ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗಳಿಗೆ ಪರಿಹಾರ

Published : 10 ಜೂನ್ 2025, 23:28 IST
Last Updated : 10 ಜೂನ್ 2025, 23:28 IST
ಫಾಲೋ ಮಾಡಿ
Comments
ಪ್ರ

ನಾನು ವಿಮಾ ಪಾಲಿಸಿ ಮಾಡಿಸಬೇಕೆಂದಿದ್ದೇನೆ. ಅನೇಕ ಬಗೆಯ ಪಾಲಿಸಿಗಳ ಬಗ್ಗೆ ಜಾಹೀರಾತುಗಳಲ್ಲಿ ನೋಡಿದ್ದೇನೆ. ನಾನು ಉದ್ಯೋಗಿಯಾಗಿದ್ದು ನನಗೆ ಪತ್ನಿ, ಮಕ್ಕಳು ಹಾಗೂ ನನ್ನ ಹೆತ್ತವರಿದ್ದಾರೆ. ಹೀಗಿರುವಾಗ ಯಾವ ರೀತಿಯ ವಿಮೆಯನ್ನು ಆಯ್ಕೆ ಮಾಡಬಹುದು?

ನೀವು ಸೂಕ್ತವಾದ ವಿಮೆಯ ಆಯ್ಕೆ ಮಾಡುವಾಗ ಆರ್ಥಿಕ ಸುರಕ್ಷತೆ, ವೈದ್ಯಕೀಯ ವೆಚ್ಚಗಳ ನಿರ್ವಹಣೆ ಹಾಗೂ ಭವಿಷ್ಯದ ಕೆಲವು ಖರ್ಚುಗಳನ್ನು ಗಮನಿಸಬೇಕಿರುವುದು ಅನಿವಾರ್ಯ.

ನೀವು ಕುಟುಂಬಕ್ಕೆ ಆದಾಯ ಗಳಿಸುವ ವ್ಯಕ್ತಿಯಾಗಿದ್ದರೆ, ಅವಧಿ ವಿಮೆಯನ್ನು ನಿಮ್ಮ ನಿರೀಕ್ಷಿತ ಪ್ರೀಮಿಯಂ ಹಾಗೂ ಪರಿಹಾರದ ಮೊತ್ತ ಗಮನಿಸಿ ನಿರ್ಧರಿಸಿ. ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ವಿಮಾ ಮೊತ್ತ ದೊರಕುವುದು ಇದರ ವಿಶೇಷ. ಆದರೆ ಇದು ವಾರ್ಷಿಕ ವೆಚ್ಚವಾಗಿರುತ್ತದೆ. ಪತ್ನಿ, ಮಕ್ಕಳು ಹಾಗೂ ಹೆತ್ತವರಿಗೂ ಅನ್ವಯವಾಗುವ ಫ್ಯಾಮಿಲಿ ಫ್ಲೋಟರ್ ಆರೋಗ್ಯ ವಿಮೆಯನ್ನು ತೆಗೆದುಕೊಳ್ಳಬಹುದು. ಇದು ಆಸ್ಪತ್ರೆಗೆ ದಾಖಲಾದಾಗ ಆಗುವ ಖರ್ಚುಗಳು, ಶಸ್ತ್ರಚಿಕಿತ್ಸೆ ಹಾಗೂ ಇತರ ಚಿಕಿತ್ಸೆ, ಔಷಧಗಳ ಖರ್ಚುಗಳನ್ನು ಭರಿಸಲು ನೆರವಾಗುತ್ತದೆ. ಮಕ್ಕಳ ವಿದ್ಯಾಭ್ಯಾಸ ಅಥವಾ ಭವಿಷ್ಯದ ಉದ್ದೇಶಕ್ಕಾಗಿ ಮಕ್ಕಳ ಭದ್ರತಾ ಯೋಜನೆ ಅಥವಾ ಉಳಿತಾಯ ಯೋಜನೆಗಳನ್ನೂ ಪರಿಗಣಿಸಬಹುದು.

ಇದಲ್ಲದೆ ನಿಮ್ಮ ನಿವೃತ್ತಿ ನಂತರದ ಜೀವನಕ್ಕೆ ಕೂಡ ಸರಿಹೊಂದುವ ಯೋಜನೆಗಳಿವೆ.  ಈ ಯೋಜನೆಗಳಲ್ಲಿ ಹೂಡಿಕೆಯು ಸೇವಾ ಅವಧಿಯಲ್ಲಿ ನಡೆಯುತ್ತದೆ ಮತ್ತು ನಿವೃತ್ತಿಯ ನಂತರ ನಿಯಮಿತವಾಗಿ ಪಿಂಚಣಿ ರೂಪದಲ್ಲಿ ಹಣ ನೀಡಲಾಗುತ್ತದೆ. ಇದರಿಂದ ಜೀವನದ ಇಳಿವಯಸ್ಸಿನಲ್ಲಿ ಖರ್ಚು ನಿರ್ವಹಣೆಗೆ ಸಹಾಯವಾಗುತ್ತದೆ.

ದೀರ್ಘಾವಧಿ ವಿಮಾ ಯೋಜನೆ ಪಡೆದರೆ ವ್ಯಕ್ತಿ ಬದುಕಿರುವ ತನಕ ಅಥವಾ 100ನೇ ವಯಸ್ಸಿನತನಕ ವಿಮಾ ಯೋಜನೆಯ ಲಭ್ಯತೆ ಇರುತ್ತದೆ. ಮಧ್ಯದಲ್ಲಿ ನಿಗದಿತ ಮೊತ್ತವನ್ನು ನೀಡುವ ಸೌಲಭ್ಯಗಳೂ ಇವೆ. ಯಾವುದೇ ಯೋಜನೆ ಪಡೆಯುವ ಮೊದಲು ಅದರ ಬಗ್ಗೆ ಅರಿವು, ಆ ಕಂಪನಿಗಳು ಇರಿಸುವ ಷರತ್ತುಗಳ ಮಾಹಿತಿಗಳನ್ನು ಪಡೆಯಿರಿ. ಈ ಎಲ್ಲ ವಿಮೆಗಳ ಆಯ್ಕೆ ನಿಮ್ಮ ವಯಸ್ಸು, ಆರೋಗ್ಯ, ಪ್ರೀಮಿಯಂ ಪಾವತಿ ಸಾಮರ್ಥ್ಯ ಹಾಗೂ ಉದ್ದೇಶಿತ ಭವಿಷ್ಯದ ಯೋಜನೆಗಳನ್ನು ಆಧರಿಸಿದೆ.

ಪ್ರ

ನಾನು 52 ವರ್ಷ ವಯಸ್ಸಿನ ಪದವೀಧರ ಮಹಿಳೆ. ಮ್ಯೂಚುವಲ್ ಫಂಡ್ ಹಂಚಿಕೆ (ಡಿಸ್ಟ್ರಿಬ್ಯೂಟರ್) ಏಜೆನ್ಸಿ ತೆಗೆದುಕೊಳ್ಳಲು ಯೋಚಿಸುತ್ತಿದ್ದೇನೆ. ನಾನು ಸದ್ಯ ಎಲ್‌ಐಸಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಈ ಕ್ಷೇತ್ರದಲ್ಲಿ ಅಗತ್ಯವಿರುವ ಪ್ರವೇಶ ಪರೀಕ್ಷೆ ಬರೆಯದೇ ಈ ಏಜೆನ್ಸಿ ತೆಗೆದುಕೊಳ್ಳುವುದು ಸಾಧ್ಯವೇ ಎಂಬುದನ್ನು ತಿಳಿಸಿ. ಈ ಕ್ಷೇತ್ರದಲ್ಲಿ ಅಗತ್ಯವಿರುವ ವಿದ್ಯಾರ್ಹತೆಗಳು, ಕೌಶಲಗಳು, ಜವಾಬ್ದಾರಿಗಳು, ಸಂಪಾದನೆಯ ಸಾಧ್ಯತೆ ಮತ್ತು ಯಾರನ್ನು ಸಂಪರ್ಕಿಸಬೇಕೆಂಬ ವಿಷಯಗಳನ್ನು ವಿವರವಾಗಿ ತಿಳಿಸಿ.

ನೀವು ಪದವೀಧರೆ, ಪ್ರಸ್ತುತ ಎಲ್‌ಐಸಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದೀರಿ. ನಿಮಗೆ ಹಣಕಾಸು ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸುವ ಮತ್ತು ಅವುಗಳನ್ನು ಮಾರಾಟ ಮಾಡುವ ಉತ್ತಮ ಅನುಭವವಿದೆ ಎಂಬುದು ಇದರಿಂದ ಅರ್ಥೈಸಬಹುದಾದ ವಿಷಯ. ಈ ಹಿನ್ನೆಲೆಯಲ್ಲಿ ಮ್ಯೂಚುವಲ್ ಫಂಡ್ ಹಂಚಿಕೆ (ಡಿಸ್ಟ್ರಿಬ್ಯೂಟರ್) ಏಜೆನ್ಸಿ ಆರಂಭಿಸಲು ನೀವು ಯೋಚಿಸುತ್ತಿರುವುದು ಅತ್ಯಂತ ಸೂಕ್ತ ಮತ್ತು ಸರಿಯಾದ ಆಯ್ಕೆಯಾಗಿದೆ. ಆದರೆ, ಮ್ಯೂಚುವಲ್ ಫಂಡ್ ಏಜೆಂಟ್ ಆಗಲು ಕೆಲವೆಲ್ಲ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹೂಡಿಕೆದಾರರ ಹಿತವನ್ನು ಗಮನದಲ್ಲಿ ಇರಿಸಿಕೊಂಡು ಈ ನಿಯಮಗಳು ಜಾರಿಗೆ ಬಂದಿವೆ.

ನೀವು ಭಾರತೀಯ ಮ್ಯೂಚುವಲ್ ಫಂಡ್‌ಗಳ ಸಂಘಟನೆಯಿಂದ (ಎಎಂಎಫ್‌ಐ) ಪ್ರಮಾಣೀಕೃತವಾಗಿರುವ ಏಜೆಂಟ್ ನೊಂದಣಿ ಸಂಖ್ಯೆಯಾದ ‘ಎಆರ್‌ಎನ್’  ಪಡೆಯಬೇಕು. ಇದಕ್ಕಾಗಿ, ನೀವು ಮೊದಲು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೆಕ್ಯುರಿಟೀಸ್ ಮಾರ್ಕೆಟ್ (ಎನ್‌ಐಎಸ್‌ಎಂ) ನಡೆಸುವ ‘ಸೀರೀಸ್ V-ಎ: ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್‌ಗಳ ಪ್ರಮಾಣಪತ್ರ ಪರೀಕ್ಷೆ’ ಎಂಬ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಆಗಬೇಕಾಗುತ್ತದೆ. ಈ ಪರೀಕ್ಷೆಯು ಡಿಸ್ಟ್ರಿಬ್ಯೂಟರ್ ಆಗುವ ಗುರಿ ಹೊಂದಿದ ಎಲ್ಲರಿಗೂ ಕಡ್ಡಾಯವಾಗಿದ್ದು, ಯಾವುದೇ ವಿನಾಯಿತಿ ಇಲ್ಲ. ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ, ನೀವು ಎಎಂಎಫ್‌ಐನಲ್ಲಿ ನೊಂದಾಯಿಸಿಕೊಂಡು ಎಆರ್‌ಎನ್ ಪಡೆಯಬಹುದು. ಒಂದು ವೇಳೆ ನೀವು ಒಂದು ಸಂಸ್ಥೆಯನ್ನು ಹುಟ್ಟುಹಾಕಿ, ಅದರ ಮೂಲಕ ಈ ವಿತರಣಾ ವ್ಯವಹಾರ ನಡೆಸುವ ಉದ್ದೇಶ ಹೊಂದಿದ್ದರೆ, ನಿಮ್ಮ ಸಂಸ್ಥೆಯ ಒಬ್ಬ ಉದ್ಯೋಗಿಯಾದರೂ ಈ ಪರೀಕ್ಷೆಯಲ್ಲಿ ಉತ್ತೀರ್ಣ ಆಗಿರಬೇಕು.

ಇನ್ನು ಆದಾಯದ ಅವಕಾಶದ ಬಗ್ಗೆ ಹೇಳುವುದಾದರೆ, ಮೇಲಿನ ನಿಯಂತ್ರಣಾತ್ಮಕ ಮಾರ್ಗಸೂಚಿಯ ಪ್ರಕಾರ, ಮ್ಯೂಚುವಲ್ ಫಂಡ್ ಆಸ್ತಿ ನಿರ್ವಹಣಾ ಸಂಸ್ಥೆಗಳಿಂದ ಕಮಿಷನ್ ಸಿಗುತ್ತದೆ. ಇದಲ್ಲದೆ ಯಾವುದೇ ಇತರ ರೂಪದ ಪ್ರೋತ್ಸಾಹ ಧನಗಳನ್ನು ಡಿಸ್ಟ್ರಿಬ್ಯೂಟರ್‌ಗಳಿಗೆ ನೀಡುವುದಕ್ಕೆ ಅನುಮತಿ ಇಲ್ಲ. ಮೊದಲ ಹಂತದಲ್ಲಿ ಬರುವ ಆದಾಯ ಕಡಿಮೆ ಇದ್ದರೂ , ಮುಂದೆ ಸಹಜವಾಗಿ ವ್ಯವಹಾರ ವೃದ್ಧಿಸಿದಂತೆ ಆದಾಯವೂ ಅದಕ್ಕೆ ಅನುಗುಣವಾಗಿ ಹೆಚ್ಚುತ್ತದೆ.

ಈ ಕ್ಷೇತ್ರದಲ್ಲಿ ಯಶಸ್ಸು ಪಡೆಯಲು ನೀವು ಹೊಂದಿರಬೇಕಾದ ಅರ್ಹತೆಗಳಲ್ಲಿ, ಹಣಕಾಸಿನ ಸರಿಯಾದ ಅರಿವು ಮುಖ್ಯವಾಗಿದೆ. ಇದು ಗ್ರಾಹಕರ ಸಂದೇಹ ಹಾಗೂ ಅವರು ಯಾವ ಹಂತದಲ್ಲಿದ್ದಾರೆ ಹಾಗೂ ಆ ಸಂದರ್ಭಕ್ಕೆ ಅನುಗುಣವಾಗಿ ಮುಂದೆ ಯಾವ ಆಯ್ಕೆ ಉತ್ತಮ ಎಂಬ ಅರಿವು ಮೂಡಿಸುವ ಜವಾಬ್ದಾರಿ ಇದ್ದರೆ ಮುಂದಿನ ನಡೆ ಬಹು ಸುಲಭ.  ನೀವು ವಿಮಾ ಏಜೆಂಟ್ ಆಗಿ ಗಳಿಸಿರುವ ಅನುಭವವನ್ನು ಮ್ಯೂಚುವಲ್ ಫಂಡ್ ಕ್ಷೇತ್ರದಲ್ಲೂ ಯಶಸ್ವಿಯಾಗಿ ಅನ್ವಯಿಸಲು ಪ್ರಯತ್ನಿಸಿ. ನೀವು ಹೆಚ್ಚಿನ ಮಾಹಿತಿಗಾಗಿ ಎಎಂಎಫ್‌ಐ ಜಾಲತಾಣ www.amfiindia.com ಮತ್ತು ಎನ್‌ಐಎಸ್‌ಎಂ www.nism.ac.in ತಾಣವನ್ನು ಭೇಟಿ ನೀಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT