ನವದೆಹಲಿ (ಪಿಟಿಐ): ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಪ್ರಸಕ್ತ ವರ್ಷದ ಜನವರಿಯಲ್ಲಿ ಶೇ 0.27ಕ್ಕೆ ಇಳಿಕೆಯಾಗಿದ್ದು, ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ.
ತರಕಾರಿಗಳು ಸೇರಿದಂತೆ ಆಹಾರ ಪದಾರ್ಥಗಳ ಬೆಲೆಯಲ್ಲಿ ಇಳಿಕೆಯಾಗಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.
2023ರ ಜನವರಿಯಲ್ಲಿ ಸಗಟು ಹಣದುಬ್ಬರವು ಶೇ 4.8ರಷ್ಟು ಗರಿಷ್ಠ ಮಟ್ಟದಲ್ಲಿ ದಾಖಲಾಗಿತ್ತು. ಬಳಿಕ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಸ್ಥಿರವಾಗಿದ್ದ ಹಣದುಬ್ಬರವು ನವೆಂಬರ್‌ನಲ್ಲಿ ಶೇ 0.39ಕ್ಕೆ ಏರಿಕೆಯಾಗಿತ್ತು. ಡಿಸೆಂಬರ್‌ನಲ್ಲಿ ಶೇ 0.73ರಷ್ಟು ಏರಿಕೆಯಾಗಿ, ಒಂಬತ್ತು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿತ್ತು.
ಅಕ್ಟೋಬರ್‌ನಲ್ಲಿ ಶೇ (–) 0.26ರಷ್ಟು ಕನಿಷ್ಠ ಮಟ್ಟದಲ್ಲಿ ದಾಖಲಾಗಿತ್ತು.
ಡಿಸೆಂಬರ್‌ನಲ್ಲಿ ಶೇ 9.38ರಷ್ಟಿದ್ದ ಆಹಾರ ಹಣದುಬ್ಬರವು ಜನವರಿಯಲ್ಲಿ ಶೇ 6.85ಕ್ಕೆ ಇಳಿಕೆಯಾಗಿದೆ. ತರಕಾರಿಗಳ ದರವು ಶೇ 26.3ರಿಂದ ಶೇ 19.71ಕ್ಕೆ ಕುಗ್ಗಿದೆ. ಹಣ್ಣುಗಳು, ಮೊಟ್ಟೆ, ಮೀನು, ಹಾಲಿನ ದರ ಇಳಿಕೆಯಾಗಿದೆ. ಆಲೂಗೆಡ್ಡೆ ದರವು ಇಳಿಕೆಯ ಹಾದಿಯಲ್ಲಿಯೇ ಇದೆ.
ಇಂಧನ ಮತ್ತು ವಿದ್ಯುತ್ ಸೂಚ್ಯಂಕದಲ್ಲಿಯೂ ಇಳಿಕೆಯಾಗಿದೆ. ಡಿಸೆಂಬರ್‌ನಲ್ಲಿ ಶೇ (–) 2.41ರಷ್ಟು ಇದ್ದಿದ್ದು, ಜನವರಿಯಲ್ಲಿ ಶೇ (–) 0.51ಕ್ಕೆ ಇಳಿಕೆ ಆಗಿದೆ. ಆದರೆ, ತಯಾರಿಕಾ ಉತ್ಪನ್ನಗಳ ಬೆಲೆಯು ಶೇ (–) 0.71ರಿಂದ ಶೇ (–) 1.13ರಷ್ಟು ಏರಿಕೆಯಾಗಿದೆ.
ಡಿಸೆಂಬರ್‌ಗೆ ಹೋಲಿಸಿದರೆ ಜನವರಿಯಲ್ಲಿ ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲ ಶೇ (–) 0.33, ಆಹಾರೇತರ ಪದಾರ್ಥಗಳು ಶೇ (–) 0.49 ಮತ್ತು ಆಹಾರ ಪದಾರ್ಥಗಳ ದರ ಶೇ (–) ಶೇ 1.36ರಷ್ಟು ಇಳಿಕೆಯಾಗಿದೆ.
ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು ಶೇ 5ಕ್ಕಿಂತಲೂ ಹೆಚ್ಚಿದೆ. ಇದನ್ನು ಶೇ 4ರ ಮಿತಿಯಲ್ಲಿ ಕಾಯ್ದುಕೊಂಡು ಬೆಲೆಯಲ್ಲಿ ಸ್ಥಿರತೆ ಕಾಪಾಡಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಹಾಗಾಗಿ, ಇತ್ತೀಚೆಗೆ ನಡೆದ ಆರ್‌ಬಿಐ ಹಣಕಾಸು ನೀತಿ ಸಮಿತಿಯಲ್ಲಿ (ಎಂಪಿಸಿ) ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.