ಹಣಕಾಸು ಹೂಡಿಕೆ, ತೆರಿಗೆ ಮುಂತಾದ ಪ್ರಶ್ನೆಗಳಿಗೆ ತೆರಿಗೆ ಮತ್ತು ವೈಯಕ್ತಿಕ ಹಣಕಾಸು ತಜ್ಞ ಪ್ರಮೋದ ಶ್ರೀಕಾಂತ ದೈತೋಟ ಉತ್ತರ ನೀಡಿದ್ದಾರೆ.
ವಿದ್ಯಾಶಂಕರ್, ಹೊಸಕೆರೆಹಳ್ಳಿ, ಬೆಂಗಳೂರು.
ಪ್ರಶ್ನೆ: ನಾನು ಬ್ಯಾ೦ಕ್ ಉದ್ಯೋಗಿ. ವಯಸ್ಸು 55. ಕಳೆದ ನಾಲ್ಕೈದು ವರ್ಷದಿಂದ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದೇನೆ. ಅಲ್ಲದೆ, ಷೇರುಪೇಟೆಯಲ್ಲೂ ಹೂಡಿಕೆ ಇದೆ. ಒಟ್ಟಾರೆ ಏಕ ಕಂತಿನ ಹೂಡಿಕೆಯಲ್ಲದೆ ಪ್ರತಿ ತಿಂಗಳು ಎಸ್‌ಐಪಿ ಮೂಲಕ ಹೂಡಿಕೆ ಮಾಡುತ್ತಿದ್ದೇನೆ. ಬಹುತೇಕ ನನ್ನ ಹೂಡಿಕೆಗಳು ಈಕ್ವಿಟಿ ವಿಭಾಗದ ಫಂಡ್‌ಗಳಲ್ಲಿ ಇವೆ. ಈ ಹೂಡಿಕೆಗಳು ಬ್ಯಾ೦ಕ್ ಬಡ್ಡಿಗಿಂತ ಅಧಿಕ ಲಾಭ ನೀಡುತ್ತಿರುವುದು ನನಗೆ ಮನವರಿಕೆಯಾಗಿದೆ.
ನನ್ನ ಹೂಡಿಕೆಗಳೆಲ್ಲ ವಿವಿಧ ದಿನಗಳಲ್ಲಿ ಬ್ಯಾಂಕ್ ಖಾತೆಯಿಂದ ಮ್ಯೂಚುವಲ್ ಫಂಡ್ ಖಾತೆಗೆ ವರ್ಗಾವಣೆ ಆಗುತ್ತಿರುತ್ತದೆ. ಅದೇ ರೀತಿ ಮಾರಾಟ ಮಾಡಿದಾಗಲೂ ಸಮಯೋಚಿತ ನಿರ್ಧಾರ ಕೈಗೊಂಡು ಮಾರಾಟ ಲಾಭ ಗಳಿಸಿದ್ದೇನೆ. ನನ್ನ ಬ್ಯಾಂಕ್ ಖಾತೆಗೆ ಮಾರಾಟ ಮಾಡಿದ ಮೊತ್ತವೂ ಒಟ್ಟಾಗಿ ಬರುತ್ತದೆ. ಸಾಮಾನ್ಯವಾಗಿ ನೋಡಿದಾಗ ರಿಟರ್ನ್ಸ್ ಶೇ 10ರಿಂದ ಶೇ 25 ಸಿಕ್ಕಿದ್ದೂ ಇದೆ. ಕೆಲವು ಹೂಡಿಕೆಗಳು ಇದಕ್ಕಿಂತ ಅಧಿಕವಿದೆ. ಆದರೆ, ಹೂಡಿದ ಮೊತ್ತ ಪ್ರತಿ ತಿಂಗಳ ನಿಗದಿತ ದಿನಾಂಕ ಅಥವಾ ಯಾವುದೇ ದಿನ ಹೆಚ್ಚುವರಿ ಮೊತ್ತದ ಹೂಡಿಕೆ ಮಾಡಿರುವ ಕಾರಣ ನಿಖರವಾಗಿ ವಾರ್ಷಿಕ ಲಾಭದ ದರವನ್ನು ಕಂಡುಹಿಡಿಯುವುದು ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲದಂತಾಗಿದೆ. ಈ ಬಗ್ಗೆ ಯಾವುದಾದರೂ ಉಪಾಯ ಇದ್ದರೆ ತಿಳಿಸಿ. ಇದರಿಂದ ಮುಂದಿನ ಹೂಡಿಕೆಯ ನಿರ್ಧಾರ ಕೈಗೊಳ್ಳಲು ಹಾಗೂ ಇತರೆ ಸ್ನೇಹಿತರೊಂದಿಗೆ ಚರ್ಚಿಸಲು ಸಹಾಯವಾಗುತ್ತದೆ.
ಉತ್ತರ: ಯಾವುದೇ ಹೂಡಿಕೆ ಮಾಡಿದಾಗ ಹೂಡಿಕೆದಾರನಿಗೆ ಅಗತ್ಯವಾಗಿ ತನ್ನ ಹೂಡಿಕೆ ಮೊತ್ತ ನಿಜವಾಗಿಯೂ ಉದ್ದೇಶಿತ ಲಾಭ ನೀಡುತ್ತಿದೆಯೇ ಎಂಬುದನ್ನು ತಿಳಿಯಲು ಉಪಯುಕ್ತ ಮಾಹಿತಿ ಹೊಂದಿರಬೇಕು. ಪ್ರಸ್ತುತ ಮುಂದುವರಿಯುತ್ತಿರುವ ಹೂಡಿಕೆಗಳಾಗಿದ್ದರೆ, ಹೂಡಿಕೆಯ ದಿನದಿಂದ ಪ್ರಸಕ್ತ ದಿನದ ತನಕ ಇರುವ ಲಾಭ ಅಥವಾ ನಷ್ಟ ಪರಿಗಣಿಸಿ ಲೆಕ್ಕ ಹಾಕುವಾಗ ಯಾವುದೇ ಸಮಯದ ಅವಧಿಯನ್ನು ಪರಿಗಣಿಸದೆ ಶೇಕಡಾವಾರು ಲೆಕ್ಕ ಹಾಕುತ್ತೇವೆ. ಉದಾಹರಣೆಗೆ ₹5 ಲಕ್ಷ ಹೂಡಿಕೆಗೆ ₹ 25 ಸಾವಿರ ಲಾಭ ಬಂದರೆ, ಶೇ 5ರ ಲಾಭ ಎಂದು ಪರಿಗಣಿಸುತ್ತೇವೆ. ಆದರೆ, ಇದು ಕೇವಲ ಹತ್ತು ದಿನದ ಲಾಭವಾಗಿರಬಹುದು ಅಥವಾ ಮೂರು ವರ್ಷದ ಲಾಭವೂ ಆಗಿರಬಹುದು. ಹೀಗಾಗಿ, ನಿಜಕ್ಕೂ ಉತ್ತಮ ಹೂಡಿಕೆ ನಿರ್ಧಾರ ಪರಿಣಾಮಕಾರಿಯಾಗಿತ್ತೇ ಎಂದು ನೋಡಿದರೆ ಸಮರ್ಪಕವಾಗಿ ಉತ್ತರಿಸಲಾಗದು.
ನಿಮ್ಮ ಈ ಸಮಸ್ಯೆಗೆ ಪರಿಹಾರವಾಗಿ ಪರ್ಯಾಯವಾದ ಒಂದು ಲಾಭಾಂಶ ಪತ್ತೆ ಮಾಡುವ ವಿಧಾನವಿದೆ. ಇದಕ್ಕೆ ‘ಎಕ್ಸ್ ಐ ಆರ್ ಆರ್’ ಎಂಬ ಸಮೀಕರಣವನ್ನು ಬಳಸಲಾಗುತ್ತದೆ. ಇದನ್ನು ಸಿಪ್ (ಎಸ್‌ಐಪಿ) ಹೂಡಿಕೆಗಳಲ್ಲಿ ಅಥವಾ ಯಾವುದೇ ವ್ಯತ್ಯಸ್ತ ಹೂಡಿಕೆ ದಿನಾಂಕ ಅಥವಾ ಮೊತ್ತ ಇದ್ದಾಗ ಅಂತಹ ಹೂಡಿಕೆಗಳ ಆಂತರಿಕ ಲಾಭದ ಪ್ರಮಾಣವನ್ನು ಲೆಕ್ಕಹಾಕಲು ಬಳಸಲಾಗುತ್ತದೆ.
ಇದಕ್ಕಾಗಿ ನಿಮ್ಮ ಎಲ್ಲಾ ಹೂಡಿಕೆಗಳ ದಿನಾಂಕ, ಹೂಡಿಕೆಯ ಅಸಲು ಮೊತ್ತ, ಪ್ರಸ್ತುತ ಮೌಲ್ಯ ಅಥವಾ ಮಾರಾಟದ ಮೌಲ್ಯ ಮತ್ತು ದಿನಾಂಕವನ್ನು ಕಂಪ್ಯೂಟರ್ ಎಕ್ಸೆಲ್‌ನಲ್ಲಿ ಸಮೀಕರಿಸಿ ಅಥವಾ ಯಾವುದೇ ಇಂಟರ್‌ನೆಟ್ ಜಾಲತಾಣದಲ್ಲಿ ಈ ಸಮೀಕರಣದ ಮಾಹಿತಿ ಹುಡುಕಿ. ಅದರಲ್ಲಿ ಈ ಮೇಲಿನ ಮಾಹಿತಿ ಆಧರಿಸಿ ನಿಖರವಾಗಿ ಲೆಕ್ಕ ಹಾಕಬಹುದು. ಇನ್ನೂ ಮುಖ್ಯವಾಗಿ, ನೀವು ನಿಮ್ಮ ಫಂಡ್‌ಗಳನ್ನು ಲಾಗಿನ್ ಮಾಡಿ ನೋಡಿದರೆ, ಅದರಲ್ಲೂ ಎಕ್ಸ್ ಐ ಆರ್ ಆರ್ ಶೇಕಡಾ ಮೊತ್ತವನ್ನು ನೋಡಬಹುದು. ಇದರ ಆಧಾರದಲ್ಲಿ ನಿಮ್ಮ ನೈಜ ಹೂಡಿಕೆ ನಿರ್ಧಾರದ ಗುಣಮಟ್ಟವನ್ನು ಹೋಲಿಕೆ ಮಾಡಬಹುದು.
ರಘುವೀರ್, ಬೆಂಗಳೂರು.
ಪ್ರಶ್ನೆ: ನಾನು ಐ.ಟಿ ಕಂಪನಿಯ ಉದ್ಯೋಗಿ. ನನಗೆ ವೇತನ ಆದಾಯ ಮಾತ್ರವಲ್ಲದೆ ಇನ್ನೂ ಕೆಲವು ಮೂಲಗಳಿಂದ ಆದಾಯವಿದೆ. ಇದರಲ್ಲಿ ಸಣ್ಣ ಪ್ರಮಾಣದ ಬಡ್ಡಿ ಆದಾಯ, ಷೇರು ಹಾಗೂ ಮ್ಯೂಚುವಲ್ ಫಂಡ್ ಖರೀದಿ- ಮಾರಾಟದಿಂದ ಬರುವ ಲಾಭ/ ನಷ್ಟ, ಇಂಟ್ರಾ ಡೇ ಷೇರು ವ್ಯವಹಾರದಿಂದ ಬರುವ ಲಾಭ/ ನಷ್ಟ, ಅವುಗಳಿಂದ ಬರುವ ಡಿವಿಡೆಂಡ್ ನನ್ನ ಆದಾಯದ ಭಾಗವಾಗಿದೆ.
ಅಲ್ಲದೆ, ನನ್ನ ಹೆಸರಲ್ಲಿ ಮನೆ ಬಾಡಿಗೆ ಆದಾಯವೂ ಬರುತ್ತಿದೆ. ಈ ಮನೆಗೆ ಯಾವುದೇ ಸಾಲ ಇಲ್ಲ. ಇದು ನನ್ನ ತಂದೆಯವರಿಂದ ನನ್ನ ಹೆಸರಿಗೆ ಬಂದಿರುತ್ತದೆ. ಮನೆಯ ಒಂದು ಮಹಡಿಯನ್ನು ಬಾಡಿಗೆಗೆ ಕೊಟ್ಟಿರುತ್ತೇವೆ. ಬಾಡಿಗೆ ಬ್ಯಾ೦ಕ್ ಮೂಲಕ ವರ್ಗಾಯಿಸುತ್ತಾರೆ. ನಾನು ಬಾಡಿಗೆದಾರರಿಗೆ ಬಾಡಿಗೆ ರಶೀದಿ ಕೊಡುತ್ತಿದ್ದೇನೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಾನು ಉದ್ಯೋಗವನ್ನು ಬದಲಿಸಿದ್ದು ಹೊಸ ಕಂಪನಿಯಲ್ಲೂ ತೆರಿಗೆ ಕಡಿತ ಆಗುತ್ತಿದೆ. ಉದ್ಯೋಗ ಬದಲಾವಣೆಯ ಪರಿಣಾಮ ತೆರಿಗೆಯಲ್ಲಿ ವ್ಯತ್ಯಾಸ ಆಗಿದೆ.
ನನ್ನ ಸಮಸ್ಯೆ ಏನೆಂದರೆ, ನನ್ನ ಹೊಸ ಕಂಪನಿಯ ಉದ್ಯೋಗ ನಿರ್ವಹಣಾ ವಿಭಾಗದವರು ಯಾವುದೇ ಇತರೆ ಆದಾಯವನ್ನು ನಾನು ಘೋಷಿಸಿದಲ್ಲಿ ಅದನ್ನು ಪರಿಗಣಿಸುತ್ತಿಲ್ಲ. ಬದಲಾಗಿ ವೇತನ ಹಾಗೂ ಬ್ಯಾ೦ಕ್ ಬಡ್ಡಿ ಮಾತ್ರ ಪರಿಗಣಿಸಿ ತೆರಿಗೆ ಕಡಿತ ಮಾಡುತ್ತಾರೆ. ಇದರಿಂದ ವರ್ಷದ ಕೊನೆಗೆ ನಾನು ಹೆಚ್ಚಿನ ತೆರಿಗೆ ಬಡ್ಡಿ ಹಾಗೂ ಊಹೆಗೂ ಮೀರಿದ ತೆರಿಗೆ ಕಟ್ಟಿದ್ದೇನೆ. ಇದಕ್ಕೇನು ಪರಿಹಾರ ತಿಳಿಸಿ.
ಉತ್ತರ: ನಿಮ್ಮ ಈ ಸಮಸ್ಯೆ ಬಹುತೇಕ ಮಂದಿಗೂ ಇದ್ದಿರಬಹುದು. ಎಲ್ಲ ತೆರಿಗೆದಾರರೂ ತಮ್ಮದೇ ಉದ್ಯೋಗ/ ವ್ಯವಹಾರದಲ್ಲಿ ಮಗ್ನರಾಗಿರುವುದರಿಂದ ತಮ್ಮ ತೆರಿಗೆ ನಿರ್ವಹಣೆ ಬಗ್ಗೆ ಗಮನಿಸದಿರುವ ಸಾಧ್ಯತೆಯೂ ಇದೆ. ಅನೇಕ ಮೂಲಗಳಿಂದ ಆದಾಯ ಇರುವ ಇಂತಹ ಸಂದರ್ಭದಲ್ಲಿ, ತೆರಿಗೆ ನಿರ್ವಹಣೆ ಬಗ್ಗೆ ಆರ್ಥಿಕ ವರ್ಷದ ಆರಂಭದಲ್ಲೇ ಸಮಾಲೋಚನೆ ಅಗತ್ಯ. ಇದರಿಂದ ವರ್ಷದ ಕೊನೆಗೆ ಭಾರಿ ಮೊತ್ತದ ಬಡ್ಡಿ ಹಾಗೂ ತೆರಿಗೆ ಕಟ್ಟುವುದನ್ನು ತಡೆಯಬಹುದು.
ನೀವು ಪ್ರಶ್ನೆಯಲ್ಲಿ ತಿಳಿಸಿರುವಂತೆ, ನಿಮ್ಮ ಕಂಪನಿಯ ತೆರಿಗೆ ವಿಭಾಗದವರು ನೀವು ನೀಡುವ ನಿಮ್ಮ ಎಲ್ಲಾ ಆದಾಯಗಳನ್ನು ಅವರು ತೆರಿಗೆ ಲೆಕ್ಕ ಹಾಕುವಾಗ ಪರಿಗಣಿಸುತ್ತಿಲ್ಲ ಎಂಬುದು. ಇದಕ್ಕಾಗಿ ಆದಾಯ ತೆರಿಗೆಯ ಸೆಕ್ಷನ್ 192ಬಿ ಪ್ರಕಾರ ‘ಫಾರ್ಂ 12ಸಿ’ ಭರ್ತಿ ಮಾಡಿ ನೀವು ಸಲ್ಲಿಸುವುದಕ್ಕೆ ಅವಕಾಶ ಇದೆ. ಇದು ವೇತನ ಆದಾಯವಲ್ಲದೆ, ಯಾವುದೇ ಇತರೆ ಆದಾಯವಿದ್ದಾಗ ಅದರಲ್ಲಿರುವ ವಿವಿಧ ವರ್ಗದ ಆದಾಯ ಮಾಹಿತಿಯನ್ನು ಅಧಿಕೃತವಾಗಿ ಸಲ್ಲಿಸುವುದಕ್ಕಿರುವ ಮಾಧ್ಯಮ. ಆದರೆ, ನೀವು ನೀಡುವ ಮಾಹಿತಿಯ ನಿಖರತೆ ಪರಿಶೀಲಿಸುವುದು ಅವರ ಕರ್ತವ್ಯವಲ್ಲ ಎಂಬುದನ್ನು ಗಮನಿಸಿ. ಆದರೆ, ಈ ಫಾರಂ ಸಲ್ಲಿಸುವ ಮೊದಲು ಮೇಲೆ ತಿಳಿಸಿರುವಂತೆ ತೆರಿಗೆ ಸಂಬಂಧಿತ ಸಲಹೆ ಪಡೆದುಕೊಳ್ಳಿ.
ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001. ಇ–ಮೇಲ್:businessdesk@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.