ಸೋಮವಾರ, ಜೂನ್ 27, 2022
28 °C

ಉದ್ಯಮಗಳಿಗೆ ತಟ್ಟಿದ ಕೋವಿಡ್‌ ಕಾವು !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಕೋವಿಡ್‌ –19’ ವೈರಸ್‌ ಭೀತಿ ಜನರನ್ನು ಮಾತ್ರ ಕಾಡುತ್ತಿಲ್ಲ. ನಗರದ ವ್ಯಾಪಾರ, ವಹಿವಾಟಿಗೂ ಆವರಿಸಿದೆ. ಈ ಸೂಕ್ಷ್ಮ ಜೀವಿ ಜನಜೀವನದ ಮೇಲೆ ಬೀರಿರುವ ಅಗಾಧ ಪರಿಣಾಮದ ಬಗ್ಗೆ ‘ಮೆಟ್ರೊ’ ಕಿರುನೋಟ ಚೆಲ್ಲಿದೆ.

ಹೋಳಿ ಸಂಭ್ರಮ ಕಸಿದ ಕೋವಿಡ್‌
ಸಾಮಾನ್ಯವಾಗಿ ಹೋಳಿ ಹಬ್ಬದ ದಿನ ಉದ್ಯಾನ ನಗರಿಯ ಬೀದಿಗಳಲ್ಲಿ ಬಣ್ಣದೋಕುಳಿ ಚೆಲ್ಲಾಡಬೇಕಿತ್ತು. ಬೀದಿ ಬೀದಿಗಳಲ್ಲಿ ಹೋಳಿಯ ರಂಗು ಕಾಣಬೇಕಿತ್ತು. ಹೋಟೆಲ್‌, ರೆಸ್ಟೊರೆಂಟ್‌ಗಳು ಈ ಹಬ್ಬಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದವು. ಆದರೆ, ಈ ಬಾರಿ ಕೋವಿಡ್‌ ವೈರಸ್‌ ಭೀತಿಯಿಂದಾಗಿ ಹೆಚ್ಚಿನ ಸಂಭ್ರಮ ನಗರದಲ್ಲಿ ಕಂಡುಬರಲಿಲ್ಲ. 

ಲಕ್ಸುರಿ ಹೋಟೆಲ್‌ ಖಾಲಿ, ಖಾಲಿ
ನಗರದ ಹೋಟೆಲ್‌, ರೆಸ್ಟೋರೆಂಟ್‌ಗಳಿಗೂ ಕೋವಿಡ್‌ –19 ವೈರಸ್‌ ಬಿಸಿ ತಟ್ಟಿದೆ. ಲಕ್ಸುರಿ, ಪ್ರೀಮಿಯಂ ಹೋಟೆಲ್‌ಗಳು ಖಾಲಿ, ಖಾಲಿಯಾಗಿವೆ. ನಗರದ ಪ್ರಸಿದ್ಧ ಚೀನಾ ರೆಸ್ಟೊರೆಂಟ್‌ಗಳ ವ್ಯಾಪಾರವಂತೂ ಪಾತಾಳಕ್ಕೆ ಕುಸಿದಿದೆ. ಹೋಟೆಲ್‌ಗಳಲ್ಲಿ ಮಾಂಸಾಹಾರ ಸೇವನೆಗೆ ಜನರು ಹಿಂಜರಿಯುತ್ತಿದ್ದಾರೆ. ಇದರಿಂದ ಮಾಂಸಾಹಾರ ಸೇವಿಸುವವರ ಸಂಖ್ಯೆ ಕೂಡ ಗಣನೀಯವಾಗಿ ಕುಸಿದಿದೆ. 

ಹೋಟೆಲ್‌ ರೂಂಗಳ ಬುಕ್ಕಿಂಗ್‌ ಕೂಡ ಶೇ 60ರಷ್ಟು ಕಡಿಮೆಯಾಗಿದೆ. ಬೇಸಿಗೆ ರಜೆಯ ಕಾರಣ ನಗರಕ್ಕೆ ಪ್ರವಾಸ ಬರಲಿದ್ದ ಗ್ರಾಹಕರು ಮುಂಗಡವಾಗಿ ರೂಂಗಳನ್ನು ಕಾಯ್ದಿರಿಸಿದ್ದರು. ವೈರಸ್‌ ಭೀತಿಯಿಂದ ಪ್ರವಾಸವನ್ನು ರದ್ದು ಮಾಡಿ, ಕಾಯ್ದಿರಿಸಿದ ರೂಂಗಳನ್ನು ಕ್ಯಾನ್ಸಲ್‌ ಮಾಡುತ್ತಿದ್ದಾರೆ.

ಸ್ಟಾರ್‌ ಮತ್ತು ಪ್ರೀಮಿಯಂ ಹೋಟೆಲ್‌ಗಳಲ್ಲಿ ಕಾರ್ಪೊರೇಟ್‌ ಔತಣಕೂಟಗಳು ರದ್ದಾಗುತ್ತಿವೆ. ಅತಿಥಿಗಳ ಪ್ರವಾಸ ರದ್ದು ಹಿನ್ನೆಲೆಯಲ್ಲಿ ಔತಣಕೂಟಗಳು ನಡೆಯುತ್ತಿಲ್ಲ. ವಾರಾಂತ್ಯದಲ್ಲಿ ನಡೆಯುತ್ತಿದ್ದ ಮೋಜು, ಮಸ್ತಿಯ ಪಾರ್ಟಿಗಳಿಗೂ ಕಡಿವಾಣ ಬಿದ್ದಿದೆ. 

ಬ್ಯುಸಿನೆಸ್‌ಗೆ ಹೊಡೆತ ಬಿದ್ದಿರುವುದು ನಿಜ. ಹಾಗಂತ ಹೋಟೆಲ್‌ ಬಂದ್‌ ಮಾಡಲು ಆಗುವುದಿಲ್ಲ. ಇದು ತಪ್ಪು ಸಂದೇಶ ರವಾನಿಸುತ್ತದೆ. ಜನರು ಬರಲಿ, ಬಿಡಲಿ ಎಂದಿನಂತೆ ನಮ್ಮ ಸೇವೆಗಳು ಮುಂದುವರಿಯಲಿವೆ. ಇಲ್ಲಿ ಲಾಭ, ನಷ್ಟದ ವ್ಯವಹಾರಕ್ಕಿಂತ ಹೋಟೆಲ್‌ ಘನತೆ ಮುಖ್ಯ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಪ್ರೀಮಿಯಂ ಹೋಟೆಲ್‌ ಮಾಲೀಕರೊಬ್ಬರು.

ಆಟೊಗಳಿಗೂ ತಾಗಿದ ಬಿಸಿ
ರಜೆಗಳಿದ್ದರೂ ಮನೆಯಿಂದ ಹೊರಬರಲು ಜನರು ಹಿಂಜರಿಯುತ್ತಿದ್ದಾರೆ. ಇದರಿಂದ ಆಟೊಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಕ್ಷೀಣಿಸಿದೆ. ಇದರಿಂದ ರಸ್ತೆಗಳಲ್ಲಿ ಆಟೊಗಳ ಓಡಾಟ ತುಸು ಕಡಿಮೆಯಾಗಿದೆ. ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ಆಟೊ ಹತ್ತುವ ಪ್ರಯಾಣಿಕರು, ಚಾಲಕರಿಗೂ ಕೈತೊಳೆದುಕೊಳ್ಳುವಂತೆ, ಮುಖಕ್ಕೆ ಮಾಸ್ಕ್‌ ಧರಿಸುವಂತೆ ಸೂಚಿಸುತ್ತಿದ್ದಾರೆ. ದುಡ್ಡು ಕೊಡುವಾಗ, ತೆಗೆದುಕೊಳ್ಳುವಾಗ ಬಹಳ ಎಚ್ಚರಿಕೆ ವಹಿಸುತ್ತಿದ್ದಾರೆ. ಚಾಲಕರ ಬಳಿ ದುಡ್ಡು ತೆಗೆದುಕೊಂಡು ನಂತರ ಕೈಗಳನ್ನು ಸ್ಯಾನಿಟೈಸರ್‌ ಸಿಂಪಡಿಸಿಕೊಳ್ಳುತ್ತಾರೆ ಎನ್ನುತ್ತಾರೆ ಆಟೊ ಚಾಲಕರು.

ಕ್ಯಾಬ್‌ ಓಟಕ್ಕೆ ಬ್ರೇಕ್‌
ಕ್ಯಾಬ್‌ಗಳ ಚಾಲಕರು ವಿಮಾನ ನಿಲ್ದಾಣಕ್ಕೆ ಟ್ರಿಪ್‌ ಬರಲು ಹಿಂಜರಿಯುತ್ತಿದ್ದಾರೆ. ಹೊರ ದೇಶಗಳಿಂದ ಬರುವ ಪ್ರಯಾಣಿಕರಿಂದ ಸೋಂಕು ತಗುಲಬಹುದು ಎಂಬ ಭೀತಿ ಹೆಚ್ಚಿನ ಕ್ಯಾಬ್‌ ಚಾಲಕರನ್ನು ಕಾಡುತ್ತಿದೆ. ಹೆಚ್ಚಿನ ಕಾರ್ಪೊರೇಟ್‌ ಮತ್ತು ಐ.ಟಿ. ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಸಿಬ್ಬಂದಿಗೆ ಸೂಚಿಸಿದ ನಂತರ ಕ್ಯಾಬ್‌ ಬುಕ್ಕಿಂಗ್‌ ಗಣನೀಯವಾಗಿ ಇಳಿಮುಖವಾಗಿದೆ.

ನಮ್ಮ ಬ್ಯುಸಿನೆಸ್‌ ಶೇ 70ರಷ್ಟು ಕುಸಿತ ಕಂಡಿದೆ. ಪ್ರತಿ ದಿನ ವಿಮಾನ ನಿಲ್ದಾಣಕ್ಕೆ ಕನಿಷ್ಠ ಎರಡರಿಂದ ಮೂರು ಟ್ರಿಪ್‌ ಸಿಗುತ್ತಿದ್ದವು. ನಾಲ್ಕೈದು ದಿನಗಳಿಂದ ವಿಮಾನ ನಿಲ್ದಾಣಕ್ಕೆ ಒಂದೇ ಒಂದು ಟ್ರಿಪ್‌ ಸಿಕ್ಕಿಲ್ಲ ಎನ್ನುತ್ತಾರೆ ಓಲಾ ಕ್ಯಾಬ್‌ ಚಾಲಕ ಪ್ರಸಾದ್‌.

ಕ್ಯಾಬ್‌ ಸೇವೆ ನೀಡುತ್ತಿರುವ ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ಮಾಸ್ಕ್ ಮತ್ತು ಹ್ಯಾಂಡ್‌ ಸ್ಯಾನಿಟೈಸರ್‌ ನೀಡಿವೆ. ಪ್ರಯಾಣಿಕರಿಗೂ ಉಚಿತವಾಗಿ ಹಂಚುತ್ತಿವೆ. ಸೋಂಕು ಲಕ್ಷಣ ಕಂಡು ಬರುವ ಪ್ರಯಾಣಿಕರೊಂದಿಗೆ ಅಂತರ ಕಾಪಾಡುವಂತೆ ಎಚ್ಚರಿಕೆ ನೀಡಿವೆ. 

ಜಿಮ್‌ಗಳಲ್ಲಿ ಸುರಕ್ಷತಾ ಕ್ರಮ
ಜಿಮ್‌ಗಳಲ್ಲಿ ದೇಹ ದಂಡಿಸುವವರ ಸಂಖ್ಯೆಗೇನೂ ಕೊರತೆಯಾಗಿಲ್ಲ. ಇಲ್ಲಿಗೆ ಬರುವ ಹೆಚ್ಚಿನವರಿಗೆ ಆರೋಗ್ಯದ ಬಗ್ಗೆ ಕಾಳಜಿ ಇರುತ್ತದೆ. ವೈಯಕ್ತಿಕವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಾರೆ. ಜಿಮ್‌ಗಳಲ್ಲೂ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ. ಒಬ್ಬರು ಬಳಸಿದ ಸಾಧನ, ಸಲಕರಣೆಗಳನ್ನು ಬಿಸಿನೀರು ಮತ್ತು ಡೆಟಾಲ್‌ನಿಂದ ಚೆನ್ನಾಗಿ ತೊಳೆಯಲಾಗುತ್ತದೆ ಎನ್ನುತ್ತಾರೆ ಬಸವೇಶ್ವರ ನಗರದ ಗೋಲ್ಡ್‌ ಜಿಮ್‌ ಮಾಲೀಕ ವಿಶ್ವನಾಥ್‌ ಕಟ್ಟಿ.

ಅನೇಕ ಜಿಮ್‌ ಮತ್ತು ಕಚೇರಿಗಳು ಈಚೆಗೆ ವಿದೇಶ ಪ್ರಯಾಣ ಮಾಡಿದವರ ಮಾಹಿತಿ ಸಂಗ್ರಹಿಸುತ್ತಿವೆ. ಅಂತವರ ಆರೋಗ್ಯ ಲಕ್ಷಣಗಳ ಮೇಲೆ ಕಣ್ಣಿರಿಸಿವೆ. ಜಿಮ್‌ ಸಾಧನಗಳಿಗೆ ಹೆಚ್ಚುವರಿಯಾಗಿ ರಬ್ಬರ್‌ ಗ್ರಿಪ್ಪರ್‌ ಅಳವಡಿಸಲಾಗಿದೆ. ಹಸ್ತಲಾಘವ ಮಾಡದಂತೆ ಸೂಚಿಸಲಾಗಿದೆ. ಜಿಮ್‌ನ ಉದ್ಯೋಗಿಗಳಿಗೆ ಕೈ ಮತ್ತು ಮುಖಗವಸು ನೀಡಲಾಗಿದ್ದು, ಕಡ್ಡಾಯವಾಗಿ ಧರಿಸುವಂತೆ ಸೂಚಿಸಲಾಗಿದೆ. 

ಬಿಕೋ ಎನ್ನುತ್ತಿವೆ ಟೆಕ್‌ ಪಾರ್ಕ್‌
ಹೆಚ್ಚಿನ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದ ಕಾರಣ ಕಚೇರಿಗೆ ಬರುವ ನೌಕರರ ಸಂಖ್ಯೆ ಕಡಿಮೆಯಾಗಿದೆ. ಸ್ವಲ್ಪ ಜ್ವರ, ಶೀತ ಕಾಣಿಸಿಕೊಂಡವರೂ ರಜೆ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಹೆಚ್ಚಿನ ಐ.ಟಿ ಮತ್ತು ಬಿ.ಟಿ ಕಂಪನಿಗಳು ಬಿಕೊ ಎನ್ನುತ್ತಿವೆ. ಒಬ್ಬರಿಂದ ಮತ್ತೊಬ್ಬರು ಕನಿಷ್ಠ ಎರಡು ಅಡಿ ಅಂತರ ಕಾಪಾಡಿಕೊಳ್ಳುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಇದರಿಂದ ಮೀಟಿಂಗ್‌, ಸಭೆ, ಸಮಾರಂಭ ಮತ್ತು ಕಾರ್ಯಕ್ರಮಗಳನ್ನು ರದ್ದು ಮಾಡಲಾಗುತ್ತಿದೆ. ಕಚೇರಿ ಮತ್ತು ಕ್ಯಾಂಟೀನ್‌ಗಳನ್ನು ಆಗಿಂದಾಗ್ಗೆ ಸ್ವಚ್ಛ ಮಾಡಲಾಗುತ್ತಿದೆ.

ವಿಮಾನಯಾನ ಕುಸಿತ
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಿದೆ. ಇಲ್ಲಿಂದ ಪ್ರಯಾಣಿಸುವವರ ಮತ್ತು ಇಲ್ಲಿಗೆ ಬಂದಿಳಿಯುವ ಪ್ರಯಾಣಿಕರ ಸಂಖ್ಯೆ ಕೂಡ ಇಳಿಮುಖವಾಗಿದೆ.

ದೇಶೀಯ ವಿಮಾನ ಪ್ರಯಾಣದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ. ಆದರೆ, ಅಂತರರಾಷ್ಟ್ರೀಯ ವಿಮಾನ ಪ್ರಯಾಣಿಕರ ಸಂಖ್ಯೆ ಶೇ 9ರಷ್ಟು ಕುಸಿತ ಕಂಡಿದೆ. 

ಎಲ್ಲ ಪ್ರಯಾಣಿಕರನ್ನು ಅದರಲ್ಲೂ ವಿಶೇಷವಾಗಿ ವಿದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗಿದೆ. ಕೋವಿಡ್‌–19 ವೈರಾಣು ಸೋಂಕು ಹರಡದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು