ಮಂಗಳವಾರ, ಮಾರ್ಚ್ 21, 2023
29 °C

ಕೋವಿಡ್: ಹಣಕಾಸು ಮಾರ್ಗದರ್ಶನ

ಕ್ಲಿಯೋನ್ ಡಿಸೋಜ Updated:

ಅಕ್ಷರ ಗಾತ್ರ : | |

‘ಕೋವಿಡ್-19’ ಪಿಡುಗಿನಿಂದಾಗಿ ಪ್ರತಿಯೊಬ್ಬರೂ ಅರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಈ ಸಮಯದಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಮಿತವ್ಯಯ ಮತ್ತು ಉಳಿತಾಯಕ್ಕೆ ಮುಂದಾಗಬೇಕು. ಸರ್ಕಾರ ನೀಡಿರುವ ವಿವಿಧ ಅನುಕೂಲಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಒಂದು ಮಾರ್ಗದರ್ಶಿ ಇಲ್ಲಿದೆ.

ಸಾಲ ಮರುಪಾವತಿ ಮುಂದೂಡಿಕೆ ಸೂಕ್ತವೇ: ಆವಧಿ ಸಾಲಗಳ ಮರುಪಾವತಿ ಮುಂದೂಡಿಕೆ ಯೋಜನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್  ಇನ್ನೂ ಮೂರು ತಿಂಗಳ ಕಾಲ (ಆಗಸ್ಟ್‌ವರೆಗೆ) ವಿಸ್ತರಿಸಿದೆ. ಆದರೆ, ಈ ಸಾಲಗಳನ್ನು ಮುಂದೂಡಿದಾಗ ಬೆಳೆಯುವ ಬಡ್ಡಿ ಮೊತ್ತ ನಿಮ್ಮ ಸಾಲದ ಅಸಲಿನ ಮೊತ್ತಕ್ಕೆ ಸೇರ್ಪಡೆಯಾಗುತ್ತದೆ ಎನ್ನುವುದು ನೆನಪರಲಿ. ಮಾಸಿಕ ಆದಾಯ ಬಿಗಡಾಯಿಸಿದ್ದಲ್ಲಿ ಮಾತ್ರ ಈ ಕೊಡುಗೆ ಪರಿಗಣಿಸಿ.


ಕ್ಲಿಯೋನ್ ಡಿಸೋಜ

ರೆಪೊ ಆಯ್ಕೆ ಬಳಸಿ, ಇಎಂಐ ಉಳಿಸಿ: ರೆಪೊ ದರವನ್ನು ಆರ್‌ಬಿಐ ಇಳಿಕೆ ಮಾಡಿರುವುದರಿಂದ, ರೆಪೊ ಆಧಾರಿತ ಗೃಹ ಸಾಲಗಳ ಬಡ್ಡಿ ( Repo Linked Loan) ಕಡಿಮೆಯಾಗಿದೆ. ಸದ್ಯ ರೆಪೊ ದರ ಶೇ 4 ರಷ್ಟಿದೆ. ಆರ್‌ಬಿಐನ ರೆಪೊ ದರಕ್ಕೆ ಅನುಗುಣವಾಗಿ ಬ್ಯಾಂಕ್‌ಗಳು   ನೀಡುವ ಸಾಲಗಳ ಬಡ್ಡಿ ದರಗಳನ್ನು ನಿಗದಿ ಮಾಡುವುದಕ್ಕೆ ರೆಪೊ ಆಧಾರಿತ ಸಾಲ ಎನ್ನಬಹುದು. ಈಗಾಗಲೇ ಬೇಸ್ ರೇಟ್ ಅಥವಾ ಎಂಸಿಎಲ್‌ಆರ್ ಆಧಾರದಲ್ಲಿ ಸಾಲ ಪಡೆದಿರುವವರು ಬ್ಯಾಂಕ್ ಜತೆ ಮಾತುಕತೆ ನಡೆಸಿ ರೆಪೊ ಆಧಾರಿತ ಸಾಲಕ್ಕೆ ಬಾಕಿ ಮೊತ್ತವನ್ನು ವರ್ಗಾಯಿಸಿಕೊಳ್ಳಲು ಸಾಧ್ಯವಿದೆ. ಆದರೆ ಅದಕ್ಕೆ ಒಂದಿಷ್ಟು ಶುಲ್ಕ (ಸುಮಾರು 6 ಸಾವಿರ) ಪಾವತಿಸಬೇಕಾಗುತ್ತದೆ.

ವೈಯಕ್ತಿಕ ಸಾಲ, ತುರ್ತಿಗೆ ಮಾತ್ರ ಪರಿಗಣಿಸಿ: ಹಣಕಾಸಿನ ಸಂಕಷ್ಟಕ್ಕೆ ಸಿಲುಕಿರುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಲ ಬ್ಯಾಂಕ್‌ಗಳು ತಮ್ಮ ಹಾಲಿ ಗ್ರಾಹಕರಿಗೆ ಕೆಲ ರಿಯಾಯಿತಿಗಳೊಂದಿಗೆ ವೈಯಕ್ತಿಕ ಸಾಲ ನೀಡಲು ಮುಂದಾಗಿವೆ. ಈ ಸಾಲಗಳ ಬಡ್ಡಿ ದರ ಶೇ 7.25 ರಿಂದ ಶೇ 12ರವರೆಗೆ ಇದೆ. ಯಾವುದೇ ಸಂದರ್ಭದಲ್ಲಿ ವೈಯಕ್ತಿಕ ಸಾಲ ಪಡೆಯುವುದು ಕಡೆಯ ಆಯ್ಕೆಯಾಗಿರಬೇಕು.

ಪ್ರಧಾನಮಂತ್ರಿ ಆವಾಸ್ ಯೋಜನೆ ಸಬ್ಸಿಡಿ: ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ನೀಡುತ್ತಿದ್ದ ಗೃಹ ಸಾಲ ಆಧಾರಿತ ಸಬ್ಸಿಡಿ ಯೋಜನೆ ಮಾರ್ಚ್ 2020ಕ್ಕೆ ಕೊನೆಗೊಂಡಿತ್ತು. ₹ 6 ಲಕ್ಷದಿಂದ ₹ 18 ಲಕ್ಷದವರೆಗಿನ (ಎಂಐಜಿ-1 , ಎಂಐಜಿ-2) ಆದಾಯ ಹೊಂದಿರುವವರಿಗೆ ಸುಮಾರು ₹ 2.35 ಲಕ್ಷ ಸಬ್ಸಿಡಿ ಯೋಜನೆ ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಈ ಯೋಜನೆಯನ್ನು ಮಾರ್ಚ್ 31, 2021ರವರೆಗೆ ವಿಸ್ತರಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ವಾರ್ಷಿಕ ₹ 6 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರಿಗೆ ಈ ಯೋಜನೆ ಮಾರ್ಚ್ 31, 2022 ರ ವರೆಗೂ ಲಭ್ಯವಿದೆ.

ಪ್ರಧಾನ ಮಂತ್ರಿ ವಯವಂದನಾ ಯೋಜನೆ: ವಯ ವಂದನಾ ಯೋಜನೆಯ ಅವಧಿಯನ್ನು ಈಗ ಮಾರ್ಚ್ 31, 2023ರವರೆಗೆ ವಿಸ್ತರಿಸಲಾಗಿದೆ. ಈ  ಯೋಜನೆಯಲ್ಲಿ ಹಿರಿಯ ನಾಗರಿಕರು ಗರಿಷ್ಠ ₹ 15 ಲಕ್ಷದವರೆಗೆ ಹೂಡಿಕೆ ಮಾಡಿ ಮಾಸಿಕ 10 ಸಾವಿರ ಪಿಂಚಣಿ ಪಡೆದುಕೊಳ್ಳಲು ಅವಕಾಶವಿದೆ. ಶೇ 8 ರಷ್ಟಿದ್ದ ಬಡ್ಡಿ ದರವನ್ನು ಈಗ ಶೇ 7.4 ಕ್ಕೆ ಇಳಿಸಲಾಗಿದೆ. ಆದರೂ ಸಹಿತ ಹಿರಿಯ ನಾಗರಿಕರಿಗೆ ಇದೊಂದು ಉತ್ತಮ ಹೂಡಿಕೆ ಆಯ್ಕೆ.

ಪ್ರೀಮಿಯಂ ಪಾವತಿಗೆ ಮೇ 31, ಕಡೆಯ ದಿನಾಂಕ: ಮಾರ್ಚ್ 2020ರ ಅವಧಿಯಲ್ಲಿ ಪಾವತಿಗೆ ಬಂದಿರುವ ಜೀವ ವಿಮೆ ಪಾಲಿಸಿಗಳಿಗೆ ಪ್ರೀಮಿಯಂ ಪಾವತಿಸಲು ಮೇ 31,2020 ಕಡೆಯ ದಿನಾಂಕ. ಕೋವಿಡ್‌ನಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಇನ್ಶುರೆನ್ಸ್ ಪಾಲಿಸಿಗಳು ಲ್ಯಾಪ್ಸ್ ಆಗದಂತೆ ಎಚ್ಚರ ವಹಿಸುವುದು ಬಹಳ ಮುಖ್ಯ. ಇನ್ನು ಆರೋಗ್ಯ ವಿಮೆ ಪ್ರೀಮಿಯಂ ಪಾವತಿ ಬಾಕಿ ಉಳಿಸಿಕೊಳ್ಳಬೇಡಿ. ಆರೋಗ್ಯ ವಿಮೆ ಪ್ರೀಮಿಯಂ ಬಾಕಿ ಉಳಿಸಿಕೊಂಡರೆ ಪಾಲಿಸಿಯಲ್ಲಿರುವ ಸಾಕಷ್ಟು ಅನುಕೂಲಗಳು ಅಮಾನ್ಯವಾಗುತ್ತವೆ.

ಪಿಎಫ್ ಹಣ ತೆಗೆಯುವ ಮುನ್ನ..: ಹಣಕಾಸಿನ ಸಮಸ್ಯೆಗಳಿಗೆ ನೆರವಾಗಲು, ಸರ್ಕಾರ ಪಿಎಫ್ ಹಣ ತೆಗೆಯಲು ಅವಕಾಶ ಕಲ್ಪಿಸಿದೆ. ಮೂರು ತಿಂಗಳ ಮೂಲ ವೇತನ ಮತ್ತು ತುಟ್ಟಿ ಭತ್ಯೆಯ ಮೊತ್ತ ಅಥವಾ ಪಿಎಫ್ ಠೇವಣಿಯ ಶೇ 75 ರಷ್ಟು ( ಈ ಎರಡರ ಪೈಕಿ ಯಾವುದು ಕಡಿಮೆ ಇದೆ ಅದು ಅನ್ವಯ) ಹಣ ತೆಗೆಯಲು ಅವಕಾಶ ನೀಡಿದೆ. ಆದರೆ, ಅಗತ್ಯ ಎಂದಾಗ ಮಾತ್ರ ಪಿಎಫ್ ಹಣ ತೆಗೆಯಿರಿ. ಪಿಎಫ್ ಹೂಡಿಕೆ ಬಳಸಿಕೊಳ್ಳುವುದರಿಂದ ನಿವೃತ್ತಿ ಸಮಯದಲ್ಲಿ ನಿಮಗೆ ಕಡಿಮೆ ಹಣ ಸಿಗುತ್ತದೆ.

ಷೇರುಪೇಟೆ: ಸತತ 3 ವಾರಗಳ ಕುಸಿತ

ಸತತ ಮೂರನೇ ವಾರವೂ ಕೂಡ ಷೇರುಪೇಟೆ ಸೂಚ್ಯಂಕಗಳು ಒತ್ತಡಕ್ಕೆ ಸಿಲುಕಿವೆ. ನಿಫ್ಟಿ ಮತ್ತು ಸೆನ್ಸೆಕ್ಸ್ ಸೂಚ್ಯಂಕಗಳು ವಾರದ ಅವಧಿಯಲ್ಲಿ ಕ್ರಮವಾಗಿ ಶೇ 1.1 ಹಾಗೂ ಶೇ 1.4 ರಷ್ಟು ಕುಸಿತ ಕಂಡಿವೆ. ಸೆನ್ಸೆಕ್ಸ್ ಮತ್ತು ನಿಫ್ಟಿ 30,672 ಮತ್ತು 9,039 ಅಂಶಗಳಲ್ಲಿ ವಹಿವಾಟು ಮುಗಿಸಿವೆ.

ಅಮೆರಿಕ ಮತ್ತ ಚೀನಾ ನಡುವೆ ಬಿಗಡಾಯಿಸುತ್ತಿರುವ ವ್ಯಾಪಾರ ಬಿಕ್ಕಟ್ಟು, ಬೇಡಿಕೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರದ ಸೀಮಿತ ಕ್ರಮಗಳು, ಸಾಲದ ಕಂತು ಮರುಪಾವತಿಗೆ ಮತ್ತೆ ಮೂರು ತಿಂಗಳ ವಿನಾಯಿತಿಯಿಂದ ವಸೂಲಾಗದ ಸಾಲದ ಪ್ರಮಾಣದಲ್ಲಿ ಹೆಚ್ಚಳವಾಗುವ ಆತಂಕ, ಏರುಗತಿಯಲ್ಲಿರುವ ಕೋವಿಡ್ ಪ್ರಕರಣಗಳು, ವಿದೇಶಿ ಹೂಡಿಕೆದಾರರಿಂದ ಷೇರುಗಳ ಮಾರಾಟ ಸೇರಿ ಅನೇಕ ಸಂಗತಿಗಳು ಮಾರುಕಟ್ಟೆ ನಕಾರಾತ್ಮಕ ಹಾದಿ ತುಳಿಯಲು ಕಾರಣವಾಗಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕಳೆದ ವಾರ ₹ 6,920 ಕೋಟಿ ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದಕ್ಕೂ ಮೊದಲ ವಾರದಲ್ಲಿ ₹ 5,951 ಕೋಟಿ ಮೊತ್ತದ ಷೇರುಗಳನ್ನು ವಿದೇಶಿ ಹೂಡಿಕೆದಾರರು ಮಾರಾಟ ಮಾಡಿದ್ದರು.

ಪ್ರಮುಖ ಏರಿಳಿತ: ಐಟಿಸಿ ಶೇ 13, ಸಿಪ್ಲಾ ಶೇ 12, ಎನ್ಐಐಟಿ ಶೇ 11, ಅರಬಿಂದೋ ಫಾರ್ಮಾ ಶೇ 10, ಆದಾನಿ ಗ್ಯಾಸ್ ಶೇ 7, ಟಾಟಾ ಪವರ್ ಶೇ 7 ಮತ್ತು ಮಹಿಂದ್ರಾ ಫೈನಾನ್ಸ್ ಶೇ 6 ರಷ್ಟು ಏರಿಕೆ ಕಂಡಿವೆ. ಬಜಾಜ್ ಫೈನಾನ್ಸ್ ಶೇ 4 ಮತ್ತು ಎಸ್‌ಬಿಐ ಕಾರ್ಡ್ ಶೇ 6 ರಷ್ಟು ಕುಸಿತ ದಾಖಲಿಸಿವೆ.

ಮುನ್ನೋಟ: ಎಚ್‌ಡಿಎಫ್‌ಸಿ, ಸನ್ ಫಾರ್ಮಾ, ಲುಪಿನ್, ಡಾಬರ್ ಇಂಡಿಯಾ, ಟಿವಿಎಸ್ ಮೋಟರ್ ಕಂಪನಿ, ವೋಲ್ಟಾಸ್, ಯುನೈಟೆಡ್ ಸ್ಪಿರಿಟ್ಸ್, ಸಿಯೆಟ್, ಸೇರಿ ಸುಮಾರು 100 ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ವಿದೇಶಿ ವಿನಿಮಯ ದತ್ತಾಂಶ ಸೇರಿ ಪ್ರಮುಖ ಅಂಕಿ-ಅಂಶಗಳು ಕೂಡ ಈ ವಾರ ಪ್ರಕಟಗೊಳ್ಳುತ್ತಿವೆ. ಮೇ 25 ರಂದು ರಂಜಾನ್ ಪ್ರಯುಕ್ತ ಮಾರುಕಟ್ಟೆಗೆ ರಜೆ ಇದೆ.

(ಲೇಖಕ, ಸುವಿಷನ್ ಹೋಲ್ಡಿಂಗ್ಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು