ಸೋಮವಾರ, ಫೆಬ್ರವರಿ 24, 2020
19 °C

ಪಿಪಿಎಫ್‌ಗಿಂತ ವಿಪಿಎಫ್‌ನಲ್ಲಿ ಹೆಚ್ಚು ಲಾಭ..!

ಕ್ಲಿಯೋನ್ ಡಿಸೋಜ Updated:

ಅಕ್ಷರ ಗಾತ್ರ : | |

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೆ, ಇಪಿಎಫ್‌ನ ಭಾಗವೇ ಆಗಿರುವ ಸ್ವಯಂಪ್ರೇರಿತ ಭವಿಷ್ಯ ನಿಧಿ (ವಾಲೆಂಟರಿ ಪ್ರಾವಿಡೆಂಟ್ ಫಂಡ್ - ವಿಪಿಎಫ್) ಬಗ್ಗೆ ಅನೇಕರಿಗೆ ಸರಿಯಾದ ಮಾಹಿತಿ ಇಲ್ಲ. ಸಾರ್ವಜನಿಕ ಭವಿಷ್ಯ ನಿಧಿಗಿಂತ (ಪಿಪಿಎಫ್) ಹೆಚ್ಚು ಬಡ್ಡಿ ಲಾಭ ನೀಡುವ ಮತ್ತು ಅನುಕೂಲಗಳನ್ನು ಒದಗಿಸುವ ವಿಪಿಎಫ್ ಬಗ್ಗೆ ವಿಸ್ತೃತ ಮಾಹಿತಿ ಇಲ್ಲಿದೆ.

ಏನಿದು ವಿಪಿಎಫ್ 

ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಗೆ ಸ್ವಯಂಪ್ರೇರಿತವಾಗಿ ಹೆಚ್ಚುವರಿ ಕೊಡುಗೆ ನೀಡುವುದನ್ನು ವಿಪಿಎಫ್ ಎನ್ನಬಹುದು.

ಉದ್ಯೋಗಿಯ ಮೂಲ ವೇತನ ಮತ್ತು ತುಟ್ಟಿ ಭತ್ಯೆಯ ಶೇ 100 ರಷ್ಟು ಪಾಲನ್ನು ಮಾಸಿಕವಾಗಿ ವಿಪಿಎಫ್‌ನಲ್ಲಿ ಹೂಡಿಕೆ ಮಾಡಬಹುದು. ಇಪಿಎಫ್ ಉಳಿತಾಯಕ್ಕೆ ನೀಡುವ ಬಡ್ಡಿಯನ್ನೇ ವಿಪಿಎಫ್‌ಗೂ ನೀಡಲಾಗುತ್ತದೆ. ಮಾಸಿಕ ವೇತನ ಪಡೆಯುತ್ತಿದ್ದು , ಇಪಿಎಫ್ ಖಾತೆ ಇರುವ ಎಲ್ಲ ನೌಕರರಿಗೆ ವಿಪಿಎಫ್‌ನಲ್ಲಿ ಹೂಡಿಕೆಗೆ ಅವಕಾಶವಿದೆ. 2018-19 ನೇ ಸಾಲಿನ ವಿಪಿಎಫ್ ಬಡ್ಡಿ ದರ ಶೇ 8.65 ರಷ್ಟಿದೆ. ಈ ಹೂಡಿಕೆಗೆ ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ. ಇದೊಂದು ಅತ್ಯಂತ ಸುರಕ್ಷಿತ ಹೂಡಿಕೆಯಾಗಿದ್ದು ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಕೆಲಸ ಬದಲಾವಣೆ ಮಾಡಿದಾಗಲೂ ಸುಲಭವಾಗಿ ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ.

ವರ್ಷದ ಯಾವುದೇ ತಿಂಗಳಲ್ಲಿ ನೀವು ವಿಪಿಎಫ್ ಖಾತೆ ಆರಂಭಿಸಬಹುದು. ಆದರೆ, ಈ ಹೂಡಿಕೆಯನ್ನು 5 ವರ್ಷಗಳವರೆಗೆ ನಿಲ್ಲಿಸುವಂತಿಲ್ಲ. ಸಾಲದ ರೂಪದಲ್ಲಿ ವಿಪಿಎಫ್‌ನಿಂದ ಭಾಗಶಃ ಹಣ ಪಡೆಯಬಹುದು. ಆದರೆ, ಮೆಚ್ಯೂರಿಟಿ ಅವಧಿಗಿಂತ ಮೊದಲೇ ಹಣ ಹಿಂದೆಪಡೆದರೆ ತೆರಿಗೆ ಅನ್ವಯಿಸುತ್ತದೆ. ವೈದ್ಯಕೀಯ ತುರ್ತು, ಉನ್ನತ ಶಿಕ್ಷಣದ ಉದ್ದೇಶ, ಮದುವೆ, ಮನೆ ನಿರ್ಮಾಣ / ಖರೀದಿಯಂತಹ ಸಂದರ್ಭದಲ್ಲಿ ಅವಧಿ ಪೂರ್ವ ವಿಪಿಎಫ್ ಹಿಂದೆ ಪಡೆಯಲು ವಿನಾಯಿತಿ ಇದೆ.

ಯಾವ ದಾಖಲೆಗಳು ಬೇಕು: ವಿಪಿಎಫ್ ಖಾತೆ ಆರಂಭಿಸಲು ನೀವು ಕೆಲಸ ಮಾಡುತ್ತಿರುವ ಕಂಪನಿಯ ನೋಂದಣಿ ಪ್ರಮಾಣ ಪತ್ರ, ಫಾರಂ 24, ಫಾರಂ 49 , ಕಂಪನಿಯ ಬಗ್ಗೆ ಮಾಹಿತಿ ಪತ್ರ, ಉದ್ದಿಮೆ ಪ್ರಮಾಣ ಪತ್ರ ಹಾಗೂ ಇನ್ನು ಕೆಲ ದಾಖಲೆಗಳು ಅಗತ್ಯ. ಈ ಬಗ್ಗೆ ಹೆಚ್ಚಿನ ಸ್ಪಷ್ಟತೆಗಾಗಿ ಉದ್ಯೋಗಿಗಳು ತಾವು ಕೆಲಸ ಮಾಡುವ ಕಂಪನಿಯ ಹಣಕಾಸು ವಿಭಾಗ ಸಂಪರ್ಕಿಸಬಹುದು.

ಪಿಪಿಎಫ್, ಇಪಿಎಫ್ ಮತ್ತು ವಿಪಿಎಫ್ ನಡುವಣ ವ್ಯತ್ಯಾಸ
ವಿವರಗಳು: ಪಿಪಿಎಫ್; ಇಪಿಎಫ್; ವಿಪಿಎಫ್
ಯಾರು ಹೂಡಬಹುದು: ಭಾರತೀಯ (ಎನ್‌ಆರ್‌ಗಳಿಗೆ ಇಲ್ಲ); ಭಾರತೀಯ ಉದ್ಯೋಗಿ; ಭಾರತೀಯ ಉದ್ಯೋಗಿ
ಉದ್ಯೋಗಿಯ ಕೊಡುಗೆ: ಅನ್ವಯಿಸುವುದಿಲ್ಲ; ಶೇ 12 ರಷ್ಟು; ಶೇ 100 ರಷ್ಟು
ಉದ್ಯೋಗದಾತರ ಕೊಡುಗೆ: ಅನ್ವಯಿಸುವುದಿಲ್ಲ; ಶೇ 12 ರಷ್ಟು; ಅನ್ವಯಿಸುವುದಿಲ್ಲ
ಮೆಚ್ಯೂರಿಟಿ ತೆರಿಗೆ:ಇಲ್ಲ; ಇಲ್ಲ; ಇಲ್ಲ
ಹೂಡಿಕೆ ಅವಧಿ;15 ವರ್ಷಗಳು;ನಿವೃತ್ತಿ /ರಾಜೀನಾಮೆ;ನಿವೃತ್ತಿ/ ರಾಜೀನಾಮೆ

ಪಿಪಿಎಫ್‌ಗಿಂತ ವಿಪಿಎಫ್‌ ಬಡ್ಡಿ ದರ ಹೆಚ್ಚು
ಹಣಕಾಸು ವರ್ಷ;ಪಿಪಿಎಫ್ ಬಡ್ಡಿ ದರ;ವಿಪಿಎಫ್ / ಇಪಿಎಫ್ ಬಡ್ಡಿ ದರ
2013-14; ಶೇ 8.7; ಶೇ 8.75
2014-15; ಶೇ 8.7; ಶೇ 8.75
2015-16; ಶೇ 8.7; ಶೇ 8.8
2016-17; ಶೇ 8 ರಿಂದ ಶೇ 8.1; ಶೇ 8.8

2017-18; ಶೇ 7.6 ರಿಂದ ಶೇ 8;ಶೇ 8.55
2018-19; ಶೇ 7.6 ರಿಂದ ಶೇ 7.9;ಶೇ 8.65

ಕ್ಲಿಯೋನ್ ಡಿಸೋಜ

(ಲೇಖಕರು: ಸುವಿಷನ್ ಹೋಲ್ಡಿಂಗ್ಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು