ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌: ಸರಕು ಸಾಗಣೆಗೆ ತೀವ್ರ ಅಡ್ಡಿ, ಕೂಲಿ ಕಾರ್ಮಿಕರ ಅಲಭ್ಯತೆ

Last Updated 2 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ದಿಗ್ಬಂಧನ ಜಾರಿಯಲ್ಲಿ ಇರುವುದರಿಂದ ಟ್ರಕ್‌ ಚಾಲಕರು ಮತ್ತು ಕಾರ್ಮಿಕರ ಅಲಭ್ಯತೆಯಿಂದಾಗಿ ಸರಕುಗಳ ಸಾಗಾಣಿಕೆಗೆ ಭಾರಿ ಅಡಚಣೆ ಎದುರಾಗಿದೆ.

ಅವಶ್ಯಕವಲ್ಲದ ಸರಕುಗಳ ಸಾಗಾಣಿಕೆಗೂ ಅವಕಾಶ ಮಾಡಿಕೊಡಬೇಕು ಎಂದು ಗೃಹ ಸಚಿವಾಲಯವು ಈಗಾಗಲೇ ಅನುಮತಿ ನೀಡಿದ್ದರೂ ಇದುವರೆಗೆ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡು ಬಂದಿಲ್ಲ ಎಂದು ಅಖಿಲ ಭಾರತ ಮೋಟರ್‌ ಸಾರಿಗೆ ಕಾಂಗ್ರೆಸ್‌ (ಎಐಎಂಟಿಸಿ) ತಿಳಿಸಿದೆ.

'ಕನಿಷ್ಠ ಮೂಲ ಸೌಕರ್ಯಗಳಾದ ಆಹಾರ ಮತ್ತು ವಸತಿ ಲಭ್ಯ ಇರುವ ಕಡೆಗಳಲ್ಲಿ ಚಾಲಕರು ನೆಲೆ ನಿಂತಿದ್ದಾರೆ. ಅನೇಕರು ತಮ್ಮ ಊರುಗಳಿಗೆ ತೆರಳಿದ್ದಾರೆ. ಹೀಗಾಗಿ ಟ್ರಕ್‌ಗಳು ರಸ್ತೆಗೆ ಇಳಿದಿಲ್ಲ. ಎಲ್‌ಪಿಜಿ, ಪೆಟ್ರೋಲಿಯಂ ಉತ್ಪನ್ನ ಮತ್ತು ಕಡಿಮೆ ದೂರಕ್ಕೆ ಹಾಲು ಪೂರೈಸುವ ವಾಹನಗಳು ಮಾತ್ರ ಸಂಚರಿಸುತ್ತಿವೆ’ ಎಂದು ‘ಎಐಎಂಟಿಸಿ‘ಯ ಮಾಜಿ ಅಧ್ಯಕ್ಷ ಬಿ. ಎಂ. ಸಿಂಗ್‌ ಹೇಳಿದ್ದಾರೆ.

‘ದೇಶದಾದ್ಯಂತ ದಿಗ್ಬಂಧನ ಜಾರಿಗೆ ಬರುವ ಮೊದಲೇ ಅನೇಕ ರಾಜ್ಯ ಸರ್ಕಾರಗಳು ಗಡಿ ಬಂದ್‌ ಮಾಡಿರುವುದರಿಂದ ಲಕ್ಷಾಂತರ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ದಿಗ್ಬಂಧನ ಘೋಷಿಸಿರುವುದರಿಂದ ಟ್ರಕ್‌ ಚಾಲಕರಲ್ಲಿ ಗಾಬರಿ ಮನೆ ಮಾಡಿತ್ತು. ಹೀಗಾಗಿ ಅಸಂಖ್ಯಾತ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಹೆದ್ದಾರಿಗುಂಟ ಹೋಟೆಲ್‌, ಢಾಬಾಗಳು ಬಾಗಿಲು ಮುಚ್ಚಿರುವುದರಿಂದ ಅವರು ರಸ್ತೆಗೆ ಇಳಿಯಲು ಹಿಂದೇಟು ಹಾಕುತ್ತಿದ್ದಾರೆ. ಕಾರ್ಮಿಕರ ಅಲಭ್ಯತೆಯೂ ದೇಶದಲ್ಲಿ ಸರಕುಗಳ ಸಾಗಾಣಿಕೆಗೆ ದೊಡ್ಡ ಅಡಚಣೆಯಾಗಿ ಪರಿಣಮಿಸಿದೆ.

‘ಟ್ರಕ್‌ ಮಾಲೀಕರು, ಸರಕು ಸಾಗಣೆ ಕಂಪನಿಗಳ ಸಿಬ್ಬಂದಿ ಮನೆಯಲ್ಲಿದ್ದಾರೆ. ಕಚೇರಿಗಳು ಬಾಗಿಲು ಹಾಕಿವೆ. ಗ್ಯಾರೇಜ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಸರಕು ಲೋಡ್‌, ಅನ್‌ಲೋಡ್‌ ಮಾಡಲು ಕಾರ್ಮಿಕರೂ ದೊರೆಯುತ್ತಿಲ್ಲ. ಸರಕುಗಳ ಸಾಗಣೆ ವಹಿವಾಟಿನಲ್ಲಿ ತೊಡಗಿದವರಿಗೂ ಸರ್ಕಾರ ವಿಮೆ ಸೌಲಭ್ಯ ವಿಸ್ತರಿಸಿದರೆ ಮನೆಯಿಂದ ಹೊರಬಂದು ಕೆಲಸ ನಿರ್ವಹಿಸಲು ಅವರಿಗೂ ಉತ್ತೇಜನ ದೊರೆಯಲಿದೆ‘ ಎಂದು ಹೇಳಿದ್ದಾರೆ.

ಟ್ರಕ್‌ಗಳ ಅಲಭ್ಯತೆಯಿಂದಾಗಿ ತಮ್ಮ ಉತ್ಪನ್ನಗಳ ಸಾಗಾಣಿಕೆಗೆ ತೀವ್ರ ಅಡಚಣೆ ಉಂಟಾಗಿದೆ ಎಂದು ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಸರಕುಗಳನ್ನು (ಎಫ್‌ಎಂಸಿಜಿ) ತಯಾರಿಸುವ ಕಂಪನಿಗಳಾದ ಐಟಿಸಿ, ಡಾಬರ್‌ ಇಂಡಿಯಾ, ಪಾರ್ಲೆ ಪ್ರಾಡಕ್ಟ್‌, ಗೋದ್ರೆಜ್‌ ಕನ್ಸುಮರ್‌ ಪ್ರಾಡಕ್ಟ್ಸ್‌ ಮತ್ತು ಜ್ಯೋತಿ ಲ್ಯಾಬ್ಸ್‌ ತಿಳಿಸಿವೆ.

ವಿಳಂಬ ತಡೆಗೆ ಕ್ರಮ: ಸ್ಪಾಟ್‌ಆನ್ ಲಾಜಿಸ್ಟಿಕ್ಸ್‌
ಅವಶ್ಯಕ ಮತ್ತು ಪ್ರಮುಖ ಸರಕುಗಳ ವಿತರಣೆಯಲ್ಲಿ ಕಂಪನಿಯ ಸಿಬ್ಬಂದಿಯ ಮತ್ತು ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಸರಕು ಪೂರೈಕೆ ಕಂಪನಿ ಸ್ಪಾಟ್‌ಆನ್‌ ಲಾಜಿಸ್ಟಿಕ್ಸ್‌ ತಿಳಿಸಿದೆ.

‘ಸದ್ಯದ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸರಕುಗಳ ಸಂಗ್ರಹ ಮತ್ತು ವಿತರಣೆಯಲ್ಲಿ ವಿಳಂಬ ಆಗುತ್ತಿದೆ. ಪೂರೈಕೆ ಸರಣಿಯಲ್ಲಿ ಅನಿರೀಕ್ಷಿತ ವಿಳಂಬವಾಗದಂತೆ ನಿರಂತರವಾಗಿ ನಿಗಾ ಇರಿಸಲಾಗಿದೆ. ಗ್ರಾಹಕರ ಅನುಮಾನ ಪರಿಹರಿಸಲು, ಪಾರ್ಸೆಲ್‌ ಮತ್ತು ವಾಹನಗಳ ಜಾಡು ತಿಳಿಯಲು ಸಹಾಯವಾಣಿ ಆರಂಭಿಸಲಾಗಿದೆ’ ಎಂದು ಕಂಪನಿಯ ಸಿಇಒ ಅಭಿಕ್‌ ಮಿತ್ರಾ ಹೇಳಿದ್ದಾರೆ.

* 90 ಲಕ್ಷ: ದೇಶದಲ್ಲಿನ ವಾಣಿಜ್ಯ ವಾಹನಗಳ ಸಂಖ್ಯೆ

* 5 %: ಸಂಚರಿಸುತ್ತಿರುವ ವಾಹನಗಳ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT