ಗುರುವಾರ , ಆಗಸ್ಟ್ 11, 2022
27 °C

ಒಂದಿಷ್ಟು ಉಳಿಸಿ ಬದುಕು ಸಂಭಾಳಿಸಿ

ಶರತ್‌ ಹೆಗ್ಡೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ನಿಂದ ಉಂಟಾಗಿರುವ ಸಂಕಷ್ಟ ಪರಿಸ್ಥಿತಿಯ ಜೊತೆಗೆ ಆರ್ಥಿಕ ಹಿಂಜರಿತದಿಂದಾಗಿ ವೆಚ್ಚವನ್ನು ಸರಿದೂಗಿಸಲು ಸರ್ಕಸ್‌ ಮಾಡಬೇಕಾಗಿದೆ. ಹೀಗಾಗಿ ಉಳಿತಾಯದ ಬಗ್ಗೆ ಯೋಜನೆ ರೂಪಿಸುವುದು ಸೂಕ್ತ.

ಸಂಕ್ರಮಣ ಇತ್ತೀಚೆಗಷ್ಟೇ ಕಳೆದಿದೆ. ಹವಾಮಾನ, ಕಾಲಘಟ್ಟ ಎರಡರ ಬದಲಾವಣೆಯ ಹಂತಗಳಿವು. ಕೋವಿಡ್‌ ಸಂಕಷ್ಟದ ಅವಧಿಯಲ್ಲಿ ಆದಾಯ ಸರಿದೂಗಿಸಲು ವಿಶ್ವವೇ ಸರ್ಕಸ್‌ ಮಾಡಿದೆ. ಹಾಗಿರುವಾಗ ಸಾಮಾನ್ಯ ಕುಟುಂಬಗಳು ಕೂಡಾ ಸಾಕಷ್ಟು ಅಳೆದು ತೂಗಿ ಖರ್ಚು– ವೆಚ್ಚಗಳನ್ನು ನಿಭಾಯಿಸುತ್ತಿವೆ. ಈ ನಡುವೆಯೂ ಒಂದಿಷ್ಟು ಖರ್ಚು ಕಡಿತ ಮತ್ತು ಉಳಿತಾಯ ಸಾಧ್ಯತೆ ಬಗ್ಗೆ ಹಲವು ಅಂಶಗಳನ್ನು ಪಾಲಿಸುವುದು ಒಳ್ಳೆಯದು.

ಹೆಚ್ಚುವರಿ ಹೊರೆಗಳನ್ನು ತಪ್ಪಿಸಲು ನಾವೇನು ಮಾಡಬಹುದು?

ಮಾರುಕಟ್ಟೆ ಮೇಲಿರಲಿ ಗಮನ: ಸಾಮಾನ್ಯವಾಗಿ ಬೃಹತ್‌ ಮಾರುಕಟ್ಟೆಗಳು ಆಗಾಗ ಅಗ್ಗದ ದರವನ್ನು ಘೋಷಿಸಿಬಿಡುತ್ತವೆ. ಆ ವೇಳೆಯಲ್ಲಿ ಸಾಧ್ಯವಾದಷ್ಟು ಹೆಚ್ಚು ದಿನಗಳಿಗೆ ಬೇಕಾಗುವ ವಸ್ತುಗಳನ್ನು ಕೊಂಡು ಇಟ್ಟುಕೊಳ್ಳಬಹುದು. ಉದಾಹರಣೆಗೆ ಸೋಪು, ಶ್ಯಾಂಪೂ, ಬಟ್ಟೆಗಳು... ಇತ್ಯಾದಿ. ಬಿಲ್‌ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ. ಎಲ್ಲಿ ಹೆಚ್ಚು ಮೊತ್ತ ಬಿದ್ದಿದೆಯೋ ಅದನ್ನು ನಿವಾರಿಸಿಕೊಳ್ಳಬಹುದಾದ ಸಾಧ್ಯತೆಯತ್ತ ಗಮನಕೊಡಿ. ನೀವು ವ್ಯವಹರಿಸುವ ಕಾಯಂ ಖರೀದಿಯ ಅಂಗಡಿಯಲ್ಲೇ ನಿಮಗೆ ದರ ದುಬಾರಿ ಎನಿಸಿದರೆ ಆ ಅಂಗಡಿಯ ಬದಲು ಬೇರೆ ಕಡೆಗೆ ಹೋಗುವುದು ಸೂಕ್ತ.

ಸಗಟು ಖರೀದಿಯ ಸಾಧ್ಯತೆ: ಅಪಾರ್ಟ್‌ಮೆಂಟ್‌ ಅಥವಾ ಒಂದೇ ವಠಾರದ ಮನೆಯವರೆಲ್ಲಾ ಒಟ್ಟಾಗಿ ಸೇರಿ ದಿನಸಿ, ನಿತ್ಯ ಬಳಕೆಯ ವಸ್ತುಗಳನ್ನು ಒಂದೇ ಕಡೆ ಒಂದೇ ಬಾರಿ ಖರೀದಿಸಬಹುದು. ಅದಕ್ಕಾಗಿ ಸಗಟು ಮಾರುಕಟ್ಟೆಗೆ ಹೋದರೆ ಸಾಮಾನ್ಯ ಮಾರುಕಟ್ಟೆಗಿಂತ ಸಾಕಷ್ಟು ಅಗ್ಗದ ದರದಲ್ಲಿ ಸರಕುಗಳು ಸಿಗುತ್ತವೆ. ಬೆಂಗಳೂರಿನಲ್ಲಿ ಒಂದು ಮಾಲ್‌ ತನ್ನ ಮೂರು ಶಾಖೆಗಳಲ್ಲಿ ಈ ಪರಿಕಲ್ಪನೆಯ ವ್ಯವಹಾರ ನಡೆಸುತ್ತಿದೆ. ತರಕಾರಿ ಖರೀದಿಯನ್ನೂ ಇದೇ ರೀತಿ ಮಾಡಬಹುದು. ಲಾಕ್‌ಡೌನ್‌ ಅವಧಿಯಲ್ಲಿ ಇದೊಂದು ಯಶಸ್ವಿ ಮಾದರಿಯಾಗಿ ಗಮನ ಸೆಳೆದಿತ್ತು.

ಖರೀದಿಯನ್ನೇ ಮುಂದೂಡಿ: ವಿನಾಕಾರಣ ಬಟ್ಟೆ ಖರೀದಿ, ಅಗತ್ಯಕ್ಕಿಂತ ಹೆಚ್ಚು ದಿನಸಿ ಮತ್ತಿತರ ವಸ್ತುಗಳ ಖರೀದಿ ಮಾಡಲೇಬೇಡಿ.

ಆರೋಗ್ಯ ಚೆನ್ನಾಗಿಟ್ಟುಕೊಳ್ಳಿ. ಇದರಿಂದ ವೈದ್ಯಕೀಯ ಖರ್ಚನ್ನೇ ದೂರವಿಡಬಹುದು. ಕ್ರೆಡಿಟ್‌ ಕಾರ್ಡ್‌ ಬಳಕೆಯನ್ನೇ ನಿಲ್ಲಿಸಿದರೆ ಮಿತಿಮೀರಿ ವೆಚ್ಚ ಮಾಡುವುದು, ಅನಗತ್ಯ ಸಾಲಗಾರರಾಗುವುದು ತಪ್ಪುತ್ತದೆ. 

ತೆರಿಗೆ ಉಳಿಸುವ ಕ್ಷೇತ್ರಗಳಲ್ಲಿ ಹಣ ಹೂಡಿಕೆ ಮಾಡಿ. ವೈಯಕ್ತಿಕ ಸಾಲಗಳು ಕಡಿಮೆ ಇರಲಿ.

ಸ್ಮಾರ್ಟ್‌ಹೋಂ ಮಾಡುವ ಉತ್ಸಾಹದಲ್ಲಿ 24 ಗಂಟೆಯೂ ಇಂಟರ್‌ನೆಟ್‌ ಚಾಲನೆಯಲ್ಲಿಡುವುದು, ಎಲೆಕ್ಟ್ರಾನಿಕ್‌ ಉಪಕರಣಗಳನ್ನು ವಿದ್ಯುತ್‌ ಪೂರೈಕೆಯ ಸ್ಥಿತಿಯಲ್ಲೇ ಇರಿಸುವುದು ಮಾಡಬೇಡಿ. ಅಗತ್ಯವಿಲ್ಲದಿದ್ದಾಗ ಸ್ವಿಚ್‌ ಆಫ್‌ ಮಾಡಿದರೆ ಬ್ರಾಡ್‌ಬ್ಯಾಂಡ್‌ ಬಿಲ್‌ ಮತ್ತು ವಿದ್ಯುತ್ ಬಿಲ್‌ನಲ್ಲೂ ಸಾಕಷ್ಟು ಉಳಿತಾಯ ಮಾಡಬಹುದು. ಮನೆಯ ಇತರ ಉಪಕರಣಗಳ ಬಳಕೆಗೂ ಇದೇ ಸೂತ್ರ ಅನ್ವಯವಾಗುತ್ತದೆ. ವಿದ್ಯುತ್‌ ಅನ್ನು ಅತಿ ಕಡಿಮೆ ಬಳಸುವ ಉಪಕರಣಗಳನ್ನೇ ಬಳಸಿ. ಈಗ ಮಾರುಕಟ್ಟೆಯಲ್ಲಿ ಇಂಥ (5 ಸ್ಟಾರ್ ರೇಟೆಡ್‌) ಉಪಕರಣಗಳೇ ಲಭ್ಯ ಇವೆ. ಫ್ಯಾನ್‌, ಎಸಿ, ಫ್ರಿಡ್ಜ್‌, ಟಿ.ವಿ... ಹೀಗೆ ಎಲ್ಲವೂ.

ಸೋಲಾರ್‌ ವಾಟರ್‌ ಹೀಟರ್‌ ಬಳಕೆಯಿಂದ ಮನೆಯಲ್ಲಿ ವಿದ್ಯುತ್‌ ಗೀಸರ್‌ಗೆ ಬಳಕೆಯಾಗುವ ವಿದ್ಯುತ್‌ ಉಳಿತಾಯ ಆಗುತ್ತದೆ. ಮಾತ್ರವಲ್ಲ ವಿದ್ಯುತ್‌ ಬಿಲ್‌ನಲ್ಲೂ ಶೇಕಡವಾರು ಉಳಿತಾಯ ಆಗುತ್ತದೆ.

ನೀರಿನ ಬಳಕೆಯೂ ಅತ್ಯಂತ ಮಿತವಾಗಿರಲಿ. ಇದರಿಂದ ಒಂದೆಡೆ ಬಿಲ್‌ ಮೊತ್ತದಲ್ಲಿ ಇಳಿಕೆಯಾಗುತ್ತದೆ. ಪರಿಸರಕ್ಕೆ ಅಮೂಲ್ಯ ಕೊಡುಗೆ ನೀಡಿದಂತಾಗುತ್ತದೆ. ಫ್ಲಷ್‌ ಬದಲು ಬಕೆಟ್‌ ನೀರಿನ ಬಳಕೆ ಅಥವಾ ನೀರು ಬಳಕೆ ಬೇಡದ ಶೌಚಾಲಯಗಳು ಈಗ ಮಾರುಕಟ್ಟೆಯಲ್ಲಿವೆ. ಮಳೆ ನೀರು ಸಂಗ್ರಹಿಸಿ ಬಳಸಿ. ನೀರು, ವಿದ್ಯುತ್‌ ಬಿಲ್‌ನಲ್ಲಿ ಸಾವಿರಾರು ರೂಪಾಯಿ ಉಳಿಸಬಹುದು. 

ಆರ್ಥಿಕ ಸ್ಥಿತಿ ಸುಧಾರಣೆಗೊಳ್ಳುವವರೆಗೆ ಎಲ್ಲ ವರ್ಗದವರು ಉಳಿತಾಯ ಸೂತ್ರಗಳನ್ನು ಅನುಸರಿಸುವುದು ಕ್ಷೇಮ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು