ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಣಕಾಸು ಸಾಕ್ಷರತೆ | ವಿಮೆ: ಎಂಡಬ್ಲ್ಯೂಪಿ ಕಾಯ್ದೆಯ ಮಹತ್ವ

Last Updated 16 ಅಕ್ಟೋಬರ್ 2022, 20:01 IST
ಅಕ್ಷರ ಗಾತ್ರ

‘ಅವಧಿ ವಿಮೆ (ಟರ್ಮ್ ಲೈಫ್ ಇನ್ಶೂರೆನ್ಸ್) ತೆಗೆದುಕೊಂಡರೆ ಸಾಕು, ನಮ್ಮ ಜೀವಕ್ಕೆ ಏನಾದರು ತೊಂದರೆ ಆದರೂ ಪತ್ನಿ ಮತ್ತು ಮಕ್ಕಳ ಭವಿಷ್ಯ ಸುಭದ್ರವಾಗಿರುತ್ತದೆ’ ಎಂದು ಪುರುಷರಲ್ಲಿ ಹಲವರು ಭಾವಿಸುವುದು ಇದೆ. ಆದರೆ ವಾಸ್ತವ ಬೇರೆ ರೀತಿಯೂ ಇರಬಹುದು. ವಿಮೆ ಖರೀದಿಸಿದ ಮಾತ್ರಕ್ಕೆ, ದುಡಿಯುವ ಪುರುಷ ಮೃತಪಟ್ಟ ಸಂದರ್ಭದಲ್ಲಿ ಕುಟುಂಬಕ್ಕೆ ವಿಮಾ ಹಣ ಸಿಕ್ಕಿಬಿಡುತ್ತದೆ ಎನ್ನಲಾಗದು.

ಎಷ್ಟೋ ಸಂದರ್ಭಗಳಲ್ಲಿ ನಾಮನಿರ್ದೇಶಿತ ವ್ಯಕ್ತಿಯ ಹೆಸರು ಸ್ಪಷ್ಟವಾಗಿ ಉಲ್ಲೇಖವಾಗಿದ್ದರೂ ವಿಮಾ ಪಾಲಿಸಿಯಿಂದ ಬರುವ ಹಣವು, ಸಾಲ ಕೊಟ್ಟ ಹಣಕಾಸು ಸಂಸ್ಥೆಗಳು ಅಥವಾ ಸಂಬಂಧಿಕರ ಪಾಲಾಗುವ ಸಾಧ್ಯತೆ ಇರುತ್ತದೆ. ಇಂತಹ ಪರಿಸ್ಥಿತಿಯನ್ನು ತಡೆಯುವ ಮತ್ತು ವಿವಾಹಿತ ಮಹಿಳೆಗೆ (ಪತ್ನಿಗೆ) ವಿಮೆಯ ಪೂರ್ಣ ಹಣ ಸಿಗುವಂತೆ ಮಾಡುವ ಕಾಯ್ದೆಯೇ ‘ವಿವಾಹಿತ ಮಹಿಳೆಯರ ಆಸ್ತಿ ಕಾಯ್ದೆ’ (ಅಥವಾ ಎಂಡಬ್ಲ್ಯೂಪಿ ಕಾಯ್ದೆ).

1874ರ ಈ ಕಾಯ್ದೆಯ ಸೆಕ್ಷನ್ 6ರ ಅಡಿಯಲ್ಲಿ ವಿಮೆ ಪಡೆದುಕೊಂಡರೆ, ಪತ್ನಿ, ಮಕ್ಕಳು ಅಥವಾ ಸೂಚಿತ ಅವಲಂಬಿತರಿಗೆ ಮಾತ್ರ ವಿಮೆ ಹಣ ಸಿಗುತ್ತದೆ. ಯಾವುದೇ ಸಾಲಗಾರರು, ಸಂಬಂಧಿಕರು ಈ ಹಣದ ಮೇಲೆ ಹಕ್ಕು ಸಾಧಿಸುವಂತಿಲ್ಲ. ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ವಿಮೆಯಿಂದ ಬರುವ ಹಣದಲ್ಲಿ ಸಾಲ ಪಾವತಿ ಮಾಡುವಂತೆ ಬ್ಯಾಂಕ್‌ಗಳು ಕೇಳಲು ಅವಕಾಶ ಇಲ್ಲ. ವಿವಾಹಿತ ಮಹಿಳೆಯರ ಆಸ್ತಿ ಕಾಯ್ದೆಯ ಅನ್ವಯ ವಿಮೆ ರಕ್ಷೆ ಪಡೆದಿರುವ ವ್ಯಕ್ತಿಯು ಯಾರ ಹೆಸರನ್ನು ಸೂಚಿಸಿರುತ್ತಾರೋ ಅವರಿಗೆ ಮಾತ್ರ ವಿಮೆಯ ಹಣದ ಮೇಲೆ ಹಕ್ಕಿರುತ್ತದೆ. ಯಾವುದೇ ಸಂದರ್ಭದಲ್ಲೂ ಇದನ್ನು ಬದಲಿಸಲು ಸಾಧ್ಯವಿಲ್ಲ.

ಒಂದು ಉದಾಹರಣೆ: ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ (ಕಾಲ್ಪನಿಕ ವ್ಯಕ್ತಿ) ವರ್ಷದ ಹಿಂದೆ ಗೃಹ ಸಾಲ ಪಡೆದಿದ್ದರು. ಗೃಹ ಸಾಲ ಪಡೆದ ಬೆನ್ನಲ್ಲೇ ಅವರು ಅವಧಿ ವಿಮೆ ಪಡೆದುಕೊಂಡು ವಿವಾಹಿತ ಮಹಿಳೆಯರ ಆಸ್ತಿ ಕಾಯ್ದೆ ಅಡಿಯಲ್ಲಿ ಅದನ್ನು ನೋಂದಾಯಿಸಿದರು. ತಮ್ಮ ಮಡದಿ ಮತ್ತು ಮಕ್ಕಳು ಅದರ ಫಲಾನುಭವಿಗಳು ಎಂದು ನಮೂದಿಸಿದರು. ಇದಾದ ಕೆಲ ತಿಂಗಳ ಬಳಿಕ ಕಿರಣ್ ಅಕಾಲಿಕ ಮರಣ ಹೊಂದಿದರು.

ಆಗ ಬ್ಯಾಂಕ್ ಅಧಿಕಾರಿಗಳು ಕೋರ್ಟ್ ಮೊರೆ ಹೋಗಿ ವಿಮೆಯಿಂದ ಬರುವ ಹಣ ಬಳಕೆ ಮಾಡಿ ಸಾಲ ಮರುಪಾವತಿ ಮಾಡಬೇಕು ಎಂದು ಅರ್ಜಿ ಸಲ್ಲಿಸಿದರು. ಪಾಲಿಸಿಯನ್ನು ವಿವಾಹಿತ ಮಹಿಳೆಯರ ಆಸ್ತಿ ಕಾಯ್ದೆ ಅಡಿಯಲ್ಲಿ ನೋಂದಣಿ ಮಾಡಿರುವುದರಿಂದ ಸಾಲ ಪಾವತಿಗೆ ವಿಮೆಯ ಹಣ ನೀಡುವಂತೆ ಸೂಚಿಸಲು ಸಾಧ್ಯವಿಲ್ಲ, ಪತ್ನಿ ಮತ್ತು ಮಕ್ಕಳಿಗೆ ಮಾತ್ರ ಆ ಹಣ ನೀಡಬಹುದು ಎಂದು ಕೋರ್ಟ್ ಹೇಳಿತು.

ಈ ಕಾಯ್ದೆ ಏಕೆ ಮುಖ್ಯ:

l ಸಾಲ ಪಡೆದುಕೊಂಡಿರುವ ಅಥವಾ ಹೆಚ್ಚು ಆರ್ಥಿಕ ಜವಾಬ್ದಾರಿ ಹೊತ್ತಿರುವ ಉದ್ಯಮಿಗಳಿಗೆ, ವರ್ತಕರಿಗೆ, ವೇತನದಾರರ ಕುಟುಂಬಗಳಿಗೆ ಇದು ರಕ್ಷಾಕವಚ

l ಇದರಿಂದ ಅನಿರೀಕ್ಷಿತ ಸಂದರ್ಭಗಳಲ್ಲೂ ಮಕ್ಕಳು ಮತ್ತು ಪತ್ನಿಗೆ ಅಡೆತಡೆಯಿಲ್ಲದ ವಿಮೆಯ ಹಣ ಸಿಗುತ್ತದೆ

l ಸಂಬಂಧಿಕರಿಂದ ವಿಮೆ ಹಣದ ಸಂಭವನೀಯ ದುರುಪಯೋಗ ತಡೆಯಬಹುದು

l ವಿಮೆ ಹಣ ಮಡದಿ- ಮಕ್ಕಳಿಗಷ್ಟೇ ಸಿಗಬೇಕು ಎಂದು ಬಯಸುವ ಪ್ರತಿಯೊಬ್ಬರಿಗೂ ಇದು ಉಪಯುಕ್ತ

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ಮಾರಾಟದ ಒತ್ತಡಕ್ಕೆ ಸಿಲುಕಿದ ಷೇರುಪೇಟೆ

ಅಕ್ಟೋಬರ್ 14ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಅಲ್ಪ ಮೊತ್ತದ ಕುಸಿತ ಕಂಡಿವೆ. 57,919 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇಕಡ 0.46ರಷ್ಟು ಇಳಿಕೆಯಾಗಿದೆ. 17,185 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.74ರಷ್ಟು ತಗ್ಗಿದೆ.

ಅಕ್ಟೋಬರ್ ತಿಂಗಳಲ್ಲಿ ಇದುವರೆಗೆ ಸೆನ್ಸೆಕ್ಸ್ ಮತ್ತು ನಿಫ್ಟಿ ಕ್ರಮವಾಗಿ 0.86ರಷ್ಟು ಮತ್ತು 0.5ರಷ್ಟು ಗಳಿಸಿಕೊಂಡಿವೆ. ಮಾರಾಟದ ಒತ್ತಡ, ಭಾರತದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣ ಹೆಚ್ಚಳ, ಕೈಗಾರಿಕಾ ಉತ್ಪಾದನೆ ಕುಂಠಿತ, ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಮಿಶ್ರ ಪ್ರತಿಕ್ರಿಯೆ ಸೇರಿದಂತೆ ಹಲವು ಅಂಶಗಳು ಕಳೆದ ವಾರದ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಾಹಿತಿ ತಂತ್ರಜ್ಞಾನ ಮತ್ತು ನಿಫ್ಟಿ ಬ್ಯಾಂಕ್ ಸೂಚ್ಯಂಕಗಳು ಮಾತ್ರ ಸಕಾರಾತ್ಮಕ ಗಳಿಕೆ ಕಂಡಿವೆ. ನಿಫ್ಟಿ ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 0.8ರಷ್ಟು ಮತ್ತು ನಿಫ್ಟಿ ಬ್ಯಾಂಕ್ ಸೂಚ್ಯಂಕ ಶೇ 0.3ರಷ್ಟು ಗಳಿಸಿಕೊಂಡಿವೆ. ನಿಫ್ಟಿ ಫಾರ್ಮಾ ಶೇ 1.4ರಷ್ಟು, ಎಫ್‌ಎಂಸಿಜಿ ಶೇ 1.5ರಷ್ಟು, ವಾಹನ ಶೇ 2.2ರಷ್ಟು, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 2.3ರಷ್ಟು, ಲೋಹ ಶೇ 2.8ರಷ್ಟು, ಮಾಧ್ಯಮ ವಲಯ ಶೇ 3.6ರಷ್ಟು ಮತ್ತು ರಿಯಲ್ ಎಸ್ಟೇಟ್ ಶೇ 4.2ರಷ್ಟು ಕುಸಿತ ಕಂಡಿವೆ.

ಬಿಎಸ್ಇ ಲಾರ್ಜ್ ಕ್ಯಾಪ್ ಸೂಚ್ಯಂಕ ಶೇ 1ರಷ್ಟು ಕುಸಿದಿದೆ. ಅದಾನಿ ವಿಲ್ಮರ್, ಜೊಮಾಟೊ, ಅದಾನಿ ಗ್ರೀನ್ ಎನರ್ಜಿ, ವಿಪ್ರೊ, ಅದಾನಿ ಟ್ರಾನ್ಸ್‌ಮಿಷನ್, ಹ್ಯಾವೆಲ್ಸ್ ಇಂಡಿಯಾ, ಯುನೈಟೆಡ್ ಸ್ಪಿರಿಟ್ಸ್, ಇಂಡಸ್ ಟವರ್ಸ್ ಮತ್ತು ಎಸ್‌ಬಿಐ ಲೈಫ್ ಇನ್ಸೂರೆನ್ಸ್ ಕಂಪನಿ ಷೇರುಗಳು ಶೇ 5ರಿಂದ ಶೇ 13ರವರೆಗೆ ತಗ್ಗಿವೆ.

ಬಿಎಸ್ಇ ಮಿಡ್ ಕ್ಯಾಪ್ ಸೂಚ್ಯಂಕ ಶೇ 2.6ರಷ್ಟು ಕುಸಿದಿದೆ. ಅದಾನಿ ಪವರ್, ಪಿಬಿ ಫಿನ್ ಟೆಕ್, ಬಯೋಕಾನ್, ಮ್ಯಾಕ್ಸ್ ಫೈನಾನ್ಸಿಯಲ್ಸ್, ಅಶೋಕ್ ಲೇಲೆಂಡ್, ಜೆಎಸ್‌ಡಬ್ಲ್ಯೂ ಎನರ್ಜಿ, ವೋಡಾಫೋನ್ ಐಡಿಯಾ, ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್, ರಾಮ್ಕೋ ಸಿಮೆಂಟ್ಸ್, ಭಾರತ್ ಇಲೆಕ್ಟ್ರಾನಿಕ್ಸ್ , ಜೀ ಎಂಟರ್‌ಟೇನ್ಮೆಂಟ್ ಶೇ 5ರಿಂದ ಶೇ 10ರವರೆಗೆ ಇಳಿಕೆ ದಾಖಲಿಸಿವೆ.

ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 2.2ರಷ್ಟು ಕುಸಿದಿದೆ. ಇಂಡಿಯಾ ಸಿಮೆಂಟ್ಸ್, ಸುಜಲಾನ್ ಎನರ್ಜಿ, ಫ್ಯೂಚರ್ ಲೈಫ್‌ಸ್ಟೈಲ್ ಫ್ಯಾಷನ್ಸ್, ಪವರ್ ಮೆಕ್ ಪ್ರಾಜೆಕ್ಟ್ಸ್, ಟೈಮೆಕ್ಸ್ ಗ್ರೂಪ್ ಇಂಡಿಯಾ, ವೆಲ್‌ಸ್ಪನ್ ಕಾರ್ಪ್ ಇಳಿಕೆಯಾಗಿವೆ. ಅತುಲ್ ಆಟೊ, ಗಾಯತ್ರಿ ಪ್ರಾಜೆಕ್ಟ್ಸ್, ಜಿಂದಾಲ್ ಡ್ರಿಲ್ಲಿಂಗ್ ಇಂಡಸ್ಟ್ರೀಸ್, ಉಗರ್ ಶುಗರ್ ವರ್ಕ್ಸ್, ಪೆನ್ನಾರ್ ಇಂಡಸ್ಟ್ರೀಸ್, ಇಕೆಐ ಎನರ್ಜಿ ಸರ್ವಿಸಸ್ , ಬ್ಲಾಕ್ ಬಾಕ್ಸ್ ಶೇ 15ರಿಂದ ಶೇ 30ರಷ್ಟು ಜಿಗಿದಿವೆ.

ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 9,941.71 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 7,030.96 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಮುನ್ನೋಟ: ಈ ವಾರ ನಜಾರಾ ಟೆಕ್ನಾಲಜೀಸ್, ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್, ಐಟಿಸಿ, ಕೆಇಐ, ನೆಟ್‌ವರ್ಕ್ 18, ಪಿವಿಆರ್, ಪಾಲಿ ಕ್ಯಾಬ್, ಐಸಿಐಸಿಐ ಜನರಲ್ ಇನ್ಶೂರೆನ್ಸ್, ಎಕ್ಸಿಸ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಡಿಕ್ಸಾನ್ ಟೆಕ್ನಾಲಜೀಸ್, ಟಾಟಾ ಕಮ್ಯೂನಿಕೇಷನ್ಸ್, ಹ್ಯಾವೆಲ್ಸ್, ಹ್ಯಾಟ್‌ಸನ್, ಸೊನಾಟಾ ಸಾಫ್ಟ್‌ವೇರ್, ಫೈ ಪೈಸೆ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ದೇಶಿಯ ವಿದ್ಯಮಾನಗಳ ಜೊತೆಗೆ ಜಾಗತಿಕ ವಿದ್ಯಮಾನಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT