ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಸಾಕ್ಷರತೆ: ಎಸ್‌ಐಪಿ ಮತ್ತೆ ಮ್ಯೂಚುಯಲ್ ಫಂಡ್ ಎರಡೂ ಒಂದೇನಾ?

ಹಣಕಾಸು ಸಾಕ್ಷರತೆ
Published 10 ಡಿಸೆಂಬರ್ 2023, 20:47 IST
Last Updated 10 ಡಿಸೆಂಬರ್ 2023, 20:47 IST
ಅಕ್ಷರ ಗಾತ್ರ

ಅನೇಕರು ಮ್ಯೂಚುಯಲ್ ಫಂಡ್ (ಎಂ.ಎಫ್‌) ಮತ್ತು ಎಸ್‌ಐಪಿ ನಡುವೆ ಗೊಂದಲ ಮಾಡಿಕೊಳ್ಳುತ್ತಾರೆ. ಮ್ಯೂಚುಯಲ್ ಫಂಡ್ ಎನ್ನುವುದು ಹೂಡಿಕೆ ಉತ್ಪನ್ನವಾದರೆ, ಎಸ್‌ಐಪಿ ಎನ್ನುವುದು ಮ್ಯೂಚುಯಲ್ ಫಂಡ್ ಸೇರಿದಂತೆ ಬೇರೆ ಬೇರೆ ಹೂಡಿಕೆಗಳಲ್ಲಿ ಹಣ ತೊಡಗಿಸಲು ಬಳಕೆಯಾಗುವ ಒಂದು ವಿಧಾನ. ಬನ್ನಿ ಎಸ್ಐಪಿಗೂ ಮ್ಯೂಚುಯಲ್ ಫಂಡ್‌ಗೂ ಇರುವ ವ್ಯತ್ಯಾಸವನ್ನು ಅರಿತು ಜಾಗೃತ ಹೂಡಿಕೆದಾರರಾಗೋಣ.

ಮ್ಯೂಚುಯಲ್ ಫಂಡ್ ಮತ್ತು ಎಸ್‌ಐಪಿ ನಡುವಿನ ವ್ಯತ್ಸಾಸ: ದುಡ್ಡನ್ನು ದುಡಿಸಲು ಮ್ಯೂಚುಯಲ್ ಫಂಡ್ ಒಂದು ಉತ್ತಮ ಸಾಧನ. ನಿಮ್ಮ ಹಣವನ್ನು ನಿಮ್ಮ ಪರವಾಗಿ ಮಾರುಕಟ್ಟೆಯಲ್ಲಿ ವೃತ್ತಿಪರವಾಗಿ ಹೂಡಿಕೆ ಮಾಡುವ ವ್ಯವಸ್ಥೆಯೇ ಮ್ಯೂಚುಯಲ್ ಫಂಡ್. ನೀವು ಹೂಡಿದ ಹಣವನ್ನು ಮ್ಯೂಚುವಲ್ ಫಂಡ್‌ ಕಂಪನಿಯವರು ವಿವಿಧ ಷೇರು, ಬಾಂಡ್ ಮತ್ತಿತರ ಹೂಡಿಕೆಯ ಉತ್ಪನ್ನಗಳಲ್ಲಿ ತೊಡಗಿಸುತ್ತಾರೆ. ಹೂಡಿಕೆಯಿಂದ ಬಂದ ಲಾಭದಲ್ಲಿ ನಿಗದಿತ ಕಮಿಷನ್ ಪಡೆದು ನಿವ್ವಳ ಲಾಭವನ್ನು ಹೂಡಿಕೆದಾರರಿಗೆ ಹಂಚಲಾಗುತ್ತದೆ. ಇಲ್ಲಿ ಹೂಡಿಕೆ ಮತ್ತು ಸಂಬಂಧಪಟ್ಟ ರಿಸ್ಕ್ ಗಳನ್ನು ವೃತ್ತಿಪರ ಫಂಡ್ ಮ್ಯಾನೇಜರ್‌ಗಳು ನಿರ್ವಹಿಸುತ್ತಾರೆ. ಷೇರುಪೇಟೆಯ ಏರಿಳಿತ ಮತ್ತು ರಿಸ್ಕ್‌ಗೆ ಹೋಲಿಸಿದರೆ, ಮ್ಯೂಚುಯಲ್ ಫಂಡ್‌ನಲ್ಲಿ ರಿಸ್ಕ್ ಕಡಿಮೆ. ಹಾಗಾಗಿ ನಷ್ಟದ ಭಯದಿಂದಾಗಿ ಷೇರಿನಿಂದ ದೂರ ಉಳಿದಿರುವವರಿಗೆ ಮ್ಯೂಚುವಲ್ ಫಂಡ್ ಸೂಕ್ತ ಆಯ್ಕೆ.

ಎಸ್‌ಐಪಿ ಎನ್ನುವುದು ಹೂಡಿಕೆಯ ಉತ್ಪನ್ನವಲ್ಲ ಹೂಡಿಕೆಯ ವಿಧಾನ. ಎಸ್ಐಪಿಯನ್ನು ಕನ್ನಡದಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ ಎಂದು ಕರೆಯಬಹುದು. ಷೇರು ಹೂಡಿಕೆ, ಮ್ಯೂಚುಯಲ್ ಫಂಡ್ ಹೂಡಿಕೆ, ಚಿನ್ನ ಖರೀದಿ, ಪಿಪಿಎಫ್ ಹೂಡಿಕೆ, ಅಂಚೆ ಕಚೇರಿ ಹೂಡಿಕೆ, ಫಿಕ್ಸೆಡ್ ಡೆಪಾಸಿಟ್ ಹೀಗೆ ಬಹುತೇಕ ಎಲ್ಲಾ ರೀತಿಯ ಹೂಡಿಕೆಗಳಲ್ಲೂ ಎಸ್ಐಪಿ ವಿಧಾನ ಅಳವಡಿಸಿಕೊಳ್ಳಬಹುದು. ಒಂದು ಪೂರ್ವನಿಗದಿತ ದಿನದಂದು, ಪೂರ್ವ ನಿಗದಿತ ಮೊತ್ತವನ್ನು ಸ್ವಯಂಚಾಲಿತವಾಗಿ ಹೂಡಿಕೆ ಉತ್ಪನ್ನವೊಂದಕ್ಕೆ ವ್ಯವಸ್ಥಿತವಾಗಿ ವರ್ಗಾಯಿಸುವ ವಿಧಾನವೇ ಎಸ್ಐಪಿ ಅರ್ಥಾತ್ ವ್ಯವಸ್ಥಿತ ಹೂಡಿಕೆ ಯೋಜನೆ.

ಮ್ಯೂಚುಯಲ್ ಫಂಡ್‌ನಲ್ಲಿ ಎಸ್ಐಪಿ ಹೇಗೆ ಕೆಲಸ ಮಾಡುತ್ತದೆ: ಎಸ್ಐಪಿಯಲ್ಲಿ ವಾರಕ್ಕೊಮ್ಮೆ, ಹದಿನೈದು ದಿನಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಬಹುದು. ನೀವು ಮ್ಯೂಚುಯಲ್ ಫಂಡ್​ನಲ್ಲಿ ಹಣ ಹೂಡಲು ನಿರ್ಧಾರ ಮಾಡಿ, ಬ್ಯಾಂಕ್ ಖಾತೆಯಿಂದ ನಿರ್ದಿಷ್ಟ ಮೊತ್ತವನ್ನು ಮ್ಯೂಚುಯಲ್ ಫಂಡ್​ಗೆ ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಮ್ (ECS) ಮೂಲಕ ನಿಗದಿಪಡಿಸಿದಲ್ಲಿ ಮಾಸಿಕವಾಗಿ ಹಣವನ್ನು ಹೂಡಲೇಬೇಕು. ನಿಗದಿತ ಮೊತ್ತ ನಿರ್ದಿಷ್ಟ ದಿನಾಂಕದಂದು ಬ್ಯಾಂಕ್ ಖಾತೆಯಲ್ಲಿ ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ. ಒಂದೊಮ್ಮೆ ಮ್ಯೂಚುಯಲ್ ಫಂಡ್ ಖರೀದಿ ನಿಲ್ಲಿಸಬೇಕು ಎಂದರೆ ಬ್ಯಾಂಕ್‌ಗೆ ಮೊದಲೇ ಮಾಹಿತಿ ನೀಡಬೇಕು.

ಮ್ಯೂಚುಯಲ್ ಫಂಡ್ ಅನ್ನು ಉದಾಹರಣೆಯಾಗಿ ತೆಗೆದುಕೊಂಡು ಎಸ್ಐಪಿ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದುಕೊಳ್ಳೋಣ. ಯಾವುದೇ ಎಸ್ಐಪಿಯನ್ನು ಆರಂಭಿಸಬೇಕಾದರೆ ಮೊದಲಿಗೆ ಈ ಪ್ರಮುಖ ನಾಲ್ಕು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು. ಯಾವ ಮ್ಯೂಚುಯಲ್ ಫಂಡ್ ಅಥವಾ ಯೋಜನೆಯಲ್ಲಿ ಹೂಡಿಕೆ ಮಾಡುತ್ತೀರಿ?, ಮ್ಯೂಚುಯಲ್ ಫಂಡ್‌ಗೆ ಪ್ರತಿ ಬಾರಿ ಹೂಡಿಕೆ ಮಾಡಬೇಕಿರುವ ಮೊತ್ತ ಎಷ್ಟು?, ಹೂಡಿಕೆಯನ್ನು ಪ್ರತಿ ವಾರ, ಪ್ರತಿ ತಿಂಗಳು ಅಥವಾ 3 ತಿಂಗಳಿಗೊಮ್ಮೆ ಮಾಡುವಿರೋ?, ನಿಮ್ಮ ಅಕೌಂಟ್‌ನಿಂದ ಹೂಡಿಕೆಗೆ ಹಣ ವರ್ಗಾವಣೆಯಾಗಬೇಕಿರುವ ದಿನಾಂಕ ಯಾವುದು? ಈ ನಾಲ್ಕು ವಿಚಾರಗಳನ್ನು ತೀರ್ಮಾನಿಸಿದ ಮೇಲೆ ನೀವು ಮುಂದುವರಿಯಬಹುದು.

ಉದಾಹರಣೆ: ನಾನು ನಿಪ್ಪಾನ್ ಇಂಡಿಯಾ ಗ್ರೋತ್ ಫಂಡ್‌ನಲ್ಲಿ ಪ್ರತಿ ತಿಂಗಳು ₹10 ಸಾವಿರ ಹೂಡಿಕೆಗೆ ನಿರ್ಧರಿಸಿದ್ದೇನೆ. ಪ್ರತಿ ತಿಂಗಳ 5ನೇ ದಿನದಂದು ನಾನು ಮ್ಯೂಚುವಲ್ ಫಂಡ್ ಎಸ್ಐಪಿಗೆ ಹಣ ಪಾವತಿಸಲು ತೀರ್ಮಾನಿಸಿದ್ದೇನೆ ಮತ್ತು ಡಿಸೆಂಬರ್ 2022 ರಿಂದಲೇ ಈ ಹೂಡಿಕೆ ಪ್ರಕ್ರಿಯೆ ಆರಂಭಿಸಿದ್ದೇನೆ ಎಂದಿಟ್ಟುಕೊಳ್ಳಿ. ಇದರಂತೆ ಹೋದರೆ ಡಿಸೆಂಬರ್ 2022 ರಿಂದ ಡಿಸೆಂಬರ್ 2023ರ ವರೆಗೆ ತಿಂಗಳಿಗೆ ₹ 10 ಸಾವಿರದಂತೆ ₹1 ಲಕ್ಷದ 30 ಸಾವಿರ ಹೂಡಿಕೆ ಮ್ಯೂಚುಯಲ್ ಫಂಡ್‌ಗೆ ವರ್ಗಾವಣೆ ಗೊಂಡಿರುತ್ತದೆ. ಮಾರುಕಟ್ಟೆ ಏರುಗತಿಯಲ್ಲಿದ್ದಾಗ ನಿಮ್ಮ ಹೂಡಿಕೆ ಮೊತ್ತಕ್ಕೆ ಕಡಿಮೆ ಮ್ಯೂಚುಯಲ್ ಫಂಡ್ ಯುನಿಟ್ ಗಳು ಲಭಿಸುತ್ತವೆ, ಆದರೆ ಮಾರುಕಟ್ಟೆ ಹೆಚ್ಚು ಇಳಿಕೆ ಕಂಡಾಗ ನಿಮಗೆ ಹೆಚ್ಚು ಮ್ಯೂಚುಯಲ್ ಫಂಡ್ ಯುನಿಟ್‌ಗಳು ಹಂಚಿಕೆಯಾಗುತ್ತವೆ. ಎಸ್‌ಐಪಿಯನ್ನು ದೀರ್ಘಾವಧಿಗೆ ಮಾಡುವುದರಿಂದ ಮಾರುಕಟ್ಟೆಯ ಏರಿಳಿತದ ಲಾಭ ನಿಮಗೆ ಲಭಿಸಿ ಮ್ಯೂಚುಯಲ್ ಫಂಡ್ ಹೂಡಿಕೆ ವೇಳೆ ವೆಚ್ಚದ ಸರಾಸರಿ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

ಎಸ್ಐಪಿ ಹೂಡಿಕೆ ಎಲ್ಲಿ ಮಾಡಬಹುದು: ಮ್ಯೂಚುಯಲ್ ಫಂಡ್ ಏಜೆಂಟ್‌ಗಳ ಮೂಲಕ, ಬ್ಯಾಂಕ್ ಶಾಖೆಗಳಲ್ಲಿ ಮ್ಯೂಚುಯಲ್ ಫಂಡ್ ಹೂಡಿಕೆ ಮಾಡಲು ಸಾಧ್ಯವಿದೆ. ಡಿಜಿಟಲ್ ಪ್ಲಾಟ್ ಫಾರಂಗಳ ಮೂಲಕ ಅಂದರೆ, ಬ್ಯಾಂಕ್ ವೆಬ್‌ಸೈಟ್‌ಗಳು, ಮ್ಯೂಚುಯಲ್ ಫಂಡ್ ಹೂಡಿಕೆ ಆ್ಯಪ್‌ಗಳಾದ ಗ್ರೋ, ಪೇಟಿಎಂ ಮನಿ, ಇಟಿ ಮನಿ ಮುಂತಾದ ವೇದಿಕೆಗಳನ್ನು ಬಳಸಿಕೊಂಡು ಕೂಡ ಹೂಡಿಕೆ ಮಾಡಬಹುದು.

ಬ್ಯಾಂಕ್ ಅಥವಾ ಏಜೆಂಟ್ ಗಳ ಮೂಲಕ ಮ್ಯೂಚುಯಲ್ ಫಂಡ್ ಹೂಡಿಕೆ ಮಾಡಿದರೆ ಹೆಚ್ಚು ಕಮಿಷನ್ ಕೊಡಬೇಕಾಗುತ್ತದೆ. ನೇರವಾಗಿ ನೀವೇ ಡಿಜಿಟಲ್ ಫ್ಲಾಟ್ ಫಾರಂಗಳಲ್ಲಿ ಹೂಡಿಕೆ ಮಾಡಿದರೆ ಕಮಿಷನ್ ಕೊಡಬೇಕಿಲ್ಲ. ಮ್ಯೂಚುಯಲ್ ಫಂಡ್ ಪರಿಭಾಷೆಯಲ್ಲಿ ಬ್ಯಾಂಕ್ ಅಥವಾ ಏಜೆಂಟ್‌ಗಳ ಮೂಲಕ ಹೂಡಿಕೆ ಮಾಡುವ ಮ್ಯೂಚುಯಲ್ ಫಂಡ್ ಅನ್ನು ರೆಗ್ಯೂಲರ್ ಮ್ಯೂಚುವಲ್ ಫಂಡ್ ಎಂದು ಕರೆದರೆ, ನೇರವಾಗಿ ನೀವೇ ಹೂಡಿಕೆ ಮಾಡುವ ಫಂಡ್ ಅನ್ನು ಡೈರೆಕ್ಟ್ ಮ್ಯೂಚುಯಲ್ ಫಂಡ್ ಎಂದು ಕರೆಯುತ್ತಾರೆ. ಕಡಿಮೆ ವೆಚ್ಚದಲ್ಲಿ ಮ್ಯೂಚುಯಲ್ ಫಂಡ್ ಹೂಡಿಕೆ ಮಾಡಬೇಕು ಎಂದರೆ ಡೈರೆಕ್ಟ್ ಮ್ಯೂಚುಯಲ್ ಫಂಡ್ ಒಳ್ಳೆಯ ಆಯ್ಕೆ. ಮ್ಯೂಚುಯಲ್ ಫಂಡ್ ಹೂಡಿಕೆಯನ್ನು ₹100, ₹ 500 ರಿಂದಲೂ ಆರಂಭಿಸಲು ಸಾಧ್ಯವಿದೆ.

ಗಮನಿಸಿ: ಈ ಲೇಖನದಲ್ಲಿ ಬಳಸಿರುವ ಕೆಲ ಕಂಪನಿಗಳ ಹೆಸರುಗಳು ಉದಾಹರಣೆ ಮಾತ್ರ. ಅವು ಹೂಡಿಕೆ ಶಿಫಾರಸು ಅಲ್ಲ

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

****

ದಾಖಲೆಯ ಜಿಗಿತ ಕಂಡ ಸೂಚ್ಯಂಕಗಳು

ಡಿಸೆಂಬರ್ 8ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಸಾರ್ವಕಾಲಿಕ ದಾಖಲೆಯ ಏರಿಕೆ ಕಂಡಿವೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಉತ್ತಮ ಗಳಿಕೆ ದಾಖಲಿಸಿವೆ. 69825 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 3.47 ರಷ್ಟು ಜಿಗಿದಿದೆ. 20969 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 3.46 ರಷ್ಟು ಜಿಗಿದಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಸಕಾರಾತ್ಮಕತೆ ಆರ್‌ಬಿಐನಿಂದ ಬಡ್ಡಿ ದರ ಯಥಾಸ್ಥಿತಿ ಭಾರತದ ಆರ್ಥಿಕತೆ ಉತ್ತಮ ಪ್ರಗತಿ ಕಾಣಲಿದೆ ಎಂಬ ಅಂದಾಜುಗಳು ಸೇರಿ ಹಲವು ಅಂಶಗಳು ಮಾರುಕಟ್ಟೆ ಜಿಗಿತಕ್ಕೆ ಕಾರಣವಾಗಿವೆ. ವಲಯವಾರು ಪ್ರಗತಿಯಲ್ಲಿ ಬಿಎಸ್ಇ ಪವರ್ ಸೂಚ್ಯಂಕ ಶೇ 13 ಬಿಎಸ್ಇ ಆಯಿಲ್ ಮತ್ತು ಗ್ಯಾಸ್ ಸೂಚ್ಯಂಕ ಶೇ 7.6 ಬಿಎಸ್ಇ ಬ್ಯಾಂಕ್ ಸೂಚ್ಯಂಕ ಶೇ 5.3 ಬಿಎಸ್ಇ ಎನರ್ಜಿ ಸೂಚ್ಯಂಕ ಶೇ 5.2 ರಷ್ಟು ಗಳಿಸಿಕೊಂಡಿವೆ. ಆದರೆ ಬಿಎಸ್ಇ ಎಫ್ಎಂಸಿಜಿ ಸೂಚ್ಯಂಕ ಶೇ 0.3 ರಷ್ಟು ಕುಸಿದಿದೆ.

ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ಅದಾನಿ ಟೋಟಲ್ ಗ್ಯಾಸ್ ಅದಾನಿ ಗ್ರೀನ್ ಎನರ್ಜಿ ಅದಾನಿ ಎನರ್ಜಿ ಸಲ್ಯೂಷನ್ಸ್ ಅದಾನಿ ಪೋರ್ಟ್ಸ್ ಆ್ಯಂಢ್‌ ಸ್ಪೆಷಲ್ ಎಕನಾಮಿಕ್ ಜೋನ್ ಮತ್ತು ಅದಾನಿ ಪವರ್ ಶೇ 21 ರಿಂದ ಶೇ 64 ರಷ್ಟು ಜಿಗಿದಿವೆ. ಬಿಎಸ್ಇ ಮಿಡ್ ಕ್ಯಾಪ್‌ನಲ್ಲಿ ಜಿಎಂಆರ್‌ ಏರ್ಪೋರ್ಟ್ಸ್‌ ಎಸಿಸಿ ಎನ್ಎಚ್‌ಪಿಸಿ ಎಚ್‌ಪಿಸಿಎಲ್ ಆರ್‌ಇಸಿ ಟ್ಯೂಬ್ ಇನ್ವೆಸ್ಟ್ ಮೆಂಟ್ಸ್ ಆಫ್ ಇಂಡಿಯಾ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಗಳಿಸಿಕೊಂಡಿವೆ. ಆದರೆ ವರ್ಲ್ ಪೂಲ್ ಆಫ್ ಇಂಡಿಯಾ ಪಿಬಿ ಫಿನ್‌ಟೆಕ್ ಟೋರೆಂಟ್ ಫಾರ್ಮಾ ಲುಪಿನ್ ಅದಿತ್ಯಾ ಬಿರ್ಲಾ ಕ್ಯಾಪಿಟಲ್ ಅಬೋಟ್ ಇಂಡಿಯಾ ಇಮಾಮಿ ಮತ್ತು ಡೆಲಿವರಿ ಶೇ 3 ರಿಂದ ಶೇ 8 ರಷ್ಟು ಕುಸಿದಿವೆ. ಮುನ್ನೋಟ: ಆರ್‌ಬಿಐ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿ ಇಟ್ಟಿರುವುದು ಮಾರುಕಟ್ಟೆಗೆ ಪೂರಕವಾಗಿದೆ. ಮುಂದಿನ ದಿನಗಳಲ್ಲಿ ಬಡ್ಡಿ ದರ ಇಳಿಕೆಯ ಸಾಧ್ಯತೆಯೂ ಇದೆ. ಇದು ಹೂಡಿಕೆದಾರರ ಪಾಲಿಗೆ ಆಶಾದಾಯಕವಾಗಲಿದೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ಹಾಗೂ ದೇಶಿಯ ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.

ರಾಜೇಶ್ ಕುಮಾರ್ ಟಿ.ಆರ್.

ರಾಜೇಶ್ ಕುಮಾರ್ ಟಿ.ಆರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT