ಸೋಮವಾರ, 1 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಪ್ರಶ್ನೋತ್ತರ: ಹಣಕಾಸು ಹೂಡಿಕೆ, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ

Published : 8 ಅಕ್ಟೋಬರ್ 2024, 23:30 IST
Last Updated : 8 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments
ಹಣಕಾಸು ಹೂಡಿಕೆ, ತೆರಿಗೆ ಮುಂತಾದ ಪ್ರಶ್ನೆಗಳಿಗೆ ತೆರಿಗೆ ಮತ್ತು ವೈಯಕ್ತಿಕ ಹಣಕಾಸು ತಜ್ಞ ಪ್ರಮೋದ ಶ್ರೀಕಾಂತ ದೈತೋಟ ಉತ್ತರ ನೀಡಿದ್ದಾರೆ.
ಪ್ರ

ನಾನು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ಇದ್ದು, ಹೇಗೆ ಹೂಡಿಕೆ ಮಾಡಬೇಕೆಂದು ತಿಳಿಸಿಕೊಡಿ.

–ಕುಮಾರ್ ಎಚ್.ಎಸ್, ಊರು ತಿಳಿಸಿಲ್ಲ.

ನಿಮ್ಮ ಪ್ರಶ್ನೆ ಸಹಜವಾದದ್ದು ಹಾಗೂ ಮೂಲಭೂತವಾಗಿ ನಿಮ್ಮ ಹೂಡಿಕೆಯ ಮೊತ್ತವನ್ನು ಕಾಲಾನುಕ್ರಮದಲ್ಲಿ ವರ್ಧಿಸುವಂತೆ ಮಾಡುವುದು ಉದ್ದೇಶವಾಗಿದೆ ಎನ್ನುವುದು ಎಲ್ಲ ಹೂಡಿಕೆಗಳ ಮೂಲ ಆಶಯ. ಹೀಗಾಗಿ, ಈ ಅಂಕಣದ ಹಿಂದಿನ ಹಾಗೂ ಮುಂದಿನ ಸಂಚಿಕೆಗಳನ್ನು ಅವಕಾಶವಿದ್ದಾಗ ಓದುವಂತೆ ಉತ್ತಮ. ಇದಲ್ಲದೆ, ನಿಮ್ಮ ಪ್ರಶ್ನೆಗೆ ಸಂಬಂಧಿಸಿ, ಮೊದಲ ಹಂತದಿಂದಲೇ ಅಗತ್ಯ ಮಾಹಿತಿ ನೀಡುವುದಕ್ಕೋಸ್ಕರ ಈ ಕೆಳಗಿನ ಸಾಮಾನ್ಯ ಮಾಹಿತಿಗಳನ್ನು ಗಮನಿಸಿ ಹೂಡಿಕೆ ಆರಂಭಿಸಿ.

* ಮೊದಲ ಹಂತದಲ್ಲಿ ಮ್ಯೂಚುವಲ್ ಫಂಡ್ ಹೌಸ್‌ಗಳ ಮಾಹಿತಿ ಪಡೆದುಕೊಳ್ಳಿ. ಅನೇಕ ವರ್ಷಗಳ ವಿಶ್ವಾಸಾರ್ಹತೆ ಇರುವ ಹಾಗೂ ಹೂಡಿಕೆದಾರರ ದೊಡ್ಡ ಮೊತ್ತದ ಆಸ್ತಿ ಮೊತ್ತ ನಿರ್ವಹಿಸುವ ಫಂಡ್‌ಗಳಿಗೆ ಮೊದಲ ಆದ್ಯತೆ ಇರಲಿ. ಅದರಲ್ಲಿ ನಿಮ್ಮ ಹೂಡಿಕೆಯನ್ನು ಏಕ ಕಂತುಗಳಲ್ಲಿ ಮಾರುಕಟ್ಟೆ ಕೆಳ ಹಂತದಲ್ಲಿದ್ದಾಗ ಅಂದರೆ ಬಿಎಸ್‌ಸಿ ಅಥವಾ ಎನ್‌ಎಸ್‌ಸಿ ಮುಖ್ಯ ಸೂಚ್ಯಂಕಗಳು ಸತತ ಶೇ 5 ಅಥವಾ ಶೇ 10ರ ಕೆಳ ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದರೆ ಆ ಸಮಯ ನಿಧಾನವಾಗಿ ಹೂಡಿಕೆಗೆ ಅನುವಾಗಿ. ಮಾಸಿಕ ಕಂತುಗಳಲ್ಲೂ ಹೂಡಿಕೆಗೆ ಅವಕಾಶ ಇರುವುದನ್ನೇ ಹೆಚ್ಚಾಗಿ ಆಯ್ಕೆ ಮಾಡಿ.  

* ಅಗತ್ಯವಾಗಿ ನಿಮ್ಮ ಕೆವೈಸಿ ದಾಖಲೆ ಬ್ಯಾಂಕ್ ಖಾತೆ ಮಾಹಿತಿ, ನಾಮಿನಿ ಮಾಹಿತಿ ಭರಿಸಿ ಆನ್‌ಲೈನ್ ಮೂಲಕವೂ ಖಾತೆ ತೆರೆಯಬಹುದು.  

* ನಿಮ್ಮ ಹೂಡಿಕೆಯ ಕಾಲ ಮಿತಿ, ಉದ್ದೇಶ, ನೀವು ನಿರೀಕ್ಷಿಸುವ ಲಾಭ, ಮುಂದಿನ ದಿನಗಳಲ್ಲಿ ನಿಮ್ಮಲ್ಲಿ ಹೆಚ್ಚುವರಿ ಹೂಡಿಕೆಗೆ ಇರುವ ಹಣ, ಪ್ರತಿಕೂಲ ಸ್ಥಿತಿಗಳಲ್ಲಿ ನಿಮ್ಮ ಹೂಡಿಕೆ ಕೆಲವೊಮ್ಮೆ ಒಂದು ವರ್ಷಕ್ಕಿಂತ ದೀರ್ಘ ಅವಧಿ ಮಾರುಕಟ್ಟೆ ಚೇತರಿಸದಿದ್ದರೆ ಆ ಸಂದರ್ಭವನ್ನು ನಿಭಾಯಿಸುವ ಬಗ್ಗೆ ಪೂರ್ವ ಯೋಜನೆ ಸಿದ್ಧಪಡಿಸಿ.  

* ನಿಮ್ಮ ಹೂಡಿಕೆಯು ಏಕ ಕಂತಿನಲ್ಲಿ ಮಾಡುವುದಿದ್ದರೆ ಹಾಗೂ 5 ವರ್ಷಕ್ಕಿಂತ ಹೆಚ್ಚಿನ ಅವಧಿಗಾಗಿದ್ದರೆ ಈಕ್ವಿಟಿ ಹೂಡಿಕೆಗಳು ಉತ್ತಮ. ಮೂರರಿಂದ ಐದು  ವರ್ಷದ ಅವಧಿಗೆ ಈಕ್ವಿಟಿ ಫಂಡ್‌ಗಳು ಉತ್ತಮ. ಇವಲ್ಲದೆ ಒಂದು ನಿರ್ದಿಷ್ಟ ಕ್ಷೇತ್ರಕ್ಕೆ ಸಂಬಂಧಿಸಿದ ಹೂಡಿಕೆಗೆಗಳನ್ನು (ಉದಾ: ಬ್ಯಾಂಕಿಂಗ್, ಪಿಎಸ್‌ಯು, ಎನರ್ಜಿ, ಡಿವಿಡೆಂಡ್, ಟೆಕ್ನಾಲಜಿ, ಗೋಲ್ಡ್ ಫಂಡ್ ಇತ್ಯಾದಿ) ಕೂಡಾ ಆರಿಸಬಹುದು. ಆದರೆ ಇವೆಲ್ಲಾ ಈಕ್ವಿಟಿ ಫಂಡ್ ಆಗಿದ್ದು, ಆಯಾ ಕಾಲಕ್ಕೆ ತಕ್ಕಂತೆ ಆಗುವ ಆಯಾ ಕ್ಷೇತ್ರದ ಏರಿಳಿತಕ್ಕೆ ಸಂಬಂಧಿಸಿ ಲಾಭ-ನಷ್ಟ ನಿರ್ಣಯವಾಗುತ್ತದೆ. ನಿಮ್ಮ ಹೂಡಿಕೆ ಒಂದೆರಡು ವರ್ಷದ ಮಟ್ಟಿಗಾಗಿದ್ದರೆ ಈಕ್ವಿಟಿ ಸೇವಿಂಗ್ಸ್ ಫಂಡ್ ಅಥವಾ ಹೈಬ್ರಿಡ್ ಡೈನಮಿಕ್ ಫಂಡ್ ಉತ್ತಮ ಆಯ್ಕೆಯಾಗಬಹುದು. ಕಾರಣ ಈ ಫಂಡ್‌ನಲ್ಲಿ ಈಕ್ವಿಟಿ, ಡೆಬ್ಟ್ ಪ್ರಮಾಣವನ್ನು ಮಾರುಕಟ್ಟೆ ಸ್ಥಿತಿಗೆ ಅನುಗುಣವಾಗಿ ಬದಲಾಯಿಸಲಾಗುತ್ತದೆ.  
 
* ವಿವಿಧ ವರ್ಗದ ಹೂಡಿಕೆಗಳಿಗೆ ವಿವಿಧ ತೆರಿಗೆ ದರ ಇದೆ. ಇದು ಹೂಡಿಕೆಯ ಅವಧಿಗೆ ಹೊಂದಿಕೊಂಡು ಬದಲಾಗುತ್ತದೆ. ಇನ್ನೂ ಮುಖ್ಯವಾಗಿ, ನೀವು ಅಗತ್ಯವಾಗಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಓದಿ ತಿಳಿದು ಹೂಡಿಕೆಗೆ ಅನುವಾಗಿ.

ಪ್ರ

ನನ್ನ ಮಗ ಕಳೆದ ಒಂದೆರಡು ವರ್ಷ ಹಿಂದೆ ಓದು ಮುಗಿಸಿ ಖಾಸಗಿ ಕಂಪನಿಯಲ್ಲಿ ವೃತ್ತಿಯಲ್ಲಿದ್ದಾನೆ. ಓದಿದ್ದು ಎಂ.ಕಾಂ. ಆತನ ಪ್ರಸ್ತುತ ಮಾಸಿಕ ವೇತನ ₹40 ಸಾವಿರದ ಅಂದಾಜು. ಇದಲ್ಲದೆ, ಪಿಎಫ್, ಕಂಪನಿ ಉದ್ಯೋಗಿಗಳ ವೈದ್ಯಕೀಯ ವಿಮಾ ಇತ್ಯಾದಿ ಸೌಲಭ್ಯ ಇದೆ. ಆತ ಕಳೆದ ಕೆಲವು ತಿಂಗಳಿಂದ ಷೇರು ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಮಾಡುತ್ತಿದ್ದು, ಲಾಭ - ನಷ್ಟ ಎರಡೂ ಕಂಡಿದ್ದಾನೆ. ಒಟ್ಟಾರೆ ₹2-3 ಲಕ್ಷಗಳ ಹೂಡಿಕೆ ಇದೆ. ಆತನ ಕೆಲವು ತಿಂಗಳ ವೇತನ- ಉಳಿತಾಯ ಇದರಲ್ಲಿ ಬಳಕೆಯಾಗಿದೆ.

ನಾನು ನಿವೃತ್ತ ಶಿಕ್ಷಕಿಯಾಗಿರುವುದರಿಂದ ನನಗೆ ಮಾಸಿಕ ಪೆನ್ಶನ್ ಸುಮಾರು ₹25 ಸಾವಿರ ಸಿಗುತ್ತಿದೆ. ಈ ಮೊತ್ತವನ್ನೂ ಹೂಡಿಕೆ ಮಾಡುವ ಬಗ್ಗೆ ನನ್ನಲ್ಲಿ ಕೇಳಿರುತ್ತಾನೆ. ಆದರೆ, ಈ ಬಗ್ಗೆ ಹೆಚ್ಚೇನೂ ಮಾಹಿತಿ ನನಗಿಲ್ಲದ ಕಾರಣ ಈ ಬಗ್ಗೆ ನಿರ್ಧಾರ ಹೇಗೆ ಕೈಗೊಳ್ಳಬೇಕು ಎಂಬ ಬಗ್ಗೆ ಸ್ಥೂಲ ಮಾಹಿತಿ ಬೇಕಾಗಿದೆ. ಸ್ವತಃ ಆತನ ಹೂಡಿಕೆ ಊಹಿಸಿದಂತೆ ಲಾಭ ತಂದಿಲ್ಲ ಎಂಬುದನ್ನು ಆತನೇ ಖಚಿತಪಡಿಸಿದ್ದಾನೆ. ಈ ಸಂದಿಗ್ಧ ಸ್ಥಿತಿಯಲ್ಲಿ ಆತ ಯಾವ ರೀತಿ ಹೂಡಿಕೆ ಮಾಡಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿ. ಅದೇ ರೀತಿ ನನ್ನ ದುಡ್ಡು ಆತ ಹೇಗೆ ಬಳಸಿಕೊಳ್ಳಬಹುದು.

–ಹೇಮಲತಾ, ಶಿವಮೊಗ್ಗ

ನಿಮ್ಮ ಪ್ರಶ್ನೆಯಲ್ಲಿ ಹೇಳಿರುವ ಸಮಸ್ಯೆಯಿಂದ ತಿಳಿಯುವುದೇನೆಂದರೆ, ಅವಕಾಶ ಹಾಗೂ ಅಭದ್ರತೆ ಎರಡೂ ಒಳಗೊಂಡಿದೆ. ಯಾವತ್ತೂ ಉತ್ತಮ ಹೂಡಿಕೆಗೆ ಉತ್ತಮ ಲಾಭ ಬರುವ ಅವಕಾಶ ಇದ್ದೇ ಇದೆ. ಅದೇ ರೀತಿ ಅದನ್ನು ಸಮರ್ಥವಾಗಿ ನಿಭಾಯಿಸುವ ಚಾಕಚಕ್ಯತೆ, ಅದಕ್ಕೆ ಅಗತ್ಯ ಬೀಳುವಷ್ಟು ಸಮಯ ಎರಡನ್ನೂ ನೀಡಬೇಕಾಗುತ್ತದೆ. ಅದಿದ್ದಾಗಲೇ ಹೂಡಿಕೆ ಸರಿಯಾಗುವುದು.

ನಿಮ್ಮ ಮಗನ ವಿಚಾರದಲ್ಲಿ ಅಗತ್ಯವಾಗಿ ಪೋರ್ಟ್ ಫೋಲಿಯೊ ಮರು ಪರಿಶೀಲನೆ ಅಗತ್ಯವಿರಬಹುದು. ಇದಕ್ಕಾಗಿ ನುರಿತ ಹೂಡಿಕೆ ಸಲಹೆಗಾರರನ್ನು ಸಂಪರ್ಕಿಸಲಿ. ಇದಕ್ಕೂ ಮೊದಲು, ಯಾವತ್ತೂ ಹೂಡಿಕೆಗೂ ಮೊದಲು ಯದ್ವಾತದ್ವಾ ಮಾರುಕಟ್ಟೆ ದರ ಕಡಿಮೆ ಇರುವ ಷೇರುಗಳಾಗಿರಲಿ, ಯಾವುದೋ ಮಾಹಿತಿ ನೋಡಿ ಹೂಡಿಕೆ ಮಾಡುವ ಅಭ್ಯಾಸ ಬದಲಾಯಿಸಬೇಕಾಗಬಹುದು. ಅಪಾಯಕಾರಿ ಮಾರುಕಟ್ಟೆ ಪರಿಸ್ಥಿತಿಯಲ್ಲೂ ಎಷ್ಟೇ ಉತ್ತಮ ಕಂಪನಿಯ ಷೇರುಗಳಾದರೂ ಒಂದಷ್ಟು ನಷ್ಟ ಕಂಡುಕೊಳ್ಳುತ್ತವೆ. ಇದಲ್ಲದೆ, ಆಯಾ ಕಂಪನಿ ಹಾಗೂ ವಲಯವಾರು ವರದಿಗಳೂ ಒಟ್ಟಾರೆ ಹೂಡಿಕೆಯ ಮೇಲೆ ಪರಿಣಾಮ ಬೀರುತ್ತವೆ.

ನಿಮ್ಮ ಮಗ ಹೇಗಿದ್ದರೂ ಆರ್ಥಿಕ ಕ್ಷೇತ್ರದಲ್ಲಿ ಅನುಭವ ಹಾಗೂ ವಿದ್ಯಾಭ್ಯಾಸ ಹೊಂದಿರುವ ಕಾರಣ ಅವರ ಆ ಕ್ಷೇತ್ರದ ಅನುಭವ ಕೇವಲ ಕಂಪನಿಯ ಕೆಲಸಕ್ಕಲ್ಲದೆ ಸ್ವಂತ ಹೂಡಿಕೆಗೂ ಬಳಸಿಕೊಳ್ಳಲಿ. ಕೇವಲ ಹೂಡಿಕೆಗಿಂತ ಯಾವ ಕಂಪನಿಗಳಲ್ಲಿ ಹಾಗೂ ಯಾವ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕೆನ್ನುವ ಆಯ್ಕೆ ಮೊದಲ ಹಂತದ್ದು, ಅದನ್ನು ಪ್ರತಿ ತ್ರೈಮಾಸಿಕ ಫಲಿತಾಂಶದೊಡನೆ ಪರಾಮರ್ಶಿಸಿ ಹೂಡಿಕೆ ಮಾಡುವುದು ಎರಡನೆಯ ಹಂತ, ಪ್ರತಿ ಬಾರಿ ಯಾವ ಹಂತದಲ್ಲಿ ಲಾಭ ಗಳಿಸಿ ಹೊರ ಬರಬೇಕು ಅಥವಾ ನಷ್ಟ ಆಗುತ್ತಿರುವ ಸಮಯ ಯಾವ ಹಂತದಲ್ಲಿ ಹೊರ ಬರಬೇಕೆನ್ನುವ ಪೂರ್ವ ನಿರ್ಧರಿತ ಮಾಹಿತಿ ಇರಬೇಕು.

ಇನ್ನು ನಿಮ್ಮ ಹಣವನ್ನು ವ್ಯವಸ್ಥಿತ ಮಾಸಿಕ ಹೂಡಿಕೆಗೆ ಸೀಮಿತಗೊಳಿಸಿ. ಮೊದಲ ಆಯ್ಕೆ ಮ್ಯೂಚುವಲ್ ಫಂಡ್, ಇದು ಬೇಡವೆಂದಾದರೆ, ಷೇರುಗಳ ಎಸ್‌ಐಪಿ. ಇದರಿಂದ ಒಂದೇ ಬಾರಿ ಹೂಡಿಕೆ ಮಾಡಿ ನಷ್ಟ ಮಾಡಿಕೊಳ್ಳುವ ಅಪಾಯ ಕಡಿಮೆ ಇರುತ್ತದೆ. ಈ ವಿಚಾರವನ್ನು ಹಂತ ಹಂತದಲ್ಲಿ ಹೂಡಿಕೆ ಮಾಡುವ ಮೂಲಕ ನಿಭಾಯಿಸಿ. ಉತ್ತಮ ಕಂಪನಿಗಳ ಹುಡುಕಾಟ ಹಾಗೂ ಹೂಡಿಕೆಯ ನಂತರ ನಿಗಾ ಇರಿಸಿ ನಿರ್ಧಾರ ಕೈಗೊಳ್ಳುವುದು ನಮ್ಮ //ಗೈಮೆಯ// ಬಂಡವಾಳ ನಷ್ಟವಾಗದಂತೆ ನೆರವಾಗುತ್ತದೆ ಹಾಗೂ ಮುಂದೆ ಸಂಪತ್ತು ಸೃಷ್ಟಿಸಲು ಇದೇ ಮೂಲ ಬಂಡವಾಳ. ಇದಕ್ಕೆ ದೀರ್ಘ ಕಾಲದ ಹೂಡಿಕೆ ನಿರಂತರತೆ ಹಾಗೂ  ನಿರ್ಧಾರಗಳಲ್ಲಿ ಸ್ಥಿರತೆಯೂ ಅಗತ್ಯ.         

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT