ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ವಿಚಾರ | ಬಂಡವಾಳ ಮಾರುಕಟ್ಟೆ | ಎಸ್‌ಐಪಿ: ಈ ತಪ್ಪುಗಳನ್ನು ಮಾಡಬೇಡಿ

Last Updated 19 ಡಿಸೆಂಬರ್ 2022, 1:05 IST
ಅಕ್ಷರ ಗಾತ್ರ

ಉಳಿತಾಯ ಮಾಡಿದ ಹಣವನ್ನು ಹೂಡಿಕೆ ಮಾಡಿ ಬೆಳೆಸಲು ಮ್ಯೂಚುಯಲ್ ಫಂಡ್ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್ಐಪಿ) ಒಳ್ಳೆಯ ಆಯ್ಕೆ. ಆದರೆ ಎಸ್‌ಐಪಿಗಳನ್ನು ಆರಂಭಿಸಿದ ನಂತರ ಬಹುತೇಕರು ಕೆಲ ತಪ್ಪುಗಳನ್ನು ಮಾಡುತ್ತಾರೆ. ಮ್ಯೂಚುಯಲ್ ಫಂಡ್ ಹೂಡಿಕೆಯಲ್ಲಿ ಆ ತಪ್ಪುಗಳನ್ನು ತಗ್ಗಿಸಿದಲ್ಲಿ ಸಂಪತ್ತು ಸೃಷ್ಟಿಯ ಹಾದಿ ಸುಗಮವಾಗುತ್ತದೆ.

ಎಸ್‌ಐಪಿ ಅಂದ್ರೆ?: ‘ಎಸ್‌ಐಪಿ’ ಎನ್ನುವುದು ಹೂಡಿಕೆಯ ಉತ್ಪನ್ನವಲ್ಲ ಹೂಡಿಕೆಯ ವಿಧಾನ. ಪೂರ್ವನಿಗದಿತ ದಿನದಂದು, ಪೂರ್ವ ನಿಗದಿತ ಮೊತ್ತವನ್ನು ಸ್ವಯಂಚಾಲಿತವಾಗಿ ಹೂಡಿಕೆ ಉತ್ಪನ್ನವೊಂದಕ್ಕೆ ವ್ಯವಸ್ಥಿತವಾಗಿ ವರ್ಗಾಯಿಸುವ ವಿಧಾನವೇ ‘ಎಸ್ಐಪಿ’ ಅರ್ಥಾತ್ ವ್ಯವಸ್ಥಿತ ಹೂಡಿಕೆ ಯೋಜನೆ. ಮ್ಯೂಚುಯಲ್ ಫಂಡ್ ಹೂಡಿಕೆಗಳಲ್ಲಿ ಎಸ್‌ಐಪಿ ವಿಧಾನ ಹೆಚ್ಚು ಚಾಲ್ತಿಯಲ್ಲಿದೆ. ಉದಾಹರಣೆಗೆ ಮ್ಯೂಚುಯಲ್ ಫಂಡ್ ವೊಂದರಲ್ಲಿ ಪ್ರತಿ ತಿಂಗಳ 5 ರಂದು ನೀವು ₹ 2000 ಸಾವಿರ ಹೂಡಿಕೆ ಮಾಡಲು ನಿರ್ಧರಿಸಿದ್ದರೆ, ಮಾರುಕಟ್ಟೆ ಏರಿಳಿತಗಳಿಗೆ ತಲೆಕೆಡಿಸಿಕೊಳ್ಳದೆ ಪ್ರತಿ ತಿಂಗಳು ಅದನ್ನು ನಿಯಮಿತವಾಗಿ ಮುಂದುವರಿಸಿಕೊಂಡು ಹೋಗುವ ಪ್ರಕ್ರಿಯೆಯನ್ನು ಎಸ್‌ಐಪಿ ಎನ್ನಬಹುದು.

ಎಸ್‌ಐಪಿಗಳನ್ನು ತಪ್ಪಿಸೋದು: ಎಸ್‌ಐಪಿ ಹೂಡಿಕೆಯಲ್ಲಿ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತ ಹೂಡಿಕೆಗೆ ಬದ್ಧರಾಗಿರಬೇಕಾಗುತ್ತದೆ. ಆದರೆ ಬಹುತೇಕರು ಎಸ್‌ಐಪಿ ಹೂಡಿಕೆಗಳನ್ನು ಶಿಸ್ತುಬದ್ಧರಾಗಿ ಮಾಡುವುದಿಲ್ಲ. ಎಸ್‌ಐಪಿ ಹೂಡಿಕೆಯನ್ನು ನಿಗದಿತ ದಿನಾಂಕದಲ್ಲಿ ಮಾಡದಿದ್ದರೆ ಹೂಡಿಕೆ ಗುರಿಗೆ ಹಿನ್ನಡೆಯಾಗುತ್ತದೆ. ಇಷ್ಟೇ ಅಲ್ಲ, ಎಸ್‌ಐಪಿಗಳು ಅನಿಯಮಿತವಾಗಿದ್ದಾಗ ಮಾರುಕಟ್ಟೆಯ ಏರಿಳಿತದ ಲಾಭವೂ ನಿಮಗೆ ಸಿಗುವುದಿಲ್ಲ. ಹಾಗಾಗಿ ಮಾರುಕಟ್ಟೆಯ ತಲ್ಲಣಗಳಿಗೆ ಹೆಚ್ಚು ತೆಲೆಕೆಡಿಸಿಕೊಳ್ಳದೆ ನಿಯಮತವಾಗಿ ಹೂಡಿಕೆ ಮುಂದುವರಿಸಿ.

ನಿಯಮಿತವಾಗಿ ಎಸ್‌ಐಪಿ ಮೊತ್ತ ಹೆಚ್ಚಿಸುತ್ತಾ ಹೋಗಿ: ಉದಾಹರಣೆಗೆ ವ್ಯಕ್ತಿಯೊಬ್ಬ ಪ್ರತಿ ತಿಂಗಳು ₹ 5 ಸಾವಿರ ಮೊತ್ತದ ಎಸ್‌ಐಪಿ ಆರಂಭಿಸುತ್ತಾನೆ ಎಂದರೆ ಅದನ್ನು ಮುಂದುವರಿಸಿಕೊಂಡು ಹೋಗುತ್ತಿರುತ್ತಾನೆ. ಹೀಗೆ ಮಾಡುವ ಬದಲು ಪ್ರತಿ ವರ್ಷ ವೇತನದ ಹೆಚ್ಚಳಕ್ಕೆ ಅನುಗುಣವಾಗಿ ಎಸ್‌ಐಪಿ ಮೊತ್ತವನ್ನೂ ಹೆಚ್ಚಳ ಮಾಡುತ್ತಾ ಸಾಗಿದರೆ ಅನುಕೂಲವಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಹೂಡಿಕೆ ಹಣದಿಂದ ಹಣದುಬ್ಬರ ಮೀರಿ ಲಾಭಾಂಶ ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ಗುರಿಯಿಲ್ಲದೆ ಹೂಡಿಕೆ ಮಾಡುವುದು: ಮ್ಯೂಚುಯಲ್ ಫಂಡ್ ಹೂಡಿಕೆಯಲ್ಲಿ ನಿಮ್ಮ ಅಗತ್ಯಕ್ಕೆ ತಕ್ಕಂತೆ ವಿವಿಧ ರೀತಿಯ ಫಂಡ್‌ಗಳಿವೆ. ಉದಾಹರಣೆಗೆ ಸುಲಭ ನಗದೀಕರಣಕ್ಕೆ ಲಿಕ್ವಿಕ್ ಫಂಡ್ ನೆರವಾಗುತ್ತದೆ, ಹೆಚ್ಚು ರಿಸ್ಕ್ ಇಲ್ಲದೆ ಹೂಡಿಕೆ ಮಾಡಬೇಕು ಅಂದ್ರೆ ಡೆಟ್ ಫಂಡ್ ಉತ್ತಮವಾಗುತ್ತದೆ, ಹಾಗೆಯೇ ದೀರ್ಘಾವಧಿಗೆ ಹೂಡಿಕೆ ಮಾಡುವುದಾದರೆ ಈಕ್ವಿಟಿ ಮ್ಯೂಚುಯಲ್ ಫಂಡ್ ಇದೆ. ಈ ಕಾರಣದಿಂದಾಗಿ ಯಾವ ಉದ್ದೇಶಕ್ಕೆ ಎಸ್‌ಐಪಿ ಹೂಡಿಕೆ ಮಾಡುತ್ತಿದ್ದೀರಿ ಎನ್ನುವುದು ಬಹಳ ಮುಖ್ಯವಾಗುತ್ತದೆ.

ಮಾರುಕಟ್ಟೆ ಕುಸಿದಾಗ ಎಸ್ಐಪಿ ನಿಲ್ಲಿಸೋದು: ಮಾರುಕಟ್ಟೆ ಕುಸಿದಾಗ ಮ್ಯೂಚುಯಲ್ ಫಂಡ್‌ಗಳ ‘ಎನ್‌ಎವಿ’ (ನಿವ್ವಳ ಆಸ್ತಿ ಮೌಲ್ಯ- Net Asset Value ) ತಗ್ಗುತ್ತದೆ. ಈ ಸ್ಥಿತಿಯಲ್ಲಿ ನೀವು ಎಸ್‌ಐಪಿ ಮೂಲಕ ಹೆಚ್ಚು ಮ್ಯೂಚುಯಲ್ ಫಂಡ್ ಯುನಿಟ್‌ಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಬಳಿ ಹೆಚ್ಚು ಯುನಿಟ್‌ಗಳಿದ್ದರೆ ಮಾರುಕಟ್ಟೆ ಪುಟಿದೆದ್ದಾಗ ನಿಮಗೆ ಹೆಚ್ಚು ಲಾಭಾಂಶ ಸಿಗುತ್ತದೆ. ಹಾಗಾಗಿ ಸಾಧ್ಯವಾದರೆ ಇನ್ನಷ್ಟು ಹೂಡಿಕೆ ಮಾಡಲು ಪ್ರಯತ್ನಿಸಬೇಕೇ ಹೊರತು ಪೇಟೆ ಕುಸಿದಾಗ ಎಸ್‌ಐಪಿಗಳನ್ನು ಸ್ಥಗಿತಗೊಳಿಸಬಾರದು. ಎಸ್‌ಐಪಿಯಲ್ಲಿ ಪ್ರತಿ ತಿಂಗಳು ತೊಡಗಿಸಿದ ಹಣ ಆಯಾಯ ತಿಂಗಳಲ್ಲಿ ಕಟ್ಟಿದ ತಾರೀಕಿಗನುಗುಣವಾಗಿ ವಾರ್ಷಿಕ ಸರಾಸರಿ ಲೆಕ್ಕಕ್ಕೆ ಒಳಪಡುವುದರಿಂದ ಲಾಭದ ಸಾಧ್ಯತೆಯೇ ಹೆಚ್ಚಿರುತ್ತದೆ. ಎಸ್ಐಪಿ ನಿಲ್ಲಿಸಬಾರದು ಎನ್ನುವುದಕ್ಕೆ ಇದು ಕೂಡ ಒಂದು ಪ್ರಮುಖ ಕಾರಣ.

ಎಸ್‌ಐಪಿ ನಿಲ್ಲಿಸಿ ಹೊರಬರೋದು: ಮಾರುಕಟ್ಟೆ ಕುಸಿದ ತಕ್ಷಣ ಮ್ಯೂಚುಯಲ್ ಫಂಡ್ ಹೂಡಿಕೆಯಿಂದ ಹೊರಬರಲು ಪ್ರಯತ್ನಿಸಿದರೆ ನಿಮ್ಮ ನಷ್ಟದ ಪ್ರಮಾಣ ಮತ್ತಷ್ಟು ಜಾಸ್ತಿಯಾಗುತ್ತದೆ. ಉದಾಹರಣೆ: ನೀವು ತಿಂಗಳಿಗೆ ₹ 4 ಸಾವಿರದಂತೆ ಕಳೆದ 12 ತಿಂಗಳ ಅವಧಿಯಲ್ಲಿ ಎಸ್‌ಐಪಿ ಮೂಲಕ ಮ್ಯೂಚುವಲ್ ಫಂಡ್ ನಲ್ಲಿ ಒಟ್ಟು ₹ 48 ಸಾವಿರ ಹೂಡಿಕೆ ಮಾಡಿದ್ದೀರಿ ಎಂದಿಟ್ಟುಕೊಳ್ಳೋಣ. ಮೇಲಿಂದ ಮೇಲೆ ಷೇರು ಮಾರುಕಟ್ಟೆ ಕುಸಿದ ತಕ್ಷಣ ನಿಮ್ಮ ಹೂಡಿಕೆ ₹ 40 ಸಾವಿರಕ್ಕೆ ಬರುತ್ತದೆ ಎಂದು ಭಾವಿಸೋಣ. ಹೀಗಾದಾಗ ನೀವು ಮ್ಯೂಚುವಲ್ ಫಂಡ್ ಹೂಡಿಕೆ ಹಿಂಪಡೆದರೆ ನಿಮಗೆ ಒಂದೇ ಬಾರಿ 8 ಸಾವಿರ ನಷ್ಟವಾಗುತ್ತದೆ. ಹೂಡಿಕೆ ಹೊರತೆಗೆಯುವ ಬದಲು ಎಸ್‌ಐಪಿ ಹೂಡಿಕೆ ಮುಂದುವರಿಸಿ ಮಾರುಕಟ್ಟೆ ಉತ್ತಮ ಸ್ಥಿತಿಯಲ್ಲಿದ್ದಾಗ ಹೂಡಿಕೆಯಿಂದ ಹೊರಬಂದರೆ ಹೆಚ್ಚು ಲಾಭ ಸಿಗುತ್ತದೆ. ಬಹುತೇಕರು ಈ ಮುಂದಾಲೋಚನೆ ಮಾಡದೆ ಹೂಡಿಕೆಯಿಂದ ದಿಢೀರ್ ಹೊರಬಂದು ನಷ್ಟ ಅನುಭವಿಸುತ್ತಾರೆ.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT