ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿಸಿನ ಧಾರಣೆ ದಿಢೀರ್ ಇಳಿಕೆ: ಮಾರಾಟಕ್ಕೆ ತಟ್ಟಿದ ನೀತಿ ಸಂಹಿತೆ ಬಿಸಿ

ಮಾರಾಟಕ್ಕೆ ತಟ್ಟಿದ ನೀತಿ ಸಂಹಿತೆ ಬಿಸಿ: ಮಹಾರಾಷ್ಟ್ರ, ಆಂಧ್ರದಿಂದ ಪೂರೈಕೆ ಹೆಚ್ಚಳ
Published 15 ಏಪ್ರಿಲ್ 2024, 20:07 IST
Last Updated 15 ಏಪ್ರಿಲ್ 2024, 20:07 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಮಾರ್ಚ್‌ ಎರಡನೇ ವಾರದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದ ಅರಿಸಿನ ಧಾರಣೆಯು, ಲೋಕಸಭೆಗೆ ಚುನಾವಣೆ ಘೋಷಣೆಯಾದ ಬಳಿಕ ದಿಢೀರ್‌ ಕುಸಿತ ಕಂಡಿದೆ. 

ಒಂದು ಕ್ವಿಂಟಲ್‌ ಅರಿಸಿನ ದರವು ₹19 ಸಾವಿರದವರೆಗೂ ತಲುಪಿತ್ತು. ಸದ್ಯ ಸ್ಥಳೀಯ ಮಾರುಕಟ್ಟೆಯಲ್ಲಿ ₹14 ಸಾವಿರದಿಂದ ₹15,500 ಧಾರಣೆ ಇದೆ. ಕ್ವಿಂಟಲ್‌ಗೆ ಏಕಾಏಕಿ ₹5 ಸಾವಿರ ಕುಸಿತವಾಗಿದೆ.

ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಅರಿಸಿನ ಮಾರುಕಟ್ಟೆಗೆ ಬರುತ್ತಿರುವುದರಿಂದ ಬೆಲೆ ಕಡಿಮೆಯಾಗಿದೆ ಎಂದು ಕೆಲವು ರೈತರು ಹೇಳಿದರೆ, ಮಾರಾಟಕ್ಕೆ ಚುನಾವಣಾ ನೀತಿ ಸಂಹಿತೆಯ ಬಿಸಿಯೂ ತಟ್ಟಿದೆ ಎಂದು ಕೆಲವು ಬೆಳೆಗಾರರು ಹೇಳುತ್ತಾರೆ.

ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ದಾಖಲೆಗಳಿಲ್ಲದೆ ₹50 ಸಾವಿರಕ್ಕಿಂತ ಹೆಚ್ಚು ನಗದು ಕೊಂಡೊಯ್ಯುವುದು ಸಾಧ್ಯವಿಲ್ಲ. ಇದರಿಂದ ದಲ್ಲಾಳಿಗಳು, ವ್ಯಾಪಾರಿಗಳು ಇದೇ ಸಮಯವನ್ನು ಬಳಸಿಕೊಂಡು ಬೆಲೆ ಇಳಿಯುವಂತೆ ನೋಡಿಕೊಂಡಿದ್ದಾರೆ ಎಂದು ರೈತರು ದೂರುತ್ತಾರೆ.  

ನೆರೆ ರಾಜ್ಯಗಳಿಂದಲೂ ಪೂರೈಕೆ:

ಮಹಾರಾಷ್ಟ್ರದ ನಾಂದೇಡ್‌, ಆಂಧ್ರದ ನಿಜಾಮಾಬಾದ್‌ ಪ್ರದೇಶದಲ್ಲಿ ಅರಿಸಿನವನ್ನು ಹೆಚ್ಚು ಬೆಳೆಯಲಾಗುತ್ತದೆ. ಅಲ್ಲಿನ ರೈತರು ಮುಂಗಾರು ಆರಂಭವಾದ ಬಳಿಕ ನಾಟಿ ಮಾಡುತ್ತಾರೆ.

‘ಕಳೆದ ವರ್ಷದ ಜೂನ್‌, ಜುಲೈ ನಂತರ ಬಿತ್ತನೆ ಮಾಡಿದ್ದ ಫಸಲು ಕೊಯ್ಲಿಗೆ ಬರುವುದು ವಿಳಂಬವಾಗಿತ್ತು. ಹಾಗಾಗಿ ಫೆಬ್ರುವರಿ, ಮಾರ್ಚ್‌ನಲ್ಲಿ ಮಾರುಕಟ್ಟೆಯಲ್ಲಿ ಅರಿಸಿನ ಕೊರತೆ ಉಂಟಾಗಿದ್ದರಿಂದ ಧಾರಣೆ ಏರಿಕೆಯಾಗಿತ್ತು’ ಎಂದು ಚಾಮರಾಜನಗರ ಜಿಲ್ಲಾ ಅರಿಸಿನ ಬೆಳೆಗಾರರ ಒಕ್ಕೂಟದ ಮುಖಂಡ ನಾಗಾರ್ಜುನ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಮಾರ್ಚ್‌ ಮೂರನೇ ವಾರದಿಂದ ಈ ಎರಡೂ ರಾಜ್ಯಗಳಲ್ಲಿ ಕಟಾವು ಆರಂಭಗೊಂಡಿದೆ. ಆ ಅರಿಸಿನವು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿದೆ. ಹೀಗಾಗಿ ಬೆಲೆ ಇಳಿಕೆಯಾಗಿದೆ’ ಎಂದು ಹೇಳಿದರು. 

‘ಚುನಾವಣಾ ನೀತಿ ಸಂಹಿತೆ ಜಾರಿಯಾದಾಗಿನಿಂದ ನಗದು ವಹಿವಾಟು ಹೆಚ್ಚು ನಡೆಯುತ್ತಿಲ್ಲ. ಹೆಚ್ಚು ಮೊತ್ತವನ್ನು ತೆಗೆದುಕೊಂಡು ಹೋಗಲಾಗುವುದಿಲ್ಲ. ಹಣದ ಅವಶ್ಯಕತೆ ಇರುವ ರೈತರಷ್ಟೇ ಅರಿಸಿನ ಮಾರಾಟ ಮಾಡುತ್ತಿದ್ದಾರೆ’ ಎಂದು ದಲ್ಲಾಳಿ ಸುರೇಶ್‌ ಬಾಬು ಹೇಳಿದರು. 

‘ಒಂದು ವಾರದ ಅವಧಿಯಲ್ಲಿ ಕ್ವಿಂಟಲ್‌ಗೆ ₹5,000–₹6,000 ದರ ಕಡಿಮೆಯಾಗಿದೆ. ಸಣ್ಣ ರೈತರು ಹೆಚ್ಚು ದಿನ ಅರಿಸಿನವನ್ನು ಸಂಗ್ರಹಿಸಿಡಲು ಆಗುವುದಿಲ್ಲ. ಹಾಗಾಗಿ, ಸಿಗುವ ಬೆಲೆಗೆ ಅನಿವಾರ್ಯವಾಗಿ ಮಾರಾಟ ಮಾಡುವುದು ಅನಿವಾರ್ಯವಾಗಿದೆ’ ಎಂದು ಬೆಳೆಗಾರ ಲಿಂಗರಾಜು ತಿಳಿಸಿದರು. 

ಬೆಳೆಗಾರರಿಗೆ ಗೊಂದಲ

ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದ್ದ ಅರಿಸಿನದ ಧಾರಣೆ ಇಳಿದಿದ್ದರೂ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬೆಳೆಗಾರರಿಗೆ ಉತ್ತಮ ಬೆಲೆಯೇ ಸಿಕ್ಕಿದೆ. ಇದೇ ಬೆಲೆ ಸ್ಥಿರವಾಗಿದ್ದರೆ ನಮಗೆ ನಷ್ಟವಾಗುವುದಿಲ್ಲ ಎಂದು ಹೇಳುತ್ತಾರೆ ಬೆಳೆಗಾರರು.  ಚುನಾವಣೆ ಬಳಿಕ ಧಾರಣೆ ಏರಿಕೆಯಾಗಬಹುದು ಎಂಬ ಮಾತು ಕೇಳಿಬರುತ್ತಿರುವುದರಿಂದ ಬೆಳೆಗಾರರು ಈಗ ಅರಿಸಿನ ಮಾರಾಟ ಮಾಡಬೇಕೇ ಬೇಡವೇ ಎಂಬ ಗೊಂದಲದಲ್ಲಿದ್ದಾರೆ. ಚುನಾವಣೆ ಬಳಿಕ ಭಾರಿ ಪ್ರಮಾಣದಲ್ಲಿ ಮಾರುಕಟ್ಟೆಗೆ ಅರಿಸಿನ ಆವಕವಾದರೆ ಬೆಲೆ ಕುಸಿತವಾಗಬಹುದು ಎಂಬ ಆತಂಕವೂ ಅವರಿಗೆ ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT