ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಸಾಕ್ಷರತೆ | ಐ.ಟಿ. ವಿವರ: ತಪ್ಪು ಸರಿಪಡಿಸುವುದು ಹೇಗೆ?

Published 3 ಸೆಪ್ಟೆಂಬರ್ 2023, 19:30 IST
Last Updated 3 ಸೆಪ್ಟೆಂಬರ್ 2023, 19:30 IST
ಅಕ್ಷರ ಗಾತ್ರ

ಆದಾಯ ತೆರಿಗೆ ವಿವರ ಸಲ್ಲಿಸುವಾಗ ಕೆಲವೊಮ್ಮೆ ತಿಳಿದೋ ತಿಳಿಯದೆಯೋ ತಪ್ಪುಗಳಾಗಿರುತ್ತವೆ. ಆದರೆ ಆ ದೋಷಗಳನ್ನು ಸರಿಪಡಿಸಿಕೊಳ್ಳಲು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139(5) ಅಡಿಯಲ್ಲಿ ಅವಕಾಶವಿದೆ. ತಪ್ಪು ಆದಾಯ ತೆರಿಗೆ ವಿವರ ಸಲ್ಲಿಸಿರುವವರು ಸ್ವಯಂಪ್ರೇರಿತವಾಗಿ ಪರಿಷ್ಕೃತ ತೆರಿಗೆ ವಿವರ ಸಲ್ಲಿಸಬಹುದು. ಈ ವರ್ಷದ ಡಿಸೆಂಬರ್ 31ರ ಒಳಗಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸಲು ಆದಾಯ ತೆರಿಗೆ ಇಲಾಖೆ ಅವಕಾಶ ನೀಡಿದೆ. ಜುಲೈ 31ರ ಬಳಿಕ, ತಡವಾಗಿ ಆದಾಯ ತೆರಿಗೆ ವಿವರ ಸಲ್ಲಿಸಿದವರಿಗೂ ಪರಿಷ್ಕೃತ ವಿವರ ಸಲ್ಲಿಸಲು ಅನುವು ಮಾಡಿಕೊಟ್ಟಿದೆ.

ಯಾವಾಗ ಪರಿಷ್ಕೃತ ವಿವರ ಸಲ್ಲಿಸಬೇಕು?: ಆದಾಯ ತೆರಿಗೆ ವಿವರ ಸಲ್ಲಿಸುವಾಗ ನೀವು ತಪ್ಪು ಮಾಡಿದ್ದರೆ, ಹೆಚ್ಚುವರಿ ಆದಾಯ ವರದಿ ಮಾಡುವುದನ್ನು ತಪ್ಪಿಸಿದ್ದರೆ, ಬಾಡಿಗೆ ಭತ್ಯೆ ಪಡೆಯಲು ಸಾಧ್ಯವಾಗಿದ್ದರೆ, ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡುವ ಬದಲು ಹಳೆಯ ತೆರಿಗೆ ಪದ್ಧತಿ ಆಯ್ದುಕೊಂಡಿದ್ದರೆ, ತಪ್ಪು ಬ್ಯಾಂಕ್ ಖಾತೆಯನ್ನು ನಮೂದಿಸಿದ್ದರೆ, ಫಾರಂ 26ಎಎಸ್ ತಡವಾಗಿ ನಮೂದಾಗಿದ್ದು ಟಿಡಿಎಸ್ ಕ್ರೆಡಿಟ್ ಪಡೆಯಲು ಸಾಧ್ಯವಾಗದಿದ್ದರೆ, ಬಂಡವಾಳ ವೃದ್ಧಿ ತೆರಿಗೆ ಪರಿಗಣಿಸದೆ ವಿವರ ಸಲ್ಲಿಸಿದ್ದರೆ... ಹೀಗೆ ಅನೇಕ ಕಾರಣಗಳಿಗೆ ಪರಿಷ್ಕೃತ ವಿವರ ಸಲ್ಲಿಸಬಹುದು.

ತಿದ್ದಿಕೊಂಡ ಸಂದೀಪ್: ಸಂದೀಪ್ (ಹೆಸರು ಬದಲಿಸಲಾಗಿದೆ) ಬೆಂಗಳೂರಿನ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಉದ್ಯೋಗಿ. ಜುಲೈನಲ್ಲಿ ಅವರು ಆದಾಯ ತೆರಿಗೆ ವಿವರ ಸಲ್ಲಿಸಿದ್ದರು. ವಿವರ ಸಲ್ಲಿಸುವಾಗ ಬ್ಯಾಂಕ್ ಬಡ್ಡಿಯಿಂದ ಬಂದಿರುವ ಆದಾಯ, ಷೇರುಗಳ ಡಿವಿಡೆಂಡ್ ಆದಾಯವನ್ನು ತೆರಿಗೆ ಲೆಕ್ಕಾಚಾರಕ್ಕೆ ಪರಿಗಣಿಸಿದರು. ಆದರೆ ಷೇರುಗಳು ಮತ್ತು ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಿಂದ ಬಂದಿರುವ ಗಳಿಕೆಗೆ ಬಂಡವಾಳ ವೃದ್ಧಿ ತೆರಿಗೆ (ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್) ಕಟ್ಟುವುದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಆದರೆ ಆಗಸ್ಟ್‌ನಲ್ಲಿ ವಾರ್ಷಿಕ ಮಾಹಿತಿ ವಿವರ ನೋಡಿದಾಗ ₹2.25 ಲಕ್ಷ ಆದಾಯ ಬಂಡವಾಳ ವೃದ್ಧಿ ತೆರಿಗೆಗೆ ಒಳಪಡುತ್ತದೆ ಎಂದು ತಿಳಿಯಿತು.

ಹೀಗಾದಾಗ ಸಂದೀಪ್‌ಗೆ ಮುಂದೇನು ಮಾಡುವುದು ಎಂಬ ಪ್ರಶ್ನೆ ಎದುರಾಯಿತು. ಕೂಡಲೇ ತೆರಿಗೆ ತಜ್ಞರನ್ನು ಸಂಪರ್ಕಿಸಿದಾಗ, ಹೆಚ್ಚುವರಿ ಗಳಿಕೆ ₹2.25 ಲಕ್ಷದ ಪೈಕಿ ₹1 ಲಕ್ಷ ದೀರ್ಘಾವಧಿ ಬಂಡವಾಳ ಗಳಿಕೆಯಾಗಿದ್ದರಿಂದ ಅದಕ್ಕೆ ಯಾವುದೇ ತೆರಿಗೆ ಕಟ್ಟಬೇಕಿಲ್ಲ, ಇನ್ನುಳಿದ ₹1.25 ಲಕ್ಷಕ್ಕೆ ಅಲ್ಪಾವಧಿ ಬಂಡವಾಳ ವೃದ್ಧಿ ತೆರಿಗೆ (ಎಸ್‌ಟಿಸಿಜಿ) ಶೇ 15ರಷ್ಟು ಕಟ್ಟಬೇಕು ಎನ್ನುವ ಮಾಹಿತಿ ಸಿಕ್ಕಿತು. ಅದರಂತೆ ಹೆಚ್ಚುವರಿ ₹18,750 ತೆರಿಗೆಯನ್ನು ಸಂದೀಪ್ ಪಾವತಿಸಿದರು. ನಿಗದಿತ ತೆರಿಗೆ ಕಟ್ಟದಿದ್ದರೆ ಆದಾಯ ತೆರಿಗೆ ಇಲಾಖೆ ನೋಟಿಸ್ ಕಳುಹಿಸುವ ಸಾಧ್ಯತೆಯಿತ್ತು. ಆದರೆ ಹೆಚ್ಚುವರಿ ತೆರಿಗೆ ಪಾವತಿಸಿ ಪರಿಷ್ಕೃತ ಆದಾಯ ತೆರಿಗೆ ವಿವರ ಸಲ್ಲಿಸಿದ ಕಾರಣ ಸಮಸ್ಯೆ ಬಗೆಹರಿಯಿತು. (ಹೆಚ್ಚಿನ ವಿವರಗಳಿಗೆ ಪಟ್ಟಿ ಗಮನಿಸಿ)

ಪರಿಷ್ಕೃತ ವಿವರ ಸಲ್ಲಿಸುವಾಗ ಗಮನಿಸಿ: ನಿಗದಿತ ಸಮಯದ ಒಳಗೆ ಎಷ್ಟು ಬಾರಿ ಬೇಕಾದರೂ ಪರಿಷ್ಕೃತ ಆದಾಯ ತೆರಿಗೆ ವಿವರ ಸಲ್ಲಿಸಬಹುದು. ಆದರೆ ಕಟ್ಟಿರುವ ತೆರಿಗೆ ಪಾಲಿನಲ್ಲಿ ಹೆಚ್ಚು ಹಣ ವಾಪಸ್ ಪಡೆಯಬೇಕು ಎನ್ನುವ ಕಾರಣಕ್ಕೆ ಪರಿಷ್ಕೃತ ವಿವರ ಸಲ್ಲಿಕೆ ಅನುಕೂಲವನ್ನು ದುರುಪಯೋಗ ಮಾಡಿಕೊಳ್ಳಬೇಡಿ. ತಪ್ಪು ಮಾಹಿತಿ ನೀಡಿ ಹೆಚ್ಚು ಹಣ ಹಿಂಪಡೆಯಲು ಯತ್ನಿಸಿದರೆ ಆ ವಿಷಯ ಆದಾಯ ತೆರಿಗೆ ಇಲಾಖೆಗೆ ತಿಳಿದು ನಿಮಗೆ ನೋಟಿಸ್ ಬರುವ ಸಾಧ್ಯತೆಯಿರುತ್ತದೆ. ಹಾಗಾಗಿ ನೈಜ ಪ್ರಕರಣಗಳಲ್ಲಿ ಮಾತ್ರ ಆದಾಯ ತೆರಿಗೆ ವಿವರ ಪರಿಷ್ಕರಣೆ ಮಾಡಿ.

ಹಣಕಾಸು ಸಾಕ್ಷರತೆ | ಐ.ಟಿ. ವಿವರ: ತಪ್ಪು ಸರಿಪಡಿಸುವುದು ಹೇಗೆ?

ಹೀಗೆ ಪರಿಷ್ಕೃತ ವಿವರ ಸಲ್ಲಿಸಿ: ಈ ಹಿಂದೆ ಹೇಗೆ ಆನ್‌ಲೈನ್ ಮೂಲಕ ಆದಾಯ ತೆರಿಗೆ ವಿವರ ಸಲ್ಲಿಸಿರುವಿರೋ ಅದೇ ಮಾದರಿಯಲ್ಲಿ ಪರಿಷ್ಕೃತ ವಿವರ ಸಲ್ಲಿಸಿ. ಪರಿಷ್ಕೃತ ವಿವರ ಸಲ್ಲಿಸುವಾಗ ಸ್ವಯಂ ಪ್ರೇರಿತವಾಗಿ ಪರಿಷ್ಕೃತ ವಿವರ ಸಲ್ಲಿಸುತ್ತಿರುವಿರೋ ಅಥವಾ ನೋಟಿಸ್ ನೀಡಿದ ಕಾರಣಕ್ಕೆ ಪರಿಷ್ಕೃತ ವಿವರ ಸಲ್ಲಿಕೆ ಮಾಡುತ್ತಿರುವಿರೋ ಎನ್ನುವುದನ್ನು ನಮೂದಿಸಿ. ಮೊದಲ ಬಾರಿಗೆ ಸಲ್ಲಿಸಿದ ವಿವರಗಳನ್ನು ಪರಿಷ್ಕೃತ ವಿವರ ಸಲ್ಲಿಸುವಾಗ ಸರಿಯಾಗಿ ನಮೂದಿಸಿ, 15 ಅಂಕಿಗಳ ಸ್ವೀಕೃತಿ ಸಂಖ್ಯೆಯನ್ನು ಸೂಚಿಸಿ. ಮೊದಲ ವಿವರ ಮತ್ತು ಪರಿಷ್ಕೃತ ವಿವರದ ನಡುವೆ ಹೊಂದಾಣಿಕೆಯಾಗದಿದ್ದರೆ ಅರ್ಜಿ ತಿರಸ್ಕೃತವಾಗುತ್ತದೆ. ವಿವರ ಸಲ್ಲಿಕೆ ಬಗ್ಗೆ ಸರಿಯಾದ ಅರಿವಿಲ್ಲದಿದ್ದರೆ ತೆರಿಗೆ ತಜ್ಞರ ನೆರವು ಪಡೆಯಿರಿ.

ಗಳಿಕೆಯ ಲಯಕ್ಕೆ ಮರಳಿದ ಷೇರುಪೇಟೆ

ಸತತ ಐದು ವಾರಗಳಿಂದ ಕುಸಿತದ ಹಾದಿಯಲ್ಲಿದ್ದ ಷೇರುಪೇಟೆ ಸೂಚ್ಯಂಕಗಳು ಗಳಿಕೆಯ ಹಾದಿಗೆ ಮರಳಿವೆ. ಸೆಪ್ಟೆಂಬರ್ 1ಕ್ಕೆ ಕೊನೆಗೊಂಡ ವಾರದಲ್ಲಿ ನಿಫ್ಟಿ ಮತ್ತು ಸೆನ್ಸೆಕ್ಸ್ ಸೂಚ್ಯಂಕಗಳು ಉತ್ತಮ ಗಳಿಕೆ ಕಂಡಿವೆ. 65,387 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.77ರಷ್ಟು ಗಳಿಸಿಕೊಂಡಿದೆ. 19,435 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 0.87ರಷ್ಟು ಹೆಚ್ಚಳವಾಗಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಮಂದಗತಿಯ ವಹಿವಾಟು, ಮುಂಗಾರು ಹಿನ್ನಡೆ, ತೈಲ ಬೆಲೆ ಹೆಚ್ಚಳ ಸೇರಿದಂತೆ ಹಲವು ನಕಾರಾತ್ಮಕ ಅಂಶಗಳಿದ್ದರೂ ಉತ್ತಮ ಜಿಡಿಪಿ ದರ ಮತ್ತು ಕೈಗಾರಿಕಾ ಉತ್ಪಾದನೆಯಲ್ಲಿನ ಹೆಚ್ಚಳವು ಮಾರುಕಟ್ಟೆ ಜಿಗಿತಕ್ಕೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ಬಿಎಸ್ಇ ಲೋಹ ಸೂಚ್ಯಂಕ ಶೇ 6ರಷ್ಟು, ಬಿಎಸ್ಇ ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 5.7ರಷ್ಟು ಮತ್ತು ಟೆಲಿಕಾಂ ಸೂಚ್ಯಂಕ ಶೇ 4.5ರಷ್ಟು ಜಿಗಿದಿವೆ. ಬಿಎಸ್ಇ ಪವರ್ ಮತ್ತು ಆಟೋ ಸೂಚ್ಯಂಕಗಳು ತಲಾ ಶೇ 3.4ರಷ್ಟು ಹೆಚ್ಚಳ ದಾಖಲಿಸಿವೆ. ಬಿಎಸ್ಇ ಎಫ್‌ಎಂಸಿಜಿ ಸೂಚ್ಯಂಕ ಶೇ 0.5ರಷ್ಟು ಕುಸಿದಿದೆ.

ಬಿಎಸ್ಇ ಲಾರ್ಜ್ ಕ್ಯಾಪ್ ಸೂಚ್ಯಂಕದಲ್ಲಿ ಟಾಟಾ ಸ್ಟೀಲ್, ಮಾರುತಿ ಸುಜುಕಿ ಇಂಡಿಯಾ, ಇಂಡಸ್ ಟವರ್ಸ್, ಜೊಮಾಟೊ, ಅವೆನ್ಯೂ ಸೂಪರ್‌ಮಾರ್ಟ್ಸ್‌, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಡಿಎಲ್ಎಫ್ ಗಳಿಸಿಕೊಂಡಿವೆ.

ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹4,311.58 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹9,570 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಮುನ್ನೋಟ: ಈ ವಾರ ಬಿಜೋಟಿಕ್ ಕಮರ್ಷಿಯಲ್, ಕಾನ್‌ಕೋರ್ಡ್ ಬಯೋಟೆಕ್ ಲಿಮಿಟೆಡ್ ಸೇರಿ ಕೆಲ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ಹಾಗೂ ದೇಶಿಯ ಬೆಳವಣಿಗೆಗಳು ಸೂಚ್ಯಂಕಗಳ ಗತಿ ನಿರ್ಧರಿಸಲಿವೆ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT