ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯೂಚುವಲ್ ಫಂಡ್ ಆಧರಿಸಿ ಸಾಲ ಪಡೆಯುವುದು ಹೇಗೆ?

Last Updated 25 ಜುಲೈ 2021, 19:30 IST
ಅಕ್ಷರ ಗಾತ್ರ

ನೀವು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದರೆ, ಹಣಕಾಸಿನ ತುರ್ತು ಎದುರಾದಾಗ ಆ ಹೂಡಿಕೆ ಹಿಂಪಡೆಯುವುದು ಒಳ್ಳೆಯ ಆಯ್ಕೆ. ಆದರೆ, ಷೇರುಪೇಟೆ ಅತಿಯಾಗಿ ಕುಸಿದಿರುವ ಸಂದರ್ಭದಲ್ಲಿ ಮ್ಯೂಚುವಲ್ ಫಂಡ್‌ ಯೂನಿಟ್‌ ಮಾರಾಟ ಮಾಡಿದರೆ ನಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆ ಆಧರಿಸಿ ಸಾಲ ಪಡೆಯುವ ಆಲೋಚನೆ ಮಾಡಬಹುದು. ಮ್ಯೂಚುವಲ್ ಫಂಡ್ ಹೂಡಿಕೆ ಆಧಾರದಲ್ಲಿ ಸಾಲ ಪಡೆಯುವುದು ಹೇಗೆ? ಇರುವ ಇತಿಮಿತಿಗಳೇನು? ಈ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ.

ಸಾಲ ಪಡೆವ ಪ್ರಕ್ರಿಯೆ: ಎಷ್ಟು ಸಾಲ ಸಿಗುತ್ತದೆ ಎನ್ನುವುದು ನಿಮ್ಮ ಮ್ಯೂಚುವಲ್ ಫಂಡ್ ಫೋಲಿಯೊದಲ್ಲಿ ಎಷ್ಟು ಮೊತ್ತವಿದೆ ಎನ್ನುವುದನ್ನು ಅವಲಂಬಿಸಿರುತ್ತದೆ. ಸಾಲ ಪಡೆಯಲು ನಿಮ್ಮ ಮ್ಯೂಚುವಲ್ ಫಂಡ್ ಯೂನಿಟ್‌ಗಳನ್ನು ಅಡಮಾನ ರೂಪದಲ್ಲಿ ಇಡಬೇಕಾಗುತ್ತದೆ. ಅಡಮಾನ ಇಟ್ಟ ಮೇಲೆ ಬ್ಯಾಂಕ್ ನಿಮ್ಮ ಹೆಸರಲ್ಲಿ ಚಾಲ್ತಿ ಖಾತೆ ತೆರೆಸಿ ಓವರ್ ಡ್ರಾಫ್ಟ್ ರೂಪದಲ್ಲಿ ಸಾಲ ನೀಡುತ್ತದೆ. ಸಾಲ ಮರುಪಾವತಿಯ ತನಕ ಬ್ಯಾಂಕ್‌ಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ನಿಮ್ಮ ಯೂನಿಟ್‌ಗಳನ್ನು ಇಟ್ಟುಕೊಂಡಿರುತ್ತವೆ. ಸಾಲ ಮರುಪಾವತಿ ಮಾಡದಿದ್ದರೆ ಬ್ಯಾಂಕ್ ನಿಮ್ಮ ಮ್ಯೂಚುವಲ್ ಫಂಡ್ ಯೂನಿಟ್‌ ಮಾರಾಟ ಮಾಡಿ ಸಾಲದ ನಷ್ಟ ಭರಿಸಿಕೊಳ್ಳಬಹುದು.

ಸಾಲಕ್ಕೆ ಯಾರು ಅರ್ಹರು?: ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿರುವ, 18 ವರ್ಷ ವಯಸ್ಸು ಮೇಲ್ಪಟ್ಟವರು ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಹಲವು ವಿಷಯಗಳನ್ನು ಗಣನೆಗೆ ತೆಗೆದುಕೊಂಡ ನಂತರವಷ್ಟೇ ಸಾಲ ಮಂಜೂರಾತಿಯ ಬಗ್ಗೆ ನಿರ್ಧಾರ ಆಗುತ್ತದೆ. ಈಕ್ವಿಟಿ ಮ್ಯೂಚುವಲ್ ಫಂಡ್‌ಗಳ ಮೇಲೆ ಸಾಲ ಪಡೆಯಲು ಬಹುತೇಕ ಬ್ಯಾಂಕ್‌ಗಳು ವ್ಯಕ್ತಿಗಳಿಗಷ್ಟೇ ಅವಕಾಶ ನೀಡುತ್ತವೆ. ಆದರೆ ಸಾಲಪತ್ರ ಆಧಾರಿತ ಫಂಡ್‌ಗಳ ಮೇಲೆ ವ್ಯಕ್ತಿಗಳಿಗೆ, ಅವಿಭಕ್ತ ಹಿಂದೂ ಕುಟುಂಬಗಳಿಗೆ, ಕಂಪನಿ ಮಾಲೀಕರಿಗೆ, ಪಾರ್ಟ್ನರ್ಶಿಪ್ ಉದ್ಯಮಗಳಿಗೆ, ಕಂಪನಿಗಳಿಗೆ ಕೂಡ ಬ್ಯಾಂಕ್‌ಗಳು ಸಾಲ ನೀಡುತ್ತವೆ.

ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ, ಎಕ್ಸಿಸ್ ಸೇರಿ ಇನ್ನೂ ಕೆಲವು ಬ್ಯಾಂಕ್‌ಗಳು ಸಾಲ ಒದಗಿಸುತ್ತವೆ. ಎನ್‌ಬಿಎಫ್‌ಸಿಗಳಾದ ಬಜಾಜ್ ಫಿನ್‌ಸರ್ವ್, ಟಾಟಾ ಕ್ಯಾಪಿಟಲ್, ಫುಲರ್ ಟನ್ ಇಂಡಿಯಾ ಕೂಡ ಮ್ಯೂಚುವಲ್ ಫಂಡ್ ಆಧರಿಸಿ ಸಾಲ ಕೊಡುತ್ತವೆ.

ಮ್ಯೂಚುವಲ್ ಫಂಡ್ ಆಧರಿಸಿ ಸಾಲ ನೀಡಲು ಆಯ್ದ ಕೆಲವು ಮ್ಯೂಚುವಲ್ ಫಂಡ್‌ಗಳನ್ನಷ್ಟೇ ಬ್ಯಾಂಕ್‌ಗಳು ಪರಿಗಣಿಸುತ್ತವೆ. ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳ ಬಳಿ ಸಾಲ ನೀಡಬಹುದಾದ ಮ್ಯೂಚುವಲ್ ಫಂಡ್‌ಗಳ ಪಟ್ಟಿ ಇರುತ್ತದೆ. ಉದಾಹರಣೆಗೆ, ಐಸಿಐಸಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ಕ್ಯಾಮ್ಸ್ (CAMS) ಜೊತೆ ನೋಂದಣಿ ಮಾಡಿಕೊಂಡಿರುವ ಮ್ಯೂಚುವಲ್ ಫಂಡ್‌ಗಳಿಗೆ ಮಾತ್ರ ಸಾಲ ಕೊಡುತ್ತವೆ. ಎಕ್ಸಿಸ್ ಮ್ಯೂಚುವಲ್ ಫಂಡ್, ಮೋತಿಲಾಲ್ ಓಸ್ವಾಲ್, ಮಿರಾಯ್ ಅಸೆಟ್, ನಿಪ್ಪಾನ್ ಇಂಡಿಯಾ ಮ್ಯೂಚುವಲ್ ಫಂಡ್‌ಗಳ ಯೂನಿಟ್‌ಗಳ ಮೇಲೆ ಈ ಎರಡೂ ಬ್ಯಾಂಕ್‌ಗಳು ಸಾಲ ನೀಡುವುದಿಲ್ಲ.

ಎಸ್‌ಬಿಐ ವಿಚಾರಕ್ಕೆ ಬಂದರೆ, ಎಸ್‌ಬಿಐ ಮ್ಯೂಚುವಲ್ ಫಂಡ್ ಯೋಜನೆಗಳ ಮೇಲಷ್ಟೇ ಇಲ್ಲಿ ಸಾಲ ಲಭಿಸುತ್ತದೆ. ಹಾಗಾಗಿ ಮ್ಯೂಚುವಲ್ ಫಂಡ್‌ಗಳನ್ನು ಅಡಮಾನ ಇರಿಸಿ ಸಾಲ ಪಡೆಯುವಾಗ ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಿಗೆ ಅರ್ಜಿ ಸಲ್ಲಿಸುವುದು ಸೂಕ್ತ.

ಸಾಲದ ಮಿತಿಯ ಲೆಕ್ಕಾಚಾರ: ಎಷ್ಟು ಸಾಲ ಸಿಗುತ್ತದೆ ಎನ್ನುವುದು ಮ್ಯೂಚುವಲ್ ಫಂಡ್ ಮಾದರಿ ಮತ್ತು ಹಣಕಾಸು ಸಂಸ್ಥೆಗಳ ಆಂತರಿಕ ನಿಯಮಗಳಿಗೆ ಅನುಗುಣವಾಗಿ ನಿರ್ಧಾರವಾಗುತ್ತದೆ. ಸಾಲಪತ್ರ ಆಧಾರಿತ ಫಂಡ್‌ಗಳಿಗೆ ಬಹುತೇಕ ಬ್ಯಾಂಕ್‌ಗಳು ನೆಟ್
ಅಸೆಟ್ ವ್ಯಾಲ್ಯೂನ (ಅಂದರೆ ಒಂದು ಯೂನಿಟ್‌ನ ಮಾರುಕಟ್ಟೆ ಬೆಲೆ) ಶೇ 80ರಷ್ಟು ಸಾಲ ಕೊಡುತ್ತವೆ. ಈಕ್ವಿಟಿ ಫಂಡ್‌ಗಳಿಗೆ ನೆಟ್ ಅಸೆಟ್ ವ್ಯಾಲ್ಯೂನ ಶೇ 50ರಷ್ಟು ಸಾಲ ಒದಗಿಸುತ್ತವೆ. ಅಂದರೆ ನಿಮ್ಮ ಬಳಿ ₹ 5 ಲಕ್ಷ ಮೌಲ್ಯದ ಸಾಲಪತ್ರ ಆಧಾರಿತ ಫಂಡ್ ಇದ್ದರೆ ₹ 4 ಲಕ್ಷ ಸಾಲ ಸಿಗುತ್ತದೆ. ಹಾಗೆಯೇ ₹ 10 ಲಕ್ಷ ಮೌಲ್ಯದ ಈಕ್ವಿಟಿ ಫಂಡ್ ಇದ್ದರೆ ₹ 5 ಲಕ್ಷ ಸಾಲ ಲಭಿಸುತ್ತದೆ.

ಐಸಿಐಸಿಐ ಬ್ಯಾಂಕ್ ಮ್ಯೂಚುವಲ್ ಫಂಡ್‌ಗಳ ಮೇಲೆ ₹ 20 ಲಕ್ಷದವರೆಗೆ ಸಾಲ ನೀಡುತ್ತದೆ. ಫುಲ್ಲರ್ ಟನ್ ಇಂಡಿಯಾ ₹ 5 ಕೋಟಿವರೆಗೆ ಸಾಲ ಕೊಡುತ್ತದೆ. ಆದಿತ್ಯ ಬಿರ್ಲಾ ಮತ್ತು ಬಜಾಜ್ ಫಿನ್‌ಸರ್ವ್ ₹ 10 ಕೋಟಿವರೆಗೂ ಸಾಲ ಒದಗಿಸುತ್ತವೆ. ಎಸ್‌ಬಿಐ, ಫಂಡ್‌ಗಳ ಆಧಾರದ ಮೇಲೆ ₹ 20 ಲಕ್ಷದಿಂದ ₹ 5 ಕೋಟಿವರೆಗೆ ಸಾಲ ಸೌಲಭ್ಯ ಕಲ್ಪಿಸುತ್ತದೆ.

ಬಡ್ಡಿ ದರ, ಶುಲ್ಕಗಳು: ಮ್ಯೂಚುವಲ್ ಫಂಡ್ ಆಧಾರವಾಗಿಟ್ಟು ಪಡೆಯುವ ಸಾಲಕ್ಕೆ ಬ್ಯಾಂಕ್‌ಗಳು ಪ್ರಸ್ತುತ ಶೇ 9.5ರಿಂದ ಶೇ 12ರವರೆಗೆ ಬಡ್ಡಿ ವಿಧಿಸುತ್ತಿವೆ. ಸಾಮಾನ್ಯವಾಗಿ ಈ ಸಾಲದ ಮೇಲಿನ ಬಡ್ಡಿ ದರ ವೈಯಕ್ತಿಕ ಸಾಲದ ಬಡ್ಡಿ ದರಕ್ಕಿಂತ ಕಡಿಮೆ ಇರುತ್ತದೆ. ಐಸಿಐಸಿಐ ಬ್ಯಾಂಕ್ ₹ 3,500 (ಜಿಎಸ್‌ಟಿ ಶುಲ್ಕ ಹೊರತುಪಡಿಸಿ) ಸಂಸ್ಕರಣಾ ಶುಲ್ಕ ನಿಗದಿ ಮಾಡಿದೆ. ಎಸ್‌ಬಿಐನಲ್ಲಿ ಸಾಲ ಮೊತ್ತದ ಶೇ 0.75ರಷ್ಟು ಮೊತ್ತವನ್ನು ಸಂಸ್ಕರಣಾ ಶುಲ್ಕವಾಗಿ ಪಡೆಯಲಾಗುತ್ತದೆ.

ಅಲ್ಪ ಕುಸಿತ ಕಂಡ ಷೇರುಪೇಟೆ

ಜುಲೈ 24ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಅಲ್ಪ ಪ್ರಮಾಣದಲ್ಲಿ ಕುಸಿದಿವೆ. 52,975 ಅಂಶಗಳಲ್ಲಿವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ಶೇ 0.3ರಷ್ಟು ತಗ್ಗಿದ್ದರೆ, 15,856 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿಶೇ 0.42ರಷ್ಟು ಕುಸಿದಿದೆ. ಜಾಗತಿಕ ಮಾರುಕಟ್ಟೆಗಳಲ್ಲಿನ ಅನಿಶ್ಚಿತತೆ, ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ ಮತ್ತು ಕೆಲವು ಕಂಪನಿಗಳ ತ್ರೈಮಾಸಿಕ ಫಲಿತಾಂಶದಲ್ಲಿ ನಿರೀಕ್ಷಿತ ಸಾಧನೆ ಕಂಡುಬರದಿರುವುದು ಸೇರಿ ಹಲವು ಅಂಶಗಳು ಕುಸಿತಕ್ಕೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಾಧ್ಯಮ ವಲಯ ಶೇ 2.6ರಷ್ಟು ಕುಸಿತ ಕಂಡಿದೆ. ವಾಹನ ಮತ್ತು ಬ್ಯಾಂಕ್ ವಲಯಗಳು ಸಹ ತಲಾ ಶೇ 2ರಷ್ಟು ಇಳಿಕೆಯಾಗಿವೆ. ಐ.ಟಿ. ವಲಯ ಶೇ 1.6ರಷ್ಟು, ರಿಯಲ್ ಎಸ್ಟೇಟ್ ವಲಯ ಶೇ 0.9ರಷ್ಟು ಏರಿಕೆ ಕಂಡಿವೆ.

ಏರಿಕೆ–ಇಳಿಕೆ: ನಿಫ್ಟಿಯಲ್ಲಿ ವಿಪ್ರೊ ಶೇ 3.5ರಷ್ಟು, ಬಜಾಜ್ ಫಿನ್‌ಸರ್ವ್ ಶೇ 3.5ರಷ್ಟು, ಏಷ್ಯನ್ ಪೇಂಟ್ಸ್ ಶೇ 3ರಷ್ಟು, ಬಿಪಿಸಿಎಲ್ ಶೇ 2.5ರಷ್ಟು, ನೆಸ್ಲೆ ಶೇ 2.5ರಷ್ಟು, ಐಸಿಐಸಿಐ ಬ್ಯಾಂಕ್ ಶೇ 2.2ರಷ್ಟು, ಟೆಕ್ ಮಹೀಂದ್ರ ಶೇ 2.3ರಷ್ಟು ಮತ್ತು ಇನ್ಫೊಸಿಸ್ ಶೇ 2ರಷ್ಟು ಜಿಗಿದಿವೆ. ಇಂಡಸ್ ಇಂಡ್ ಬ್ಯಾಂಕ್ ಶೇ 6ರಷ್ಟು, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 5ರಷ್ಟು ಮತ್ತು ಟಾಟಾ ಮೋಟರ್ಸ್ ಶೇ 5ರಷ್ಟು ಇಳಿಕೆಯಾಗಿವೆ.

ಮುನ್ನೋಟ: ಟಾಟಾ ಮೋಟರ್ಸ್, ಮಾರುತಿ, ಟಿವಿಎಸ್ ಮೋಟರ್ಸ್, ಜೆಕೆ ಪೇಪರ್, ಕೋಟಕ್ ಬ್ಯಾಂಕ್, ಎಸ್‌ಬಿಐ ಲೈಫ್, ನೆಸ್ಲೆ ಇಂಡಿಯಾ, ಎನ್‌ಟಿಪಿಸಿ, ಬಿಎಚ್‌ಇಎಲ್ ಸೇರಿ ಪ್ರಮುಖ ಕಂಪನಿಗಳು ಈ ವಾರ ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಗ್ಲೆನ್‌ಮಾರ್ಕ್ ಲೈಫ್ ಸೈನ್ಸಸ್ ಐಪಿಒ ಮಂಗಳವಾರದಿಂದ (ಜುಲೈ 27) ಆರಂಭವಾಗಲಿದೆ. ತ್ರೈಮಾಸಿಕ ಫಲಿತಾಂಶಗಳು, ಜಾಗತಿಕ ವಿದ್ಯಮಾನಗಳು ಸೂಚ್ಯಂಕಗಳ ಮೇಲೆ ಪರಿಣಾಮ ಬೀರುವುದರಿಂದ ಸದ್ಯದ ಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಏರಿಳಿತ ಮುಂದುವರಿಯಲಿದೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ., ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT