ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಜೊತೆ ದ್ವಿಪಕ್ಷೀಯ ವ್ಯಾಪಾರ: ಮೊದಲ ಸ್ಥಾನಕ್ಕೇರಿದ ಅಮೆರಿಕ

Last Updated 29 ಮೇ 2022, 12:47 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಜೊತೆಗೆ ಅತಿ ಹೆಚ್ಚು ವ್ಯಾಪಾರ ನಡೆಸಿದ ದೇಶಗಳ ಸಾಲಿನಲ್ಲಿ 2021–22ರಲ್ಲಿ ಅಮೆರಿಕವುಚೀನಾವನ್ನು ಹಿಂದಕ್ಕಿ ಮೊದಲ ಸ್ಥಾನಕ್ಕೆ ಬಂದಿದೆ.

ಭಾರತ–ಅಮೆರಿಕ ಮಧ್ಯೆ ಆರ್ಥಿಕ ಒಪ್ಪಂದಗಳು ಬಲಗೊಳ್ಳುತ್ತಿವೆ ಎನ್ನುವುದನ್ನು ಇದು ಸೂಚಿಸುತ್ತಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿದೆ.

2021–22ರಲ್ಲಿ ಅಮೆರಿಕ ಮತ್ತು ಭಾರತದ ಮಧ್ಯೆ ₹ 9.19 ಲಕ್ಷ ಕೋಟಿ ಮೊತ್ತದ ದ್ವಿಪಕ್ಷೀಯ ವ್ಯಾಪಾರ ನಡೆದಿದೆ. ಇದೇ ಅವಧಿಯಲ್ಲಿ ಭಾರತ–ಚೀನಾ ದ್ವಿಪಕ್ಷೀಯ ವ್ಯಾಪಾರದ ಮೊತ್ತವು ₹ 8.88 ಲಕ್ಷ ಕೋಟಿ ಆಗಿದೆ.

ಅಮೆರಿಕದ ಜೊತೆಗಿನ ಭಾರತದ ರಫ್ತು ಮತ್ತು ಆಮದು ವಹಿವಾಟು ಏರಿಕೆ ಕಂಡಿದೆ. 2020–21ರಲ್ಲಿ ₹ 3.97 ಲಕ್ಷ ಕೋಟಿ ಇದ್ದ ರಫ್ತು ವಹಿವಾಟಿನ ಮೌಲ್ಯವು 2021–22ರಲ್ಲಿ ₹ 5.86 ಲಕ್ಷ ಕೋಟಿಗೆ ಏರಿಕೆ ಆಗಿದೆ. ಆಮದು ವಹಿವಾಟಿನ ಮೌಲ್ಯವು ₹ 2.23 ಲಕ್ಷ ಕೋಟಿಯಿಂದ ₹ 3.33 ಲಕ್ಷ ಕೋಟಿಗೆ ಏರಿಕೆ ಆಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಚೀನಾದ ಜೊತೆಗಿನ ರಫ್ತು ಮತ್ತು ಆಮದು ವಹಿವಾಟು ಸಹ ಹೆಚ್ಚಾಗಿದೆ. 2020–21ರಲ್ಲಿ ₹ 1.63 ಲಕ್ಷ ಕೋಟಿ ಇದ್ದ ರಫ್ತು ವಹಿವಾಟಿನ ಮೌಲ್ಯವು 2021–22ರಲ್ಲಿ ₹ 1.64 ಲಕ್ಷ ಕೋಟಿಗೆ ಏರಿದೆ. ಆಮದು ವಹಿವಾಟು ₹ 5.02 ಲಕ್ಷ ಕೋಟಿಯಿಂದ ₹ 7.25 ಲಕ್ಷ ಕೋಟಿಗೆ ಹೆಚ್ಚಾಗಿದೆ.

2013–14ರಿಂದ 2017–18ರವರೆಗೆ ನಿರಂತರವಾಗಿ ಹಾಗೂ 2020–21ರಲ್ಲಿ ಚೀನಾವು ಭಾರತದ ಪ್ರಮುಖ ವ್ಯಾಪಾರ ಪಾಲುದಾರ ಆಗಿತ್ತು.

ಭಾರತವು ವಿಶ್ವಾಸಾರ್ಹ ವ್ಯಾಪಾರ ಪಾಲುದಾರ ಆಗಿ ಹೊರಹೊಮ್ಮುತ್ತಿದೆ. ಜಾಗತಿಕ ಕಂಪನಿಗಳು ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುತ್ತಿವೆ. ಭಾರತದಂತಹ ದೇಶಗಳ ಜೊತೆ ವ್ಯಾಪಾರಕ್ಕೆ ಮುಂದಾಗುತ್ತಿವೆ ಎಂದು ಭಾರತೀಯ ರಫ್ತುದಾರರ ಸಂಘಟನೆಗಳ ಒಕ್ಕೂಟದ (ಎಫ್‌ಐಇಒ) ಉಪಾಧ್ಯಕ್ಷ ಖಾಲಿದ್‌ ಖಾನ್‌ ಹೇಳಿದ್ದಾರೆ.

ಪಾಲಿಶ್‌ ಆಗಿರುವ ವಜ್ರ, ಔಷಧ ಉತ್ಪನ್ನಗಳು, ಚಿನ್ನಾಭರಣ, ಪೆಟ್ರೋಲಿಯಂ, ಇತ್ಯಾದಿ ಭಾರತದಿಂದ ಅಮೆರಿಕಕ್ಕೆ ರಫ್ತಾಗುತ್ತಿವೆ. ಅಮೆರಿಕದಿಂದ ಭಾರತಕ್ಕೆ ಮುಖ್ಯವಾಗಿ ಪೆಟ್ರೋಲಿಯಂ, ಪಾಲಿಶ್‌ ಆಗದ ವಜ್ರ, ನೈಸರ್ಗಿಕ ಅನಿಲ, ಚಿನ್ನ, ಕಲ್ಲಿದ್ದಲು, ಬಾದಾಮಿ ಆಮದಾಗುತ್ತಿದೆ.

ಭಾರತವು ವ್ಯಾಪಾರ ಮಿಗತೆ ಹೊಂದಿರುವ ಕೆಲವೇ ದೇಶಗಳಲ್ಲಿ ಅಮೆರಿಕವೂ ಒಂದಾಗಿದೆ. 2021–22ರಲ್ಲಿ ಭಾರತವು ಅಮೆರಿಕ ಜೊತೆ ₹ 2.52 ಲಕ್ಷ ಕೋಟಿ ಮೌಲ್ಯದ ವ್ಯಾಪಾರ ಮಿಗತೆ ಹೊಂದಿದೆ.

ದ್ವಿಪಕ್ಷೀಯ ವ್ಯಾಪಾರ (ಲಕ್ಷ ಕೋಟಿಗಳಲ್ಲಿ)

ದೇಶ; 2020–21; 2021–22

ಅಮೆರಿಕ; ₹ 6.19; ₹ 9.19

ಚೀನಾ; ₹ 6.65; ₹ 8.88

ಭಾರತದ ವ್ಯಾಪಾರ ಪಾಲುದಾರ ದೇಶಗಳು

ಅಮೆರಿಕ

ಚೀನಾ

ಯುಎಇ

ಸೌದಿ ಅರೇಬಿಯಾ

ಇರಾಕ್‌

ಸಿಂಗಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT