 30 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಟೊಮೆಟೊ ಧಾರಣೆ ದಿನೇ ದಿನೇ ಕುಸಿಯುತ್ತಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಟೊಮೆಟೊ ಮಾರಾಟದಲ್ಲಿ ಏಷ್ಯಾದ ಎರಡನೇ ಅತಿದೊಡ್ಡ ಮಾರುಕಟ್ಟೆ ಎನಿಸಿರುವ ನಗರದ ಎಪಿಎಂಸಿಯಲ್ಲಿ ಎಲ್ಲೆಡೆ ಟೊಮೆಟೊ ರಾಶಿ ಕಾಣತೊಡಗಿದೆ. ಆದರೆ, ಗುಣಮಟ್ಟವಿಲ್ಲದೆ ಬೆಲೆ ಸಿಗುತ್ತಿಲ್ಲ.

ಉತ್ತಮ ಗುಣಮಟ್ಟದಿಂದ ಕೂಡಿದ 15 ಕೆ.ಜಿ.ತೂಗುವ ಬಾಕ್ಸ್‌ ಟೊಮೆಟೊಗೆ ಹರಾಜಿನಲ್ಲಿ ಗರಿಷ್ಠ ₹ 200 ಸಿಗುತ್ತಿದೆ. ಚುಕ್ಕಿಗಳಿಂದ ಕೂಡಿರುವ ಗುಣಮಟ್ಟವಿಲ್ಲದಬಾಕ್ಸ್‌ಟೊಮೆಟೊ ಕನಿಷ್ಠ ₹ 50ಕ್ಕೆ ಬಿಕರಿಯಾಗುತ್ತಿದೆ. ಕಮಿಷನ್‌, ಸಾಗಣೆ, ಕೂಲಿ ವೆಚ್ಚ ಕಳೆದರೆ ರೈತರಿಗೆ ಹಾಕಿದ ಬಂಡವಾಳವೂ ಸಿಗುತ್ತಿಲ್ಲ. ಇತ್ತ ಬೆಲೆ ತಗ್ಗಿದ ಖುಷಿಯಲ್ಲಿ ಗ್ರಾಹಕರು ಇದ್ದಾರೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಒಂದು ಕೆ.ಜಿಗೆ ₹ 10, ₹ 15 ಕ್ಕೆ ಮಾರಾಟವಾಗುತ್ತಿದೆ. ಕೆಲವರು ಟೆಂಪೊ, ತಳ್ಳುವಗಾಡಿಯಲ್ಲಿ ಟೊಮೆಟೊ ಹಾಕಿಕೊಂಡು ನಗರ ಸುತ್ತಾಡಿ ಮಾರಾಟ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಸದ್ಯ ಸುಮಾರು 2,500 ಹೆಕ್ಟೇರ್‌ನಲ್ಲಿ ಮೂರೂವರೆ ಸಾವಿರಕ್ಕೂ ಅಧಿಕ ರೈತರು ಟೊಮೆಟೊ ಬೆಳೆದಿದ್ದಾರೆ. ಬುಧವಾರ ಎಪಿಎಂಸಿಯಲ್ಲಿ ಟೊಮೆಟೊ ಆವಕ ಪ್ರಮಾಣ 9,300 ಕ್ವಿಂಟಲ್‌ ಇತ್ತು. ಒಂದು ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆಯಲು ಅಂದಾಜು ₹ 2.5 ಲಕ್ಷ ಬಂಡವಾಳ ಬೇಕಾಗುತ್ತದೆ.

‘ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಟೊಮೆಟೊ ಆವಕವಾಗುತ್ತಿದೆ. ಮಳೆ ಕಾರಣ ಫಸಲು ಗುಣಮಟ್ಟದಿಂದ ಕೂಡಿಲ್ಲ. ಹೀಗಾಗಿ, ಬೆಲೆ ಕುಸಿದು ಬೆಳೆಗಾರರಿಗೆ ನಷ್ಟ ಉಂಟಾಗುತ್ತಿದೆ’ ಎಂದು ಕೋಲಾರ ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿ ಎರಡು ತಿಂಗಳಲ್ಲಿ ಸುರಿದ ಮಳೆಯ ಕಾರಣ ಟೊಮೆಟೊಗೆ ಅಂಗಮಾರಿ ರೋಗ ಕಾಣಿಸಿಕೊಂಡಿದೆ. ಊಜಿ ನೊಣ ಆವರಿಸಿಕೊಂಡು ಚುಕ್ಕಿಬೀಳುತ್ತಿದೆ.3–4 ದಿನಗಳಲ್ಲಿ ಕೆಟ್ಟು ಹೋಗುತ್ತಿದೆ. ಚೆನ್ನೈ, ಆಂಧ್ರಪ್ರದೇಶ, ಒಡಿಶಾದಲ್ಲಿ ಮಳೆಯ ಕಾರಣ ಅಲ್ಲಿನ ಮಾರುಕಟ್ಟೆಗಳಲ್ಲೇ ಟೊಮೆಟೊ ಸಂಗ್ರಹವಿದ್ದು, ಬೇಡಿಕೆ ಕುಸಿದಿದೆ. ಹೀಗಾಗಿ, ಅಲ್ಲಿನ ವರ್ತಕರು ಇಲ್ಲಿನ ಮಾರುಕಟ್ಟೆ ಕಡೆಗೆ ಸುಳಿಯುತ್ತಿಲ್ಲ.

‘ಟೊಮೆಟೊ ದರ ಏರಿಕೆ ಆಗಬಹುದೆಂಬ ಆಶಯದಿಂದ ಮತ್ತೆ ಮತ್ತೆ ಟೊಮೆಟೊ ಬೆಳೆಯುತ್ತಿದ್ದೇವೆ. ಕಳೆದ ಬಾರಿ ಈ ಅವಧಿಯಲ್ಲಿ ಉತ್ತಮ ದರವಿತ್ತು. 15 ಕೆ.ಜಿ ಬಾಕ್ಸ್‌ಗೆ ₹ 2 ಸಾವಿರದವರೆಗೆ ಬೆಲೆ ಇತ್ತು. ಈಗ, ಬೆಲೆ ಸಿಗದೆ ನಿರಾಸೆ ಉಂಟಾಗಿದೆ’ ಎಂದು ತಾಲ್ಲೂಕಿನ ತೊಟ್ಲಿ ಗ್ರಾಮದ ರೈತ ರಮೇಶ್‌ ಅಳಲು ತೋಡಿಕೊಂಡರು.

***

ಟೊಮೆಟೊ ಉತ್ಪಾದನೆಯ ಪ್ರಮಾಣ ಹೆಚ್ಚಿದ್ದರೂ ಗುಣ ಮಟ್ಟ ಇಲ್ಲವಾಗಿದೆ. ಹೊರರಾಜ್ಯದ ವರ್ತಕರಿಂದ ಬೇಡಿಕೆಯೂ ಇಲ್ಲ. ಕಳೆದ ವರ್ಷ ಇದೇ ಅವಧಿಯಲ್ಲಿ ಉತ್ತಮ ದರವಿತ್ತು.

- ವಿಜಯಲಕ್ಷ್ಮಿ,ಕಾರ್ಯದರ್ಶಿ, ಎಪಿಎಂಸಿ, ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT