ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಎಸ್‌ಟಿಯಲ್ಲಿ ಕರ್ನಾಟಕ ನಾಗಾಲೋಟ: ದೇಶದಲ್ಲೇ ಅತ್ಯಧಿಕ ಬೆಳವಣಿಗೆ ದರ

ದೇಶದಲ್ಲೇ ಅತ್ಯಧಿಕ ಬೆಳವಣಿಗೆ ದರ * ಏಳು ತಿಂಗಳಲ್ಲಿ ₹ 20 ಸಾವಿರ ಕೋಟಿ ಹೆಚ್ಚಳ
Last Updated 3 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದಲ್ಲಿ ನವೆಂಬರ್‌ ಅಂತ್ಯದವರೆಗೆ ರಾಜ್ಯದಲ್ಲಿ ಒಟ್ಟು ₹ 80,269 ಕೋಟಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ರಾಜ್ಯವು ಜಿಎಸ್‌ಟಿ ಸಂಗ್ರಹದಲ್ಲಿ ಶೇಕಡ 34ರಷ್ಟು ಪ್ರಗತಿ ಸಾಧಿಸಿದ್ದು, ಬೆಳವಣಿಗೆ ದರದಲ್ಲಿ ದೇಶದಲ್ಲೇ ಅಗ್ರ ಸ್ಥಾನಕ್ಕೇರಿದೆ.

2021-22ರಲ್ಲಿ ಕೇಂದ್ರ ಜಿಎಸ್‌ಟಿ (ಸಿಜಿಎಸ್‌ಟಿ) ಮತ್ತು ರಾಜ್ಯದ ಪಾಲಿನ ಜಿಎಸ್‌ಟಿ (ಎಸ್‌ಜಿಎಸ್‌ಟಿ) ಸೇರಿದಂತೆ ₹ 1 ಲಕ್ಷ ಕೋಟಿಗಿಂತಲೂ ಹೆಚ್ಚು ತೆರಿಗೆ ಸಂಗ್ರಹವಾಗಿತ್ತು. ರಾಜ್ಯದ ಪಾಲಿನ ಜಿಎಸ್‌ಟಿ ಮೂಲದಿಂದ ₹ 45,947 ಕೋಟಿ ವರಮಾನ ಸಂಗ್ರಹದ ಗುರಿ ಇತ್ತು. ಅದನ್ನು ಮೀರಿದ ಸಾಧನೆಯಾಗಿದ್ದು, ರಾಜ್ಯಕ್ಕೆ ಎಸ್‌ಜಿಎಸ್‌ಟಿ ರೂಪದಲ್ಲಿ ₹ 54,796 ಕೋಟಿ ಲಭಿಸಿತ್ತು.

‘ಈ ಆರ್ಥಿಕ ವರ್ಷದಲ್ಲಿ ಎಸ್‌ಜಿಎಸ್‌ಟಿ ಮೂಲದಿಂದ ₹ 59,280 ಕೋಟಿ ಜಿಎಸ್‌ಟಿ ಸಂಗ್ರಹದ ಗುರಿ ಇದೆ. ಏಳು ತಿಂಗಳ ಅವಧಿಯಲ್ಲಿ ₹ 43,230 ಕೋಟಿ ರಾಜ್ಯದ ಬೊಕ್ಕಸಕ್ಕೆ ಬಂದಿದೆ. 2021–22ನೇ ಆರ್ಥಿಕ ವರ್ಷದಲ್ಲಿ ಜಿಎಸ್‌ಟಿ ಸಂಗ್ರಹದ ಬೆಳವಣಿಗೆ ದರದಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್‌ ರಾಜ್ಯಗಳು ಮುಂದಿದ್ದವು. ಈ ವರ್ಷ ಎರಡೂ ರಾಜ್ಯಗಳನ್ನು ಹಿಂದಿಕ್ಕಿರುವ ಕರ್ನಾಟಕ, ಮೊದಲ ಸ್ಥಾನಕ್ಕೇರಿದೆ’ ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ಸಿ. ಶಿಖಾ ‘ಪ್ರಜಾವಾಣಿ’ಗೆ ತಿಳಿಸಿದರು.

ದೇಶದಲ್ಲಿನ ಜಿಎಸ್‌ಟಿ ಸಂಗ್ರಹದ ಸರಾಸರಿ ಬೆಳವಣಿಗೆ ದರ ಶೇ 24ರಷ್ಟಿದೆ. ಕೇರಳ ರಾಜ್ಯದ ಎರಡನೇ ಸ್ಥಾನದಲ್ಲಿದ್ದರೆ, ಅತ್ಯಧಿಕ ಜಿಎಸ್‌ಟಿ ಸಂಗ್ರಹವಾಗುವ ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದೆ.

‘ತೆರಿಗೆದಾರರು ಸಲ್ಲಿಸುವ ಲೆಕ್ಕಪತ್ರಗಳ ಪರಿಶೀಲನೆಗೆ ಕರ್ನಾಟಕ ಜಿಎಸ್‌ಟಿ ಕಾಯ್ದೆಯ ಅಡಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರು ಮತ್ತು ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಇದರಿಂದ ಹೆಚ್ಚಿನ ತೆರಿಗೆ ಸಂಗ್ರಹ ಸಾಧ್ಯವಾಗಿದೆ. ತನಿಖಾ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ, ಸಿಬ್ಬಂದಿಯನ್ನು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಿಗೆ ನಿಯೋಜಿಸಿ, ತೆರಿಗೆ ಸೋರಿಕೆ ತಡೆಗೆ ಕ್ರಮ ವಹಿಸಲಾಗಿದೆ. ಇವೆಲ್ಲವೂ ರಾಜ್ಯ ಜಿಎಸ್‌ಟಿ ಸಂಗ್ರಹದಲ್ಲಿ ಅತ್ಯಧಿಕ ಬೆಳವಣಿಗೆ ಸಾಧಿಸಲು ಕಾರಣ’ ಎಂದು ಶಿಖಾ ತಿಳಿಸಿದರು.

ತೆರಿಗೆ ವಂಚನೆ ಪತ್ತೆಗೆ ತಂತ್ರಾಂಶ ಆಧಾರಿತ ಕಣ್ಗಾವಲು ವ್ಯವಸ್ಥೆ ರೂಪಿಸಲಾಗಿದೆ. ಹೊರ ರಾಜ್ಯಗಳಲ್ಲಿನ ಬಿಲ್ಲಿಂಗ್‌ ಮಾಹಿತಿ ಪಡೆದು ರಾಜ್ಯದಲ್ಲಿ ತೆರಿಗೆ ಸೋರಿಕೆ ತಡೆಯಲಾಗುತ್ತಿದೆ. ವಹಿವಾಟಿನ ಮಾಹಿತಿ ಸಲ್ಲಿಸದವರನ್ನು ಪತ್ತೆಮಾಡಿ ನೋಟಿಸ್‌ ನೀಡಿ, ತೆರಿಗೆ ಸಂಗ್ರಹಿಸಲಾಗುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT