ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಶ್ನೋತ್ತರ | ಬ್ಯಾ೦ಕ್‌ನಿಂದ ಎಷ್ಟು ಬಡ್ಡಿ ಬಂದರೆ ರಿಟರ್ನ್ಸ್ ಸಲ್ಲಿಸಬೇಕು?

Published 28 ಮೇ 2024, 23:43 IST
Last Updated 28 ಮೇ 2024, 23:43 IST
ಅಕ್ಷರ ಗಾತ್ರ

ಪ್ರಶ್ನೆ: ನಾನು ಕಳೆದ ಕೆಲವು ತಿಂಗಳಿನಿಂದ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದೇನೆ. ಇದರಲ್ಲಿ ನನ್ನ ಆಯ್ಕೆ ಹೆಚ್ಚಾಗಿ ಇಂಡೆಕ್ಸ್ ಫಂಡ್ ಆಗಿದೆ. ಇತ್ತೀಚೆಗೆ ಇಂಡೆಕ್ಸ್ ಮಾಹಿತಿ ನೋಡುತ್ತಿದ್ದಾಗ ತಿಳಿದು ಬಂದ ಅಂಶವೆಂದರೆ, ನಾನು ಹೂಡಿಕೆ ಆರಂಭಿಸಿದಾಗ ಇಂಡೆಕ್ಸ್ ಭಾಗವಾಗಿದ್ದ ಕೆಲವು ಷೇರುಗಳು ಪ್ರಸ್ತುತ ಬದಲಾಗುತ್ತಾ ಹೋಗಿವೆ. ನನ್ನ ಪ್ರಶ್ನೆ ಏನೆಂದರೆ, ಈ ಬದಲಾವಣೆಯಿಂದಾಗಿ ನಮಗೆ ಯಾವುದಾದರೂ ಲಾಭ, ನಷ್ಟ ಇದೆಯೇ? ನಾನು ಹೂಡಿಕೆ ಆರಂಭಿಸಿದ ಸಂದರ್ಭದಲ್ಲಿ ಇದ್ದ ಅದೇ ಷೇರುಗಳ ಏರಿಳಿತದ ಪರಿಣಾಮ ನಮ್ಮ ಎನ್‌ಎವಿ ಮೇಲೆ ಇದೆಯೇ? - ಪವನ್ ಆರ್., ಬೆಂಗಳೂರು.

ಉತ್ತರ: ಯಾವುದೇ ಇಂಡೆಕ್ಸ್ ಫಂಡ್‌ಗಳು ಆಯಾ ಸೂಚ್ಯಂಕದ ಆಧಾರದಲ್ಲಿ ಮೌಲ್ಯಮಾಪನಕ್ಕೆ ಒಳಪಡುತ್ತವೆ. ನಾವು ಹೂಡಿಕೆ ಮಾಡುವ ಮೊತ್ತವು ಒಟ್ಟಾರೆ ಸೂಚ್ಯಂಕದಲ್ಲಿ ಅಡಕವಾದ ಷೇರುಗಳ ಸಮ ಪ್ರಮಾಣದಲ್ಲಿ ಖರೀದಿಸಲಾಗುತ್ತದೆ. ಈ ಕೆಲಸವನ್ನು ಹೂಡಿಕೆದಾರರ ಪರವಾಗಿ ಫಂಡ್ ನಿರ್ವಹಣಾ ಸಂಸ್ಥೆಗಳು ಮಾಡುತ್ತವೆ. ಆಯಾ ಸಮಯ, ಸಂದರ್ಭಕ್ಕೆ ತಕ್ಕಂತೆ ಸೂಚ್ಯಂಕದಲ್ಲಿ ಬದಲಾವಣೆಯಾದಾಗ ಸಹಜವಾಗಿ ಫಂಡ್ ಎನ್‌ಎವಿಯಲ್ಲೂ ಬದಲಾವಣೆಯಾಗುತ್ತದೆ.

ಸಾಮಾನ್ಯವಾಗಿ ಸೂಚ್ಯಂಕ ಬದಲಾವಣೆಯಾಗುವ ಮೊದಲೇ ಸೂಚ್ಯಂಕ ನಿರ್ವಹಣಾ ಸಂಸ್ಥೆಗಳು ಪ್ರಕಟಣೆ ನೀಡುತ್ತವೆ. ಇದರಂತೆ ಆಯಾ ಫಂಡ್ ನಿರ್ವಹಣಾ ಸಂಸ್ಥೆಗಳು ಬದಲಾಗುವ ಸೂಚ್ಯಂಕದ ಭಾಗವಾಗಿರುವ ಕಂಪನಿಯ ಷೇರುಗಳನ್ನು ಮಾರಾಟ ಮಾಡಿ ಹೊಸದಾಗಿ ಸೇರ್ಪಡೆಗೊಳ್ಳುವ ಕಂಪನಿಯ ಷೇರುಗಳನ್ನು ಖರೀದಿಸುತ್ತವೆ. ಇದರಿಂದ ಆಯಾ ಸಂದರ್ಭದ ಷೇರುಗಳ ಮೌಲ್ಯವೇ ಹೂಡಿಕೆದಾರರಿಗೆ ಲಭ್ಯವಾಗುತ್ತದೆ.

ಒಂದು ಬಾರಿ ಷೇರು ಸೂಚ್ಯಂಕದ ಪಟ್ಟಿಯಿಂದ ಹೊರಬಿದ್ದ ಮೇಲೆ ಆ ಷೇರಿನ ಮೌಲ್ಯದಲ್ಲಿ ಯಾವುದೇ ಬದಲಾವಣೆಯಾದರೂ ಎನ್‌ಎವಿ ಮೇಲೆ ಪರಿಣಾಮ ಬೀರದು. ಬದಲಾಗಿ, ಹೊಸದಾಗಿ ಸೇರ್ಪಡೆಗೊಂಡ ಷೇರಿನ ಮೌಲ್ಯವನ್ನೇ ಪರಿಗಣಿಸಲಾಗುತ್ತದೆ.  

ಈ ರೀತಿಯ ಬದಲಾವಣೆಗಳು ವರ್ಷದಲ್ಲಿ ಕೆಲವೊಮ್ಮೆ ಆಗುತ್ತಿರುವುದು ಸಹಜ. ಹೀಗಾಗಿ, ಯಾವುದೇ ಷೇರು ಸೂಚ್ಯಂಕದ ಪಟ್ಟಿಯಿಂದ ಹೊರ ಹೋದಾಗ ಅಥವಾ ಸೇರ್ಪಡೆಯಾದಾಗ ಬಹುದೊಡ್ಡ ಬದಲಾವಣೆಯಾಗದ ಕಾರಣ ಹೂಡಿಕೆದಾರರ ಗಮನಕ್ಕೆ ಇದು ಬರದೆ ಹೋಗುತ್ತದೆ. ಹೀಗಾಗಿ, ಯಾವುದೇ ಆತಂಕ ಬೇಡ.

ಪ್ರಶ್ನೆ: ನನಗೆ 68 ವರ್ಷ. ಗ್ರಾಮೀಣ ಬ್ಯಾ೦ಕ್‌ವೊಂದರಲ್ಲಿ ಹಣವನ್ನು ಠೇವಣಿ ಇಟ್ಟಿದ್ದೇನೆ. ಈ ಮೊತ್ತ ಸುಮಾರು ₹18.84 ಲಕ್ಷ. ಇದನ್ನು ಬೇರೆ ಬೇರೆ ದಿನಗಳಂದು ಹೂಡಿಕೆ ಮಾಡಿದ್ದೇನೆ. ಇದರ ಮೇಲೆ ಬಂದ ವಾರ್ಷಿಕ ಬಡ್ಡಿ ₹1.83 ಲಕ್ಷ ಆಗಿದೆ. ಕೊರೊನಾ ಆರಂಭವಾಗುವ ಮೊದಲು ಒಂದು ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿದ್ದೆವು. ಈಗ ಬಡ್ಡಿ ಆದಾಯವಲ್ಲದೆ ನನಗೆ ಬೇರೆ ಯಾವುದೇ ನಿಶ್ಚಿತ ಆದಾಯ ಇಲ್ಲ. ಕೆಲವೊಮ್ಮೆ ಪೌರೋಹಿತ್ಯಕ್ಕೆ ಹೋಗುತ್ತೇನೆ- ಕೃಷ್ಣರಾವ್ ಸುಬ್ಬರಾವ್, ಬೋಳ ಗ್ರಾಮ, ಕೊಪ್ಪಳ ಜಿಲ್ಲೆ.

ಕಳೆದ 29 ವರ್ಷಗಳ ಹಿಂದೆ ಕಟ್ಟಿಸಿದ ಸ್ವಂತ ಮನೆ ಇದೆ. ಈ ಆಸ್ತಿ ಹೊರತಾಗಿ ಬೇರೆ ಯಾವುದೇ ಆಸ್ತಿ ಇಲ್ಲ. ಅಲ್ಲದೆ, ನನ್ನ ಪತ್ನಿ ಹೆಸರಲ್ಲಿ ಸುಮಾರು ₹4 ಲಕ್ಷ ಡೆಪಾಸಿಟ್ ಇದೆ. ಇದಕ್ಕೆ ಬಡ್ಡಿ ಬರುತ್ತದೆ. ನನ್ನ ಪ್ರಶ್ನೆ ಏನೆಂದರೆ ಬ್ಯಾಂಕ್‌ನವರು ಫಾರಂ 15ಜಿ/ಎಚ್ ಪಡೆದಿದ್ದಾರೆ. ಇದರ ಪರಿಣಾಮ ನಾನು ಆದಾಯ ತೆರಿಗೆ ರಿಟರ್ನ್ಸ್ ಭರಿಸಬೇಕೇ? ಬ್ಯಾ೦ಕ್‌ನಿಂದ ಎಷ್ಟು ಬಡ್ಡಿ ಬಂದರೆ ರಿಟರ್ನ್ಸ್ ಸಲ್ಲಿಸಬೇಕು?

ಉತ್ತರ: ತೆರಿಗೆ ರಿಟರ್ನ್ಸ್ ಸಲ್ಲಿಸಲು ನಿಮ್ಮ ಒಟ್ಟು ಆದಾಯ ಎಷ್ಟೆಂಬುದು ಮುಖ್ಯ. ಈಗಾಗಲೇ, ನೀವು ತಿಳಿಸಿರುವಂತೆ ಬರುವ ವಾರ್ಷಿಕ ಬಡ್ಡಿ ₹1.83 ಲಕ್ಷ ಎಂಬುದಾಗಿ ತಿಳಿಸಿದ್ದೀರಿ. ಬ್ಯಾಂಕ್‌ಗಳು ಸಾಮಾನ್ಯವಾಗಿ ಹಿರಿಯ ನಾಗರಿಕರಿಗೆ ಒಂದು ವರ್ಷಕ್ಕೆ ₹50,000 ಮೇಲಿನ ಮೊತ್ತವನ್ನು ಬಡ್ಡಿಯಾಗಿ ಒಂದು ವರ್ಷದಲ್ಲಿ ಪಾವತಿಸಿದಾಗ, ಫಾರಂ 15ಎಚ್ ಇಲ್ಲದಿದ್ದ ಸನ್ನಿವೇಶಗಳಲ್ಲಿ ಶೇ 10ರ ದರದಲ್ಲಿ ತೆರಿಗೆ ಕಡಿತ ಮಾಡುತ್ತವೆ.

ಆದರೆ, ನಿಮ್ಮ ವಿಚಾರದಲ್ಲಿ ನೀವು ಹಿರಿಯ ನಾಗರಿಕರಾಗಿರುವುದರಿಂದ ಈಗಾಗಲೇ ಫಾರಂ 15ಎಚ್ ಸಲ್ಲಿಸಿದ್ದೀರಿ ಹಾಗೂ ಬೇರೆ ಯಾವುದೇ ಆದಾಯ ಇಲ್ಲ ಎಂಬುದನ್ನು ಹೇಳಿದ್ದೀರಿ. ಒಂದು ವೇಳೆ ನಿಮ್ಮ ಒಟ್ಟು ತೆರಿಗೆಗೊಳಪಡುವ ಆದಾಯ, ತೆರಿಗೆ ಮಿತಿ ಮೀರಿರದಿದ್ದರೆ ಇಂತಹ ಫಾರಂ ಸಲ್ಲಿಸಬಹುದು. ತೆರಿಗೆಗೊಳಪಡುವ ಆದಾಯಕ್ಕಿಂತ ಹೆಚ್ಚಿನ ಬಡ್ಡಿ ಆದಾಯ ಇದ್ದ ಸಂದರ್ಭದಲ್ಲಿ ಬ್ಯಾಂಕ್‌ಗಳು ಇಂತಹ ಫಾರಂ ಅನ್ನು ತಿರಸ್ಕರಿಸಬಹುದು. ಕಾರಣ ತೆರಿಗೆಗೊಳಪಡುವ ಮಿತಿಗಿಂತ ಅಧಿಕ ಆದಾಯ ಇದ್ದಾಗ ಸಹಜವಾಗಿ ತೆರಿಗೆ ಅನ್ವಯವಾಗುತ್ತದೆ ಎಂಬುದೇ ಇದಕ್ಕೆ ಕಾರಣ.

ತೆರಿಗೆಗೊಳಪಡುವ ಆದಾಯ ₹3 ಲಕ್ಷ ಮೀರಿದಾಗ ರಿಟರ್ನ್ಸ್ ಸಲ್ಲಿಸಿ ಹಾಗೂ ನಿಮಗೆ ಲಭ್ಯವಿರುವ ವಿನಾಯಿತಿ ಪಡೆಯಿರಿ. ಇದರ ಅರ್ಥ ತೆರಿಗೆ ಅನ್ವಯವಾಗುತ್ತದೆ ಎಂಬ ಕಾರಣಕ್ಕಲ್ಲ. ಆದರೆ, ಅದು ನಮ್ಮ ಆದಾಯ ವಿವರ ಸಲ್ಲಿಕೆಯ ಕರ್ತವ್ಯದ ಭಾಗವಾಗಿ ಅಷ್ಟೇ.

ನೀವು ಈಗಾಗಲೇ ಮೂಲ ವಿನಾಯಿತಿ ಮಿತಿಯೊಳಗೆ ಬರುವ ಕಾರಣ ನಿಮಗೆ ತೆರಿಗೆ ಬರುವುದಿಲ್ಲ ಹಾಗೂ ರಿಟರ್ನ್ಸ್ ಸಲ್ಲಿಸುವ ಅಗತ್ಯ ಇಲ್ಲ. ಹಿರಿಯ ನಾಗರಿಕರಿಗೆ, ಹೊಸ ಹಾಗೂ ಹಳೆಯ ತೆರಿಗೆ ಪದ್ಧತಿಯಡಿ ಈ ಮಿತಿ ₹3 ಲಕ್ಷ ಇದೆ. ಒಂದು ವೇಳೆ ಈ ಫಾರಂ 15ಎಚ್ ಅನ್ನು ಪ್ರತಿವರ್ಷ ಸಲ್ಲಿಸದಿದ್ದಲ್ಲಿ ಬ್ಯಾಂಕ್‌ಗಳು ತೆರಿಗೆ ಕಡಿತ ಮಾಡಿ ತೆರಿಗೆಯನ್ನು ನಿಮ್ಮ ಪ್ಯಾನ್ ಸಂಖ್ಯೆಯಡಿ ಸರ್ಕಾರಕ್ಕೆ ಪಾವತಿಸುತ್ತವೆ. ಯಾವುದೇ ಕಾರಣಕ್ಕೆ ಹೆಚ್ಚುವರಿ ಕಡಿತವಾದ ತೆರಿಗೆಯನ್ನು ರಿಫಂಡ್ ಪಡೆದುಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT