ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

₹3,200 ಕೋಟಿ ಹೂಡಿಕೆ ಪ್ರಸ್ತಾವ ಸ್ವೀಕಾರ: ಮಧ್ಯಪ್ರದೇಶದ ಮುಖ್ಯಮಂತ್ರಿ ಯಾದವ್‌

Published 8 ಆಗಸ್ಟ್ 2024, 16:38 IST
Last Updated 8 ಆಗಸ್ಟ್ 2024, 16:38 IST
ಅಕ್ಷರ ಗಾತ್ರ

ಬೆಂಗಳೂರು: ‘ಎರಡು ದಿನದ ಬೆಂಗಳೂರು ಭೇಟಿಯಲ್ಲಿ ₹3,200 ಕೋಟಿ ಹೂಡಿಕೆಯ ಪ್ರಸ್ತಾವ ಸ್ವೀಕರಿಸಲಾಗಿದೆ. ಇದರಿಂದ ಮಧ್ಯಪ್ರದೇಶದಲ್ಲಿ 7 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ’ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್‌ ಯಾದವ್‌ ತಿಳಿಸಿದರು.

ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಮಧ್ಯಪ್ರದೇಶದಲ್ಲಿ ಹೂಡಿಕೆಗೆ ಅವಕಾಶಗಳು’ ಕುರಿತ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಭೋಪಾಲ್‌ನಲ್ಲಿ 2025ರ ಫೆಬ್ರುವರಿ 7 ಮತ್ತು 8ರಂದು ಜಾಗತಿಕ ಹೂಡಿಕೆದಾರರ ಶೃಂಗಸಭೆ ಆಯೋಜಿಸಲಾಗಿದೆ. ಮಧ್ಯಪ್ರದೇಶದಲ್ಲಿ ಸ್ಟಾರ್ಟ್‌ಅಪ್‌ ಹಬ್‌ ಮತ್ತು ಸೆಂಟರ್‌ ಆಫ್‌ ಎಕ್ಸಲೆನ್ಸ್‌ (ಶ್ರೇಷ್ಠತಾ ಕೇಂದ್ರ) ಸ್ಥಾಪಿಸಲು ಗೂಗಲ್‌ ಕ್ಲೌಡ್‌ ಪ್ರಸ್ತಾವ ಸಲ್ಲಿಸಿದೆ’ ಎಂದರು.

ಬುಧವಾರ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ಗೆ ಭೇಟಿ ನೀಡಲಾಗಿತ್ತು. ಎಚ್‌ಎಎಲ್‌ ಕೇಂದ್ರವನ್ನು ನಮ್ಮ ರಾಜ್ಯದಲ್ಲಿಯೂ ಸ್ಥಾಪಿಸುವ ಕುರಿತು ಚರ್ಚಿಸಲಾಗಿದ್ದು, ಸಕಾರಾತ್ಮಕ ಫಲಿತಾಂಶ ಬರುವ ನಿರೀಕ್ಷೆಯಿದೆ ಎಂದು ಹೇಳಿದರು. 

ರಾಜ್ಯಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಸರ್ವಾಂಗೀಣ ಪ್ರಗತಿ ಸಾಧ್ಯ. ಆದ್ದರಿಂದ ಹೂಡಿಕೆದಾರರು ಮಧ್ಯಪ್ರದೇಶದಲ್ಲಿ ಹೂಡಿಕೆಗೆ ಮುಂದಾಗಬೇಕು. ಇದಕ್ಕೆ ಅಗತ್ಯವಿರುವ ಎಲ್ಲಾ ಸವಲತ್ತು ಒದಗಿಸಲಾಗುವುದು ಎಂದು ತಿಳಿಸಿದರು.

ಪ್ರವಾಸೋದ್ಯಮ, ಎಂಎಸ್‌ಎಂಇ, ತಂತ್ರಜ್ಞಾನ ಸೇರಿ ಇತರೆ ವಲಯಗಳಲ್ಲಿ ಹೂಡಿಕೆಗೆ ಅವಕಾಶಗಳಿವೆ. ಹೂಡಿಕೆದಾರರಿಗೆ ಅನುಕೂಲ ಕಲ್ಪಿಸಲು ಏಕಗವಾಕ್ಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ಮಧ್ಯಪ್ರದೇಶವು ಹೇರಳ ಖನಿಜ ಸಂಪನ್ಮೂಲಗಳನ್ನು ಹೊಂದಿದೆ ಎಂದು ಹೇಳಿದರು.

ಉದ್ಯಮಿ ಮೋಹನ್‌ದಾಸ್‌ ಪೈ ಮಾತನಾಡಿ, ಕರ್ನಾಟಕ ಮತ್ತು ಮಧ್ಯಪ್ರದೇಶ ಸಹೋದರರಿದ್ದಂತೆ. ಅಲ್ಲಿಯೂ ಹೂಡಿಕೆ ಮಾಡಬೇಕು. ಕರ್ನಾಟಕದಲ್ಲಿಯೂ ಹೂಡಿಕೆ ಮಾಡಬೇಕು. ಇದರಿಂದ ಎರಡೂ ರಾಜ್ಯಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT