ಮಂಗಳವಾರ, ಏಪ್ರಿಲ್ 7, 2020
19 °C
ಪೂರೈಕೆ, ಬೇಡಿಕೆ ಮೇಲೆ ಕೊರೊನಾ ಪರಿಣಾಮ: ಫಿಕ್ಕಿ ವರದಿ

ಕೊರೊನಾ | ಕಂಪನಿಗಳ ವಹಿವಾಟಿಗೆ ಧಕ್ಕೆ: ಎಸ್‌ಬಿಐ ಕೋವಿಡ್‌–19 ತುರ್ತು ಸಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಕೊರೊನಾ ವೈರಸ್‌ ತೀವ್ರವಾಗಿ ಹರಡುತ್ತಿರುವುದರಿಂದ ದೇಶದ ಶೇ 50ಕ್ಕೂ ಅಧಿಕ ಕಂಪನಿಗಳ ವಹಿವಾಟಿಗೆ ಧಕ್ಕೆಯಾಗಿದ್ದು, ಶೇ 80ರಷ್ಟು ಕಂಪನಿಗಳು ನಗದು ಹರಿವಿನ ಸಮಸ್ಯೆ ಎದುರಿಸುತ್ತಿವೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ತಿಳಿಸಿದೆ.

ಈ ಮಹಾಮಾರಿಯು ದೇಶದ ಆರ್ಥಿಕತೆಗೆ ಹೊಸ ಸವಾಲನ್ನು ಒಡ್ಡಿದೆ. ಪೂರೈಕೆ ಮತ್ತು ಬೇಡಿಕೆ ಮೇಲೆ ತೀವ್ರತರದ ಪರಿಣಾಮ ಉಂಟುಮಾಡುವ ಮೂಲಕ ಆರ್ಥಿಕ ಬೆಳವಣಿಗೆಗೆ ಭಾರಿ ಪ್ರಮಾಣದಲ್ಲಿ ಹಿನ್ನಡೆಯುಂಟುಮಾಡಲಿದೆ ಎಂದು ಎಫ್‌ಐಸಿಸಿಐ ನಡೆಸಿರುವ ಸಮೀಕ್ಷೆಯಿಂದ ತಿಳಿದುಬಂದಿದೆ.

ದೇಶದ ಆರ್ಥಿಕತೆಯು ಈಗಾಗಲೇ ಮಂದಗತಿ ಬೆಳವಣಿಗೆ ಸ್ಥಿತಿಯಲ್ಲಿದೆ. ಮೂರನೇ ತ್ರೈಮಾಸಿಕದಲ್ಲಿ ಶೇ 4.7ರಷ್ಟು ಆರು ವರ್ಷಗಳ ಕನಿಷ್ಠ ಮಟ್ಟದ ಪ್ರಗತಿಯಾಗಿದೆ. ಕೊರೊನಾದ ಆರಂಭಿಕ ಹಂತದಲ್ಲಿಯೇ ವಾಣಿಜ್ಯ ವಹಿವಾಟಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಪರಿಸ್ಥಿತಿ ಕೈಮೀರಿದರೆ ಇನ್ನೂ ಹೆಚ್ಚಿನ ಸಮಸ್ಯೆ ಆಗಲಿದೆ. 

ಸಿಬ್ಬಂದಿ ವೇತನ, ಸಾಲ ಮರುಪಾವತಿ, ಬಡ್ಡಿದರ ಹಾಗೂ ತೆರಿಗೆ ಪಾವತಿಗೂ ಸಮಸ್ಯೆಯಾಗುತ್ತಿದೆ ಎಂದು ಕಂಪನಿಗಳು ತಿಳಿಸಿವೆ.

ಕೋವಿಡ್‌–19 ತುರ್ತು ಸಾಲ: ಎಸ್‌ಬಿಐ

ಕೊರೊನಾದಿಂದಾಗಿ ದೇಶದಾದ್ಯಂತ ವಾಣಿಜ್ಯ ವಹಿವಾಟು ಇಳಿಮುಖವಾಗಿದೆ. ಹೀಗಾಗಿ ನಗದು ಕೊರತೆ ಬೀಳದಂತೆ ನೋಡಿಕೊಳ್ಳಲು ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಕೋವಿಡ್‌–19 ತುರ್ತು ಸಾಲ (ಸಿಇಸಿಎಲ್‌) ಸೌಲಭ್ಯ ಆರಂಭಿಸಿದೆ.

12 ತಿಂಗಳ ಅವಧಿಗೆ ಶೇ 7.25ರ ಬಡ್ಡಿದರದಲ್ಲಿ ₹200 ಕೋಟಿಯವರೆಗೂ ಸಾಲ ನೀಡಲಾಗುವುದು. ಜೂನ್‌ 30ರವರೆಗೆ ಈ ಸೌಲಭ್ಯ ಜಾರಿಯಲ್ಲಿರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

31 ರಿಂದ 60 ದಿನಗಳವರೆಗೆ  ಹಾಗೂ 61 ರಿಂದ 90ದಿನಗಳವರೆಗೆ ಬಾಕಿ ಪಾವತಿಸದೇ ಇರುವ ಖಾತೆಗಳಿಗೆ ಈ ಸಾಲ ಸೌಲಭ್ಯ ಸಿಗುವುದಿಲ್ಲ ಎಂದು ತಿಳಿಸಿದೆ. ಹಾಲಿ ಇರುವ ನಿಧಿ ಆಧಾರಿತ ದುಡಿಯುವ ಬಂಡವಾಳದ ಮೇಲೆ ಗರಿಷ್ಠ ಶೇ 10ರಷ್ಟು ಸಾಲ ಸಿಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು