ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Onion Price | ಈರುಳ್ಳಿ: ತಗ್ಗಲೇ ಇಲ್ಲ ಚಿಲ್ಲರೆ ದರ

ಮಾರುಕಟ್ಟೆಗೆ ಹೆಚ್ಚುತ್ತಿರುವ ಈರುಳ್ಳಿ ಆವಕ l ವಾರದಿಂದೀಚೆಗೆ ಸಗಟು ದರ ಇಳಿಮುಖ
Published 25 ನವೆಂಬರ್ 2023, 0:30 IST
Last Updated 25 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ವಾರದಿಂದೀಚೆಗೆ ಈರುಳ್ಳಿ ಸಗಟು ದರ ಇಳಿಮುಖವಾಗಿದೆ. ಆದರೆ, ಅದಕ್ಕೆ ತಕ್ಕಂತೆ ಎಲ್ಲೆಡೆಯೂ ಚಿಲ್ಲರೆ ಮಾರಾಟ ದರದಲ್ಲಿ ಇಳಿಕೆ ಆಗಿಲ್ಲ. ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ, ಧಾರವಾಡದಲ್ಲಿ ಚಿಲ್ಲರೆ ದರ ತಗ್ಗಿಲ್ಲ. ಆದರೆ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ
ಕಲಬುರಗಿ, ಮಂಗಳೂರಿನಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ.

ಮಾರುಕಟ್ಟೆಗೆ ಆವಕ ಹೆಚ್ಚಾಗುತ್ತಿ ರುವುದರಿಂದ ಸಗಟು ದರ ಇಳಿಕೆ ಕಾಣುತ್ತಿದೆ. ಬೆಂಗಳೂರಿನಲ್ಲಿ ಈರುಳ್ಳಿ ಸಗಟು ದರವು ಒಂದು ವಾರದಿಂದಲೂ ಇಳಿಮುಖವಾಗಿದೆ. ಆದರೆ, ಚಿಲ್ಲರೆ ಮಾರಾಟ ದರದಲ್ಲಿ ಮಾತ್ರ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ಈಗಲೂ ಕೆ.ಜಿಗೆ ₹70–80ರವರೆಗೆ ಮಾರಾಟ ಆಗುತ್ತಿದೆ.

ಈರುಳ್ಳಿ ಸಗಟು ದರ ಒಂದು ವಾರದಿಂದ ಇಳಿಕೆ ಕಾಣುತ್ತಿದ್ದು, ಸದ್ಯ ಕೆ.ಜಿಗೆ ₹35–40ರವರೆಗೆ ಇದೆ. ಪೂರೈಕೆ ಹೆಚ್ಚಾಗುತ್ತಿರುವುದರಿಂದ ಸಗಟು ಬೆಲೆ ಕಡಿಮೆ ಆಗುತ್ತಿದೆ ‌ಎಂದು ಬೆಂಗಳೂರು ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ರವಿಶಂಕರ್‌ ಬಿ. ತಿಳಿಸಿದರು. ತಿಂಗಳ ಹಿಂದೆ ಸಗಟು ದರ ₹58–₹60ರವರೆಗೆ ಇತ್ತು.

‘ಸಗಟು ದರ ಇಳಿಕೆ ಕಂಡಿದೆ ಎಂದಾಕ್ಷಣ ತಕ್ಷಣಕ್ಕೆ ಚಿಲ್ಲರೆ ಮಾರಾಟ ದರ ಕಡಿಮೆ ಆಗುವುದಿಲ್ಲ. ಕನಿಷ್ಠ ಒಂದು ವಾರವಾದರೂ ಬೇಕು. ಏಕೆಂದರೆ ಚಿಲ್ಲರೆ ವ್ಯಾಪಾರಿಗಳು ಹೆಚ್ಚಿನ ಬೆಲೆಗೆ ತಂದಿಟ್ಟುಕೊಂಡ ದಾಸ್ತಾನನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ನಷ್ಟ ಮಾಡಿಕೊಳ್ಳಲು ಬಯಸುವುದಿಲ್ಲ ಎಂದು ಅವರು ಹೇಳಿದರು.

ಹುಬ್ಬಳ್ಳಿಯ ಅಮರಗೋಳ‌ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ದರವು ಕಳೆದ ಮೂರು ವಾರಗಳಿಂದ ಸ್ಥಿರವಾಗಿದೆ. ಸದ್ಯ ಕ್ವಿಂಟಲ್‌ಗೆ ₹ 500 ರಿಂದ ₹ 4,000 ದರ ಇದೆ. ಆದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹60 ರಿಂದ ₹ 80ರಂತೆ ಮಾರಾಟ ಆಗುತ್ತಿದೆ. ಸಗಟು ದರಕ್ಕೆ ಹೋಲಿಸಿದರೆ ಚಿಲ್ಲರೆ ದರವು ಶೇ 50ರಿಂದ 100 ರಷ್ಟು ಹೆಚ್ಚಳವಾಗಿದೆ. ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿಗೆ ಕೊರತೆ ಇಲ್ಲ. ಸ್ಥಳೀಯ ರೈತರಿಂದ ಹಾಗೂ ಪಕ್ಕದ ಬಾಗಲಕೋಟೆ, ಬೆಳಗಾವಿಯಿಂದ, ಮಹಾರಾಷ್ಟ್ರದ ಪುಣೆಯಿಂದ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದೆ. 

ಧಾರವಾಡ ಜಿಲ್ಲೆಯಲ್ಲಿ ಈರುಳ್ಳಿ ದರ ಕೆ.ಜಿ.ಗೆ ₹ 55 ರಿಂದ ₹60 ಇದೆ. 'ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕ್ವಿಂಟಲ್ ಗೆ ₹ 4,500 ದಿಂದ ₹ 5 ಸಾವಿರ ಇದೆ. ತಿಂಗಳ ಹಿಂದೆ ಕ್ವಿಂಟಲ್ ಗೆ ₹ 7 ಸಾವಿರ ಇತ್ತು' ಎಂದು ವರ್ತಕ ಸೋಮನಗೌಡ ಪಾಟೀಲ ತಿಳಿಸಿದರು.

‘ಗದಗ ಎಪಿಎಂಸಿಯಲ್ಲಿ ಕ್ವಿಂಟಲ್ ಈರುಳ್ಳಿ ದರ ₹2,400 ರಿಂದ ₹3,800 ರವರೆಗೆ ಇದೆ. ಆದರೆ, ಮಾರುಕಟ್ಟೆಯಲ್ಲಿ ಈಗಲೂ ಪ್ರತಿ ಕಿಲೋ ಈರುಳ್ಳಿ ಬೆಲೆ ₹60ರಿಂದ ₹70ರಂತೆಯೇ ಮಾರಾಟ ಆಗುತ್ತಿದೆ’ ಎಂದು ಈರುಳ್ಳಿ ವರ್ತಕ ರಾಜು ಮುಧೋಳ ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಸಗಟು ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹ 3,500 ರಿಂದ ₹ 4,500 ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹50 ರಿಂದ ₹60 ಇದೆ.  ಚಿಲ್ಲರೆ ಮಾರುಕಟ್ಟೆಯಲ್ಲಿ ತುಂಬಾ ಚಿಕ್ಕ ಗಾತ್ರದ ಈರುಳ್ಳಿ ಬೆಲೆ ಕೆ.ಜಿಗೆ ₹ 20 ಇದೆ. 

‘ಸಗಟು ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ಈರುಳ್ಳಿ ಖರೀದಿಸುವ ಚಿಲ್ಲರೆ ವ್ಯಾಪಾರಿಗಳು ಸಹಜವಾಗಿ ₹ 5ರಿಂದ ₹10 ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಾರೆ. ಸಾರಿಗೆ ವೆಚ್ಚ, ಲಾಭ ನೋಡಿಕೊಂಡು ದರ ನಿಗದಿಪಡಿಸುತ್ತಾರೆ. ಗ್ರಾಹಕರೂ ಚೌಕಾಸಿ  ಮಾಡುವ ಕಾರಣ ಸಹಜವಾಗಿ ಹೆಚ್ಚು ದರ ನಿಗದಿಪಡಿಸಿರುತ್ತಾರೆ’ ಎಂದು ವರ್ತಕ ಪ್ರತಿನಿಧಿ ದೊಗ್ಗಳ್ಳಿ ಬಸವರಾಜ್‌ ಹೇಳಿದರು.

ಬೆಳಗಾವಿ, ಮಂಗಳೂರು, ರಾಮನಗರದಲ್ಲಿ ಇಳಿಕೆ

ಬೆಳಗಾವಿ ಎಪಿಎಂಸಿಯಲ್ಲಿ ಕಳೆದ ಬುಧವಾರ, ಕ್ವಿಂಟಲ್‌ಗೆ ಸಗಟು ದರ ಸರಾಸರಿ ₹3,500 ರಿಂದ ₹4,000ರಂತೆ ಮಾರಾಟವಾಗಿದೆ. ಎರಡು ವಾರಗಳ ಹಿಂದೆ ₹5,000 ದರ ಇತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ಗುಣಮಟ್ಟದ, ದೊಡ್ಡ ಗಾತ್ರದ ಈರುಳ್ಳಿ ₹60 ಹಾಗೂ ಎರಡನೇ ಕ್ವಾಲಿಟಿ ಈರುಳ್ಳಿ ₹50ರಂತೆ ಮಾರಾಟವಾಗುತ್ತಿದೆ.

ಎರಡು ವಾರಗಳ ಹಿಂದೆ ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ ಕಡೆಯಿಂದ ಹೆಚ್ಚು ಬೇಡಿಕೆ ಬಂದಿತ್ತು. ಹೀಗಾಗಿ ದರ ಏರಿಕೆ ಆಗಿತ್ತು. ಈಗ ಅಲ್ಲಿ ಸ್ಥಳೀಯವಾಗಿ ಹೊಸ ಬೆಳೆ ಬಂದಿದ್ದರಿಂದ ಈರುಳ್ಳಿ ಪೂರೈಕೆ ಹೆಚ್ಚಾಗಿದೆ. ಸಹಜವಾಗಿ ಇದು ಬೆಳಗಾವಿ ಎಪಿಎಂಸಿಯಲ್ಲಿ ದರ ಕಡಿಮೆಯಾಗಲು ಕಾರಣವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವಾರ ಈರುಳ್ಳಿ ದರ ₹70ರಿಂದ ₹80ರ ಆಸುಪಾಸಿನಲ್ಲಿತ್ತು. ಉಡುಪಿಯ ಕೆಲವು ಕಡೆ ಅದು ₹100ರ ಸಮೀಪ ತಲುಪಿತ್ತು. ಆದರೆ ಈಗ ಮಂಗಳೂರಿನಲ್ಲಿ ₹60ರಿಂದ ₹70ರ ದರದಲ್ಲಿ ಈರುಳ್ಳಿ ಲಭ್ಯವಾಗುತ್ತಿದೆ. ಉಡುಪಿಯಲ್ಲೂ ಬಹುತೇಕ ಅದೇ ದರ ಇದೆ.

ಕೊಪ್ಪಳ ಜಿಲ್ಲೆಯ ಸಗಟು ಮಾರುಕಟ್ಟೆಯಲ್ಲಿ ವಾರದ ಹಿಂದೆ ಈರುಳ್ಳಿ ಸ್ಥಳೀಯ ಫಸಲಿಗೆ ಒಂದು ಕ್ವಿಂಟಲ್‌ಗೆ ₹5,000 ಇತ್ತು. ಆಗ ಚಿಲ್ಲರೆ ಮಾರುಕಟ್ಟೆಯಲ್ಲಿ  ಕೆ.ಜಿ.ಗೆ ₹70ರಿಂದ ₹80ಕ್ಕೆ ಮಾರಾಟ ಮಾಡಲಾಗುತ್ತಿತ್ತು. ಈಗ ಸ್ಥಳೀಯ ಫಸಲಿಗೆ ಪ್ರತಿ ಕ್ವಿಂಟಲ್‌ಗೆ ₹3,500ರಿಂದ ₹4,000 ಇದ್ದು, ಚಿಲ್ಲರೆ ದರ ಒಣಗಡ್ಡೆಗೆ ಪ್ರತಿ ಕೆ.ಜಿ.ಗೆ ₹55ರಿಂದ ₹60 ಮತ್ತು ಹಸಿಗಡ್ಡೆಗೆ ₹45ರಿಂದ ₹50ಕ್ಕೆ ಬಂದಿದೆ.

ಯಾದಗಿರಿ ಜಿಲ್ಲೆಯಲ್ಲಿ ವಾರದ ಹಿಂದೆ ಸಗಟು ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹5,000ರಿಂದ ₹5,500 ದರವಿತ್ತು. ಈಗ ₹4,000ರಿಂದ ₹4,500ಕ್ಕೆ ಕುಸಿದಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕಳೆದ ತಿಂಗಳು ಕೆಜಿಗೆ ₹70ರಿಂದ ₹80 ದರವಿತ್ತು. ಈಗ ₹60ರಿಂದ ₹70ವರೆಗೆ ಈರುಳ್ಳಿ ಮಾರಾಟವಾಗುತ್ತಿದೆ. 

‘ಮೂರ್ನಾಲ್ಕು ದಿನಗಳ ಹಿಂದೆ ಸಾಧಾರಣ ಮತ್ತು ಅತ್ಯತ್ತಮ ಈರುಳ್ಳಿ ದರವು ಕೆ.ಜಿ.ಗೆ ₹80–₹90 ಇತ್ತು. ಇದೀಗ ₹50–₹60ಕ್ಕೆ ಇಳಿಕೆಯಾಗಿದೆ. ಸಗಟು
ಮಾರುಕಟ್ಟೆಯಲ್ಲಿ ಸಾಧಾರಣ ಗುಣಮಟ್ಟದ ಈರುಳ್ಳಿ ಕೆ.ಜಿ.ಗೆ ₹40–₹50 ಹಾಗೂ ಉತ್ತಮ ಗುಣಮಟ್ಟದ ಈರುಳ್ಳಿ ಕೆ.ಜಿ.ಗೆ ₹60–₹70ಕ್ಕೆ ಮಾರಾಟವಾಗುತ್ತಿದೆ’ ಎಂದು ರಾಮನಗರ ಮಾರುಕಟ್ಟೆಯ ಈರುಳ್ಳಿ ವ್ಯಾಪಾರಿ ರಾಜಣ್ಣ ತಿಳಿಸಿದರು. 

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 50 ಕೆ.ಜಿ ತೂಕದ ಒಂದು ಚೀಲ ಈರುಳ್ಳಿಯ ಬೆಲೆ ₹2,600ರಿಂದ ₹ 2,900ರವರೆಗೆ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಈರುಳ್ಳಿಗೆ ₹60ರಿಂದ ₹ 80ರವರೆಗೆ ಇದೆ. ಕಳೆದ ವಾರಕ್ಕೆ ಹೋಲಿಸಿದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಈರುಳ್ಳಿಗೆ ಸರಾಸರಿ ₹10ರಿಂದ ₹ 15 ಇಳಿಕೆ ಆಗಿದೆ ಎನ್ನುತ್ತಾರೆ ವರ್ತಕರು.

ಮೈಸೂರು ವ್ಯಾಪ್ತಿಯಲ್ಲಿ ಮೂರು ವಾರಗಳ ಹಿಂದೆ ಸಗಟು ದರ ಕೆ.ಜಿಗೆ ₹60–65 ಇತ್ತು. ಆಗ ಚಿಲ್ಲರೆ
ಮಾರುಕಟ್ಟೆಯಲ್ಲಿ ಕೆ.ಜಿಗೆ ₹75ರಂತೆ ಮಾರಾಟ ಆಗಿತ್ತು. ಈಗ ಸಗಟು ದರ ಕೆ.ಜಿಗೆ ₹40–50ರವರೆಗೆ ಇದ್ದು, ಚಿಲ್ಲರೆ ದರ ₹60–70ರವರೆಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT