ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ತೆರಿಗೆ ಉಳಿತಾಯ ಹೇಗೆ?

Last Updated 24 ನವೆಂಬರ್ 2020, 21:25 IST
ಅಕ್ಷರ ಗಾತ್ರ

ಪ್ರಶ್ನೆ: ನಾನು ನಿವೃತ್ತ ನೌಕರ. ವಯಸ್ಸು 63 ವರ್ಷ. ಎಸ್‌ಬಿಐ ಈಕ್ವಿಟಿ ಹೈಬ್ರಿಡ್‌ ಫಂಡ್‌ ಹಾಗೂ ಕ್ರೆಡಿಟ್‌ ರಿಸ್ಕ್‌ ಫಂಡ್‌ನಲ್ಲಿ ಒಟ್ಟಿಗೆ ₹ 10 ಸಾವಿರ ಪ್ರತಿ ತಿಂಗಳು ಕಟ್ಟುತ್ತಿದ್ದೇನೆ. ಈಗ ಈ ಎರಡೂ ಫಂಡ್‌ಗಳ ಎನ್‌ಎವಿ ತುಂಬಾ ಕಡಿಮೆ ಆಗಿದೆ ಎನ್ನುತ್ತಾರೆ. ಆರ್ಥಿಕ ಹಿಂಜರಿತದಿಂದ ನಮಗೆ ನಷ್ಟವಾಗಬಹುದೇ? ನನಗೆ ಸ್ವಂತ ಮನೆ ಇದೆ. ₹ 50 ಸಾವಿರ ಬಾಡಿಗೆ ಬರುತ್ತದೆ. ಅಂಚೆ ಕಚೇರಿ ಹಿರಿಯ ನಾಗರಿಕರ ಠೇವಣಿಯಲ್ಲಿ ₹ 15 ಲಕ್ಷ ಇರಿಸಿದ್ದೇನೆ. ಇನ್ನು ನನ್ನೊಡನೆ ₹ 20 ಲಕ್ಷ ನಗದು ಹಾಗೂ ನಿವೃತ್ತಿಯಿಂದ ಬಂದ ಹಣ ಇದೆ. ಹೇಗೆ ವಿನಿಯೋಗಿಸಲಿ?
-ಮಹಮ್ಮದ್ ಬ್ಯಾರಿ, ಬೆಂಗಳೂರು

ಉತ್ತರ: ನಿಮ್ಮ ಪಿಂಚಣಿ ಮೊತ್ತ ಹಾಗೂ ನಿವೃತ್ತಿಯಿಂದ ಬಂದ ಹಣ ತಿಳಿಸಿಲ್ಲ. ನಿಮ್ಮೊಡನಿರುವ ₹ 20 ಲಕ್ಷದಲ್ಲಿ ₹ 10 ಲಕ್ಷ ಅಂಚೆ ಕಚೇರಿಯಲ್ಲಿ ಅವಧಿ ಠೇವಣಿಯಲ್ಲಿ (ಟರ್ಮ್‌ ಡೆಪಾಸಿಟ್‌) 5 ವರ್ಷಗಳಿಗೆ ಇರಿಸಿರಿ. ಉಳಿದ ಹಣ ನಿಮ್ಮ ಮನೆಗೆ ಸಮೀಪದ ಬ್ಯಾಂಕ್‌ನಲ್ಲಿ 5 ವರ್ಷಗಳ ಠೇವಣಿಯಲ್ಲಿ ಇರಿಸಿ. ನೀವು ₹ 50 ಸಾವಿರ ಬಾಡಿಗೆ ತಿಂಗಳಿಗೆ ಪಡೆಯುತ್ತಿರುವಲ್ಲಿ ಅದರಲ್ಲಿ ಸೆಕ್ಷನ್‌ 24 (ಎ) ಆಧಾರದ ಮೇಲೆ ಶೇ 30ರಷ್ಟು ಕಳೆದು ಉಳಿದ ಹಣ ನಿಮ್ಮ ವಾರ್ಷಿಕ ಒಟ್ಟು ಆದಾಯಕ್ಕೆ ಸೇರಿಸಿ ತೆರಿಗೆ ಕೊಡಬೇಕಾಗುತ್ತದೆ ಹಾಗೂ ಐ.ಟಿ ರಿಟರ್ನ್ಸ್‌ ತುಂಬಬೇಕಾಗುತ್ತದೆ.

ಇನ್ನು ಎಸ್‌ಬಿಐ ಮ್ಯೂಚುವಲ್ ಫಂಡ್‌ ವಿಚಾರ. ಈ ಹೂಡಿಕೆಯಲ್ಲಿ ಎನ್‌ಎವಿ ಏರಿಳಿತವಾಗುವುದು ಸಹಜ. ಷೇರು ಮಾರುಕಟ್ಟೆ ಆಧಾರಿತ ಹೂಡಿಕೆಯಾದ್ದರಿಂದ ಲಾಭ ಅಥವಾ ನಷ್ಟಕ್ಕೆ ಹೂಡಿಕೆದಾರರು ತಯಾರಾಗಿರಬೇಕಾಗುತ್ತದೆ.ಮುಂದೇನಾಗುತ್ತದೆ ಎನ್ನುವುದು ಎಂತಹ ಪರಿಣತರಿಗೂ ತಿಳಿಯುವುದಿಲ್ಲ. ಈ ಹೂಡಿಕೆಯಲ್ಲಿ ನಿಮಗೆ ಉತ್ತಮ ಫಲ ದೊರಕಲಿ ಎಂದು ಆಶಿಸುತ್ತೇನೆ.

**

ಪ್ರಶ್ನೆ: ನೂತನ ಪಿಂಚಣಿ ಯೋಜನೆಯಲ್ಲಿ (ಎನ್‌ಪಿಎಸ್‌) ತೊಡಗಿಸಿದ ಹಣ ನಿವೃತ್ತಿ ನಂತರ ಪಡೆಯುವಾಗ ಆದಾಯ ತೆರಿಗೆ ಕೊಡಬೇಕಾಗುತ್ತದೆಯೇ? ತೆರಿಗೆ ಉಳಿತಾಯ ಹೇಗೆ?
-ಶ್ರೀಧರ್‌, ಬೆಳಗಾವಿ

ಉತ್ತರ: ಪಿಂಚಣಿ ಎನ್ನುವ ಪರಿಕಲ್ಪನೆ ಮಾಯವಾಗಿದ್ದು, ನೌಕರರು ನಿವೃತ್ತಿ ನಂತರ ನೆಮ್ಮದಿಯಿಂದ ಬಾಳಲಿ ಎಂದು ಕೇಂದ್ರ ಸರ್ಕಾರವು ಎನ್‌ಪಿಎಸ್‌ ಜಾರಿಗೊಳಿಸಿದೆ. ನಿವೃತ್ತಿ ನಂತರ ಎನ್‌ಪಿಎಸ್‌ನಲ್ಲಿ ಶೇಖರವಾಗುವ ಮೊತ್ತದಿಂದ ಪ್ರತಿ ತಿಂಗಳೂ ಒಂದಿಷ್ಟು ಹಣ ಪಡೆಯಲು ಈ ಯೋಜನೆ ಉತ್ತಮವಾಗಿದೆ. ನಿವೃತ್ತಿ ನಂತರ ಕೆಲವು ವರ್ಗಗಳ ಜನರಿಗೆ ಹಣದ ಅವಶ್ಯವಿದ್ದು, ಎನ್‌ಪಿಎಸ್‌ನಲ್ಲಿ ಕೂಡಿಟ್ಟ ಹಣ ಹಿಂಪಡೆಯುವ ಪ್ರಮೇಯ ಬಂದೊದಗುವುದನ್ನು ಕೂಡ ಕಾಣುತ್ತಿರುತ್ತೇವೆ.

ತೆರಿಗೆ ವಿಚಾರದಲ್ಲಿ ಓರ್ವ ವ್ಯಕ್ತಿಯ ಒಟ್ಟು ಎನ್‌ಪಿಎಸ್‌ ಹಣ ₹ 2 ಲಕ್ಷದೊಳಗಿರುವಲ್ಲಿ, ಅಂತಹ ವ್ಯಕ್ತಿ ಈ ಮೊತ್ತ ಹಿಂಪಡೆಯುವುದಾದರೆ, ಆದಾಯ ತೆರಿಗೆ ಕೊಡುವ ಅವಶ್ಯವಿಲ್ಲ. ₹ 2 ಲಕ್ಷಕ್ಕಿಂತ ಹೆಚ್ಚಿನ ಮೊತ್ತವಾದಲ್ಲಿ ಒಟ್ಟು ಮೊತ್ತದ ಶೇ 60ರಷ್ಟು ಭಾಗಕ್ಕೆ ಮಾತ್ರ ತೆರಿಗೆ ವಿನಾಯಿತಿ ಇದೆ. ಉಳಿದ ಶೇ 40ಕ್ಕೆ ತೆರಿಗೆ ಕೊಡಬೇಕಾಗುತ್ತದೆ. ಎನ್‌ಪಿಎಸ್‌ ಬದಲಾಗಿ ಎಲ್‌ಐಸಿ ಅಥವಾ ಇನ್ನಿತರ ವಿಮಾ ಕಂಪನಿಗಳ ಪಿಂಚಣಿ ಯೋಜನೆಯಲ್ಲಿ ಎನ್‌ಪಿಎಸ್‌ನಿಂದ ಬಂದ ಹಣ ಸೇರಿಸಿ ಕೂಡ ತೆರಿಗೆ ವಿನಾಯಿತಿ ಪಡೆಯಬಹುದು.

**

ಪ್ರಶ್ನೆ: ನನ್ನ ವಯಸ್ಸು 39 ವರ್ಷ. ಖಾಸಗಿ ಉದ್ಯೋಗ. ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇನ್ನು ಒಂದೆರಡು ತಿಂಗಳಿನಲ್ಲಿ ನನಗೆ ಸುಮಾರು ₹ 5 ಲಕ್ಷ ಹಣ ಬರಲಿದೆ. ನನಗೆ ಭದ್ರವಾದ, ಉತ್ತಮವಾದ ಹೂಡಿಕೆ ತಿಳಿಸಿ.
-ಲಕ್ಷ್ಮಿದೇವಿ, ಹುಬ್ಬಳ್ಳಿ

ಉತ್ತರ: ನಿಮ್ಮ ಮಕ್ಕಳು 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ ಇಬ್ಬರ ಹೆಸರಿನಲ್ಲಿಯೂ ಸುಕನ್ಯಾ ಸಮೃದ್ಧಿ ಯೋಜನೆ ತಕ್ಷಣ ಪ್ರಾರಂಭಿಸಿ. ಪ್ರತಿ ತಿಂಗಳೂ ಎಷ್ಟಾದರಷ್ಟು ಹಣ ಕಟ್ಟುತ್ತಾ ಬನ್ನಿ. ನಿಮಗೆ ಬರಲಿರುವ ₹ 5 ಲಕ್ಷವನ್ನು ಅಂಚೆ ಕಚೇರಿ ತಿಂಗಳು ಬಡ್ಡಿ ಬರುವ ಯೋಜನೆಯಲ್ಲಿ ₹ 4.50 ಲಕ್ಷ ಇರಿಸಿ. (ಇದು ಗರಿಷ್ಠ ಮಿತಿ). ಇಲ್ಲಿ ಪ್ರತಿ ತಿಂಗಳೂ ಬರುವ ಬಡ್ಡಿಗೆ ಸರಿಯಾಗಿ ಅಲ್ಲಿಯೇ ಒಂದು ಆರ್‌.ಡಿ. ಮಾಡಿ. ನೀವು ಬಯಸಿದಂತೆ ಭದ್ರವಾದ ಹೂಡಿಕೆ ಜತೆಗೆ ಉತ್ತಮ ವರಮಾನ ಕೂಡಾ ಸಿಗಲಿದೆ.

***

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001.
ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT