ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಸಾಕ್ಷರತೆ | ವಿಶೇಷ ಎಫ್.ಡಿ: ಪರಿಗಣಿಸಬೇಕೇ?

Last Updated 19 ಫೆಬ್ರುವರಿ 2023, 22:00 IST
ಅಕ್ಷರ ಗಾತ್ರ

ರೆಪೊ ದರ ಹೆಚ್ಚಳಕ್ಕೆ ಅನುಗುಣವಾಗಿ ಬ್ಯಾಂಕ್‌ಗಳು ನಿಶ್ಚಿತ ಠೇವಣಿ (ಎಫ್.ಡಿ) ದರ ಹೆಚ್ಚಳ ಮಾಡುತ್ತಿವೆ. ಕೆಲವು ಬ್ಯಾಂಕ್‌ಗಳು ಗ್ರಾಹಕರನ್ನು ಸೆಳೆಯಲು ವಿಶೇಷ ನಿಶ್ಚಿತ ಠೇವಣಿ ಯೋಜನೆಗಳನ್ನು ರೂಪಿಸಿ ಅವುಗಳಿಗೆ ಹೆಚ್ಚಿನ ಬಡ್ಡಿ ನೀಡುತ್ತಿವೆ. ಸಣ್ಣ ಪ್ರಮಾಣದ ಬ್ಯಾಂಕ್‌ಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮುಂಚೂಣಿ ಬ್ಯಾಂಕ್‌ಗಳಿಗಿಂತ ಹೆಚ್ಚಿನ ಬಡ್ಡಿ ಒದಗಿಸುತ್ತಿವೆ. ಈ ಹೊತ್ತಿನಲ್ಲಿ ನಿಶ್ಚಿತ ಠೇವಣಿಯಲ್ಲಿ ಹಣ ತೊಡಗಿಸುವ ಮುನ್ನ ಗಮನಿಸಬೇಕಾದ ಕೆಲವು ಅಂಶಗಳ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

1. ವಿಶೇಷ ಎಫ್.ಡಿ ಬಡ್ಡಿ ಲಾಭ ಅರಿಯಿರಿ: ‘ಸ್ವಲ್ಪ ರಿಸ್ಕ್ ಇದ್ದರೂ ತೊಂದರೆ ಇಲ್ಲ, ಹೆಚ್ಚಿನ ಲಾಭಾಂಶ ಬೇಕು’ ಎಂದಾದಲ್ಲಿ ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ಫಂಡ್ ಹೂಡಿಕೆ ಉತ್ತಮ. ಆದರೆ ಹೆಚ್ಚು ರಿಸ್ಕ್ ಇಲ್ಲದ ಹೂಡಿಕೆ ಬೇಕು ಎನ್ನುವವರಿಗೆ ನಿಶ್ಚಿತ ಠೇವಣಿ ಒಳ್ಳೆಯ ಆಯ್ಕೆ. ಒಂದು ವರ್ಷ, ಎರಡು ವರ್ಷ, ಮೂರು ವರ್ಷಗಳ ಎಫ್.ಡಿ ಮೊರೆ ಹೊಗುವ ಬದಲು ಗ್ರಾಹಕರು ಬ್ಯಾಂಕ್‌ಗಳು ರೂಪಿಸುವ ವಿಶೇಷ ರೀತಿಯ ನಿಶ್ಚಿತ ಠೇವಣಿ ಹೂಡಿಕೆಗಳನ್ನು ಖಂಡಿತವಾಗಿಯೂ ಪರಿಗಣಿಸಬಹುದು. ಏಕೆಂದರೆ ಇಂತಹ ಎಫ್.ಡಿ ಹೂಡಿಕೆಗಳಲ್ಲಿ ಬಡ್ಡಿ ಜಾಸ್ತಿ ಇರುತ್ತದೆ.

ಉದಾಹರಣೆಗೆ ಡಿಬಿಎಸ್ ಬ್ಯಾಂಕ್ 600 ದಿನಗಳ (1 ವರ್ಷ 7 ತಿಂಗಳು) ಎಫ್.ಡಿ ಹೂಡಿಕೆಗೆ ಶೇ 7.25ರಷ್ಟು ಬಡ್ಡಿ ನೀಡುತ್ತಿದೆ. ಇದೇ ಬ್ಯಾಂಕ್ 601ರಿಂದ 730 ದಿನಗಳ (2 ವರ್ಷದೊಳಗಿನ) ಒಳಗಿನ ಎಫ್.ಡಿ.ಗೆ ಶೇ 6.5ರಷ್ಟು ಬಡ್ಡಿ ಕೊಡುತ್ತಿದೆ. ನಿಮ್ಮ ಎಫ್.ಡಿ ಹೂಡಿಕೆ ಅವಧಿಯಲ್ಲಿ ಇಂತಹ ಸಣ್ಣ ಮಾರ್ಪಾಡುಗಳಿಂದ ಹೆಚ್ಚು ಲಾಭವಾಗುತ್ತದೆ ಎಂದರೆ ಅನುಕೂಲವಲ್ಲವೇ?

2. ಅವಧಿಗೂ ಮುನ್ನ ನಗದೀಕರಣ ಇಲ್ಲ: ಸಾಮಾನ್ಯ ಎಫ್.ಡಿ ಹೂಡಿಕೆಗಳಲ್ಲಿ ಅವಧಿಗೂ ಮುನ್ನ ಹಣ ಹಿಂಪಡೆಯುವ ಅವಕಾಶವಿರುತ್ತದೆ. ಆದರೆ ವಿಶೇಷ ರೀತಿಯ ನಿಶ್ಚಿತ ಠೇವಣಿಗಳಲ್ಲಿ ಅವಧಿಗೂ ಮುನ್ನ ಹೂಡಿಕೆ ಹಣ ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಒಂದೊಮ್ಮೆ, ನಿಗದಿತ ಸಮಯಕ್ಕೂ ಮೊದಲೇ ಹೂಡಿಕೆ ವಾಪಸ್ ತೆಗೆದುಕೊಳ್ಳಬೇಕಾದರೆ ದಂಡ ಪಾವತಿಸಬೇಕಾಗುತ್ತದೆ. ಹಾಗಾಗಿ ನಿಮ್ಮ ಹೂಡಿಕೆಯನ್ನು ವಿಶೇಷ ಎಫ್.ಡಿ ಮತ್ತು ಸಾಮಾನ್ಯ ಎಫ್.ಡಿ ಗಳ ನಡುವೆ ಹಂಚಿಕೆ ಮಾಡಿಕೊಳ್ಳಿ. ಸಾಮಾನ್ಯ ಎಫ್.ಡಿ.ಯಲ್ಲಿರುವ ಹಣ ತುರ್ತು ಅಗತ್ಯಗಳಿಗೆ ಬೇಕಾದಲ್ಲಿ ನೆರವಿಗೆ ಬರುತ್ತದೆ. ವಿಶೇಷ ಎಫ್.ಡಿ ಹೆಚ್ಚಿನ ಬಡ್ಡಿ ಲಾಭವನ್ನು ನಿಮಗೆ ತಂದುಕೊಡುತ್ತದೆ.

3. ಒಂದೇ ಬ್ಯಾಂಕ್‌ನಲ್ಲಿ ₹ 5 ಲಕ್ಷಕ್ಕಿಂತ ಹೆಚ್ಚಿನ ಎಫ್.ಡಿ ಬೇಡ: ಡೆಪಾಸಿಟ್ ಇನ್ಶೂರೆನ್ಸ್ ಆ್ಯಂಡ್‌ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಪ್ರಕಾರ ಯಾವುದೇ ಬ್ಯಾಂಕ್‌ನಲ್ಲಿ ಗ್ರಾಹಕನ ಖಾತೆಯಲ್ಲಿರುವ ₹ 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ವಿಮೆಯ ರಕ್ಷಣೆ ಇರುವುದಿಲ್ಲ. ಒಂದೊಮ್ಮೆ ಬ್ಯಾಂಕ್ ದಿವಾಳಿಯಾದರೆ ಹೂಡಿಕೆದಾರನಿಗೆ ₹ 5 ಲಕ್ಷದವರೆಗಿನ ಮೊತ್ತ ಮಾತ್ರ ವಿಮೆಯ ರೂಪದಲ್ಲಿ ವಾಪಸ್ ಸಿಗುತ್ತದೆ. ಹಾಗಾಗಿ, ಬಡ್ಡಿ ಹೆಚ್ಚು ಸಿಗುತ್ತದೆ ಎಂದಿದ್ದರೂ ಒಂದೇ ಬ್ಯಾಂಕ್‌ನಲ್ಲಿ ₹ 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತ ಎಫ್.ಡಿ ಇಡುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ₹ 5 ಲಕ್ಷಕ್ಕಿಂದ ಹೆಚ್ಚಿನ ಮೊತ್ತ ಎಫ್.ಡಿ ಇಡಬೇಕಾದರೆ ಬೇರೆ ಬೇರೆ ಬ್ಯಾಂಕ್ ಖಾತೆಗಳಲ್ಲಿ ಇಡಿ.
ಇದರಿಂದ ನಿಮ್ಮ ಹೂಡಿಕೆ ಮೊತ್ತಕ್ಕೆ ಸುರಕ್ಷತೆ ಸಿಗುತ್ತದೆ.

4. ಎಫ್.ಡಿ ದರ ಜಾಸ್ತಿ ಆಗುವ ಸಾಧ್ಯತೆ ಪರಿಗಣಿಸಿ: ಹಣದುಬ್ಬರ, ಅಂದರೆ ಬೆಲೆ ಏರಿಕೆ ನಿಯಂತ್ರಣಕ್ಕೆ ತರುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮೇಲಿಂದ ಮೇಲೆ ಬಡ್ಡಿ ದರವನ್ನು ಹೆಚ್ಚಳ ಮಾಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿಯೂ ಬಡ್ಡಿ ದರ ಮತ್ತಷ್ಟು ಹೆಚ್ಚಳ ಆಗುವ ಸಾಧ್ಯತೆಯಿದೆ. ಹಾಗಾಗಿ ಒಂದೇ ಬಾರಿಗೆ ದೊಡ್ಡ ಮೊತ್ತದ ನಿಶ್ಚಿತ ಠೇವಣಿಯ ಮೊರೆ ಹೋಗಬೇಡಿ. ಹಂತ ಹಂತವಾಗಿ ಎಫ್.ಡಿ ಮಾಡುತ್ತಾ ಹೋಗುವ ಬಗ್ಗೆ ಪರಿಶೀಲಿಸಿ.

5. ತಂದೆ–ತಾಯಿ ಹೆಸರಿನಲ್ಲಿ ಎಫ್.ಡಿ ಇಡಿ: ಹಿರಿಯ ನಾಗರಿಕರ ಹೆಸರಿನಲ್ಲಿ ಎಫ್.ಡಿ ಇಟ್ಟರೆ ಹೆಚ್ಚಿನ ಬಡ್ಡಿ ಲಾಭ ಸಿಗುವ ಜೊತೆಗೆ ತೆರಿಗೆ ಅನುಕೂಲವೂ ಸಿಗುತ್ತದೆ. ಹಿರಿಯ ನಾಗರಿಕರಿಗೆ ಆದಾಯ ತೆರಿಗೆಯ ಸೆಕ್ಷನ್ 80 ಟಿಟಿಬಿ ಅಡಿಯಲ್ಲಿ ಹೆಚ್ಚಿನ ಬಡ್ಡಿ ವಿನಾಯಿತಿ ಸಿಗುವ ಜೊತೆಗೆ ಟಿಡಿಎಸ್ ವಿನಾಯಿತಿ ಮಿತಿ ₹ 50 ಸಾವಿರದವರೆಗೆ ಸಿಗುತ್ತದೆ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT