-ವಾಸುದೇವ ನಾಯಕ್, ಬೆಂಗಳೂರು
ಪ್ರಶ್ನೆ: ನಾನು ಕಳೆದ ಐದಾರು ವರ್ಷಗಳಿಂದ ಉದ್ಯೋಗದಲ್ಲಿದ್ದೇನೆ. ಆದರೆ ನನ್ನ ಹೂಡಿಕೆಗೆ ಸಂಬಂಧಪಟ್ಟ ನಿರ್ಧಾರಗಳು ಇನ್ನೂ ಅಷ್ಟಾಗಿ ಖಚಿತವಾಗಿಲ್ಲ. ಕೆಲವು ಹೂಡಿಕೆಗಳು ಮನೆಯವರ ಒತ್ತಾಯಕ್ಕೆ ಮಾಡಿದವು. ಇನ್ನು ಕೆಲವು ವಿಮಾ ಏಜೆಂಟರ ಬಲವಂತಕ್ಕೆ ಮಣಿದು ಮಾಡಿದ ಹೂಡಿಕೆಗಳು. ಇವನ್ನು ಹೊರತುಪಡಿಸಿ, ಇನ್ನಾವುದೇ ಯೋಜಿತ ಹೂಡಿಕೆಗಳನ್ನು ಈತನಕ ಮಾಡಲಾಗಿಲ್ಲ. ನನಗೆ ಆ ಬಗ್ಗೆ ಸ್ವತಂತ್ರವಾಗಿ ಯೋಚಿಸಿ ಕೈಗೊಳ್ಳುವ ನಿರ್ಧಾರದ ಮೇಲೂ ತುಸು ಭಯವಿದೆ. ಹೀಗಾಗಿ ಸಹೋದ್ಯೋಗಿಗಳ ಹೂಡಿಕೆಯ ಅನುಭವ ಆಲಿಸಿ ಅವರನ್ನು ಅನುಸರಿಸುವುದು ಸೂಕ್ತವೆಂಬುದು ನನ್ನ ಭಾವನೆ. ಈ ಬಗ್ಗೆ ನನಗೆ ತಿಳಿವಳಿಕೆ ಹೇಳಿ.
ಉತ್ತರ: ಯಾವುದೇ ಹೂಡಿಕೆ ಮಾಡುವ ಅಥವಾ ಹೂಡಿಕೆ ಮಾಡದಿರುವ ನಿರ್ಧಾರ ವ್ಯಕ್ತಿಯೊಬ್ಬನ ಬದುಕಿನಲ್ಲಿ ದೀರ್ಘಾವಧಿಯಲ್ಲಿ ದೊಡ್ಡ ಮಟ್ಟದ ಅನುಕೂಲ ಅಥವಾ ಪ್ರತಿಕೂಲ ಪರಿಣಾಮ ಬೀರಬಲ್ಲದು. ಹೂಡಿಕೆಯಿಂದ ದೂರ ಉಳಿಯಲು ನಮಗೆ ಹಲವು ಕಾರಣಗಳು ಸಿಗಬಹುದು. ಆದರೆ, ಹೆಚ್ಚುವರಿ ಉಳಿತಾಯ ಮಾಡುವ ಅವಕಾಶ ಇದ್ದಾಗಲೂ ದಿನನಿತ್ಯದ ಬದುಕಿನಲ್ಲಿ ಆರ್ಥಿಕ ಸವಾಲುಗಳು ಹೆಚ್ಚು ಇಲ್ಲವಾಗಿದ್ದಾಗಲೂ ಹೂಡಿಕೆಯ ಬಗ್ಗೆ ನಾವು ಉಪೇಕ್ಷೆ ಮಾಡಿದರೆ ಕೆಲವೊಂದು ಅವಕಾಶಗಳಿಂದ ನಾವು ದೂರವೇ ಉಳಿದುಬಿಡುತ್ತೇವೆ.
ಹೀಗಾಗಿ ನಿಮ್ಮ ಪ್ರಸ್ತುತ ಆದಾಯ, ಕೈಗೆ ಸಿಗುವ ನಿವ್ವಳ ವೇತನ, ತಿಂಗಳ ಖರ್ಚು, ಸಾಲ ಮರುಪಾವತಿಗೆ ಬೇಕಿರುವ ಮೊತ್ತ, ಮುಂದಿನ 1-2 ಹಾಗೂ 4-5 ವರ್ಷಗಳ ಒಟ್ಟಾರೆ ಯೋಜನೆಯ ರೂಪುರೇಷೆಗಳನ್ನು ನೀವೇ ಪಟ್ಟಿ ಮಾಡಿ. ಇವಕ್ಕೆಲ್ಲ ನೆರವಾಗುವ ರೀತಿಯಲ್ಲಿ ಒಂದು ಹಂತದಲ್ಲಿ ನಿಗದಿತ ಮೊತ್ತವನ್ನು ಸಂಗ್ರಹಿಸಲು ಒಂದು ಯೋಜನೆ ರೂಪಿಸಿ. ಹಾಗೆಯೇ, ಇನ್ನೊಂದೆಡೆ ನಿಶ್ಚಿತ ಠೇವಣಿಗಳ ಆದಾಯ ದರ ಮೀರಿ ಲಾಭ ನೀಡುವ ಹೂಡಿಕೆ ಉತ್ಪನ್ನಗಳಾದ ಮ್ಯೂಚುವಲ್ ಫಂಡ್, ಗುಣಮಟ್ಟದ ಷೇರುಗಳು, ಚಿನ್ನದ ಬಾಂಡ್, ಇಟಿಎಫ್ ಇತ್ಯಾದಿಗಳಲ್ಲಿಯೂ ಹೂಡಿಕೆ ಮಾಡುವ ಧೈರ್ಯ ತೋರಿಸಿ.
ನೀವು ಯಾವುದೇ ಆರ್ಥಿಕ ನಿರ್ಧಾರ ಕೈಗೊಳ್ಳುವ ಮೊದಲು ಇತರರ ಸಲಹೆ ಪಡೆದರೂ, ಹೂಡಿಕೆಗಳಿಂದ ನೀವು ಹೊಂದಿರುವ ನಿರೀಕ್ಷೆ ಏನು ಎಂಬ ಬಗ್ಗೆ ನಿಮ್ಮಲ್ಲಿ ಸ್ಪಷ್ಟತೆ ಇರಲಿ. ಇದಕ್ಕಾಗಿ ಮೊದಲು ವಿವಿಧ ಬಗೆಯ ಹೂಡಿಕೆ ಉತ್ಪನ್ನಗಳಲ್ಲಿ ಸಣ್ಣ ಪ್ರಮಾಣದ ಹೂಡಿಕೆ ಮಾಡಿ ಅನುಭವ ಪಡೆಯಿರಿ. ನಿಯಮಿತವಾಗಿ ಒಂದಷ್ಟು ಮೊತ್ತವನ್ನು ಮ್ಯೂಚುವಲ್ ಫಂಡ್‌ಗಳಲ್ಲಿ ತೊಡಗಿಸಿ. ಆರ್ಥಿಕ ಅಪಾಯ ತಡೆದುಕೊಳ್ಳುವ ನಿಮ್ಮ ಸಾಮರ್ಥ್ಯ ಹಾಗೂ ಹೂಡಿಕೆಗಳಲ್ಲಿ ಯಾವೆಲ್ಲ ಸಂದರ್ಭಗಳಲ್ಲಿ ಯಾವೆಲ್ಲ ಕಾರಣಕ್ಕೆ ಲಾಭ-ನಷ್ಟ ಸಂಭವಿಸುತ್ತದೆ ಎಂಬ ಬಗ್ಗೆ ಅರಿತುಕೊಳ್ಳಿ. ತದನಂತರ ನಿಮ್ಮ ಮುಂದಿನ ಹಂತದ ಹೂಡಿಕೆಗೆ ಹೋಗಿ.
-ಪ್ರಶಾಂತ್ ಚೌಗಲಾ, ಊರು ತಿಳಿಸಿಲ್ಲ
ಪ್ರಶ್ನೆ: ನಾನು ಸರ್ಕಾರಿ ಉದ್ಯೋಗಿ. ಪ್ರತಿ ತಿಂಗಳು ಪಿಪಿಎಫ್‌ನಲ್ಲಿ ಎರಡು ಸಾವಿರ ಮತ್ತು ಯೂನಿಟ್ ಲಿಂಕ್ಡ್ ಪ್ಲಾನ್‌ನಲ್ಲಿ ಮೂರು ಸಾವಿರ ಹೂಡಿಕೆ ಮಾಡುತ್ತಿದ್ದೆ. ಆದರೆ ಕೆಲವರು ಯೂನಿಟ್ ಲಿಂಕ್ಡ್ ಪ್ಲಾನ್‌ನಲ್ಲಿ ಹೂಡಿಕೆ ಮಾಡುವುದಕ್ಕಿಂತ ಮ್ಯೂಚುವಲ್ ಫಂಡ್ ಮತ್ತು ಇಂಡೆಕ್ಸ್ ಫಂಡ್ ಹೂಡಿಕೆ ಉತ್ತಮ ಎಂದರು. ಹೂಡಿಕೆಗೆ ಅವರು ಸೂಚಿಸಿದ ಉಪಾಯ ಸರಿಯಿದೆಯೇ?
ಉತ್ತರ: ಯಾವುದೇ ಹೂಡಿಕೆಗೆ ಸಂಬಂಧಿಸಿ, ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಮುನ್ನ ನಾವು ಆ ಹೂಡಿಕೆ ಉತ್ಪನ್ನವನ್ನು ಯಾವ ಕಾರಣಕ್ಕೆ ಆಯ್ಕೆ ಮಾಡಿಕೊಂಡಿದ್ದೇವೆ ಎನ್ನುವುದನ್ನು ತಿಳಿದಿರಬೇಕು. ನೀವು ಪ್ರಶ್ನೆಯಲ್ಲಿ ಉಲ್ಲೇಖಿಸಿರುವ ನಾಲ್ಕೂ ಹೂಡಿಕೆ ಉತ್ಪನ್ನಗಳು ಬೇರೆ ಬೇರೆ ಸನ್ನಿವೇಶಕ್ಕೆ ಸರಿಹೊಂದುತ್ತವೆ. ಹೀಗಾಗಿ ಪ್ರತಿ ಹೂಡಿಕೆಯ ಬಗೆಗಿನ ಒಂದಷ್ಟು ಮಾಹಿತಿಯನ್ನು ನಿಮಗೆ ನೀಡಿದರೆ, ನಿಮ್ಮಲ್ಲಿರುವ ಗೊಂದಲ ಪರಿಹರಿಸಿಕೊಳ್ಳಲು ನೆರವಾಗಬಹುದು.
ಪಿಪಿಎಫ್: ಹಳೆ ತೆರಿಗೆ ಪದ್ಧತಿಯ ಅನುಸಾರ ತೆರಿಗೆ ಪಾವತಿಸುವವರು, ಸೆಕ್ಷನ್ 80ಸಿ ಅಡಿ ಇಲ್ಲಿನ ಹೂಡಿಕೆಯನ್ನು ತೆರಿಗೆ ಉಳಿತಾಯಕ್ಕೆ ಬಳಸಿಕೊಳ್ಳಬಹುದು. ಇದಲ್ಲದೆ ನಿಶ್ಚಿತ ಬಡ್ಡಿದರವೂ ಹೂಡಿಕೆದಾರರ ಖಾತೆಗೆ ಜಮಾ ಆಗುತ್ತದೆ. ಹೀಗಾಗಿ ಇದೊಂದು ಅಪಾಯ ರಹಿತ ಹೂಡಿಕೆ.
ಯೂಲಿಪ್: ಇದು ನಿಮಗೆ ವಿಮಾ ಸೌಲಭ್ಯ ನೀಡುತ್ತದೆ ಹಾಗೂ ಮ್ಯೂಚುವಲ್ ಫಂಡ್ ಹೂಡಿಕೆ ಉತ್ಪನ್ನದ ರೀತಿಯಲ್ಲಿಯೂ ನೆರವಾಗುತ್ತದೆ. ನಿಮ್ಮ ಪಾವತಿಯಲ್ಲಿ ಒಂದಷ್ಟು ಮೊತ್ತ ವಿಮಾ ಕಂತಿಗೆ ಹೋಗುತ್ತದೆ. ಉಳಿದ ಮೊತ್ತವನ್ನು ಮ್ಯೂಚುವಲ್ ಫಂಡ್‌ಗೆ ವರ್ಗೀಕರಿಸಲಾಗುತ್ತದೆ. ಆದರೆ ಇದು ಸಾಮಾನ್ಯ ಪ್ರಮಾಣದ ಲಾಭ ನೀಡಬಲ್ಲುದು.
ಇಂಡೆಕ್ಸ್ ಫಂಡ್: ಮಾರುಕಟ್ಟೆಯಲ್ಲಿ ವಿವಿಧ ಫಂಡ್ ಹೌಸ್‌ಗಳು ನಿಭಾಯಿಸುವ ಅನೇಕ ಇಂಡೆಕ್ಸ್ ಫಂಡ್‌ಗಳು ಇವೆ. ಇವು ಆಯ್ಕೆ ಮಾಡಿದ ಸೂಚ್ಯಂಕದ ಏರಿಳಿತಕ್ಕೆ ಅನುಗುಣವಾಗಿ ತಮ್ಮ ಮೌಲ್ಯದಲ್ಲಿ ಏರಿಕೆ–ಇಳಿಕೆ ಕಾಣುತ್ತವೆ. ಉದಾಹರಣೆಗೆ, ಒಂದು ತಿಂಗಳಲ್ಲಿ ನೀವು ಹೂಡಿಕೆ ಮಾಡಿದ ದಿನಾಂಕದಿಂದ ಸೂಚ್ಯಂಕವು ಶೇ 5ರಷ್ಟು ಏರಿಕೆ ಕಂಡರೆ, ಇಂಡೆಕ್ಸ್ ಫಂಡ್ ಹೂಡಿಕೆ ಮೌಲ್ಯ ಕೂಡ ಅದೇ ಪ್ರಮಾಣದಲ್ಲಿ ವೃದ್ದಿ ಕಾಣುತ್ತದೆ. ಹೀಗಾಗಿ ಇಲ್ಲಿ ಹೂಡಿಕೆದಾರ ನಿಫ್ಟಿ ಅಥವಾ ಬ್ಯಾಂಕ್ ನಿಫ್ಟಿಯಂತಹ ಪ್ರಮುಖ ಸೂಚ್ಯಂಕಗಳ ಏರಿಳಿತದ ಆಧಾರದ ಮೇಲೆ ತಮ್ಮ ಹೂಡಿಕೆಗೆ ಸರಿಯಾದ ಸಮಯ ನಿರ್ಧಾರ ಮಾಡಬೇಕು.
ಮ್ಯೂಚುವಲ್ ಫಂಡ್: ಇವು ಸಕ್ರಿಯವಾಗಿ ನಿರ್ವಹಿಸಲ್ಪಡುವ ಹೂಡಿಕೆ ಉತ್ಪನ್ನಗಳು. ಅಂದರೆ, ನಿಧಿ ವ್ಯವಸ್ಥಾಪಕರು ಅಥವಾ ನಿರ್ವಹಣಾ ತಂಡವು ಹೂಡಿಕೆಗಳ ಆಯ್ಕೆಯ ನಿರ್ಧಾರಗಳನ್ನು ಮಾಡುತ್ತದೆ. ಇವುಗಳನ್ನು ನಿರ್ವಹಿಸಲು ಪ್ರತ್ಯೇಕ ತಂಡವೇ ಇರುತ್ತದೆ ಹಾಗೂ ಹೂಡಿಕೆಯ ಹಣವನ್ನು ನಿರ್ವಹಣೆ ಮಾಡುವುದಕ್ಕೆ ಶುಲ್ಕ ಪಡೆಯಲಾಗುತ್ತದೆ. ಇವುಗಳಲ್ಲೂ ವಿವಿಧ ಬಗೆಗಳು ಇವೆ ಹಾಗೂ ಹೂಡಿಕೆದಾರರ ಲಾಭ ನಿರೀಕ್ಷೆ, ಆರ್ಥಿಕ ಅಪಾಯವನ್ನು ತಾಳಿಕೊಳ್ಳುವ ಸಾಮರ್ಥ್ಯಕ್ಕೆ ಅನುಸಾರವಾಗಿ ನಿರ್ದಿಷ್ಟ ಫಂಡ್ ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡಬೇಕಾಗುತ್ತದೆ. ಈ ವರ್ಗದ ಹೂಡಿಕೆ ಉತ್ಪನ್ನಗಳಲ್ಲಿ ಹಣ ತೊಡಗಿಸುವವರು ಹೆಚ್ಚು ಅರಿತು ಮುಂದುವರಿಯಬೇಕಾಗುತ್ತದೆ.
ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.
ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ,
ಬೆಂಗಳೂರು–560001 ಇ–ಮೇಲ್: businessdesk@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.