ಬುಧವಾರ, ಆಗಸ್ಟ್ 10, 2022
24 °C

ಮಗಳ ಹೆಸರಲ್ಲಿ ಹೂಡಿಕೆ ಮಾಡಿದ್ದೀರಾ?

ವಿಜಯ್‌ ಜೋಷಿ Updated:

ಅಕ್ಷರ ಗಾತ್ರ : | |

ವಿನಯ್ ಮತ್ತು ಸವಿತಾ (ಇಬ್ಬರ ಹೆಸರನ್ನೂ ಬದಲಾಯಿಸಲಾಗಿದೆ) ದಂಪತಿಗೆ ಹೆಣ್ಣು ಮಗು ಜನಿಸಿದಾಗ ಅವರು ಮಾಡಿದ ಮೊದಲ ಕೆಲಸ, ಆ ಮಗುವಿನ ಹೆಸರಿನಲ್ಲಿ ತಾವೇ ಒಂದು ಮ್ಯೂಚುವಲ್‌ ಫಂಡ್‌ನಲ್ಲಿ ವ್ಯವಸ್ಥಿತ ಹೂಡಿಕೆ ಆರಂಭಿಸಿದ್ದು. ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಆಯ್ದ ಬ್ಯಾಂಕುಗಳ ಷೇರುಗಳಲ್ಲಿ ಹೂಡಿಕೆ ಮಾಡುವ ಫಂಡ್ ಅದು.

ಈ ಹೂಡಿಕೆಯನ್ನು ತಾವು ಆರಂಭಿಸಿರುವುದು ಮಗಳು ಬೆಳೆದು ದೊಡ್ಡವಳಾಗುವ ಹೊತ್ತಿನಲ್ಲಿ ಆಕೆಗಾಗಿ ಒಂದಿಷ್ಟು ಸಂಪತ್ತು ಸಂಗ್ರಹ ಆಗಿರಬೇಕು ಎಂಬ ಉದ್ದೇಶದಿಂದ ಎಂದು ದಂಪತಿ ಹೇಳುತ್ತಾರೆ.

ಇದರ ಜೊತೆಯಲ್ಲೇ, ಮಗಳ ಶಿಕ್ಷಣಕ್ಕಾಗಿ ತಮ್ಮ ಹೆಸರಿನಲ್ಲಿಯೇ ಒಂದು ವಿಮೆಯನ್ನು ಸಹ ಇವರು ಖರೀದಿ ಮಾಡಿದ್ದಾರೆ. ಮಗಳಿಗೆ 12 ವರ್ಷ ತುಂಬುವವರೆಗೆ ವಿಮೆಯ ಕಂತುಗಳನ್ನು ಪಾವತಿಸಿದರೆ, 12ನೆಯ ವರ್ಷದಿಂದ ಆರಂಭವಾಗಿ 24ನೆಯ ವರ್ಷದವರೆಗೆ ಪ್ರತಿ ವರ್ಷ ನಿಶ್ಚಿತ ಆದಾಯ ಆ ವಿಮೆಯಿಂದ ಬರುತ್ತಿರುತ್ತದೆ. ಮಗಳ ಮದುವೆಯ ವಿಚಾರವಾಗಿ ಈ ದಂಪತಿಗೆ ಒಂದಿಷ್ಟು ಕನಸುಗಳು ಇದ್ದು, ಅದಕ್ಕಾಗಿ ಒಳ್ಳೆಯ ಕಡೆ ಹೂಡಿಕೆ ಮಾಡಬೇಕು ಎಂಬ ಆಲೋಚನೆಯಲ್ಲಿ ಇದ್ದಾರೆ.

‘ಹೆಣ್ಣುಮಕ್ಕಳ ಬಗ್ಗೆ ತಂದೆ–ತಾಯಿಗೆ ಇರುವ ಕನಸುಗಳು ಗಂಡುಮಕ್ಕಳ ಬಗ್ಗೆ ಇರುವುದಕ್ಕಿಂತ ತುಸು ಭಿನ್ನವಾಗಿರುತ್ತವೆ. ಮಗಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದರ ಜೊತೆಗೆ ಮಗಳ ಮದುವೆಯನ್ನು ಚೆನ್ನಾಗಿ ಮಾಡಬೇಕು ಎಂಬ ಆಸೆಯೂ ಕೆಲವು ತಂದೆ–ತಾಯಿಯರಲ್ಲಿ ಇರುತ್ತದೆ. ಇದಕ್ಕೆ ತಕ್ಕಂತೆ ಹೂಡಿಕೆಯೂ ಆಗುತ್ತಿರಬೇಕು’ ಎಂದು ಹೇಳುತ್ತಾರೆ ವೈಯಕ್ತಿಕ ಹಣಕಾಸು ಸಲಹೆಗಾರ ಬಸವರಾಜ ತೊಣಗಟ್ಟಿ.

ಹೆಣ್ಣು ಮಕ್ಕಳಿಗಾಗಿಯೇ ಸರ್ಕಾರ ರೂಪಿಸಿರುವ ‘ಸುಕನ್ಯಾ ಸಮೃದ್ಧಿ’ ಯೋಜನೆಯಲ್ಲಿ ಒಂದಿಷ್ಟು ಹಣ ಹೂಡಿಕೆ ಮಾಡುವುದರ ಜೊತೆಯಲ್ಲೇ, ಈಕ್ವಿಟಿ ಆಧಾರಿತ ಯೋಜನೆಗಳಲ್ಲೂ ಹೂಡಿಕೆ ಮಾಡುವುದು ಸೂಕ್ತ ಎನ್ನುವುದು ಅವರ ಅನಿಸಿಕೆ. ಸುಕನ್ಯಾ ಸಮೃದ್ಧಿ ಯೋಜನೆಯ ಅಡಿಯಲ್ಲಿ ಈಗ ವಾರ್ಷಿಕ ಶೇಕಡ 7.6ರಷ್ಟು ಬಡ್ಡಿ ಸಿಗುತ್ತಿದೆ. ಆದರೆ, ‘ಶಿಕ್ಷಣದ ಮೇಲಿನ ವೆಚ್ಚಗಳಿಗೆ ಸಂಬಂಧಿಸಿದ ಹಣದುಬ್ಬರವು ಶೇ 8ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇದೆ. ಹಾಗಾಗಿ, ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಹೆಚ್ಚಿನ ಲಾಭ ತಂದುಕೊಡುವ ಈಕ್ವಿಟಿ ಮೇಲೆ ಹೂಡಿಕೆ ಅವಶ್ಯಕ’ ಎಂದು ಬಸವರಾಜ ಅವರು ಹೇಳುತ್ತಾರೆ.

ಹೆಣ್ಣುಮಕ್ಕಳ ಮದುವೆ ಎನ್ನುವುದು ಹೊರೆಯಾಗದಂತೆ ನೋಡಿಕೊಳ್ಳಬೇಕು ಎಂದಾದರೆ, ಅದಕ್ಕಾಗಿ ಕೂಡ ಒಂದು ಕಡೆ ಹೂಡಿಕೆ ಆರಂಭಿಸುವುದು ಸೂಕ್ತ. ಅದರಲ್ಲೂ, ಮಗು ಜನಿಸಿದ ತಕ್ಷಣವೇ ಹೂಡಿಕೆ ಆರಂಭಿಸುವುದಾದಲ್ಲಿ, ಈಕ್ವಿಟಿ ಮೇಲಿನ ಹೂಡಿಕೆ ಉತ್ತಮ. ಹೂಡಿಕೆ ಮಾಡಿದ ಹಣ ವೃದ್ಧಿಯಾಗಲು ಕನಿಷ್ಠ 18 ವರ್ಷವಾದರೂ ಅವಕಾಶ ಸಿಗುತ್ತದೆಯಾದ ಕಾರಣ, ಈಕ್ವಿಟಿ ಮೇಲಿನ ಹೂಡಿಕೆಯಿಂದ ಹೆಚ್ಚಿನ ಲಾಭವನ್ನು ನಿರೀಕ್ಷಿಸಬಹುದು.

ಎಲ್ಲಿ ಹೂಡಿಕೆ?

ಷೇರುಗಳ ಬೆಲೆ ಏರಿಳಿತದ ವಿಚಾರವಾಗಿ ಹೆಚ್ಚಿನ ತಿಳಿವಳಿಕೆ ಇಲ್ಲದಿದ್ದರೂ, ಅವುಗಳ ಮೇಲೆ ಹೂಡಿಕೆ ಮಾಡುವ ಆಸಕ್ತಿ ಇರುವವರು ಮ್ಯೂಚುವಲ್‌ ಫಂಡ್‌ಗಳ ಮೂಲಕ ಹೂಡಿಕೆ ಮಾಡುವುದು ಸೂಕ್ತ ಎಂಬುದು ಹಣಕಾಸು ಸಲಹೆಗಾರರ ಅಭಿಮತ. ಅದರಲ್ಲೂ, ವ್ಯವಸ್ಥಿತ ಹೂಡಿಕೆ ಯೋಜನೆಯ (ಎಸ್‌ಐಪಿ) ಮೂಲಕ ಮಾಡುವ ಹೂಡಿಕೆ ಹೆಚ್ಚು ಸುರಕ್ಷಿತ ಎಂಬುದು ಅವರ ಮಾತು. ಮಗಳ ಹೆಸರಿನಲ್ಲಿ ನಿರ್ದಿಷ್ಟ ವಲಯದ (ಐ.ಟಿ., ಬ್ಯಾಂಕಿಂಗ್, ಮೂಲಸೌಕರ್ಯ ಇತ್ಯಾದಿ) ಷೇರುಗಳ ಮೇಲೆ ಹೂಡಿಕೆ ಮಾಡುವ ಬಗ್ಗೆ ಆಲೋಚಿಸಬಹುದು. ಆ ವಲಯದ ಕಂಪನಿಗಳ ಸಂಪತ್ತು ವೃದ್ಧಿಯಾದಂತೆಲ್ಲ, ಮಗಳ ಹೆಸರಿನಲ್ಲಿ ಹೂಡಿಕೆಯಾದ ಹಣ ಕೂಡ ಬೆಳವಣಿಗೆ ಕಾಣುತ್ತದೆ.

ಮಗಳ ಹೆಸರಿನಲ್ಲಿ ದೊಡ್ಡ ಮೊತ್ತದ ಆಸ್ತಿ ಸೃಷ್ಟಿಯಾಗಿರಬೇಕು ಎಂದಾದರೆ ದೇಶದ ಬ್ಲೂಚಿಪ್‌ ಕಂಪನಿಗಳಲ್ಲಿ (ಇನ್ಫೊಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ರಿಲಯನ್ಸ್ ಇಂಡಸ್ಟ್ರೀಸ್, ಕೋಟಕ್ ಮಹೀಂದ್ರ ಬ್ಯಾಂಕ್ ಇತ್ಯಾದಿ) ಹೂಡಿಕೆ ಮಾಡುವ ಮ್ಯೂಚುವಲ್‌ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತವಾಗಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು