ಬುಧವಾರ, 21 ಜನವರಿ 2026
×
ADVERTISEMENT
ADVERTISEMENT

ಪ್ರಶ್ನೋತ್ತರ ಅಂಕಣ | ಹಣಕಾಸು, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ

Published : 20 ಜನವರಿ 2026, 23:30 IST
Last Updated : 20 ಜನವರಿ 2026, 23:30 IST
ಫಾಲೋ ಮಾಡಿ
Comments
ಪ್ರ

ನಾನು ಕಳೆದ ಕೆಲವು ವರ್ಷಗಳಿಂದ ಷೇರುಗಳಲ್ಲಿ ಸಣ್ಣ ಪ್ರಮಾಣದ ವ್ಯವಹಾರ ಮಾಡುತ್ತಿದ್ದೇನೆ. ಕಳೆದ ಕೆಲವು ವರ್ಷಗಳಲ್ಲಿ ಅಲ್ಪಾವಧಿ ಹಾಗೂ ದೀರ್ಘಾವಧಿ ಷೇರು ವಹಿವಾಟಿನಿಂದ ಉತ್ತಮ ಆದಾಯ ಗಳಿಸಿದ್ದೇನೆ. ಪ್ರಸ್ತುತ ನಾನು ಈ ಅನುಭವದಿಂದ ಫ್ಯೂಚರ್ಸ್ ಮತ್ತು ಆಪ್ಷನ್‌ಗಳಲ್ಲಿ (ಎಫ್‌ ಆ್ಯಂಡ್‌ ಒ) ವ್ಯವಹರಿಸಬೇಕೆಂದು ಉದ್ದೇಶಿಸಿದ್ದೇನೆ. ಮಾರುಕಟ್ಟೆ ಸಮಯದಲ್ಲಿ ನನಗೆ ಹೂಡಿಕೆ ವಹಿವಾಟು ಮಾಡಲು ಆಗುತ್ತದೆ. ಕಳೆದ ವರ್ಷ ನಾನು ಷೇರು ವ್ಯವಹಾರದಿಂದ ಒಟ್ಟಾರೆ ₹2 ಲಕ್ಷ ನಿವ್ವಳ ಲಾಭ ಗಳಿಸಿದ್ದೇನೆ. ಇದಕ್ಕೆ ತೆರಿಗೆಯನ್ನೂ ಪಾವತಿಸಿದ್ದೇನೆ.

ಈ ಹಿನ್ನೆಲೆಯಲ್ಲಿ, ಫ್ಯೂಚರ್ಸ್ ಮತ್ತು ಆಪ್ಷನ್ ವ್ಯವಹಾರವನ್ನು ಆರಂಭಿಸಲು ನಾನು ಯಾವ ವಿಷಯಗಳನ್ನು ಅನುಸರಿಸಬೇಕು ಎಂಬ ಮಾಹಿತಿ ನೀಡಿ. ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ಯಾವ ರೀತಿಯ ತಯಾರಿ ಅಗತ್ಯ ಎಂಬುದನ್ನೂ ತಿಳಿಸಿ.

–ರಂಜನ್ ನಾಯಕ್, ವೈಟ್‌ಫೀಲ್ಡ್, ಬೆಂಗಳೂರು

ಷೇರು ಮಾರುಕಟ್ಟೆಯಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿ ವಹಿವಾಟಿನಿಂದ ನೀವು ಲಾಭ ಮಾಡಿರುವುದು ಉತ್ತಮ ವಿಚಾರ. ಇದರಲ್ಲಿನ ಯಶಸ್ಸು ಒಂದಷ್ಟು ಮಟ್ಟಿಗೆ ನಿಮಗೆ ನೆರವಾಗಲಿದೆ. ಆದರೆ ಫ್ಯೂಚರ್ಸ್ ಮತ್ತು ಆಪ್ಷನ್ ಮಾರುಕಟ್ಟೆ ಸರಳ ಷೇರು ವಹಿವಾಟಿಗಿಂತ ಭಿನ್ನ. ನಿತ್ಯದ ಮಾರುಕಟ್ಟೆ ದಿಕ್ಕನ್ನು ನಿಖರವಾಗಿ
ಅರ್ಥಮಾಡಿಕೊಳ್ಳುವಲ್ಲಿ ಹೆಚ್ಚಿನ ಮಾರುಕಟ್ಟೆ ಅಧ್ಯಯನ, ಶಿಸ್ತು ಮತ್ತು ಅನುಭವವನ್ನು ಬಯಸುತ್ತದೆ. ಪ್ರತಿ ದಿನ ಮಾರುಕಟ್ಟೆ ಯಾವ ದಿಕ್ಕಿನಲ್ಲಿ ಚಲಿಸಬಹುದು ಎಂಬುದನ್ನು ಅಂದಾಜಿಸಲು ಕೇವಲ ಚಾರ್ಟ್‌ಗಳನ್ನೇ ಅವಲಂಬಿಸು ವುದಕ್ಕಿಂತ, ಕಂಪನಿಗಳ ಸುದ್ದಿ, ಉದ್ಯಮದ ಸ್ಥಿತಿ, ಆರ್ಥಿಕ ಸೂಚ್ಯಂಕಗಳು, ಬಡ್ಡಿ ದರ ನೀತಿಗಳು ಹಾಗೂ ಜಾಗತಿಕ ಮಟ್ಟದಲ್ಲಿನ ರಾಜಕೀಯ ಬೆಳವಣಿಗೆಗಳನ್ನು ಒಟ್ಟಾಗಿ ವಿಶ್ಲೇಷಿಸುವ ದೃಷ್ಟಿಕೋನ ಅಗತ್ಯ. ಯಾವ ಸುದ್ದಿ ಯಾವ ಕಂಪನಿಗೆ ಅಥವಾ ಮಾರುಕಟ್ಟೆ ಸೂಚ್ಯಂಕಕ್ಕೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಮಾರುಕಟ್ಟೆ ಯಾವಾಗ ಹೇಗೆ ಚಲಿಸುತ್ತದೆ ಎನ್ನುವ ಮೂಲಭೂತ ಅಂಶಗಳನ್ನು ನಾವು ಫ್ಯೂಚರ್ಸ್ ಮತ್ತು ಆಪ್ಷನ್ ಮಾರುಕಟ್ಟೆ ವ್ಯವಹಾರಕ್ಕಿಳಿಯುವ ಮುನ್ನ ಅರ್ಥೈಸಿಕೊಳ್ಳಬೇಕು. ಉದಾಹರಣೆಗೆ, ಕಚ್ಚಾ ತೈಲ ಬೆಲೆ, ಆರ್ಥಿಕ ನೀತಿಗಳು, ಬ್ಯಾಂಕ್ ಬಡ್ಡಿದರ ನಿರ್ಣಯ, ಜಾಗತಿಕ ಸಂಘರ್ಷ ಇತ್ಯಾದಿಗಳು ದೇಶಿ ಸೂಚ್ಯಂಕ ಹಾಗೂ ಸಂಬಂಧಿತ ಕಂಪನಿಗಳ ಷೇರು ಮೌಲ್ಯದ ಮೇಲೆ ತಕ್ಷಣ ಪರಿಣಾಮ ಬೀರುತ್ತವೆ. ಇದರಿಂದ ಆಪ್ಷನ್ ಬೆಲೆಗಳಲ್ಲಿ ಅನಿರೀಕ್ಷಿತ ಏರಿಳಿತ ಕಾಣಬಹುದು.

ಈ ಮಾಹಿತಿಯಲ್ಲದೆ, ಆಪ್ಷನ್ ವ್ಯವಹಾರದಲ್ಲಿ ಅವುಗಳ ಬೆಲೆಗಳು ಹೇಗೆ ರೂಪುಗೊಳ್ಳುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ. ಡೆಲ್ಟಾ, ಗಾಮಾ, ಥೀಟಾ, ವೇಗಾ ಹಾಗೂ ಇಂಪ್ಲೈಡ್ ವೊಲಟಾಲಿಟಿ ಇತ್ಯಾದಿ ಗುಣಾಂಕಗಳು ಮಾರುಕಟ್ಟೆ ಚಲನೆ, ಸಮಯ ಕ್ಷಯ ಮತ್ತು ಆಯಾ ಸೂಚ್ಯಂಕ ಷೇರುಗಳ ಮೌಲ್ಯದಲ್ಲಿ ಅಸ್ಥಿರತೆ ಉಂಟಾದ ಸಂದರ್ಭದಲ್ಲಿ ಆಪ್ಷನ್ ಬೆಲೆಯಲ್ಲಿ ಏನು ಬದಲಾವಣೆ ಆಗುತ್ತದೆ ಎಂಬುದನ್ನು ಸೂಚಿಸುತ್ತವೆ. ಗ್ರೀಕ್ಸ್‌ಗಳನ್ನು ಅರ್ಥೈಸದೆ ವ್ಯವಹಾರ ಮಾಡುವುದರಿಂದ, ಸರಿಯಾದ ಮಾರುಕಟ್ಟೆ ದಿಕ್ಕಿನ ಅಂದಾಜು ಇದ್ದರೂ ನಷ್ಟವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ವಿಭಿನ್ನ ಮಾರುಕಟ್ಟೆ ಪರಿಸ್ಥಿತಿಗಳಲ್ಲಿ ಗ್ರೀಕ್ಸ್‌ಗಳ ಚಲನೆಯನ್ನು ಅಭ್ಯಾಸ ಮಾಡುವುದು ಅಗತ್ಯ.

ಕೇವಲ ಬಂಡವಾಳದ ದೃಷ್ಟಿಯಿಂದ ನೋಡಿದರೆ, ಆಪ್ಷನ್ ಖರೀದಿಯನ್ನು ಕಡಿಮೆ ಮೊತ್ತದಿಂದ
ಆರಂಭಿಸಬಹುದಾದರೂ, ಗೆಲುವಿನ ಸಾಧ್ಯತೆ ಹೆಚ್ಚಿನ ಬಾರಿ ನಮ್ಮ ಊಹೆಗೆ ನಿಲುಕದ್ದು. ಆದರೆ, ಆಪ್ಷನ್ ಮಾರಾಟಕ್ಕೆ ಹೆಚ್ಚಿನ ಬಂಡವಾಳ ಅಗತ್ಯವಿದ್ದರೂ, ಸಮಯ ಕ್ಷಯವು ಮಾರಾಟಗಾರರ ಪರವಾಗಿ ಕೆಲಸ ಮಾಡುವುದರಿಂದ ಗೆಲುವಿನ ಸಾಧ್ಯತೆ ಹೆಚ್ಚಿರುತ್ತದೆ. ಇದಕ್ಕೆ ಕಟ್ಟುನಿಟ್ಟಾದ ಅಪಾಯ ನಿರ್ವಹಣೆ ಅಗತ್ಯ. ಪ್ರತಿ ವ್ಯವಹಾರದಲ್ಲೂ ನಷ್ಟದ ಮಿತಿ, ವ್ಯವಹರಿಸುವ ಲಾಟ್‌ಗಳ ನಿಯಂತ್ರಣ ಮತ್ತು ಅಸಾಧಾರಣ ಮಾರುಕಟ್ಟೆ ಏರಿಳಿತಗಳಿಗೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸಿದಾಗ ಮಾತ್ರ ಈ ವರ್ಗದಲ್ಲಿ
ವ್ಯವಹರಿಸುವುದು ಮತ್ತು ದೀರ್ಘಾವಧಿಯಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ.

ADVERTISEMENT
ಪ್ರ

ನಾನು ಸರ್ಕಾರಿ ಕೆಲಸದಲ್ಲಿದ್ದೇನೆ. ನನಗೆ ಸುಮಾರು ₹50 ಸಾವಿರ ನಿವ್ವಳ ಆದಾಯ ಇದೆ. ಇದಲ್ಲದೆ ಬಡ್ಡಿ ಆದಾಯ ಸ್ವಲ್ಪ ಸಿಗುತ್ತದೆ. ನನಗೆ ನಿವೃತ್ತಿಗೆ 25 ವರ್ಷ ಬಾಕಿ ಇದೆ. ಮಾಸಿಕ ಖರ್ಚು ಸುಮಾರು ₹20 ಸಾವಿರ. ಒಂದು ವೇಳೆ ನನ್ನ ಪಿಂಚಣಿ ಆದಾಯವನ್ನು ನಿವೃತ್ತಿಯ ಸಮಯಕ್ಕೆ ಬಳಸದೆ ಉಳಿತಾಯ ಮಾಡುವುದಾದರೆ ಹಾಗೂ ಪ್ರಸ್ತುತ ಇರುವ ಸಂಪಾದನೆಯಲ್ಲಿ ನಿವೃತ್ತಿಯ ನಂತರದ ವೆಚ್ಚ ಭರಿಸುವ ಉದ್ದೇಶದಿಂದ ಉಳಿತಾಯ ಮಾಡುವುದಾದರೆ, ಮುಂದೆ ನಿವೃತ್ತಿಯ ತನಕ ಮಾಸಿಕ ಕನಿಷ್ಠ ಎಷ್ಟು ಮೊತ್ತ ಹೂಡಿಕೆ ಮಾಡಬೇಕು?

–ರಾಜಲಕ್ಷ್ಮೀ, ಮೈಸೂರು

ತಿಂಗಳಿಗೆ ಸುಮಾರು ₹50 ಸಾವಿರ ನಿವ್ವಳ ಆದಾಯ ಹಾಗೂ ₹20 ಸಾವಿರ ಮಾಸಿಕ ವೆಚ್ಚ ಮತ್ತು ಇನ್ನೂ 25 ವರ್ಷ ಸೇವಾ ಅವಧಿ ನಿಮಗೆ ಇರುವುದನ್ನು ಗಮನಿಸಿದರೆ, ನಿವೃತ್ತಿಯ ನಂತರದ ವೆಚ್ಚಕ್ಕೆ ಇಂದಿನ ಆದಾಯದಿಂದಲೇ ವ್ಯವಸ್ಥಿತವಾಗಿ ನಿಧಿ ಒಗ್ಗೂಡಿಸಬಹುದು.

ಪ್ರಸ್ತುತ ₹20 ಸಾವಿರ ಮಾಸಿಕ ವೆಚ್ಚವು ವರ್ಷಕ್ಕೆ ₹2.4 ಲಕ್ಷವಾಗುತ್ತದೆ. ಮುಂದಿನ 25 ವರ್ಷಗಳಲ್ಲಿ ಹಣದುಬ್ಬರವನ್ನು ಸರಾಸರಿ ಶೇ 5ರಿಂದ ಶೇ 6 ಎಂದು ಲೆಕ್ಕ ಹಾಕಿದರೆ, ನಿವೃತ್ತಿಯ ವೇಳೆಗೆ ಇದೇ ವೆಚ್ಚವು ಮಾಸಿಕ ಸುಮಾರು ₹80 ಸಾವಿರದಿಂದ ₹1 ಲಕ್ಷ ಆಗುವ ಸಾಧ್ಯತೆ ಇದೆ. ನಿವೃತ್ತಿಯ ನಂತರ 25 ವರ್ಷ ಇದೇ ಜೀವನಮಟ್ಟವನ್ನು ಕಾಪಾಡಲು ಸುಮಾರು ₹1.6–₹2 ಕೋಟಿ ನಿಧಿ
ಅಗತ್ಯವಾಗಬಹುದು.

ಈ ಗುರಿಗಾಗಿ, ದೀರ್ಘಾವಧಿಯಲ್ಲಿ ಸರಾಸರಿ ಶೇ 10ರಷ್ಟು ವಾರ್ಷಿಕ ಆದಾಯ ನೀಡುವ ಹೂಡಿಕೆಗಳನ್ನು ಪರಿಗಣಿಸಿದರೆ, ತಿಂಗಳಿಗೆ ಕನಿಷ್ಠ ₹9 ಸಾವಿರದಿಂದ ₹13 ಸಾವಿರ ಹೂಡಿಕೆ ಮಾಡುವುದು ಸಮಂಜಸ. ವೇತನ ಆದಾಯ ಹೆಚ್ಚಿದಂತೆ ಈ ಮೊತ್ತವನ್ನು ಇನ್ನಷ್ಟು ಹೆಚ್ಚಿಸಬಹುದು. ಹಣದುಬ್ಬರ ಹೆಚ್ಚುತ್ತಿರುವ ಸಂದರ್ಭದಲ್ಲಿ, ಈಕ್ವಿಟಿ ಆಧಾರಿತ ಹೂಡಿಕೆಗಳಿಗೆ (ಮ್ಯೂಚುವಲ್ ಫಂಡ್ ಎಸ್‌ಐಪಿ, ಎನ್‌ಪಿಎಸ್) ಹೆಚ್ಚಿನ ಒತ್ತು ನೀಡಿ, ನಿವೃತ್ತಿಗೆ ಸಮೀಪಿಸಿದಂತೆ ನಿಧಾನವಾಗಿ ಕಡಿಮೆ ಅಪಾಯದ ಹೂಡಿಕೆಗಳತ್ತ ಬದಲಾಯಿಸುವುದು ಸೂಕ್ತ. ಶಿಸ್ತಿನ ಹಾಗೂ ನಿರಂತರ ಹೂಡಿಕೆ ಎಲ್ಲರ ನಿವೃತ್ತಿ ಜೀವನಕ್ಕೆ ಭದ್ರತೆ ಒದಗಿಸುತ್ತದೆ.

ADVERTISEMENT
ADVERTISEMENT
ADVERTISEMENT