ಬುಧವಾರ, ಫೆಬ್ರವರಿ 1, 2023
26 °C

ಜೊಮ್ಯಾಟೊ ಷೇರು ಮೌಲ್ಯ ಶೇ 66ರಷ್ಟು ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಜೊಮ್ಯಾಟೊ ಕಂಪನಿಯ ಷೇರುಗಳನ್ನು ಖರೀದಿಸಿದ್ದವರು ಶುಕ್ರವಾರದ ವಹಿವಾಟಿನಲ್ಲಿ ಸಂತಸದ ನಗೆ ಬೀರಿದ್ದಾರೆ. ಅವರ ಹೂಡಿಕೆಯ ಮೊತ್ತವು ಒಂದೇ ದಿನದಲ್ಲಿ ಶೇಕಡ 65ರಷ್ಟು ಹೆಚ್ಚಳವಾಗಿದೆ.

ಹೋಟೆಲ್ ಮತ್ತು ರೆಸ್ಟಾರೆಂಟ್‌ಗಳಿಂದ ಆಹಾರ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಂಪನಿಯಾದ ಜೊಮ್ಯಾಟೊ, ಐಪಿಒ ಸಂದರ್ಭದಲ್ಲಿ ತನ್ನ ಷೇರುಗಳ ಬೆಲೆಯನ್ನು ಗರಿಷ್ಠ ₹ 76ರವರೆಗೆ ನಿಗದಿ ಮಾಡಿತ್ತು. ಶುಕ್ರವಾರ ಬೆಳಿಗ್ಗೆ ಕಂಪನಿಯ ಷೇರುಗಳು, ಷೇರು ಮಾರುಕಟ್ಟೆಗಳಲ್ಲಿ ವಹಿವಾಟು ಆರಂಭಿಸಿದವು.

ಷೇರುಗಳು ₹ 115ರಂತೆ ಮುಂಬೈ ಷೇರು ಮಾರುಕಟ್ಟೆ (ಬಿಎಸ್‌ಇ) ಪ್ರವೇಶಿಸಿದವು. ಕೆಲವೇ ಹೊತ್ತಿನಲ್ಲಿ ಷೇರು ಮೌಲ್ಯವು ₹ 138ರವರೆಗೂ ಏರಿಕೆ ಆಗಿತ್ತು.

ದಿನದ ಕೊನೆಯಲ್ಲಿ ಜೊಮ್ಯಾಟೊ ಕಂಪನಿಯ ಪ್ರತಿ ಷೇರಿನ ಬೆಲೆಯು ₹ 125.85 ಆಗಿತ್ತು. ಇದರಿಂದಾಗಿ, ಐಪಿಒ ವೇಳೆ ನಿಗದಿ ಮಾಡಿದ್ದ ಬೆಲೆಗೆ ಹೋಲಿಸಿದರೆ ಜೊಮ್ಯಾಟೊ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ ಶೇ 65ರಷ್ಟು ಹೆಚ್ಚಳವಾದಂತೆ ಆಗಿದೆ. ಷೇರು ಮಾರುಕಟ್ಟೆ ಪ್ರವೇಶದ ಸಂದರ್ಭದಲ್ಲಿ ಷೇರುಗಳಿಗೆ ಇದ್ದ ಬೆಲೆಗೆ (₹ 115) ಹೋಲಿಸಿದರೆ, ವಹಿವಾಟಿನ ಕೊನೆಯಲ್ಲಿ ಷೇರಿನ ಮೌಲ್ಯವು ಶೇಕಡ 9.43ರಷ್ಟು ಹೆಚ್ಚಳವಾದಂತಾಗಿದೆ.

ಒಂದು ಹಂತದಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯವು ₹ 1 ಲಕ್ಷ ಕೋಟಿಯನ್ನು ದಾಟಿತ್ತು. ದಿನದ ವಹಿವಾಟಿನ ಕೊನೆಯಲ್ಲಿ ಮಾರುಕಟ್ಟೆ ಮೌಲ್ಯವು ₹ 98,731 ಕೋಟಿ ಆಗಿದೆ. ‘ನಮ್ಮ ಐಪಿಒಗೆ ಸಿಕ್ಕ ಭಾರಿ ಸ್ಪಂದನವು, ನಾವು ಮಾಡುತ್ತಿರುವ ವಿನಿಯೋಗಗಳನ್ನು ಅರ್ಥ ಮಾಡಿಕೊಳ್ಳುವಂತಹ ಹೂಡಿಕೆದಾರರು ಜಗತ್ತಿನ ಎಲ್ಲೆಡೆಯೂ ಇದ್ದಾರೆ ಎಂಬ ಭರವಸೆಯನ್ನು ನಮಗೆ ನೀಡಿದೆ’ ಎಂದು ಜೊಮ್ಯಾಟೊ ಸಂಸ್ಥಾಪಕ ಹಾಗೂ ಮುಖ್ಯ
ಕಾರ್ಯನಿರ್ವಹಣಾ ಅಧಿಕಾರಿ ದೀಪಿಂದರ್ ಗೋಯಲ್ ಪ್ರತಿಕ್ರಿಯೆ ನೀಡಿದ್ದಾರೆ.

‘ಇದು ನಮ್ಮ ಪಾಲಿಗೆ ಬಹುದೊಡ್ಡ ದಿನ. ಹೊಸ ಆರಂಭದ ದಿನ. ಆದರೆ, ದೇಶದ ಇಡೀ ಇಂಟರ್ನೆಟ್‌ ವ್ಯವಸ್ಥೆಯ ಪ್ರಯತ್ನಗಳ ಪರಿಣಾಮವಾಗಿ ನಾವು ಇಂದು ಈ ಮಟ್ಟಕ್ಕೆ ಬಂದಿದ್ದೇವೆ’ ಎಂದು ಅವರು ಕಂಪನಿಯ ಬ್ಲಾಗ್‌ನಲ್ಲಿ ಬರೆದಿದ್ದಾರೆ.

***

ನಾವು ಯಶಸ್ಸು ಕಾಣುತ್ತೇವೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಅತ್ಯುತ್ತಮವಾಗಿ ಕೆಲಸ ಮಾಡುವುದು ಖಂಡಿತ. ನಾವು ತಲುಪಿರುವ ಹಂತವು ಭಾರತದ ಲಕ್ಷಾಂತರ ಜನರಿಗೆ ದೊಡ್ಡ ಕನಸುಗಳನ್ನು ಕಾಣಲು ಸ್ಫೂರ್ತಿ ನೀಡುತ್ತದೆ.

- ದೀಪಿಂದರ್ ಗೋಯಲ್‌, ಜೊಮ್ಯಾಟೊ ಸಿಇಒ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು