ನಾನು ಕೆಲ ವರ್ಷಗಳ ಹಿಂದೆ ಇಎಲ್‌ಎಸ್‌ಎಸ್ ಮ್ಯೂಚುವಲ್ ಫಂಡ್‌ನಲ್ಲಿ ಹಣ ತೊಡಗಿಸಲು ಆರಂಭಿಸಿದೆ. ಆಗ ನನಗೆ ಅದರಿಂದ ಆದಾಯ ತೆರಿಗೆ ಉಳಿತಾಯವಾಗುತ್ತಿತ್ತು. ವರ್ಷಕ್ಕೆ ಈ ಬಗೆಯ ಫಂಡ್‌ನಲ್ಲಿ ನಾನು ₹18,000 ತೊಡಗಿಸುತ್ತಿದ್ದೆ. ಆದರೆ ಈಗ ಕೇಂದ್ರ ಸರ್ಕಾರವು ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಿ ₹12 ಲಕ್ಷದವರೆಗೆ ಆದಾಯ ಹೊಂದಿರುವವರಿಗೆ ತೆರಿಗೆ ಇಲ್ಲ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ, ಈ ಇಎಲ್‌ಎಸ್‌ಎಸ್ ಹೂಡಿಕೆಯ ಪ್ರಸ್ತುತತೆಯ ಬಗ್ಗೆ ಪ್ರಶ್ನೆ ಉದ್ಭವವಾಗಿದೆ. ನನ್ನ ವರಮಾನ ₹12 ಲಕ್ಷಕ್ಕಿಂತ ಕಡಿಮೆಯೇ ಇದೆ. ಆದ್ದರಿಂದ ನನಗೆ ಆದಾಯ ತೆರಿಗೆ ಹೊಣೆ ಇಲ್ಲ. ಹೀಗಾಗಿ ನಾನು ಈ ಫಂಡ್‌ನಲ್ಲಿ ಹೂಡಿಕೆ ಮುಂದುವರಿಸುವುದು ಎಷ್ಟು ಸೂಕ್ತ ಎಂಬುದನ್ನು ತಿಳಿಯಲು ಇಚ್ಛಿಸುತ್ತೇನೆ.
–ದಿವಾಕರ ಡಿ. ಬೈಂದೂರು
ಕೇಂದ್ರ ಸರ್ಕಾರವು ಇತ್ತೀಚಿನ ಬಜೆಟ್‌ನಲ್ಲಿ ಹೊಸ ಆದಾಯ ತೆರಿಗೆ ವ್ಯವಸ್ಥೆಯಡಿ ₹12 ಲಕ್ಷದವರೆಗೆ ಆದಾಯ ಹೊಂದಿರುವವರಿಗೆ ಈ ತೆರಿಗೆ ವಿನಾಯಿತಿ ಘೋಷಿಸಿದೆ. ಇದು 2025–26 ಆರ್ಥಿಕ ವರ್ಷದಿಂದ ಅನ್ವಯವಾಗುತ್ತದೆ. ಈ ಮಿತಿ ಹಿಂದೆಯೂ ₹7 ಲಕ್ಷದವರೆಗೆ ಇತ್ತು. ಆದರೆ ನೀವು ಉಲ್ಲೇಖಿಸುವ ವಿನಾಯಿತಿ ಹಳೆಯ ತೆರಿಗೆ ಪದ್ಧತಿ ಅನುಸರಿಸುವವರಿಗೆ ಮಾತ್ರ ಅನ್ವಯವಾಗುತ್ತದೆ. ಬಹುತೇಕ ಸನ್ನಿವೇಶಗಳಲ್ಲಿ ಒಟ್ಟಾರೆ ತೆರಿಗೆ ಉಳಿತಾಯ, ಹೊಸ ತೆರಿಗೆ ಪದ್ಧತಿ ಅನುಸರಿಸುವವರಿಗೆ ಹೆಚ್ಚಾಗಿದೆ. ನೀವು ಉಲ್ಲೇಖಿಸಿರುವ ಯಾವುದೇ ವಿನಾಯಿತಿಗಳು ಈಗಲೂ ಹಳೆ ಪದ್ಧತಿಯಡಿ ಮುಂದುವರಿಯುತ್ತವೆ. ಪ್ರಸ್ತುತ, ತೆರಿಗೆ ಉಳಿತಾಯ, ಹೆಚ್ಚುವರಿ ರಿಬೇಟ್ ನೀಡುವ ಮೂಲಕ ಕೊಡಮಾಡಲಾಗುತ್ತಿರುವುದರಿಂದ, ಹೂಡಿಕೆಗಳನ್ನು ಕೇವಲ ತೆರಿಗೆ ಉಳಿತಾಯದ ದೃಷ್ಟಿಯಿಂದ ನೋಡುವುದಾದರೆ ಅರ್ಥ ಕಳೆದುಕೊಂಡಂತೆ ತೋರುತ್ತವೆ.
ಈ ಹಿನ್ನೆಲೆಯಲ್ಲಿ, ಇಎಲ್‌ಎಸ್‌ಎಸ್ ಮ್ಯೂಚುವಲ್ ಫಂಡ್‌ಗಳ ಹೂಡಿಕೆಗೆ ಸಂಬಂಧಿಸಿದಂತೆ ನಿಮ್ಮಂತೆಯೇ ಹಲವರು ಹೂಡಿಕೆ ಮುಂದುವರಿಸಬೇಕೆ ಅಥವಾ ಬೇಡವೆ ಎಂಬ ಬಗ್ಗೆ ಗಂಭೀರ ಚರ್ಚೆ ಮಾಡುತ್ತಿದ್ದಾರೆ. ನೀವು ಹೂಡಿಕೆಯನ್ನು ಕೇವಲ ತೆರಿಗೆ ಉಳಿತಾಯಕ್ಕಾಗಿ ಮಾಡಿದ್ದರೆ, ಇಂತಹ ಹೂಡಿಕೆಯನ್ನು ಮುಂದುವರಿಸುವ ಅಗತ್ಯವಿಲ್ಲ. ಲಾಕ್-ಇನ್ ಅವಧಿ (3 ವರ್ಷ) ಮುಗಿದ ನಂತರ ಹಣವನ್ನು ಹಿಂಪಡೆದು ಉಪಯೋಗಿಸಬಹುದು. ಆದರೆ ಪ್ರಸ್ತುತ ಇದರಲ್ಲಿ ನಿಮಗಾದ ಲಾಭದ ಮಟ್ಟವನ್ನು ನೀವೇ ಗಮನಿಸಿ. ಈ ಫಂಡ್‌ಗಳು ಸಾಮಾನ್ಯ ಬ್ಯಾಂಕ್ ಬಡ್ಡಿಗಿಂತ ವಾರ್ಷಿಕವಾಗಿ ಹೆಚ್ಚು ಲಾಭ ನೀಡುತ್ತಿವೆಯೇ ಎಂದು ತಿಳಿದುಕೊಳ್ಳಿ. ಹೀಗಾಗಿ, ತೆರಿಗೆ ಉಳಿತಾಯದ ಲಾಭ ಸಿಗುತ್ತದೆಯೇ ಇಲ್ಲವೇ ಎಂಬ ಪ್ರಶ್ನೆಯ ಬದಲು, ನಿಮ್ಮ ಸಂಪತ್ತಿನ ವೃದ್ಧಿಯ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು, ಆರ್ಥಿಕವಾಗಿ ಈ ಪಾವತಿ ನಿಮಗೆ ಹೊರೆ ಎಂದು ಅನಿಸದಿದ್ದರೆ, ಹೂಡಿಕೆಯನ್ನು ಖಂಡಿತವಾಗಿ ಮುಂದುವರಿಸಬಹುದು. ಒಂದು ವೇಳೆ ಈ ಹೂಡಿಕೆಯ ಲಾಭದಲ್ಲಿ ಅಷ್ಟೊಂದು ಸಮಾಧಾನ ಇಲ್ಲದಿದ್ದರೆ, ಬೇರೆ ವರ್ಗದ ಈಕ್ವಿಟಿ ಹೂಡಿಕೆಗಳಲ್ಲೂ ಗಮನಹರಿಸಬಹುದು. ನೀವು ಈಗಾಗಲೇ ಈಕ್ವಿಟಿ ಲಿಂಕ್ಡ್ ಫಂಡ್‌ಗಳಲ್ಲಿ ಹಣ ತೊಡಗಿಸಿರುವುದರಿಂದ, ಆರ್ಥಿಕ ಅಪಾಯದ ಅರಿವು ನಿಮಗೆ ಇದ್ದೇ ಇದೆ.
ಇಲ್ಲಿರುವ ಪರ್ಯಾಯ ಅವಕಾಶವೆಂದರೆ, ಪ್ರಸ್ತುತ ಇರುವ ಇಎಲ್‌ಎಸ್‌ಎಸ್ ಹೂಡಿಕೆಯನ್ನು ಲಾಕ್-ಇನ್ ಅವಧಿಯವರೆಗೆ ಮುಂದುವರಿಸುತ್ತಾ, ಮುಂದಿನ ಹೂಡಿಕೆಗಳನ್ನು ಫ್ಲೆಕ್ಸಿಕ್ಯಾಪ್, ಮಲ್ಟಿಕ್ಯಾಪ್ ಅಥವಾ ಬ್ಯಾಲೆನ್ಸ್ಡ್ ಸೇವಿಂಗ್ಸ್ ಫಂಡ್‌ಗಳಂತಹ ವಿವಿಧ ವರ್ಗಗಳಲ್ಲಿ ಈ ಹಣವನ್ನು ಹೆಚ್ಚುವರಿಯಾಗಿ ತೊಡಗಿಸುವುದು. ಇವು ದೀರ್ಘಾವಧಿಯಲ್ಲಿ ಬ್ಯಾಂಕ್ ಬಡ್ಡಿಗಿಂತ ಹೆಚ್ಚು ಲಾಭದಾಯಕವಾಗಿದ್ದು, ಲಾಕ್-ಇನ್ ಮಿತಿಯಿಲ್ಲದ ಉತ್ತಮ ಆಯ್ಕೆಯಾಗಬಹುದು. ಹೀಗಾಗಿ ನಿಮ್ಮ ಉದ್ದೇಶ ಹಾಗೂ ನಿಮ್ಮ ದೀರ್ಘಾವಧಿ ಆರ್ಥಿಕ ಯೋಜನೆಗಳ ಉದ್ದೇಶಕ್ಕೆ ಸರಿಹೊಂದುವಂತೆ ನಿಮ್ಮ ನಿರ್ಧಾರ ಕೈಗೊಳ್ಳಿ. ಇಎಲ್‌ಎಸ್‌ಎಸ್‌ನಿಂದ ಮೂರು ವರ್ಷದ ನಂತರ ಬರುವ ಹಣವನ್ನು ಲಾಭ ಸಹಿತ ಮರು ಹೂಡಿಕೆ ಮಾಡುವತ್ತ ಕೂಡಾ ಗಮನ ಹರಿಸಿ.
ಇತ್ತೀಚಿಗೆ ನಮ್ಮ ಸಂಸತ್ತಿನಲ್ಲಿ 2025ರ ಹೊಸ ಆದಾಯ ತೆರಿಗೆ ಕಾನೂನನ್ನು ಮತ್ತಷ್ಟು ಪರಿಷ್ಕರಿಸಿ ಮುಂದೆ ಕಾನೂನಾಗಿ ಜಾರಿ ಮಾಡಿದೆ. ಇದರ ಕಾರಣದಿಂದ ನಮಗೆ ಏನೆಲ್ಲಾ ಲಾಭ ಇದೆ ಹಾಗೂ ಇದು ಯಾವ ಆರ್ಥಿಕ ವರ್ಷದಿಂದ ಅನ್ವಯಿಸುತ್ತದೆ. ಇದರಿಂದ ತೆರಿಗೆ ಹೆಚ್ಚು ಪಾವತಿ ಮಾಡಬೇಕಾಗಿ ಬರುವ ಸಂಭವ ಇದೆಯೇ ಅಥವಾ ತೆರಿಗೆ ಉಳಿತಾಯ ಆಗಲಿದೆಯೇ.
–ಕೃಷ್ಣಕುಮಾರ್, ರಾಜಾಜಿನಗರ, ಬೆಂಗಳೂರು
ಇತ್ತೀಚೆಗೆ ಸಂಸತ್ತಿನಲ್ಲಿ ಹೊಸ ‘ಆದಾಯ ತೆರಿಗೆ ಕಾನೂನು - 2025’ ಅನ್ನು ಜಾರಿಗೆ ತರಲು ಅನುಮತಿಸಲಾಗಿದ್ದು ಇದಕ್ಕೆ ರಾಷ್ಟ್ರಪತಿ ಅಂಗೀಕಾರವೂ ಸಿಕ್ಕಿದೆ. ಹೀಗಾಗಿ ಇದು ಕಾನೂನಾಗಿ ಜಾರಿಗೆ ಬಂದಿದ್ದು, 2026ರ ಏಪ್ರಿಲ್ 1 ರಿಂದ (ತೆರಿಗೆ ವರ್ಷ 2026-27) ಇದು ಜಾರಿಗೆ ಬರಲಿದೆ. ಈ ಹೊಸ ಕಾನೂನಿನ ಉದ್ದೇಶ ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸುವುದಾಗಿದ್ದು, ಹಳೆಯ ನಿಯಮಗಳಲ್ಲಿ ಇದ್ದ ಲೋಪದೋಷಗಳನ್ನು ತೊಡೆದು ಹಾಕುವುದು ಹಾಗೂ ಜನಸಾಮಾನ್ಯ ಹಾಗೂ ತೆರಿಗೆ ಪಾವತಿದಾರ ಸರಳ ಭಾಷೆಯಲ್ಲಿ ಅರ್ಥೈಸುವಂತೆ ಹಾಗೂ ಅದನ್ನು ತಮ್ಮ ಆರ್ಥಿಕ ಚಟುವಟಿಕೆಯಲ್ಲಿ ಬಳಸಿಕೊಳ್ಳುವಂತೆ ಮಾಡುವುದೇ ಪ್ರಮುಖ ಉದ್ದೇಶ.
ಪ್ರತಿ ವರ್ಷದ ಬಜೆಟ್‌ನಲ್ಲಿ ಮುಂದಿನ ವರ್ಷಕ್ಕೆ ಅನ್ವಯಿಸುವ ತೆರಿಗೆ ದರದ ಯಥಾಸ್ಥಿತಿ ಅಥವಾ ಬದಲಾವಣೆ ಏನೇ ಇದ್ದರೂ ನಿರ್ಣಯವಾಗುತ್ತದೆ. ಹೀಗಾಗಿ ಹೊಸ ಕಾನೂನು ಏನೇ ಇದ್ದರೂ ತೆರಿಗೆ ನಿಯಮಾವಳಿಯ ಒಟ್ಟಾರೆ ಸರಳೀಕರಣವೇ ಹೊರತು ತೆರಿಗೆ ದರಗಳ ಮಾಹಿತಿ, ಬದಲಾವಣೆ ಯಾವುದಿದ್ದರೂ ಆಯಾ ವರ್ಷದ ವಿತ್ತ ನಿಯಮಗಳಂತೆಯೇ ಕಾರ್ಯರೂಪಕ್ಕೆ ಬರಬೇಕು. ಬದಲಾವಣೆ ಇಲ್ಲದಿದ್ದರೆ ಹಿಂದಿನ ವರ್ಷದ ದರಗಳನ್ನೇ ಮುಂದುವರಿಸುವದು ವಾಡಿಕೆ.
ಪ್ರಸ್ತುತ ಹೊಸ ತೆರಿಗೆ ಪದ್ಧತಿಯಡಿ ₹12 ಲಕ್ಷದವರೆಗೆ ಆದಾಯ ಹೊಂದಿರುವವರಿಗೆ ಯಾವುದೇ ತೆರಿಗೆ ಹೊಣೆ ಇಲ್ಲ. ಇದನ್ನು ಸಾಧ್ಯವಾಗಿಸಲು ಪ್ರಸ್ತುತ ಇರುವ ಸೆಕ್ಷನ್ 87ಎ ಅಡಿಯಲ್ಲಿ ರಿಯಾಯಿತಿಯನ್ನು ₹60 ಸಾವಿರಕ್ಕೆ ಹೆಚ್ಚಿಸಲಾಗಿದೆ. ಹೀಗಾಗಿ ಮಧ್ಯಮ ವರ್ಗದ ಉದ್ಯೋಗಿಗಳು ಮತ್ತು ಸಣ್ಣ ವ್ಯಾಪಾರಸ್ಥರಿಗೆ ಇದು ತೆರಿಗೆ ಉಳಿತಾಯದ ಅವಕಾಶ ಒದಗಿಸುತ್ತದೆ. ಹೀಗಾಗಿ, ಮುಂದಿನ 2026-27ರಿಂದ ಜಾರಿಗೆ ಬರುವ ಹೊಸ ಕಾನೂನಿನ ನಿಯಮ 156ರಂತೆ ಇದೇ ಮಿತಿ ಮುಂದುವರಿಯುತ್ತದೆ. ಮುಂದಿನ ವರ್ಷದ ಫೆಬ್ರುವರಿ ತಿಂಗಳಿನಲ್ಲಿ ಮಂಡಿಸುವ ಬಜೆಟ್‌ನಲ್ಲಿ ಯಾವುದೇ ಬದಲಾವಣೆ ಮಾಡದಿದ್ದಲ್ಲಿ, ಪ್ರಸ್ತುತ ದರಗಳೇ ಮುಂದುವರಿಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.