ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಸಾಕ್ಷರತೆ: ಎಂಎಫ್‌: ತೆರಿಗೆ ಲೆಕ್ಕಾಚಾರ ಹೇಗೆ?

Last Updated 31 ಅಕ್ಟೋಬರ್ 2021, 22:00 IST
ಅಕ್ಷರ ಗಾತ್ರ

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮುನ್ನ ಅದಕ್ಕೆ ಸಂಬಂಧಿಸಿದ ತೆರಿಗೆ ಲೆಕ್ಕಾಚಾರ ಅರಿಯುವುದು ಬಹಳ ಮುಖ್ಯ. ಒಂದೊಂದು ರೀತಿಯ ಫಂಡ್‌ಗೂ ಒಂದೊಂದು ರೀತಿಯಲ್ಲಿ ತೆರಿಗೆ ನಿಯಮವಿದೆ. ಈಕ್ವಿಟಿ, ಡೆಟ್ ಮತ್ತು ಹೈಬ್ರೀಡ್ ಮ್ಯೂಚುವಲ್ ಫಂಡ್‌ಗಳ ತೆರಿಗೆ ಲೆಕ್ಕಾಚಾರಗಳು ಹೇಗಿವೆ ಎಂಬುದನ್ನು ವಿವರವಾಗಿ ತಿಳಿಯೋಣ ಬನ್ನಿ.

ಈಕ್ವಿಟಿ ಮ್ಯೂಚುವಲ್ ಫಂಡ್: ಯಾವುದೇ ಈಕ್ವಿಟಿ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಿ, ಒಂದು ವರ್ಷದ (365 ದಿನಗಳ ಅವಧಿ) ಒಳಗೆ ಅದನ್ನು (ಯೂನಿಟ್‌ಗಳನ್ನು) ಮಾರಾಟ ಮಾಡಿದರೆ ಅಲ್ಪಾವಧಿ ಬಂಡವಾಳ ಗಳಿಕೆ (STCG) ತೆರಿಗೆ ಅನ್ವಯಿಸುತ್ತದೆ. ಶೇಕಡ 15ರಷ್ಟು ಅಲ್ಪಾವಧಿ ಬಂಡವಾಳ ಗಳಿಕೆ ತೆರಿಗೆ ಮೇಲೆ ಶೇಕಡ 4ರಷ್ಟು ಸೆಸ್ ಪಾವತಿಸಬೇಕಾಗುತ್ತದೆ. ಉದಾಹರಣೆಗೆ, ಒಂದು ಈಕ್ವಿಟಿ ಮ್ಯೂಚುವಲ್ ಫಂಡ್‌ನಲ್ಲಿ ₹ 30,000 ಹೂಡಿಕೆ ಮಾಡಿದ ಏಳು ತಿಂಗಳ ಅವಧಿಯಲ್ಲಿ ₹ 10 ಸಾವಿರ ಲಾಭ ಗಳಿಸಿದ್ದೀರಿ ಎಂದಿಟ್ಟುಕೊಳ್ಳಿ. ಒಂದೊಮ್ಮೆ ಲಾಭವನ್ನು ಕೂಡಲೇ ಪಡೆದುಕೊಳ್ಳಬೇಕು ಎಂದಾದಲ್ಲಿ ಶೇಕಡ 15ರಷ್ಟು, ಅಂದರೆ ₹ 1,500 ತೆರಿಗೆ ಪಾವತಿಸಬೇಕಾಗುತ್ತದೆ.

ಯಾವುದೇ ಕಂಪನಿಯ ಈಕ್ವಿಟಿ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಿದ್ದು, ಒಂದು ವರ್ಷದ ಬಳಿಕ ಅದನ್ನು ಮಾರಾಟ ಮಾಡಿದರೆ ₹ 1 ಲಕ್ಷ ಮೇಲ್ಪಟ್ಟ ಗಳಿಕೆಗೆ ಶೇ 10ರಷ್ಟು ದೀರ್ಘಾವಧಿ ಬಂಡವಾಳ ಗಳಿಕೆಗೆ (LTCG) ತೆರಿಗೆ ಅನ್ವಯಿಸುತ್ತದೆ. ಉದಾಹರಣೆ-1 ನೀವು ಈಕ್ವಿಟಿ ಮ್ಯೂಚುವಲ್ ಫಂಡ್‌ ಒಂದರಲ್ಲಿ ₹ 50,000 ಹೂಡಿಕೆ ಮಾಡಿ ₹ 30,000 ಲಾಭ ಗಳಿಸಿದ್ದೀರಿ ಎಂದಿಟ್ಟುಕೊಳ್ಳಿ. ಹೂಡಿಕೆ ಮಾಡಿದ 365 ದಿನಗಳ (ಒಂದು ವರ್ಷದ) ನಂತರ ಮ್ಯೂಚುವಲ್ ಫಂಡ್ ಮಾರಾಟ ಮಾಡಿದರೆ ನೀವು ಗಳಿಸಿರುವ ₹ 30,000 ಲಾಭಕ್ಕೆ ಯಾವುದೇ ತೆರಿಗೆ ಕಟ್ಟಬೇಕಿಲ್ಲ.

ಉದಾಹರಣೆ-2 ನೀವು ₹ 9 ಲಕ್ಷ ಮೌಲ್ಯದ ಈಕ್ವಿಟಿ ಮ್ಯೂಚುವಲ್ ಫಂಡ್ ಖರೀದಿಸಿ ₹ 10 ಲಕ್ಷ ಲಾಭ ಗಳಿಸಿದ್ದು, ಒಂದು ವರ್ಷದ ನಂತರ ಮಾರಾಟಕ್ಕೆ ನಿರ್ಧರಿಸಿದ್ದೀರಿ ಎಂದು ಭಾವಿಸೋಣ. ಈಗ ನೀವು ₹ 10 ಲಕ್ಷ ಲಾಭದಲ್ಲಿ ₹ 1 ಲಕ್ಷಕ್ಕೆ ಯಾವುದೇ ತೆರಿಗೆ ಕಟ್ಟಬೇಕಿಲ್ಲ. ಇನ್ನುಳಿದ ₹ 9 ಲಕ್ಷದ ಮೇಲೆ ಶೇ 10ರಷ್ಟು ತೆರಿಗೆ, ಅಂದರೆ ₹ 90 ಸಾವಿರ, ಪಾವತಿ ಮಾಡಬೇಕಾಗುತ್ತದೆ.

ಡೆಟ್ ಮ್ಯೂಚುವಲ್ ಫಂಡ್: ಡೆಟ್ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಿದ್ದು ಮೂರು ವರ್ಷಗಳ ಒಳಗಾಗಿ ಮಾರಾಟ ಮಾಡಲು ತೀರ್ಮಾನಿಸಿದರೆ ಅದನ್ನು ಅಲ್ಪಾವಧಿ ಬಂಡವಾಳ ಗಳಿಕೆ ಎಂದು ಪರಿಗಣಿಸಲಾಗುತ್ತದೆ. ಈ ರೀತಿಯ ಗಳಿಕೆಗೆ ನಿಮ್ಮ ಆದಾಯ ತೆರಿಗೆಯ ಸ್ಲ್ಯಾಬ್‌ಗೆ ಅನುಗುಣವಾಗಿ ತೆರಿಗೆ ಕಟ್ಟಬೇಕಾಗುತ್ತದೆ. ಡೆಟ್ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಿದ್ದು ಮೂರು ವರ್ಷಗಳ ನಂತರ ಮಾರಾಟ ಮಾಡಿದರೆ ಅದನ್ನು ದೀರ್ಘಾವಧಿ ಬಂಡವಾಳ ಗಳಿಕೆ ಎನ್ನಲಾಗುತ್ತದೆ. ಇಲ್ಲಿ ಇಂಡೆಕ್ಸೇಷನ್ ಅಂದರೆ ಬೆಲೆ ಏರಿಕೆ ಲೆಕ್ಕಾಚಾರವನ್ನು ಪರಿಗಣಿಸಿ ಶೇಕಡ 20ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ.

ಹೈಬ್ರೀಡ್ ಮ್ಯೂಚುವಲ್ ಫಂಡ್: ಹೈಬ್ರೀಡ್ ಮ್ಯೂಚುವಲ್ ಫಂಡ್‌ನಲ್ಲಿ ಈಕ್ಟಿಟಿ ಮತ್ತು ಡೆಟ್ ಹೂಡಿಕೆಗಳ ಮಿಶ್ರಣವಿರುದರಿಂದ ಇದರ ತೆರಿಗೆ ಲೆಕ್ಕಾಚಾರ ಕೊಂಚ ಭಿನ್ನ. ಹೈಬ್ರೀಡ್ ಫಂಡ್‌ನಲ್ಲಿ ಶೇ 65ಕ್ಕಿಂತ ಹೆಚ್ಚು ಹೂಡಿಕೆ ಈಕ್ವಿಟಿಯಲ್ಲಿ ಇದ್ದರೆ, ಅದಕ್ಕೆ ಈಕ್ವಿಟಿ ಮ್ಯೂಚುವಲ್ ಫಂಡ್‌ಗೆ ಅನ್ವಯಿಸುವ ಲೆಕ್ಕಾಚಾರ ಪ್ರಕಾರ ತೆರಿಗೆ ಕಟ್ಟಬೇಕಾಗುತ್ತದೆ. ಹೈಬ್ರೀಡ್ ಫಂಡ್‌ನಲ್ಲಿ ಶೇ 65ಕ್ಕಿಂತ ಕಡಿಮೆ ಪ್ರಮಾಣದ ಈಕ್ವಿಟಿಗಳಲ್ಲಿ ಇದ್ದರೆ, ಡೆಟ್ ಮ್ಯೂಚುವಲ್ ಫಂಡ್‌ಗೆ ಅನ್ವಿಯಿಸುವ ಲೆಕ್ಕಾಚಾರದ ಪ್ರಕಾರ ತೆರಿಗೆ ಪಾವತಿ ಮಾಡಬೇಕಾಗುತ್ತದೆ.

ಎರಡನೇ ವಾರವೂ ಕುಸಿದ ಷೇರುಪೇಟೆ

ಷೇರುಪೇಟೆ ಸೂಚ್ಯಂಕಗಳು ಸತತ ಎರಡನೆಯ ವಾರವೂ ಕುಸಿತ ದಾಖಲಿಸಿವೆ. 59,306 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇಕಡ 2.49ರಷ್ಟು ಇಳಿಕೆ ಕಂಡಿದೆ. 17,671 ಅಂಶಗಳಲ್ಲಿ ವಹಿವಾಟು
ಮುಗಿಸಿರುವ ನಿಫ್ಟಿ ಶೇ 2.44ರಷ್ಟು ತಗ್ಗಿದೆ. ವಾರದ ವಹಿವಾಟಿನ ಲೆಕ್ಕಾಚಾರಕ್ಕೆ ಬಂದರೆ, ಇದು ಎಂಟು ತಿಂಗಳ ಅವಧಿಯ ಅತ್ಯಂತ ದೊಡ್ಡ ಕುಸಿತವಾಗಿದೆ.

ಲಾಭಗಳಿಕೆಯ ಉದ್ದೇಶಕ್ಕಾಗಿ ಷೇರುಗಳ ಮಾರಾಟ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರುಗಳಲ್ಲಿನ ಬಂಡವಾಳ ಹಿಂತೆಗೆತ, ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಕಂಪನಿಗಳ ಲಾಭಾಂಶದ ಮೇಲೆ ನಕಾರಾತ್ಮಕ ಪರಿಣಾಮ, ತ್ರೈಮಾಸಿಕ ಫಲಿತಾಂಶಗಳಲ್ಲಿ ಕಂಪನಿಗಳಿಗೆ ಮಿಶ್ರಫಲ, ಜಾಗತಿಕ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ ಸೇರಿದಂತೆ ಹಲವು ಅಂಶಗಳು ಷೇರುಪೇಟೆ ಕುಸಿತಕ್ಕೆ ಕಾರಣ.

ವಲಯವಾರು ಪ್ರಗತಿ ನೋಡಿದಾಗ, ಎಲ್ಲಾ ವಲಯಗಳಲ್ಲೂ ಕುಸಿತ ಕಂಡುಬಂದಿದೆ. ನಿಫ್ಟಿ ಎನರ್ಜಿ ಮತ್ತು ಖಾಸಗಿ ಬ್ಯಾಂಕ್ ಸೂಚ್ಯಂಕ ಕ್ರಮವಾಗಿ ಶೇ 4.3ರಷ್ಟು ಮತ್ತು ಶೇ 3.6ರಷ್ಟು ಇಳಿಕೆಯಾಗಿವೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 15,702.26 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿಯ ಸಾಂಸ್ಥಿಕ ಹೂಡಿಕೆದಾರರು ₹ 9,427.23 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಏರಿಕೆ–ಇಳಿಕೆ: ಅಲ್ಟ್ರಾಟೆಕ್ ಸಿಮೆಂಟ್ ಶೇ 7ರಷ್ಟು, ಐಸಿಐಸಿಐ ಬ್ಯಾಂಕ್ ಶೇ 5ರಷ್ಟು, ಯುಪಿಎಲ್ ಶೇ 4ರಷ್ಟು ಮತ್ತು ಏಷ್ಯನ್ ಪೇಂಟ್ಸ್ ಶೇ 4ರಷ್ಟು ಗಳಿಕೆ ಕಂಡಿವೆ. ಎಕ್ಸಿಸ್ ಬ್ಯಾಂಕ್ ಶೇ 9ರಷ್ಟು, ಅದಾನಿ ಪೋರ್ಟ್ಸ್ ಶೇ 9ರಷ್ಟು, ಎನ್‌ಟಿಪಿಸಿ ಶೇ 8ರಷ್ಟು, ಬಿಪಿಸಿಎಲ್ ಶೇ 7ರಷ್ಟು ಮತ್ತು ಕೋಲ್ ಇಂಡಿಯಾ ಶೇ 8ರಷ್ಟು ಇಳಿಕೆಯಾಗಿವೆ.

ಮುನ್ನೋಟ: ಷೇರು ಮಾರುಕಟ್ಟೆ ಅಲ್ಪ ಕುಸಿತ ಕಂಡಾಗಲೆಲ್ಲ ಖರೀದಿಗೆ ಮುಗಿಬೀಳುತ್ತಿದ್ದ ಹೂಡಿಕೆದಾರರು, ಈಗ ಸೂಚ್ಯಂಕಗಳು ಅಲ್ಪ ಏರಿಕೆ ಕಂಡಾಗಲೆಲ್ಲ ಷೇರುಗಳನ್ನು ಮಾರಾಟ ಮಾಡಿ ಲಾಭ ಗಳಿಕೆಗೆ ಮುಂದಾಗುತ್ತಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಷೇರು ಮಾರುಕಟ್ಟೆಯಲ್ಲಿ ಏರಿಳಿತದ ಹಾದಿ ಮುಂದುವರಿಯಲಿದೆ. ನವೆಂಬರ್ 1ರಂದು ವಾಹನ ಮಾರಾಟದ ಅಂಕಿ-ಅಂಶ ಸಿಗಲಿದೆ. ದೀಪಾವಳಿ ಸಮಯದಲ್ಲಿ ಗ್ರಾಹಕರ ಮನಃಸ್ಥಿತಿ ಹೇಗಿದೆ ಎನ್ನುವ ಅಂದಾಜು ಪಡೆಯಲು ಮಾರುಕಟ್ಟೆ ಕಾತರವಾಗಿದೆ.

ಈ ವಾರ ಎಚ್‌ಡಿಎಫ್‌ಸಿ, ಐಆರ್‌ಸಿಟಿಸಿ, ಐಆರ್‌ಎಫ್‌ಸಿ, ಗ್ರಾಫೈಟ್ ಇಂಡಿಯಾ ಲಿ., ಜಿಂದಾಲ್ ಸ್ಟೀಲ್, ದೇವಯಾನಿ, ಎಂಟಾರ್ ಟೆಕ್ನಾಲಜೀಸ್, ಟಾಟಾ ಮೋಟರ್ಸ್, ಐಷರ್ ಮೋಟರ್ಸ್, ಗೋದ್ರೇಜ್ ಪ್ರಾಪರ್ಟಿಸ್, ಸೆಂಚುರಿ ಪ್ಲೈ, ಜಿಲೆಟ್ ಇಂಡಿಯಾ, ಏರ್‌ಟೆಲ್, ನೀಲ್‌ಕಮಲ್, ಕ್ವೆಸ್ಟ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ.,ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT