ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

Last Updated 9 ನವೆಂಬರ್ 2021, 19:31 IST
ಅಕ್ಷರ ಗಾತ್ರ

ಚನ್ನಬಸಪ್ಪ, ಹಾನಗಲ್

lಪ್ರಶ್ನೆ: ನಾನು ನಿವೃತ್ತ ಸರ್ಕಾರಿ ನೌಕರ. ವಯಸ್ಸು 66 ವರ್ಷ. ತಿಂಗಳ ಪಿಂಚಣಿ ₹ 42 ಸಾವಿರ. ಬ್ಯಾಂಕ್‌ ಠೇವಣಿಯಿಂದ ವಾರ್ಷಿಕ ₹ 2.32 ಲಕ್ಷ ಬಡ್ಡಿ ಬರುತ್ತದೆ. ಸ್ವಂತ ಮನೆ ಇದೆ. ಮಕ್ಕಳಿಗೆ ಮದುವೆ ಆಗಿ ಬೇರೆ ಇದ್ದಾರೆ. ನನ್ನೊಡನೆ 30X40 ಅಳತೆಯ ಎರಡು ನಿವೇಶನಗಳು ಇವೆ. ಮಾರಾಟ ಮಾಡಿದರೆ ₹ 40 ಲಕ್ಷ ಬರಬಹುದು. ನಿವೇಶನಗಳನ್ನು ನಾನು 1996ರಲ್ಲಿ ₹ 2.5 ಲಕ್ಷಕ್ಕೆ ಕೊಂಡಿದ್ದೆ. ಬಂಡವಾಳ ವೃದ್ಧಿ ತೆರಿಗೆ ವಿಚಾರದಲ್ಲಿ ವಿವರವಾಗಿ ತಿಳಿಸಿ. ಸರ್ಕಾರಿ ಬಾಂಡ್‌ಗಳಲ್ಲಿ ತೊಡಗಿಸಿದರೆ ವಾಪಾಸು ಪಡೆಯುವಾಗ ಬರುವ ತೆರಿಗೆ ಬಗ್ಗೆಯೂ ತಿಳಿಸಿ.

ಉತ್ತರ: ನಿಮ್ಮ ಪಿಂಚಣಿ ಹಾಗೂ ಠೇವಣಿ ಮೇಲಿನ ಬಡ್ಡಿ ಪರಿಗಣಿಸಿದಾಗ ನೀವು ಆದಾಯ ತೆರಿಗೆಗೆ ಒಳಪಡುತ್ತೀರಿ. ಪ್ರತೀ ವರ್ಷ ಐ.ಟಿ. ವಿವರ ಸಲ್ಲಿಸುತ್ತಿದ್ದೀರಿ ಎಂದು ಭಾವಿಸುವೆ. ಇನ್ನು ಬಂಡವಾಳ ವೃದ್ಧಿ ತೆರಿಗೆ ವಿಚಾರ. ನೀವು 1996ರಲ್ಲಿ ಕೊಂಡ ನಿವೇಶನದ ಬೆಲೆ 2001ರ ಏಪ್ರಿಲ್‌ 1ರಲ್ಲಿ ಸರ್ಕಾರ ನಿರ್ಧರಿಸಿದ ಬೆಲೆ (ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಕೇಳಿ ತಿಳಿಯಿರಿ) ಹಾಗೂ ಅಂದಿನಿಂದ ಇಂದಿನವರೆಗಿನ ಹಣದುಬ್ಬರದ ಮೌಲ್ಯ ಕಂಡುಹಿಡಿದು, ಈಗ ಮಾರಾಟ ಮಾಡುವ ಮೊತ್ತದಿಂದ ಕಳೆದು ಎನ್‌ಎಚ್‌ಎಐ/ಆರ್‌ಇಸಿ ಬಾಂಡ್‌ಗಳಲ್ಲಿ ತೊಡಗಿಸಬಹುದು ಅಥವಾ ಈ ಮೊತ್ತಕ್ಕೆ ತೆರಿಗೆ ಕೊಡಬಹುದು. 2001ರ ಏಪ್ರಿಲ್‌ 1ರ ಬೆಲೆ ಹಾಗೂ ಹಣದುಬ್ಬರದಿಂದಾಗಿ ಏರಿರುವ ಬೆಲೆ ಲೆಕ್ಕಾ ಹಾಕಿದಾಗ ಈ ಮೊತ್ತಕ್ಕೆ ತೆರಿಗೆ ಇರುವುದಿಲ್ಲ. ನೀವು ಸರ್ಕಾರಿ ಬಾಂಡ್‌ಗಳಲ್ಲಿ ಹಣ ತೊಡಗಿಸಿದರೆ ಅದರ ಅವಧಿ 5 ವರ್ಷ. ವಾಪಾಸು ಪಡೆಯುವಾಗ ತೆರಿಗೆ ಇರುವುದಿಲ್ಲ. ಆದರೆ ಈ ಹೂಡಿಕೆಯಿಂದ ಬರುವ ಬಡ್ಡಿಯು ತೆರಿಗೆ ರಹಿತವಾಗಿಲ್ಲ. ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಕರೆ ಮಾಡಿ.

ನಾಗಲಕ್ಷ್ಮಿ, ಮೈಸೂರು

lಪ್ರಶ್ನೆ: ಎಸ್‌ಐಪಿ–ಡೀಮ್ಯಾಟ್‌, ಮ್ಯೂಚುವಲ್‌ ಫಂಡ್‌, ಷೇರು ಮಾರುಕಟ್ಟೆ ವಿಚಾರದಲ್ಲಿ ನನಗೆ ಅನುಭವ ಇಲ್ಲ. ನಾನು ಆನ್‌ಲೈನ್‌ ಟ್ರೇಡಿಂಗ್‌ ಮಾಡಬಹುದೇ? ಮಾರ್ಗದರ್ಶನ ಮಾಡಿ. ನಾನು ಗೃಹಿಣಿ. ವಯಸ್ಸು 42 ವರ್ಷ. ಸುಮಾರು ₹ 1 ಲಕ್ಷದಿಂದ ₹ 2 ಲಕ್ಷದವರೆಗೆ ಇಂತಹ ಹೂಡಿಕೆಗಳಲ್ಲಿ ತೊಡಗಿಸಬೇಕೆಂದಿದ್ದೇನೆ. ನಾನು ಬಹಳ ವರ್ಷಗಳಿಂದ ನಿಮ್ಮ ಅಂಕಣ ಓದುತ್ತಿದ್ದೇನೆ.

ಉತ್ತರ: ಎಸ್‌ಐಪಿ ಎಂದರೆ ಸಿಸ್ಟಮ್ಯಾಟಿಕ್‌ ಇನ್‌ವೆಸ್ಟ್‌ಮೆಂಟ್‌ ಪ್ಲಾನ್‌. ಈ ಹೂಡಿಕೆ ಮ್ಯೂಚುವಲ್ ಫಂಡ್‌ ಕಂಪನಿಗಳ ಮೂಲಕ ಮಾಡಬಹುದು. ಆರ್‌.ಡಿ. ರೀತಿಯಲ್ಲಿ ನಿರ್ದಿಷ್ಟ ಮೊತ್ತವನ್ನು ಪ್ರತಿ ತಿಂಗಳೂ ಹೂಡಿಕೆ ಮಾಡಬಹುದು. ನೀವು ಎಸ್‌ಐಪಿನಲ್ಲಿ ತಿಂಗಳಿಗೆ ₹ 3 ಸಾವಿರ ಹೂಡಿಕೆ ಮಾಡಿ. ಮ್ಯೂಚುವಲ್‌ ಫಂಡ್‌, ಷೇರುಮಾರುಕಟ್ಟೆಯ ಇನ್ನೊಂದು ಮುಖ. ನೇರವಾಗಿ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಲಾಗದ ವ್ಯಕ್ತಿಗಳು ಮ್ಯೂಚುವಲ್ ಫಂಡ್‌ ಮೂಲಕ ತೊಡಗಿಸಬಹುದು. ಷೇರುಮಾರುಕಟ್ಟೆ ಪ್ರವೇಶಿಸುವ ಮುನ್ನ ಡೀಮ್ಯಾಟ್‌ ಖಾತೆ ತೆರೆಯಬೇಕು. ಇದಕ್ಕೆ ಷೇರು ಬ್ರೋಕರ್‌ ನಿಮಗೆ ಸಹಾಯ ಮಾಡುತ್ತಾರೆ. ಒಂದೇ ಒಂದು ಷೇರನ್ನೂ ಕೊಳ್ಳಬಹುದು ಹಾಗೂ ಮಾರಾಟ ಮಾಡಬಹುದು. ಬಿಎಸ್‌ಇ ಹಾಗೂ ಎನ್‌ಎಸ್‌ಇ ಮಾರುಕಟ್ಟೆಗಳಲ್ಲಿ ವ್ಯವಹರಿಸಬೇಕು. ನೀವು ಬ್ಲೂಚಿಪ್‌ ಕಂಪನಿ ಷೇರುಗಳನ್ನು ಸೆನ್ಸೆಕ್ಸ್‌ ಬಹಳ ಕೆಳಗೆ ಬಂದಾಗ ಕೊಳ್ಳಿರಿ. ಇಂತಹ ಹೂಡಿಕೆಗಳಲ್ಲಿ ಏರುಪೇರು ಸಹಜ. ಆದರೆ ಸಹನೆಯಿಂದ ಕಾದು ವ್ಯವಹರಿಸಿದರೆ ಲಾಭ ಗಳಿಸುವ ಸಾಧ್ಯತೆ ಇದೆ. ಟ್ರೇಡಿಂಗ್‌ ಮಾಡುವುದಾದರೆ ಸರಿಯಾದ ಬ್ರೋಕರಿಂಗ್‌ ಕಚೇರಿಯಲ್ಲಿ ತರಬೇತಿ ಪಡೆಯಿರಿ.

ಮಾಧವಿ, ಚೆನ್ನೈ

lಪ್ರಶ್ನೆ: ನಾನು ಮೂಲತಃ ಶಿವಮೊಗ್ಗದವಳು. ಐ.ಟಿ. ಕಂಪನಿಯಲ್ಲಿ ಕೆಲಸ. ತಿಂಗಳ ಸಂಬಳ ₹ 1.27 ಲಕ್ಷ. ಕಡಿತ; ವಿಮೆ ₹ 5 ಸಾವಿರ. ಪಿ.ಟಿ. ₹ 200. ಖರ್ಚು ₹ 15,000. ಅವಿವಾಹಿತೆ. ವಯಸ್ಸು 24. ತೆರಿಗೆ ಒಟ್ಟಿನಲ್ಲಿ ಮುರಿಯುತ್ತಾರೆ. ಕಂಪನಿ ಸೇರಿ ಎರಡು ವರ್ಷ ಆಗಿದೆ. ತಿಂಗಳಿಗೆ ₹ 1 ಲಕ್ಷ ಉಳಿಸಬಹುದು. ಆದರೆ ಹಣ ಕೈಯಲ್ಲಿ ನಿಲ್ಲುತ್ತಿಲ್ಲ. ನಾನು ಸುಮಾರು ₹ 10 ಲಕ್ಷ ಎಚ್‌ಡಿಎಫ್‌ಸಿ ಎಸ್‌.ಬಿ. ಖಾತೆಯಲ್ಲಿ ಇಟ್ಟಿದ್ದೇನೆ. ತಮ್ಮನ್ನು ಭೇಟಿ ಆಗಬಹುದೇ ತಿಳಿಸಿ. ಉತ್ತಮ ಹೂಡಿಕೆ, ತೆರಿಗೆ ವಿನಾಯಿತಿ ಪಡೆಯುವ ವಿಧಾನ ತಿಳಿಸಿ.

ಉತ್ತರ: ನೀವು ತೆರಿಗೆ ಉಳಿಸಲು ಸೆಕ್ಷನ್‌ 80ಸಿ ಆಧಾರದ ಮೇಲೆ ಪಿಪಿಎಫ್‌ನಲ್ಲಿ ವಾರ್ಷಿಕ ₹ 90 ಸಾವಿರ ತುಂಬಿರಿ. ವಿಮೆ ಹಾಗೂ ಪಿಪಿಎಫ್‌ನಿಂದ ₹ 1.50 ಲಕ್ಷ ಒಟ್ಟು ಆದಾಯದಿಂದ ಕಳೆದು ತೆರಿಗೆ ಉಳಿಸಬಹುದು. ಅದೇ ರೀತಿ ಸೆಕ್ಷನ್‌ 80ಸಿಸಿಡಿ (1ಬಿ) ಆಧಾರದ ಮೇಲೆ ವಾರ್ಷಿಕ ₹ 50 ಸಾವಿರ ಹೂಡಿಕೆ ಮಾಡಿ, 80ಸಿ ಹೊರತುಪಡಿಸಿ ವಿನಾಯಿತಿ ಪಡೆಯಬಹುದು. ಮದುವೆ ತನಕ ವಾರ್ಷಿಕ ₹ 1 ಲಕ್ಷ ಬೆಲೆಯ ಬಂಗಾರ ಪ್ರತೀ ವರ್ಷ ಕೊಳ್ಳಿರಿ. ತೆರಿಗೆಗೋಸ್ಕರ ₹ 15 ಸಾವಿರ ಆರ್‌.ಡಿಯನ್ನು ಒಂದು ವರ್ಷಕ್ಕೆ ಮಾಡಿ. ಡೆಟ್‌ ಆಧಾರಿತ ಎಸ್‌ಐಪಿನಲ್ಲಿ ಪ್ರತೀ ತಿಂಗಳು ₹ 15 ಸಾವಿರ ಹೂಡಿಕೆ ಮಾಡಿ. ನಿಮ್ಮ ತಂದೆ ತಾಯಿ ಬಳಿ ವಿಚಾರಿಸಿ ಉತ್ತಮ ನಿವೇಶನ ಸಿಗುವಲ್ಲಿ ಶಿವಮೊಗ್ಗದಲ್ಲಿ ಖರೀದಿಸಿ. ಹೀಗೆ ಮಾಡುವಾಗ ನೀವು ಕನಿಷ್ಠ ₹ 30 ಲಕ್ಷ ಸಾಲ ಮಾಡಬೇಕಾದೀತು, ಹಾಗೂ ಇಎಂಐ ₹ 40 ಸಾವಿರ ತಿಂಗಳಿಗೆ ತುಂಬಬೇಕಾದೀತು. ಆದರೆ ಸ್ಥಿರ ಆಸ್ತಿಗಿಂತ ಮಿಗಿಲಾದ ಹೂಡಿಕೆ ಮತ್ತೊಂದಿಲ್ಲ. ಉಳಿಯುವ ಹಣದಲ್ಲಿ ಅತೀ ಅವಶ್ಯಕ್ಕೆಂದು ಸ್ವಲ್ಪ ತೆಗೆದಿಟ್ಟು ಉಳಿದ ಹಣ ಮೂರು ವರ್ಷಗಳ ಅವಧಿಗೆ ಆರ್‌.ಡಿ. ಮಾಡಿ. ಅವಶ್ಯಕತೆ ಇದ್ದರೆ ಕರೆ ಮಾಡಿ, ಭೇಟಿ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT