
ನನ್ನ ವಯಸ್ಸು 70. ನಾನು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದೇನೆ. ನಾನು ಮಕ್ಕಳಿಗೆ (ಮನೆಯವರಿಗೆ) ತಿಳಿಯದಂತೆ ಸಹಕಾರಿ ಬ್ಯಾಂಕ್‌ವೊಂದರಲ್ಲಿ ₹10 ಲಕ್ಷ ನಿಶ್ಚಿತ ಠೇವಣಿ (ಎಫ್.ಡಿ) ಮಾಡಿದ್ದೇನೆ. ಅದು ವರ್ಷಕ್ಕೊಮ್ಮೆ ನವೀಕರಣ ಆಗುತ್ತದೆ. ಅದರ ಬಡ್ಡಿಯನ್ನು ನಾನು ತೆಗೆದುಕೊಳ್ಳದೆ ಅಸಲಿಗೆ ಸೇರುವಂತೆ ಮುಂದುವರಿಸಿದ್ದೇನೆ. ನನಗೆ ಇಬ್ಬರು ಗಂಡು ಮಕ್ಕಳಿದ್ದು, ಇಬ್ಬರು ಬೇರೆ ಬೇರೆ ಮನೆಯಲ್ಲಿದ್ದಾರೆ. ನಾವು ದೊಡ್ಡ ಮಗನ ಜೊತೆಯಲ್ಲಿದ್ದೇವೆ.
ನಮಗೆ ಮನೆ ಇದ್ದು, ಅದರಿಂದ ₹15 ಸಾವಿರ ಬಾಡಿಗೆ ಬರುತ್ತದೆ. ಅದು ನಮ್ಮ ಖರ್ಚಿಗೆ ಸಾಕು. ಮಕ್ಕಳಲ್ಲಿ ಇಬ್ಬರೂ ಅವರಿಗೆ ತಕ್ಕಂತೆ, ಅಂದರೆ ಮೂಲ ಅಗತ್ಯಗಳಿಗೆ ಬರವಿಲ್ಲದಂತೆ ಇದ್ದಾರೆ. ಈಗ ನನ್ನ ಚಿಕ್ಕ ಮಗ ಮನೆ ಕಟ್ಟಿಸುತ್ತಿದ್ದಾನೆ. ನನ್ನ ಒಂದು ಎಫ್.ಡಿ ಮುಂದಿನ ಏಪ್ರಿಲ್ ತಿಂಗಳಲ್ಲಿ ಮರಳಿ ಸಿಗುತ್ತದೆ. ಅದನ್ನು ನಾನು ಅವನಿಗೆ ಕೊಡಬೇಕು ಎಂದುಕೊಂಡಿದ್ದೇನೆ. ನಾನು ಸೇವೆಯಲ್ಲಿ ಇದ್ದಾಗ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುತ್ತಿದ್ದೆ. ಇತ್ತೀಚೆಗೆ ಮಾಡುತ್ತಿಲ್ಲ. ನಾನು ಈ ಮೊತ್ತ ಕೊಡಬೇಕೆಂದರೆ ಅದು ಮೊದಲ ಹಂತದಲ್ಲಿ ನೇರವಾಗಿ ನನ್ನ ಖಾತೆಗೆ ಬರುತ್ತದೆ. ನಾನು ಅದನ್ನು ನಂತರ ಅವನಿಗೆ ಹೇಗೆ ಕೊಡಬೇಕು. ಏಕೆಂದರೆ ಖಾತೆಯಲ್ಲಿ ಪಾನ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆ ಎಲ್ಲವೂ ಇರುತ್ತದೆ.
ನನ್ನ ಸಮಸ್ಯೆ ಏನೆಂದರೆ, ಅದನ್ನು ಹಂತ–ಹಂತವಾಗಿ ಕೊಡಬೇಕೇ ಅಥವಾ ಒಟ್ಟಿಗೆ ಕೊಡಬಹುದೇ? ಇದರಿಂದ ನನಗಾಗಲೀ ಅವನಿಗಾಗಲಿ ಮುಂದೆ ಸಮಸ್ಯೆ ಬರಬಹುದೇ? ಇದಕ್ಕೆ ಪರಿಹಾರ ತಿಳಿಸಿ.
ನೀವು ಪ್ರಶ್ನೆಯಲ್ಲಿ ವಿವರವಾಗಿ ನಿಮ್ಮ ಮಾಹಿತಿ ನೀಡಿದ್ದೀರಿ. ಮೊದಲನೆಯದಾಗಿ, ನೀವು ನಿಮ್ಮ ಸ್ವಂತ ಹಣವನ್ನು ನಿಮ್ಮ ಮಗನಿಗೆ ನೀಡುವುದು ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 56(2)(x) ರ ಪ್ರಕಾರ, ನಿರ್ದಿಷ್ಟ ಸಂಬಂಧಿಕರಿಂದ ಪಡೆಯುವ ಉಡುಗೊರೆಗಳಿಗೆ ತೆರಿಗೆ ವಿನಾಯಿತಿ ಇದೆ. ಹೀಗಾಗಿ ತಂದೆ, ಮಗನಿಗೆ ನೀಡುವ ಹಣ ‘ಉಡುಗೊರೆ’ ಆಗಿ ಪರಿಗಣಿಸಲಾಗುತ್ತದೆ ಮತ್ತು ಅದು ಮಗನ ಕೈಯಲ್ಲಿ ತೆರಿಗೆಗೆ ಒಳಪಡುವುದಿಲ್ಲ. ಹಾಗೆಯೇ, ನಿಮ್ಮ ಕೈಯಲ್ಲೂ ಮೂಲಧನ ನೀಡುವಿಕೆಗೆ ತೆರಿಗೆ ಬಾಧ್ಯತೆ ಇಲ್ಲ. ಆದರೆ ಎಫ್.ಡಿ. ಮೇಲಿನ ಬಡ್ಡಿ ಆದಾಯವು ನಿಮ್ಮ ಆದಾಯವಾಗಿದ್ದು, ಅದು ನಿಮ್ಮ ಒಟ್ಟು ಆದಾಯಕ್ಕೆ ಸೇರಿ ತೆರಿಗೆ ವ್ಯಾಪ್ತಿಗೆ ಬರಬಹುದು. ಇದು ನಿಮ್ಮ ಒಟ್ಟು ಆದಾಯ ಮಾಹಿತಿಯ ಆಧಾರದಲ್ಲಿ ನಿರ್ಣಯಿಸಲ್ಪಡಬೇಕಾದ ವಿಚಾರ. ಈ ಬಗ್ಗೆ ಪ್ರತ್ಯೇಕ ಅಭಿಪ್ರಾಯ ಪಡೆದುಕೊಳ್ಳಿ.
ಇನ್ನು ಹಣವನ್ನು ಹಂತ ಹಂತವಾಗಿ ಕೊಡುವುದೇ ಅಥವಾ ಒಟ್ಟಿಗೆ ಕೊಡುವುದೇ ಎಂಬ ವಿಚಾರದಲ್ಲಿ ಕಾನೂನಾತ್ಮಕವಾಗಿ ದೊಡ್ಡ ವ್ಯತ್ಯಾಸವಿಲ್ಲ. ಕಾರಣ, ಸಂಬಂಧಿಕರ ನಡುವೆ ನಡೆಯುವ ಹಣಕಾಸಿನ ವಿಚಾರವಾದ ಕಾರಣ ಎಷ್ಟು ಹಂತದಲ್ಲಿ ಹಣ ವರ್ಗಾವಣೆಯಾಗುತ್ತದೆ ಎನ್ನುವುದು ಇಲ್ಲಿ ಗೌಣ, ಇಲ್ಲಿ ಸಂಬಂಧವಷ್ಟೇ ಮುಖ್ಯ. ಆದಾಗ್ಯೂ, ಬ್ಯಾಂಕ್ ವ್ಯವಹಾರಗಳು ಸಂಪೂರ್ಣವಾಗಿ ದಾಖಲಾಗುವಂತೆ, ನಿಮ್ಮ ಖಾತೆಯಿಂದ ಮಗನ ಖಾತೆಗೆ ನೇರವಾಗಿ ಆನ್‌ಲೈನ್ ಮೂಲಕ ಅಥವಾ ಚೆಕ್ ಮೂಲಕ ನೀಡುವುದು ಸೂಕ್ತ. ನಗದು ರೂಪದಲ್ಲಿ ಈ ಮೊತ್ತ ನೀಡುವುದು ಸಮಂಜಸವಲ್ಲ. ನಿಮ್ಮ ಹಣದ ವರ್ಗಾವಣೆಗೆ ಮತ್ತಷ್ಟು ಪುಷ್ಟಿ ನೀಡುವ ‘ಗಿಫ್ಟ್ ಡೀಡ್’ ಎಂಬ ಸರಳ ಪತ್ರವನ್ನು ದಾಖಲಿಸಿ, ಅದು ನಿಮ್ಮ ಸ್ವಇಚ್ಛೆಯಿಂದ, ಯಾವುದೇ ಪ್ರತಿಫಲವಿಲ್ಲದೆ ನೀಡಿದ ಉಡುಗೊರೆ ಎಂದು ಉಲ್ಲೇಖಿಸಿ ಹಣ ವರ್ಗಾವಣೆ ಮಾಡಿ. ಇದು ಕಡ್ಡಾಯವಲ್ಲದಿದ್ದರೂ, ಭವಿಷ್ಯದಲ್ಲಿ ವಿವಾದ ತಪ್ಪಿಸುವಲ್ಲಿ ನೆರವಾಗುತ್ತದೆ. ಆದ್ದರಿಂದ, ತಂದೆ-ಮಕ್ಕಳ ಪರಸ್ಪರ ಹಣ ವರ್ಗಾವಣೆಗೆ ಯಾವುದೇ ಮಿತಿ ಇಲ್ಲದೆ ಸಂಪೂರ್ಣ ವಿನಾಯಿತಿ ದೊರೆಯುತ್ತದೆ.
ನಾನು ಕೆಲವು ವರ್ಷಗಳಿಂದ ಆರ್‌ಇಐಟಿಯಲ್ಲಿ ಹೂಡಿಕೆ ಮಾಡಬೇಕು ಎಂದು ಅಂದುಕೊಂಡಿದ್ದೇನೆ. ಆದರೆ ವಾಸ್ತವದಲ್ಲಿ ಇನ್ನೂ ಹೂಡಿಕೆ ಮಾಡಿಲ್ಲ. ರಿಯಲ್ ಎಸ್ಟೇಟ್ ಹೂಡಿಕೆಯಿಂದ ಬಾಡಿಗೆ ಮೊತ್ತ ಸಿಗುವಂತೆಯೇ, ಇಲ್ಲಿಯೂ ಸಿಗುತ್ತದೆ ಎಂದು ತಿಳಿದುಕೊಂಡಿದ್ದೇನೆ. ಆದರೆ ಆರ್‌ಇಐಟಿಗಳ ಮೇಲಿನ ಹೂಡಿಕೆಯಿಂದ ಸಿಗುವ ವರಮಾನಕ್ಕೆ ತೆರಿಗೆ ಲೆಕ್ಕಾಚಾರ ಭಿನ್ನವಾಗಿ, ಸಂಕೀರ್ಣವಾಗಿ ಇರುತ್ತದೆ ಎಂದು ಹೇಳಲಾಗಿದೆ. ಇದರ ಬಗ್ಗೆ ವಿವರ ನೀಡಿ. ಹಾಗೆಯೇ, ಭೌತಿಕ ರಿಯಲ್ ಎಸ್ಟೇಟ್ ಮೇಲಿನ ಹೂಡಿಕೆ ಸೂಕ್ತವೋ, ಆರ್‌ಇಐಟಿಗಳ ಮೇಲಿನ ಹೂಡಿಕೆ ಸೂಕ್ತವೋ ಎಂಬುದನ್ನು ತಿಳಿಸಿ.
ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳಲ್ಲಿನ (ಆರ್‌ಇಐಟಿ) ಹೂಡಿಕೆ ಎಂದರೆ ಆದಾಯ ತರುವ ವಾಣಿಜ್ಯ ಆಸ್ತಿಗಳಲ್ಲಿ ಹೂಡಿಕೆ ಮಾಡಲು ರೂಪುಗೊಂಡಿರುವ ಸಮೂಹ ಹೂಡಿಕೆ ವ್ಯವಸ್ಥೆ. ಇಂತಹ ಟ್ರಸ್ಟ್‌ಗಳು, ಮ್ಯೂಚುಯಲ್ ಫಂಡ್ ಮಾದರಿಯಲ್ಲಿ ಕಾರ್ಯನಿರ್ವಹಿಸಿ, ಅನೇಕ ಹೂಡಿಕೆದಾರರಿಂದ ಸಂಗ್ರಹಿಸಲಾದ ಬಂಡವಾಳವನ್ನು ಕಚೇರಿ ಸಂಕೀರ್ಣಗಳು, ಐ.ಟಿ ಪಾರ್ಕ್‌ಗಳು, ಶಾಪಿಂಗ್ ಮಾಲ್‌ಗಳು, ಹೋಟೆಲ್‌ಗಳು ಮತ್ತು ಗೋದಾಮುಗಳಂತಹ ದೊಡ್ಡ ಮಟ್ಟದ ವಾಣಿಜ್ಯ ಆಸ್ತಿಗಳಲ್ಲಿ ಹೂಡಿಕೆ ಮಾಡುವ ಉದ್ದೇಶದಿಂದ ಸ್ಥಾಪನೆಗೊಂಡಿರುತ್ತವೆ. ಇವುಗಳನ್ನು ಉದ್ದೇಶಿತ ವಿಶೇಷ ಕಂಪನಿಗಳ ಮೂಲಕ ಟ್ರಸ್ಟ್‌ಗಳು ನಡೆಸುತ್ತವೆ. ಇವು ಆಸ್ತಿಗಳನ್ನು ಖರೀದಿಸಿ, ಅಭಿವೃದ್ಧಿಪಡಿಸಿ ಮತ್ತು ನಿರ್ವಹಿಸಿ, ಅವುಗಳಿಂದ ನಿರಂತರ ಬಾಡಿಗೆ ಆದಾಯವನ್ನು ಗಳಿಸಿ ಹೂಡಿಕೆದಾರರಿಗೆ ನೀಡುವುದು ಇಂತಹ ಟ್ರಸ್ಟ್‌ಗಳ ಮುಖ್ಯ ಉದ್ದೇಶವಾಗಿದೆ.
ಆರ್‌ಇಐಟಿ ನಿಯಮಾವಳಿಯ ಪ್ರಕಾರ, ಲಭಿಸುವ ನಿವ್ವಳ ವಿತರಣಾಯೋಗ್ಯ ಆದಾಯದ ಕನಿಷ್ಠ ಶೇ 90ರಷ್ಟು ಮೊತ್ತವನ್ನು ಯೂನಿಟ್ ಹೋಲ್ಡರ್‌ಗಳಿಗೆ ಹಂಚಿಕೆ ಮಾಡಬೇಕು. ಹೀಗಾಗಿ ಹೂಡಿಕೆದಾರರಿಗೆ ಬಾಡಿಗೆ ಆದಾಯದಿಂದ ಲಾಭಾಂಶ ಅಥವಾ ಬಡ್ಡಿ ರೂಪದಲ್ಲಿ ನಿಯಮಿತ ಆದಾಯ ದೊರೆಯುತ್ತದೆ. ಜೊತೆಗೆ, ಷೇರುಪೇಟೆಯಲ್ಲಿ ಆರ್‌ಇಐಟಿ ಯೂನಿಟ್‌ಗಳ ಬೆಲೆ ಏರಿಕೆಯಿಂದ ಬಂಡವಾಳ ವೃದ್ಧಿ ರೂಪದಲ್ಲಿಯೂ ಲಾಭ ಗಳಿಸುವ ಸಾಧ್ಯತೆ ಇರುತ್ತದೆ. ಇದು ಮಾರುಕಟ್ಟೆ ಆಧಾರಿತವಾಗಿದೆ.
ಈ ಟ್ರಸ್ಟ್‌ಗಳಿಗೆ ನೇರವಾಗಿ ಸಿಗುವ ಬಡ್ಡಿ, ಬಾಡಿಗೆ ಅಥವಾ ಡಿವಿಡೆಂಡ್ ಆದಾಯಕ್ಕೆ ಆದಾಯ ತೆರಿಗೆಯ ಸೆಕ್ಷನ್ 10 (ಎಫ್‌ಸಿ), (ಎಫ್‌ಸಿಎ), (ಎಫ್‌ಡಿ) ಇದರಡಿ ವಿನಾಯಿತಿ ಇದೆ. ಇತರೆ ಆದಾಯಕ್ಕೆ ಅವೂ ತೆರಿಗೆ ಕಟ್ಟಬೇಕು. ಹೀಗಾಗಿ, ಹೂಡಿಕೆದಾರರ ಕೈಗೆ ಈ ವಿನಾಯಿತಿಗೊಳಗಾದ ಮೊತ್ತ ವರ್ಗಾಯಿಸುವಾಗ ತೆರಿಗೆ ಕಡಿತ ಅನ್ವಯಿಸುತ್ತದೆ ಹಾಗೂ ವೈಯಕ್ತಿಕ ತೆರಿಗೆ ದರದಲ್ಲಿ ಒಟ್ಟಾರೆ ಬಾಕಿ ತೆರಿಗೆಯನ್ನು ರಿಟರ್ನ್ಸ್ ಸಲ್ಲಿಸುವಾಗ ಪಾವತಿಸಬೇಕಾಗುತ್ತದೆ. ಉದಾಹರಣೆಗೆ, ಟ್ರಸ್ಟ್‌ಗಳು ಬಡ್ಡಿ, ಡಿವಿಡೆಂಡ್ ಹಾಗೂ ಬಾಡಿಗೆ ಮೊತ್ತ ಪಾವತಿಸಿದಾಗ ಶೇ 10ರ ದರದಲ್ಲಿ ತೆರಿಗೆ ಕಡಿತ ಮಾಡುತ್ತವೆ. ಇನ್ನು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ ಯೂನಿಟ್‌ಗಳನ್ನು ಮಾರಾಟ ಮಾಡಿದಾಗ ಉಂಟಾಗುವ ಲಾಭದ ಮೇಲೆ ಹೂಡಿಕೆಯ ಅವಧಿಯನ್ನು ಅವಲಂಬಿಸಿ, ಅಲ್ಪಾವಧಿ ಅಥವಾ ದೀರ್ಘಾವಧಿ ಬಂಡವಾಳ ಲಾಭ ತೆರಿಗೆ (ಶೇ 20 ಅಥವಾ ಶೇ 12.50) ಅನ್ವಯಿಸುತ್ತದೆ.
ಭಾರತದಲ್ಲಿ ಆರ್‌ಇಐಟಿ ಯೂನಿಟ್‌ಗಳು ಎನ್‌ಎಸ್‌ಇ ಮತ್ತು ಬಿಎಸ್‌ಇಗಳಲ್ಲಿ ಲಿಸ್ಟ್ ಆಗಿರುವುದರಿಂದ, ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯ ಮೂಲಕ ಷೇರುಗಳನ್ನು ಖರೀದಿಸುವಂತೆಯೇ ಸುಲಭವಾಗಿ ಹೂಡಿಕೆ ಮಾಡಬಹುದು. ಕಡಿಮೆ ಬಂಡವಾಳದಲ್ಲಿಯೇ ಉನ್ನತ ಮಟ್ಟದ ವಾಣಿಜ್ಯ ಆಸ್ತಿಗಳಲ್ಲಿ ಭಾಗಿಯಾಗಲು ಇದು ಪರೋಕ್ಷ ಮಾರ್ಗವಾಗಿದೆ. ಒಟ್ಟಿನಲ್ಲಿ ಈ ಹೂಡಿಕೆಯ ಒಟ್ಟಾರೆ ಲಾಭ–ನಷ್ಟಗಳು ವಾಣಿಜ್ಯ ಸಂಕೀರ್ಣಗಳ ಅಗತ್ಯ-ಪೂರೈಕೆಯೊಡನೆ ಮಿಳಿತವಾಗಿದೆ ಎಂಬುದು ತಿಳಿದಿರಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.