ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಶ್ನೋತ್ತರ: ಕ್ಯಾಪಿಟಲ್ ಗೇನ್ಸ್‌ ಹಾಗೂ ತೆರಿಗೆ..

ಪ್ರಮೋದ ಶ್ರೀಕಾಂತ ದೈತೋಟ ಅವರ ಪ್ರಶ್ನೋತ್ತರ ಅಂಕಣ
Published 3 ಸೆಪ್ಟೆಂಬರ್ 2024, 19:56 IST
Last Updated 3 ಸೆಪ್ಟೆಂಬರ್ 2024, 19:56 IST
ಅಕ್ಷರ ಗಾತ್ರ

ಶಂಕರ್ ಜಿ, ಗದಗ, ಪ್ರಶ್ನೆ: ನನ್ನ ವಯಸ್ಸು 78 ವರ್ಷ. ನಾನು ಪ್ರತಿ ವರ್ಷ ಐಟಿಆರ್ ಸಲ್ಲಿಸುತ್ತಿದ್ದು ಪ್ರತಿ ತಿಂಗಳೂ ಪಿಂಚಣಿ ಪಡೆಯುತ್ತಿದ್ದೇನೆ. ಐಟಿಆರ್ ವರ್ಷ 2024-25ರ ಮಾಹಿತಿಯಂತೆ ನನ್ನ ಆದಾಯ ಈ ರೀತಿ ಇದೆ. ನನ್ನ ಪಿಂಚಣಿ ಆದಾಯದ ಮೊತ್ತ ವರ್ಷಕ್ಕೆ ₹4.86 ಲಕ್ಷ. ಈ ಮೊತ್ತ ಸ್ಟ್ಯಾಂಡರ್ಡ್ ಡಿಡಕ್ಷನ್ ಕಳೆದು ಇರುವ ಮೊತ್ತವಾಗಿದೆ. ಬ್ಯಾಂಕ್ ಠೇವಣಿಯಿಂದ ವರ್ಷಕ್ಕೆ ₹5.40 ಲಕ್ಷ ಬರುತ್ತಿದೆ. ಉಳಿತಾಯ ಖಾತೆಗೆ ಸುಮಾರು ₹16 ಸಾವಿರದಷ್ಟು ಜಮಾ ಆಗಲಿದೆ. ಇದರಂತೆ ತೆರಿಗೆ ಲೆಕ್ಕ ಹಾಕಿದರೆ ₹66,446 ಹಾಗೂ ಸೆಸ್ ಮೊತ್ತ ₹2,658 ಬರುತ್ತಿದೆ. ಹೊಸ ತೆರಿಗೆ ಪದ್ಧತಿಯ ಪ್ರಕಾರ ₹7.50 ಲಕ್ಷ ಆದಾಯದವರೆಗೆ ತೆರಿಗೆ ಇಲ್ಲ ಎಂದು ಕೇಳಿದ್ದೇನೆ. ಮೇಲಿನ ಮಾಹಿತಿಯಂತೆ ನಾನು ಲೆಕ್ಕ ಹಾಕಿದ ತೆರಿಗೆ ಆಕರಣೆ ಸರಿಯಾಗಿದೆಯೇ?

ಉತ್ತರ: ನೀವು ಈಗಾಗಲೇ ಆರ್ಥಿಕ ವರ್ಷ 2023-24ರ ಆದಾಯಕ್ಕೆ ಸಂಬಂಧಿಸಿ ಐಟಿಆರ್ ಸಲ್ಲಿಸದೆ ಇದ್ದರೆ ಈ ಕೂಡಲೇ ಸಲ್ಲಿಸಿ. ನೀವು ನೀಡಿರುವ ಮಾಹಿತಿಯಂತೆ, ಆರ್ಥಿಕ ವರ್ಷ 2023-24ಕ್ಕೆ ಸಂಬಂಧಿಸಿ ತೆರಿಗೆ ಎಷ್ಟೆಂಬುದು ನಿಮ್ಮ ಪ್ರಶ್ನೆಯಾಗಿರುವುದರಿಂದ ಆ ಬಗ್ಗೆ ಗಮನ ನೀಡಿ. ತಡವಾಗಿ ರಿಟರ್ನ್ಸ್ ಸಲ್ಲಿಸಲು ಇದೇ ಡಿಸೆಂಬರ್ 31ರ ತನಕ ಅವಕಾಶವಿದೆ. ಆದರೆ ದಂಡ ಕಟ್ಟಿ ಸಲ್ಲಿಸಬಹುದಾಗಿದೆ.

ಇನ್ನು ನಿಮ್ಮ ಮೂಲ ಪ್ರಶ್ನೆಗೆ ಸಂಬಂಧಿಸಿ ಹೇಳುವುದಾದರೆ, ನೀವು ಹೊಸ ಪದ್ಧತಿ ಅನುಸರಿಸಿ ತೆರಿಗೆ ಲೆಕ್ಕ ಹಾಕಿರುವುದು ಸರಿಯಿದೆ. ಆದರೆ ₹7.50 ಲಕ್ಷದವರೆಗೆ ತೆರಿಗೆ ಇಲ್ಲ ಎಂಬುದನ್ನು ನೀವು ಉಲ್ಲೇಖಿಸಿದ್ದೀರಿ. ಒಟ್ಟಾರೆ ತೆರಿಗೆ ಆದಾಯ ಈ ಮೊತ್ತದೊಳಗಿದ್ದಾಗ ಮಾತ್ರ ಇದು ಸಾಧ್ಯ. ಈ ಮಿತಿ ದಾಟಿದಂತೆ, ಸಹಜವಾಗಿ ಸೆಕ್ಷನ್ 87ಎ ಇದರಡಿ ಲಭ್ಯವಿರುವ ವಿನಾಯಿತಿ ಸಿಗುವುದಿಲ್ಲ ಎಂಬುದು ತಿಳಿದಿರಲಿ. ನಿಮ್ಮ ವಿಚಾರದಲ್ಲೂ, ನೀವು ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿದರೆ, ಆದಾಯ ₹7.50 ಲಕ್ಷ ದಾಟುವುದರಿಂದ ಸ್ಲ್ಯಾಬ್ ದರದಂತೆ ತೆರಿಗೆ ನಿರ್ಣಯ ಆಗುತ್ತದೆ.
 
ಇನ್ನು ಆರ್ಥಿಕ ವರ್ಷ 2024-25ರ ಬಜೆಟ್ ಬದಲಾವಣೆಯನ್ನು ಪರಿಗಣಿಸಿ ಮುಂದಿನ ವರ್ಷಕ್ಕೆ ತೆರಿಗೆ ಅಂದಾಜಿಸಿ ಹೇಳುವುದಾದರೆ, ಅದೇ ಆದಾಯ ಪ್ರಸ್ತುತ ಸಾಲಿನಲ್ಲಿಯೂ ಮುಂದುವರಿದರೆ, ನಿಮ್ಮ ತೆರಿಗೆ ಸುಮಾರು ₹52 ಸಾವಿರ ಆಗಿರಲಿದೆ.  

ನಾರಾಯಣ್ ಎಂ, ಮೈಸೂರು, ಪ್ರಶ್ನೆ: ನಾನು ಹಾಗೂ ನನ್ನ ತಮ್ಮನ ಹೆಸರಲ್ಲಿ ಮೈಸೂರಿನ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ಒಂದು ನಿವೇಶನ ಇದೆ. ಇದರ ವ್ಯಾಪ್ತಿ ಸುಮಾರು 6,500 ಚದರ ಅಡಿ. ಇದನ್ನು 1987ರಲ್ಲಿ ನಮ್ಮಿಬ್ಬರ ಹೆಸರಲ್ಲಿ ಪಾಲುದಾರಿಕೆಯಲ್ಲಿ ದಾಖಲಿಸಲಾಗಿತ್ತು. ಆಗ ಅದಕ್ಕೆ ಸರಿಯಾದ ಮೌಲ್ಯ ಇಲ್ಲ. ಆದರೆ ಇದರ ಸಮೀಪದ ಭೂಮಿಗೆ ಈ ಭೂಮಿಗಿಂತ ಅಧಿಕ ಮೌಲ್ಯವಿದ್ದು, ನಮಗಿಬ್ಬರಿಗೂ ವಯಸ್ಸಾದ ಕಾರಣ ಇನ್ನೂ ಮೌಲ್ಯ ಹೆಚ್ಚಾಗುವ ತನಕ ಕಾಯುವ ಹಂತದಲ್ಲಿ ನಾವಿಲ್ಲ. ಹೀಗಾಗಿ ಈ ಭೂಮಿಯನ್ನು ನನ್ನ ಮಗಳು ಹಾಗೂ ಅವಳ ಇಬ್ಬರು ಹೆಣ್ಣು ಮಕ್ಕಳಿಗೆ ಡೀಡ್ ಮೂಲಕ ವರ್ಗಾಯಿಸಬೇಕೆಂದಿದ್ದೇವೆ. ಇದರಲ್ಲಿ ನಾನು ಹಾಗೂ ನನ್ನ ತಮ್ಮ ಹಾಗೂ ಮಗಳು ಅವಳ ಇಬ್ಬರು ಹೆಣ್ಣು ಮಕ್ಕಳು ಹೀಗೆ ಒಟ್ಟಾಗಿ ಐವರು ಸೇರಿ ಈ ನಿವೇಶನ ಹಂಚಲಿದ್ದೇವೆ. ಕ್ಯಾಪಿಟಲ್ ಗೇನ್ಸ್‌ಗೆ ಸಂಬಂಧಿಸಿ ಯಾವ ರೀತಿ ಈ ಭೂಮಿಯನ್ನು ವರ್ಗಾಯಿಸಬೇಕು. ತೆರಿಗೆ ವಿಚಾರವಾಗಿ ನಾವು ಯಾವ ರೀತಿ ಈ ಹಂಚಿಕೆ ಮಾಡಿಕೊಳ್ಳಬೇಕು.

ಉತ್ತರ: ನೀವು ಹಾಗೂ ನಿಮ್ಮ ತಮ್ಮನ ಜಂಟಿ ಹೆಸರಲ್ಲಿ ಭೂಮಿ ಇದೆ ಎಂಬುದಾಗಿ ನೀವು ಹೇಳಿರುತ್ತೀರಿ. ಈ ಆಸ್ತಿಯನ್ನು ನಿಮ್ಮ ಮಗಳು ಹಾಗೂ ಅವರ ಇಬ್ಬರು ಮಕ್ಕಳಿಗೆ ಡೀಡ್ ಮೂಲಕ ವರ್ಗಾಯಿಸುವ ಉದ್ದೇಶ ಹೊಂದಿದ್ದೀರಿ. ಮೊದಲ ಹಂತದಲ್ಲಿ ನೀವು ಹಾಗೂ ನಿಮ್ಮ ತಮ್ಮನ ಪಾಲನ್ನು ಗೊತ್ತು ಮಾಡಿಕೊಳ್ಳಿ.

ಆದಾಯ ತೆರಿಗೆಯ ಸೆಕ್ಷನ್ 56(2)(x) ಇದರ ಅಡಿ, ಯಾವುದೇ ಆಸ್ತಿಯನ್ನು ಉಚಿತವಾಗಿ ವರ್ಗಾಯಿಸಿದಾಗ ಅಥವಾ ಅದರ ಮಾರುಕಟ್ಟೆ ಸಮಂಜಸ ದರಕ್ಕಿಂತ ಕಡಿಮೆ ಮೌಲ್ಯಕ್ಕೆ ವರ್ಗಾಯಿಸಿದಾಗ ವ್ಯತ್ಯಾಸದ ಮೊತ್ತ ಅಂತಹ ಆಸ್ತಿ ಪಡೆದವರ ಹೆಸರಲ್ಲಿ ತೆರಿಗೆಗೊಳಪಡುತ್ತದೆ. ಆದರೆ, ಈ ಸಾಮಾನ್ಯ ನಿಯಮಕ್ಕೆ ಸಮೀಪದ ಬಂಧುಗಳ ಹೆಸರಲ್ಲಿ ವರ್ಗಾವಣೆಯಾಗುವ ಆಸ್ತಿಗಳಿಗೆ ವಿನಾಯಿತಿ ಇದೆ. ಹೀಗಾಗಾಗಿ ನೀವು ನಿಮ್ಮ ಭೂಮಿಯ ಪಾಲನ್ನು ನಿಮ್ಮ ಮಗಳು ಹಾಗೂ ನಿಮ್ಮ ಮೊಮ್ಮಕ್ಕಳ ಹೆಸರಲ್ಲಿ ವರ್ಗಾಯಿಸುವಾಗ ಅವರು ಯಾವುದೇ ತೆರಿಗೆ ಕಟ್ಟುವ ಅಗತ್ಯ ಇಲ್ಲ. ಆದರೆ ನಿಮ್ಮ ತಮ್ಮ ಒಂದು ವೇಳೆ ಅವರ ಹೆಸರಲ್ಲಿರುವ ಆಸ್ತಿಯನ್ನು ನಿಮ್ಮ ಮಗಳಿಗೆ/ಮೊಮ್ಮಕ್ಕಳಿಗೆ ವರ್ಗಾಯಿಸಿದರೆ ಈ ವಿನಾಯಿತಿ ಸಿಗುವುದಿಲ್ಲ ಎಂಬುದನ್ನು ಗಮನಿಸಿ. ಇದಲ್ಲದೆ, ಸೆಕ್ಷನ್ 47(iii) ರ ಪ್ರಕಾರ ಉಯಿಲಿನ ರೂಪದಲ್ಲಿ ಆಸ್ತಿ ವರ್ಗಾವಣೆ ಮಾಡಿದಾಗಲೂ ಆ ಸಂದರ್ಭದಲ್ಲಿ ತೆರಿಗೆಗೊಳಪಡಿಸಲಾಗುವುದಿಲ್ಲ. ಈ ವಿಚಾರಕ್ಕೆ ಸಂಬಂಧಿಸಿ ಯಾವ ರೀತಿ ವರ್ಗಾವಣೆ ದಾಖಲೆಗಳನ್ನು ಹೊಂದಬೇಕು ಎಂಬುವುದರ ಬಗ್ಗೆ ವಕೀಲರ ನೆರವು ಪಡೆದುಕೊಳ್ಳಿ.

ಮುಂದೆ ಯಾವುದೇ ಸಂದರ್ಭದಲ್ಲಿ ಈ ನಿವೇಶನ ಮಾರಾಟ ಮಾಡುವಾಗ ಮಾತ್ರ ಕ್ಯಾಪಿಟಲ್‌ ಗೇನ್ಸ್ (ಬಂಡವಾಳ ಗಳಿಕೆ) ಲೆಕ್ಕ ಹಾಕಿ ತೆರಿಗೆ ಕಟ್ಟಬೇಕಾಗುತ್ತದೆ. ಅವರಿಗೆ ನೀವು ಮೂಲದಲ್ಲಿ ಖರೀದಿಸಿದ ದಿನಾಂಕವೇ ಖರೀದಿ ಮೌಲ್ಯವಾಗಿರುತ್ತದೆ ಹಾಗೂ ಅಸಲು ಮೌಲ್ಯವಾಗಿ 2001ರ ಏಪ್ರಿಲ್‌ 1ರ ಮಾರುಕಟ್ಟೆ ಸಮಂಜಸ ದರ ಪರಿಗಣಿಸಿ ತೆರಿಗೆ ನಿರ್ಣಯಿಸಬಹುದು. ಇತ್ತೀಚಿನ ಬಜೆಟ್‌ನಲ್ಲಿ ಬದಲಾದ ತೆರಿಗೆ ನಿಯಮದ ಪ್ರಕಾರ ಇಂಡೆಕ್ಸೇಷನ್ ಸಹಿತ ಶೇ 20ರ ತೆರಿಗೆ ದರ ಅಥವಾ ಇಂಡೆಕ್ಸೇಷನ್ ರಹಿತ ಶೇ 12.50ರ ತೆರಿಗೆ ದರ ಅನ್ವಯಿಸಿ ಯಾವುದು ತೆರಿಗೆ ದೃಷ್ಟಿಯಲ್ಲಿ ಲಾಭದಾಯಕವೋ ಆ ದರ ಮುಂದೆ ಮಾರಾಟ ಮಾಡುವಾಗ ಆಯ್ಕೆ ಮಾಡುವ ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT