ನಾನು ವಿದೇಶಿ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಬೇಕೆಂದಿದ್ದೇನೆ. ಅದಕ್ಕೆ ಖಾತೆ ತೆರೆಯುವುದು, ವಿದೇಶಿ ಕರೆನ್ಸಿಯಲ್ಲಿ ಹಣ ವರ್ಗಾಯಿಸುವುದು, ಹಣ ವರ್ಗಾವಣೆ ವೆಚ್ಚ ಇತ್ಯಾದಿ ಅಗತ್ಯ ಇರುವುದರಿಂದ ಈಗ ಸುಲಭವಾಗಿ ಭಾರತದಲ್ಲೇ ಇರುವ ಮ್ಯೂಚುವಲ್ ಫಂಡ್ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ಲಾಭಗಳಿಸಬಹುದೆಂದು ನನ್ನ ಯೋಚನೆ. ಈ ತೀರ್ಮಾನ ಉತ್ತಮವೇ?
ವಿದೇಶಿ ಕಂಪನಿಗಳಲ್ಲಿ ನೇರ ಹೂಡಿಕೆ ಮಾಡಲು ಹಣವನ್ನು ವಿದೇಶಕ್ಕೆ ಕಳುಹಿಸುವುದು, ಟ್ರೇಡಿಂಗ್ ಖಾತೆ ತೆರೆಯುವುದು, ವಿದೇಶಿ ಕರೆನ್ಸಿ ಪರಿವರ್ತನೆ ಮುಂತಾದ ಪೂರ್ವತಯಾರಿಗಳು ಬೇಕಾಗುತ್ತವೆ. ಇದರಲ್ಲಿ ಬ್ಯಾಂಕ್ ಶುಲ್ಕ ಮತ್ತು ತೆರಿಗೆ ಸಂಬಂಧಿತ ವಿಚಾರಗಳೂ ಇವೆ. ಇವೆಲ್ಲಕ್ಕಿಂತ ಮುಖ್ಯವಾಗಿ, ನೇರವಾಗಿ ಹೂಡಿಕೆ ಮಾಡಿದರೆ, ಕಂಪನಿಗಳನ್ನು ಆಯ್ಕೆ ಮಾಡುವುದು, ಅವುಗಳ ಆರ್ಥಿಕ ವರದಿ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯ ಆಳವಾದ ಸಮೀಕ್ಷೆ ಮಾಡಿ ಹೂಡಿಕೆ ಮಾಡುವ ಜವಾಬ್ದಾರಿ ಹೂಡಿಕೆದಾರನ ಮೇಲಿರುತ್ತದೆ.
ಇದರ ಬದಲು ಭಾರತದಲ್ಲೇ ಲಭ್ಯವಿರುವ ಅಂತರರಾಷ್ಟ್ರೀಯ ಮ್ಯೂಚುವಲ್ ಫಂಡ್‌ಗಳು ಅಥವಾ ಇಂಡೆಕ್ಸ್ ಫಂಡ್‌ಗಳಲ್ಲಿ (ಉದಾ: ನಾಸ್ಡ್ಯಾಕ್ 100, ಎಸ್&ಪಿ 500 ಇತ್ಯಾದಿ ಇಂಡೆಕ್ಸ್ ಫಂಡ್‌ಗಳು) ಹೂಡಿಕೆ ಮಾಡಿದರೆ, ವಿದೇಶಿ ಮಾರುಕಟ್ಟೆಗಳ ಲಾಭವನ್ನು ಸುಲಭವಾಗಿ ಪಡೆಯಬಹುದು. ಇದರಿಂದ ವಿದೇಶಿ ಷೇರುಪತ್ರಗಳ ವೈವಿಧ್ಯತೆ, ಪರಿಣಿತ ತಜ್ಞರ ನಿರ್ವಹಣೆಯ ಪ್ರಯೋಜನ ದಕ್ಕುತ್ತದೆ. ವಿದೇಶಿ ಹಣಕಾಸು ವ್ಯವಹಾರದ ವೆಚ್ಚ ಇರುವುದಿಲ್ಲ ಮತ್ತು ಹೂಡಿಕೆ ಪ್ರಕ್ರಿಯೆ ಸರಳವಾಗಿರುತ್ತದೆ. ಇದು ಸಾಮಾನ್ಯ ಮ್ಯೂಚುವಲ್ ಫಂಡ್‌ಗಳಂತೆ ಇರುತ್ತದೆ. ಆದ್ದರಿಂದ ಪ್ರಾರಂಭಿಕ ಹೂಡಿಕೆದಾರರಿಗೆ ಇಂತಹ ಮ್ಯೂಚುವಲ್ ಫಂಡ್‌ಗಳು ಅನುಕೂಲಕರ ಆಯ್ಕೆಯಾಗುತ್ತವೆ. ವಿದೇಶಿ ಮಾರುಕಟ್ಟೆಯ ಹಾಗೂ ಆಯಾ ಫಂಡ್‌ಗಳು ಮಾಡುವ ಹೂಡಿಕೆ ನಿರ್ಣಯ, ಅಥವಾ ಆಯಾ ಇಂಡೆಕ್ಸ್ ಗಳಿಕೆಯ ಮೇಲೆ ನಿಮ್ಮ ಲಾಭ ನಿರ್ಧಾರ ಆಗುತ್ತದೆ.
ನಾನು ಸರ್ಕಾರಿ ನೌಕರ. ನನ್ನ ವಾರ್ಷಿಕ ಆದಾಯ ₹4 ಲಕ್ಷ, ವಯಸ್ಸು 26 ವರ್ಷ. ನಾನು ಇತ್ತೀಚಿಗೆ ಪಾಲಿಸಿ ಬಜಾರ್ ಆ್ಯಪ್‌ನಲ್ಲಿ ಎಕ್ಸಿಸ್ ಮ್ಯಾಕ್ಸ್ ಲೈಫ್ ಇನ್ವೆಸ್ಟ್ಮೆಂಟ್ ಪ್ಲ್ಯಾನ್ ಕ್ಯಾಪಿಟಲ್ ಗ್ಯಾರಂಟಿ ಸ್ಕೀಮ್‌ನಲ್ಲಿ ₹5,000 ಹೂಡಿಕೆ ಮಾಡಿದ್ದೇನೆ. ಐದು ವರ್ಷದವರೆಗೆ ಹೂಡಿಕೆ ಮಾಡಿದ್ದೇನೆ. ಈ ಹೂಡಿಕೆ ಯೋಜನೆ ಸರಿಯಾಗಿದೆಯೇ ಹಾಗೂ ನಾನು ಮಾಡಿದ ಹೂಡಿಕೆಯು ಲಾಭ ಕೊಡುವುದೇ?
ಪ್ರತಿ ಹೂಡಿಕೆಗೂ ಅದರದ್ದೇ ಆದ ಗುಣ, ಲಕ್ಷಣಗಳಿರುತ್ತವೆ. ಇಲ್ಲಿ ಹೂಡಿಕೆ ಯಾವ ಸಂಸ್ಥೆಯದ್ದು ಎಂಬುದು ಮುಖ್ಯವಲ್ಲ, ಬದಲಾಗಿ ಹೂಡಿಕೆದಾರರಿಗೆ ಸಿಗುವ ಲಾಭ ಹಾಗೂ ದೀರ್ಘಾವಧಿ ಪ್ರಯೋಜನಗಳು ಮುಖ್ಯ. ಆದರೆ ನೀವು ಮೇಲೆ ಉಲ್ಲೇಖಿಸಿರುವ ಹೂಡಿಕೆ, ಕ್ಯಾಪಿಟಲ್ ಗ್ಯಾರಂಟಿ ಸ್ಕೀಮ್ ಎಂಬುದಾಗಿ ತಿಳಿಸಿದ್ದೀರಿ. ಇಂತಹ ಯೋಜನೆಗಳು, ಮಾರುಕಟ್ಟೆಯಲ್ಲಿ ವಿಮೆ ಮತ್ತು ಹೂಡಿಕೆಗಳನ್ನು ಒಟ್ಟಿಗೆ ಸೇರಿಸಿ ಪರಿಚಯಿಸುವ ಉತ್ಪನ್ನಗಳಾಗಿವೆ. ಇಲ್ಲಿ ನೀವು ಮುಂದಿನ ಕೆಲವು ವರ್ಷಗಳ ಕಾಲ ನಿರಂತರ ಹೂಡಿಕೆ ಮಾಡುತ್ತೀರಿ. ಸಹಜ ಸ್ಥಿತಿಯಲ್ಲಿ, ನಿಮ್ಮ ಅಷ್ಟು ವರ್ಷಗಳ ಮೂಲಧನಕ್ಕೆ ಸುರಕ್ಷತೆ ಇದ್ದಾಗ ಮಾತ್ರ ಯಾವುದೇ ವಿಮಾ ಹೂಡಿಕೆದಾರ ಆಕರ್ಷಿತನಾಗಿ ಅದನ್ನು ಒಪ್ಪಿಕೊಳ್ಳಲು ಸಾಧ್ಯ. ಇಲ್ಲವಾದರೆ, ಇದೂ ಕೂಡಾ ನೇರ ಷೇರು ಮಾರುಕಟ್ಟೆಯ ವ್ಯವಹಾರದಂತಾಗಿ ಲಾಭ-ನಷ್ಟದಲ್ಲಿ ವ್ಯವಹರಿಸುವ ಯೋಜನೆಯಾಗುತ್ತದೆ.
ಸಾಮಾನ್ಯವಾಗಿ ಇಂತಹ ವಿಮಾ ಯೋಜನೆಗಳು ವಿಮಾದಾರರಿಗೆ, ಅವರ ಹೂಡಿಕೆ ಮೊತ್ತದ ವೃದ್ಧಿಯ ಉದ್ದೇಶಕ್ಕಿಂತ ಅವರು ಅಥವಾ ಅವರ ಕುಟುಂಬ ಸದಸ್ಯ ದುರ್ದೈವವಶಾತ್ ಮರಣ ಹೊಂದಿದರೆ, ಅದಕ್ಕೆ ಪ್ರತಿಯಾಗಿ ಪೂರ್ವ ನಿರ್ಧರಿತ ಮೊತ್ತ ತಮ್ಮ ಕುಟುಂಬ ಸದಸ್ಯರಿಗೆ ಸಿಗುತ್ತದೆ ಎಂಬುದು ನಿರೀಕ್ಷೆ ಇರುತ್ತದೆ. ಒಂದು ವೇಳೆ ಯಾವುದೇ ಸಮಸ್ಯೆ ಇರದೆ, ವಿಮಾ ಅವಧಿ ಮುಗಿದೊಡನೆ, ಹೂಡಿಕೆ ಮಾಡಿದ ಹಣದೊಡನೆ, ಆಯಾ ಯೋಜನೆಯ ನಿಯಮಾವಳಿಗೆ ಸಂಬಂಧಿಸಿ ಒಂದಷ್ಟು ಲಾಭಾಂಶ ಅಥವಾ ಬೋನಸ್ ಕೂಡಾ ಸಿಗಬೇಕಾದುದು ಸಹಜ. ಇದು ಸಾಮಾನ್ಯ ಯೋಜನೆಯಲ್ಲಿ ನಿಮ್ಮ ವಾರ್ಷಿಕ ವಿಮಾ ನಿರ್ವಹಣೆ ವೆಚ್ಚ ಇತ್ಯಾದಿ ಕಳೆದುಳಿದ ಲಾಭದ ಮೊತ್ತ. ಇದಕ್ಕೆ ಪರ್ಯಾಯವಾಗಿ, ನೀವು ನಿಮ್ಮ ಹಣವನ್ನು ಯಾವುದೇ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಯೋಜನೆಗಳಲ್ಲಿ ವಿನಿಯೋಗಿಸಿದ್ದರೆ, ಆವಧಿ ಮುಗಿದೊಡನೆ ಆ ಸಮಯದ ಮಾರುಕಟ್ಟೆ ಮೌಲ್ಯದ ಮೇಲಿನ ಲಾಭವನ್ನೂ ನೀಡಲಾಗುತ್ತದೆ. ಇದು ನಿಮ್ಮ ಮೂಲ ವಾರ್ಷಿಕ ವಿಮಾ ಮೊತ್ತವಲ್ಲದೆ, ಹೆಚ್ಚುವರಿ ಲಾಭವಾಗಿರುತ್ತದೆ. ಈ ಅವಧಿಯಲ್ಲಿ ನಿಮಗೆ ಸಿಗುವ ವಿಮಾ ಭದ್ರತೆಗೆ ಸಂಬಂಧಿಸಿ, ಅಗತ್ಯ ವೆಚ್ಚಗಳನ್ನೂ ಅದರಲ್ಲೇ ಸರಿದೂಗಿಸಲಾಗುತ್ತದೆ.
ನಿಮ್ಮ ವಿಚಾರದಲ್ಲೂ ಈ ಎರಡು ವಿಚಾರಗಳನ್ನು ಗಮನದಲ್ಲಿಟ್ಟು ಹೂಡಿಕೆಯ ಪರಾಮರ್ಶೆ ಅಗತ್ಯ. ನಿಮ್ಮ ಮೂಲ ಉದ್ದೇಶ ಜೀವ ವಿಮೆಯಾಗಿದ್ದು, ನಿಮ್ಮ ಅಸಲು ಭದ್ರವಾಗಿದ್ದರೆ ಹಾಗೂ ಬರುವ ಲಾಭ ಎಷ್ಟಿದ್ದರೂ ಸಾಕೆಂದಾದರೆ (ಶೇ 4-6 ಲಾಭ) ಅದು ಮೂಲತಃ ವಿಮಾ ಹೂಡಿಕೆ. ಅದರ ಬದಲು, ನೀವು ಇತರ ಮಾರುಕಟ್ಟೆ ಹೂಡಿಕೆ ಲಾಭಕ್ಕೆ (ಮ್ಯೂಚುವ ಫಂಡ್, ಈಕ್ವಿಟಿ ವಿಭಾಗದ ಹೂಡಿಕೆ) ಈ ಯೋಜನೆಯಲ್ಲಿ ಸಿಗುವ ಮೊತ್ತವನ್ನು ತುಲನೆ ಮಾಡಿ ನೋಡುವುದಾದರೆ, ನಿಮ್ಮ ಉದ್ದೇಶ ವಿಮಾ ಸೌಲಭ್ಯ ಪಡೆಯುವುದಕ್ಕಿಂತ ಲಾಭ ವೃದ್ಧಿಸುವುದೇ ಆಗಿರುತ್ತದೆ.
ಹೀಗಾಗಿ, ನೀವು ನೀಡಿದ ಮಾಹಿತಿಯಂತೆ ಇದು ಅಸಲು ಭದ್ರತೆ ಇರುವ ಯೋಜನೆ ಎಂದು ಗೊತ್ತಾಗುತ್ತದೆ. ಸಮತೋಲಿತ ಲಾಭ ಹಾಗೂ ಜೀವ ವಿಮಾ ಭದ್ರತೆ ಎರಡೂ ಇರುವ ಯೋಜನೆ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ. ಈ ಮಾಹಿತಿಯನ್ನು ನೀವು ನಿಮ್ಮ ಪಾಲಿಸಿ ಬಾಂಡ್ ಮೂಲಕ ಕೂಡಾ ತಿಳಿಯಬಹುದು ಅಥವಾ ಆಯಾ ಗ್ರಾಹಕ ಕೇಂದ್ರವನ್ನು ಸಂಪರ್ಕಿಸಿ ತಿಳಿಯಬಹುದು. ಇನ್ನು ಭವಿಷ್ಯದ ಲಾಭದ ಬಗ್ಗೆ, ಈ ಸ್ಕೀಂ ಆಯಾ ಸಮಯದ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರವಾಗುತ್ತದೆ. ಹೀಗಾಗಿ ನಿಮ್ಮ ನಿರ್ಧಾರ ಸರಿ ಅಥವಾ ತಪ್ಪು ಎನ್ನುವ ವಿಚಾರಕ್ಕಿಂತ, ಮೇಲಿನ ಮಾಹಿತಿಯಂತೆ, ನಿಮ್ಮ ಉದ್ದೇಶ ಏನೆಂಬುದರ ಮೇಲೆ ನಿಮ್ಮ ಹೂಡಿಕೆಯ ಗುಣಮಟ್ಟ ನಿರ್ಧಾರವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.