ಬುಧವಾರ, ಆಗಸ್ಟ್ 17, 2022
28 °C
ಮರಳಿ ಬಾರದ ಉತ್ತರ ಭಾರತೀಯ ಕಾರ್ಮಿಕರು: ಮರಳಿನ ಕೊರತೆ, ಇ–ಸ್ವತ್ತಿನ ರಗಳೆಯಿಂದಲೂ ಸಮಸ್ಯೆ

ಉತ್ತರ ಕನ್ನಡದಲ್ಲಿ ರಿಯಲ್ ಎಸ್ಟೇಟ್ ಉದ್ದಿಮೆ ಸಂಕಷ್ಟ ದುಪ್ಪಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯಲ್ಲಿ ಕೊರೊನಾಗೂ ಮೊದಲು ರಿಯಲ್ ಎಸ್ಟೇಟ್ ಉದ್ಯಮ ಸಾಧಾರಣ ಪ್ರಗತಿಯಲ್ಲಿತ್ತು. ಜಿಲ್ಲಾ ಕೇಂದ್ರದಲ್ಲಿ ಹೊಸ ಕಟ್ಟಡಗಳು ಭಾರಿ ಸಂಖ್ಯೆಯಲ್ಲಿ ತಲೆಯೆತ್ತದಿದ್ದರೂ ಅಲ್ಲೊಂದು ಇಲ್ಲೊಂದು ಪ್ರಗತಿಯಲ್ಲಿದ್ದವು. ಆದರೆ, ಲಾಕ್‌ಡೌನ್ ಘೋಷಣೆಯಾದ ಬಳಿಕ ತಮ್ಮ ಊರಿಗೆ ತೆರಳಿದ್ದ ಬಹುತೇಕ ಕಾರ್ಮಿಕರು ಮರಳಿಲ್ಲ. ಇದು ಉದ್ಯಮದ ಮೇಲೆ ಪರಿಣಾಮ ಬೀರಿದೆ.

ಕಾರವಾರದಲ್ಲಿ ಕೆಲಸ ಮಾಡುತ್ತಿದ್ದ ಕಟ್ಟಡ ಮತ್ತು ಇತರ ನಿರ್ಮಾಣಗಳ ಕಾರ್ಮಿಕರಲ್ಲಿ ಬಹುತೇಕರು ಹೊರ ರಾಜ್ಯದವರಾಗಿದ್ದರು. ಕಟ್ಟಡ ನಿರ್ಮಾಣದಲ್ಲಂತೂ ಬಿಹಾರ, ಉತ್ತರಪ್ರದೇಶದ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಂಡಿದ್ದರು. ಲಾಕ್‌ಡೌನ್ ಕಾರಣದಿಂದ ನಗರ ತೊರೆದವರಲ್ಲಿ ಮರಳಿ ಬಂದವರು ಅತಿ ಕಡಿಮೆ.

ಕೆಲವೆಡೆ ಕಾರ್ಮಿಕರಿದ್ದರೂ ಮರಳಿನ ಕೊರತೆ ಎದುರಾಯಿತು. ಜೊತೆಗೇ ಆರ್ಥಿಕ ಮುಗ್ಗಟ್ಟು ಜನರನ್ನು ಇನ್ನಿಲ್ಲದಂತೆ ಕಂಗೆಡಿಸಿತು. ಕೆಲವರು ಅರ್ಧಬಂರ್ಧ ನಿರ್ಮಾಣ ಮಾಡಿದ ಕಟ್ಟಡಗಳನ್ನು ಬ್ಯಾಂಕ್, ಖಾಸಗಿ ಮೂಲಗಳಿಂದ ಸಾಲ ಪಡೆದು ಪೂರ್ಣಗೊಳಿಸುತ್ತಿದ್ದಾರೆ. ಆದರೆ, ಅದರಿಂದ ಎಷ್ಟರ ಮಟ್ಟಿಗೆ ನಷ್ಟ ಕಡಿಮೆ ಮಾಡಿಕೊಳ್ಳಲು ಸಾಧ್ಯ ಎಂಬ ಲೆಕ್ಕಾಚಾರವೂ ಮಾಡುತ್ತಿದ್ದಾರೆ.

ಲಾಕ್‌ಡೌನ್ ಹಂತಹಂತವಾಗಿ ತೆರವಾದ ಬಳಿಕ ಅಲ್ಲೊಂದು ಇಲ್ಲೊಂದು ಕಟ್ಟಡಗಳ ನಿರ್ಮಾಣ ಶುರುವಾಗಿದೆ. ಆದರೆ, ನಿವೇಶನಗಳು, ಅಪಾರ್ಟ್‌ಮೆಂಟ್‌ಗಳ ಖರೀದಿ ಕಡಿಮೆಯಾಗಿದೆ. ಹಾಗೆಂದು ನಗರಭಾಗದಲ್ಲಿ ಸ್ವತ್ತಿನ ದರವೇನೂ ಇಳಿಕೆಯಾಗಿಲ್ಲ. ಜಿಲ್ಲೆಯ ಎಲ್ಲ ಭಾಗದಲ್ಲೂ ಇದೇ ಪರಿಸ್ಥಿತಿಯಿದೆ.

ಶಿರಸಿ

ನಗರದ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಕೊರೊನಾ ಕರಿನೆರಳು ಚೆಲ್ಲಿದೆ. ಮಾರ್ಚ್ ಬಳಿಕ ನಿವೇಶನಗಳ ಖರೀದಿ, ಮಾರಾಟ ತೀರಾ ಇಳಿಮುಖಗೊಂಡಿದೆ. ನಮೂನೆ–3, ಖಾತಾ ಬದಲಾವಣೆ ಸಮಸ್ಯೆಯಿಂದ ಕಂಗೆಟ್ಟಿದ್ದ ಉದ್ಯಮಿಗಳಿಗೆ ಕೊರೊನಾ ಗಾಯದ ಮೇಲೆ ಬರೆ ಎಳೆಯುವಂತೆ ಮಾಡಿದೆ.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸೈಟುಗಳ ವ್ಯವಹಾರ ಅರ್ಧಕ್ಕಿಂತ ಕಡಿಮೆ ಆಗಿದೆ. ಲಾಕ್‍ಡೌನ್ ಬಳಿಕ ಹಲವು ವ್ಯವಹರ ಚಟುವಟಿಕೆಗೂ ಪೆಟ್ಟು ಬಿದ್ದಿದ್ದರಿಂದ ಹಣದ ಹರಿವು ಕುಸಿದಿದೆ. ಇದರಿಂದ ನಗರ ವ್ಯಾಪ್ತಿಯಲ್ಲಿ ಭೂಮಿ ಖರೀದಿಗೆ ಜನ ಆಸಕ್ತಿ ತೋರುತ್ತಿಲ್ಲ’ ಎನ್ನುತ್ತಾರೆ ಉದ್ಯಮಿ ರಾಜು ಬಳ್ಳಾರಿ.

ಇದರ ನೇರ ಪರಿಣಾಮ ಕಟ್ಟಡ ನಿರ್ಮಾಣದ ಮೇಲೂ ಬೀರಿದೆ. ನಿವೇಶನಗಳ ಕೊಡು– ಕೊಳ್ಳುವಿಕೆ ಇಲ್ಲದ ಕಾರಣ ಹೊಸದಾಗಿ ಮನೆಗಳ ನಿರ್ಮಾಣ ನಡೆಯುತ್ತಿಲ್ಲ. ತಾಲ್ಲೂಕಿನಲ್ಲಿ ನಿರ್ಮಾಣ ಉದ್ಯಮವನ್ನೇ ನಂಬಿರುವ ಎಂಟು ಸಾವಿರಕ್ಕಿಂತ ಹೆಚ್ಚು ಕಾರ್ಮಿಕರಿದ್ದರು. ಆ ಪೈಕಿ ಲಾಕ್‍ಡೌನ್ ಸಡಿಲಿಕೆಗೊಂಡ ಬಳಿಕ ಹಲವರು ಮೂಲ ಊರು ಉತ್ತರ ಕರ್ನಾಟಕದತ್ತ ಮರಳಿದ್ದಾರೆ.

ಕುಮಟಾ: ತಾಲ್ಲೂಕಿನಲ್ಲಿ ಲಾಕ್‍ಡೌನ್ ಹೊಡೆತಕ್ಕ ಸಿಕ್ಕಿ ನೆಲ ಕಚ್ಚಿದ್ದ ರಿಯಲ್ ಎಸ್ಟೇಟ್ ಹಾಗೂ ಕಟ್ಟಡ ನಿರ್ಮಾಣ ಉದ್ಯಮ ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಈ ಉದ್ಯಮವನ್ನು ಸದಾ ಕಾಡುವ ಉಸುಕು, ಕಲ್ಲು, ಜಲ್ಲಿ ಮುಂತಾದ ಅಗತ್ಯ ಸಾಮಗ್ರಿಗಳ ಕೊರತೆ ಹಾಗೂ ಕುಶಲ ಕಾರ್ಮಿಕರ ಅಲಭ್ಯತೆ ಇನ್ನಷ್ಟು ಹೊಡೆತ ಕೊಟ್ಟಿದೆ.

ಅಕ್ಟೋಬರ್ ತಿಂಗಳಲ್ಲಿ ಸಿಹಿನೀರಿನ ಉಸುಕು ಸಿಕ್ಕರೆ ಕಟ್ಟಡ ಕಾಮಗಾರಿ ವೇಗವಾಗಿ ನಡೆಯುತ್ತದೆ. ಆದರೆ, ಪ್ರತಿ ವರ್ಷ ಡಿಸೆಂಬರ್ ತಿಂಗಳವರೆಗೆ ಸರ್ಕಾರ ಉಸುಕು ತೆಗೆಯಲು ಅನುಮತಿ ನೀಡದ ಕಾರಣ ಕಟ್ಟಡ ಕಾಮಗಾರಿಗೆ ವೇಗದ ಚಾಲನೆ ಸಿಗುವುದಿಲ್ಲ. ಈ ಭಾಗದಲ್ಲಿ ಉಸುಕು ತೆಗೆಯುವುದು, ಬಡಿಗ ವೃತ್ತಿ, ಗಾರೆ, ಕಾಂಕ್ರೀಟ್, ಗ್ರಾನೈಟ್ ನೆಲಹಾಸು, ಟೈಲ್ಸ್ ಕೆಲಸ ಮಾಡುವವರೆಲ್ಲ ಹೆಚ್ಚಾಗಿ ಬಿಹಾರ ಮುಂತಾದ ಹೊರ ರಾಜ್ಯ ಕಾರ್ಮಿಕರು. ಲಾಕ್ ಡೌನ್ ಸಂದರ್ಭದಲ್ಲಿ ಅವರೆಲ್ಲ ಊರಿಗೆ ಹೋಗಿದ್ದರಿಂದ ಕಟ್ಟಡ ನಿರ್ಮಾಣ ಉದ್ಯಮಕ್ಕೆ ಹೊಡೆತ ಬಿದ್ದಿತ್ತು.

ಮುಂಡಗೋಡ

ತಾಲ್ಲೂಕಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಲಾಕ್‍ಡೌನ್ ನಂತರ ಇನ್ನೂ ಚೇತರಿಕೆ ಕಂಡಿಲ್ಲ. ಪ್ರಮುಖವಾಗಿ ಟಿಬೆಟನ್ ಕಾಲೊನಿಯಲ್ಲಿ ಪ್ರತಿನಿತ್ಯ 700 ಕೂಲಿಕಾರ್ಮಿಕರು ನಿರ್ಮಾಣ ಕ್ಷೇತ್ರದಲ್ಲಿ ದುಡಿಯುತ್ತಿದ್ದರು. ಆದರೆ, ಲಾಕ್‍ಡೌನ್ ನಂತರವೂ ಬೃಹತ್ ಕಟ್ಟಡಗಳ ನಿರ್ಮಾಣ ಕಾರ್ಯ ಮೊದಲಿನ ವೇಗ ಪಡೆದುಕೊಂಡಿಲ್ಲ. ಇದೇ ಕೆಲಸವನ್ನು ನಂಬಿದ್ದ ಕಾರ್ಮಿಕರು, ಸದ್ಯ ಶುಂಠಿ ಕೀಳುವ ಕೆಲಸದತ್ತ ಮುಖ ಮಾಡಿದ್ದಾರೆ.

ಮೊದಲಿಗೆ ರಿಯಲ್ ಎಸ್ಟೇಟ್ ಕ್ಷೇತ್ರವೂ ಆರಕ್ಕೇರದ ಮೂರಕ್ಕಿಳಿಯದ ಪರಿಸ್ಥಿತಿಯಲ್ಲಿತ್ತು. ಕೋವಿಡ್ ನಂತರ ಈ ಕ್ಷೇತ್ರದಲ್ಲಿಯೂ ಜನರು ಬಂಡವಾಳ ಹೂಡುವುದನ್ನು ಕಡಿಮೆ ಮಾಡಿದ್ದಾರೆ. ಕೊಳ್ಳುವವರ ಸಂಖ್ಯೆಗಿಂತ ಮಾರುವವರ ಸಂಖ್ಯೆ ಹೆಚ್ಚಾಗಿದೆ ಎಂಬುದು ರಿಯಲ್ ಎಸ್ಟೇಟ್ ನಡೆಸುವವರ ಮಾತಾಗಿದೆ.

‘ಈ ವರ್ಷ 3– 4 ತಿಂಗಳು ಮಾತ್ರ ಕಾರ್ಮಿಕರಿಗೆ ಕೆಲಸ ಸಿಕ್ಕಿದಂತಾಗಿದೆ. ಉಳಿದ ಸಮಯವನ್ನು ಕೋವಿಡ್, ಲಾಕ್‌ಡೌನ್ ಕಬಳಿಸಿಕೊಂಡಿವೆ. ಕಟ್ಟಡ ಕಾರ್ಮಿಕರು ಅನಿವಾರ್ಯವಾಗಿ ಕೆಲಸವನ್ನು ಬದಲಿಸಿಕೊಂಡಿದ್ದಾರೆ. ಗೌಂಡಿ, ಮೇಸ್ತ್ರಿಗಳಿಗೆ ಕೆಲಸ ಇಲ್ಲದಂತಾಗಿದೆ. ಜನರಲ್ಲಿ ಇನ್ನೂ ಕೋವಿಡ್ ಭಯ ದೂರವಾಗಿಲ್ಲ. ಇದರಿಂದ ಕಟ್ಟಡ, ಮನೆ ನಿರ್ಮಾಣಕ್ಕೆ ಹಿಂಜರಿಯುತ್ತಿದ್ದಾರೆ’ ಎಂದು ಕಾರ್ಮಿಕ ಮುಖಂಡ ಮಂಜುನಾಥ ಹೇಳಿದರು.

ಹೊನ್ನಾವರ

ಕೋವಿಡ್ ಕರಿ ನೆರಳು ಕಟ್ಟಡ ಹಾಗೂ ಇನ್ನಿತರ ನಿರ್ಮಾಣ ಕಾಮಗಾರಿಯ ಮೇಲೆ ಬಿದ್ದಿದೆಯಾದರೂ ಈ ವಲಯ ತಾಲ್ಲೂಕಿನಲ್ಲಿ ತೀವ್ರ ಹಿನ್ನಡೆಯನ್ನು ಅನುಭವಿಸಲು ಕಾರಣ ಬೇರೆ ಇದೆ. ಇ– ಸ್ವತ್ತು ಹಾಗೂ ಲೇ ಔಟ್‌ಗೆ ಸಂಬಂಧಿಸಿದ ತಾಂತ್ರಿಕ ತೊಡಕಿನಿಂದಾಗಿ ಪಟ್ಟಣದಲ್ಲಿ ರಿಯಲ್ ಎಸ್ಸೇಟ್ ಉದ್ಯಮಕ್ಕೆ ಹೆಚ್ಚಿನ ಪೆಟ್ಟು ಬಿದ್ದಿದೆ.

ಗ್ರಾಮೀಣ ಭಾಗದಲ್ಲಿ ಪ್ರಸ್ತುತ ಕಾನೂನಿನ ತೊಡಕು ಅಷ್ಟಾಗಿ ಕಾಡುತ್ತಿಲ್ಲವಾದರೂ ಇತ್ತೀಚಿನ ದಿನಗಳಲ್ಲಿ ಅಲ್ಲಿಯೂ ಈ ಸಮಸ್ಯೆ ತಲೆದೋರಿದೆ ಎಂಬ ದೂರುಗಳಿವೆ. ಮನೆ, ಕಟ್ಟಡ ಸಂಕೀರ್ಣ ಸೇರಿದಂತೆ ಖಾಸಗಿ ನಿರ್ಮಾಣದ ಯೋಜನೆಗಳು ಕಾರ್ಯ ರೂಪಕ್ಕೆ ಬರುತ್ತಿಲ್ಲ. ಆದ್ದರಿಂದ ಮರಳಿನ ಬೇಡಿಕೆ ಕಡಿಮೆಯಾಗಿ, ಎಗ್ಗಿಲ್ಲದೆ ಸಾಗಿದ್ದ ಮರಳು ದಂಧೆಗೆ ಕೃತಕ ಕಡಿವಾಣ ಬಿದ್ದಿದೆ. ಪರಿಣಾಮವಾಗಿ ಗ್ರಾಹಕರಿಗೆ ಸ್ವಲ್ಪ ಕಡಿಮೆ ದರದಲ್ಲಿ ಮರಳು ಲಭ್ಯವಾಗುತ್ತಿದೆ.

ರಸ್ತೆ, ಕಟ್ಟಡ ನಿರ್ಮಾಣ ಮೊದಲಾದ ಸರ್ಕಾರದ ಅಭಿವೃದ್ಧಿ ಕೆಲಸಗಳಿಗೆ ಯಾವುದೇ ತೊಂದರೆ ಉಂಟಾಗಿಲ್ಲ. ಇ ಸ್ವತ್ತಿನ ಸಮಸ್ಯೆಯ ಕಾರಣ ಜಾಗದ ಬೇಡಿಕೆ ಕಡಿಮೆಯಾಗಿದ್ದರೂ ಜಾಗದ ಬೆಲೆ ಮಾತ್ರ ಇಳಿಯುವುದರ ಬದಲು ದುಪ್ಪಟ್ಟಾಗುತ್ತ ಸಾಗಿರುವುದು ಇನ್ನೊಂದು ವಿಶೇಷ.

‘ಎಡವಿದ ಸರ್ಕಾರ’

‘ಲಾಕ್‍ಡೌನ್ ಅವಧಿಯಲ್ಲಿ ಸರ್ಕಾರ ಕಟ್ಟಡ ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸುವಲ್ಲಿ ಎಡವಿದೆ. ಐದು ಸಾವಿರಕ್ಕೂ ಹೆಚ್ಚು ಜನ ಕಾರ್ಮಿಕರು ಯಾವುದೇ ಸೌಲಭ್ಯ ಪಡೆಯದೆ ವಂಚಿತರಾದರು. ಅವರು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಈಗಲೂ ಇದೆ. ಹಲವಾರು ಕಾರ್ಮಿಕರು ಕೃಷಿ ಕೂಲಿ ಕೆಲಸಕ್ಕೂ ತೆರಳುತ್ತಿದ್ದಾರೆ’ ಎಂದು ಶಿರಸಿಯ ಕಟ್ಟಡ ಕಾರ್ಮಿಕರ ಸಂಘದ ಪ್ರಮುಖ ನಾಗಪ್ಪ ನಾಯ್ಕ ಹೇಳುತ್ತಾರೆ.

‘ಹೋರಾಟ ಅನಿವಾರ್ಯ’

‘ಇ ಸ್ವತ್ತು ಹಾಗೂ ಲೇ ಔಟ್ ಸಮಸ್ಯೆಯಿಂದಾಗಿ ಕಳೆದ ಒಂದು ವರ್ಷದಿಂದ ಪಟ್ಟಣದಲ್ಲಿ ಆಸ್ತಿಯ ನೋಂದಣಿ ಸಾಧ್ಯವಾಗಿಲ್ಲ. ಕಟ್ಟಡ ಕಾರ್ಮಿಕರಿಗೆ ಕೆಲಸ ಸಿಗುತ್ತಿಲ್ಲ. ಸಣ್ಣ ಜಾಗದಲ್ಲಿ ನಿವೇಶನ ನಿರ್ಮಿಸುವವರಿಗೆ ಪ್ರಸ್ತುತ ನಿಯಮದಿಂದ ವಿನಾಯತಿ ನೀಡಿ ಎಂಬ ಮನವಿಗೆ ಸರ್ಕಾರ ಸ್ಪಂದಿಸಿಲ್ಲ. ಬೇಡಿಕೆ ಈಡೇರಿಕೆಗೆ ಹೋರಾಟದ ಹಾದಿ ಅನಿವಾರ್ಯವಾಗಿದೆ’ ಎಂದು ಹೊನ್ನಾವರ ತಾಲ್ಲೂಕಿನ ಎಂಜಿನಿಯರ್ ಅಸೋಸಿಯೇಶನ್‌ನ ಸಂಸ್ಥಾಪಕ ಅಧ್ಯಕ್ಷ ರಾಜೇಶ ಸಾಳೆಹಿತ್ತಲ್ ಹೇಳುತ್ತಾರೆ.

ಶೇ 80ರಷ್ಟು ಆರಂಭ’

‌‘ಲಾಕ್‌ಡೌನ್ ತೆರವು ಆರಂಭಗೊಂಡಾಗ ಅರ್ಧಕ್ಕೆ ನಿಂತಿದ್ದ ಎಷ್ಟೋ ಕಟ್ಟಡ ಕಾಮಗಾರಿಗಳನ್ನು ಸ್ಥಳೀಯ ಕಾರ್ಮಿಕರ ಸಹಾಯದಿಂದ ಮುಗಿಸಲಾಗಿದೆ. ಲಾಕ್‌ಡೌನ್ ಈಗ ಪೂರ್ಣ ತೆರವುಗೊಂಡರೂ ಕಟ್ಟಡ ಕಾಮಗಾರಿ ಶೇ 80ರಷ್ಟು ಮಾತ್ರ ಆರಂಭವಾಗಿದೆ. ಸದ್ಯ, ಉಸುಕು, ಜಲ್ಲಿ ಲಭ್ಯವಿರುವುದರಿಂದ ಕಾರ್ಮಿಕರು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರೆ ಇಡೀ ಉದ್ಯಮ ಮುಖ್ಯವಾಹಿನಿಗೆ ಬರುತ್ತದೆ’ ಎಂದು ಕುಮಟಾದ ಎಂಜಿನಿಯರ್ ಕೂಡ ಆಗಿರುವ ಗುತ್ತಿಗೆದಾರ, ಯುನಿಕ್ ಕನ್ಸಲ್ಟನ್ಸಿ ಮುಖ್ಯಸ್ಥ ಶ್ರೀನಿವಾಸ ನಾಯ್ಕ ಅಭಿಪ್ರಾಯಪಡುತ್ತಾರೆ.

ಇ ಸ್ವತ್ತಿನ ಸಮಸ್ಯೆಯಿಂದ ಬಡಾವಣೆ ನಿರ್ಮಾಣಕ್ಕೆ ಅನುಮತಿ ಸಿಗುತ್ತಿಲ್ಲ. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಕೊಟ್ಟರೂ ಅರ್ಜಿ ಮುಂದಿನ ಹಂತಕ್ಕೆ ಹೋಗುತ್ತಿಲ್ಲ.

– ಲಕ್ಷ್ಮಿನಾರಾಯಣ ನಾಯಕ, ಸಿವಿಲ್ ಎಂಜಿನಿಯರ್.

ಪ್ರಜಾವಾಣಿ ತಂಡ: ಸದಾಶಿವ ಎಂ.ಎಸ್, ಗಣಪತಿ ಹೆಗಡೆ, ಎಂ.ಜಿ.ನಾಯ್ಕ, ಶಾಂತೇಶ ಬೆನಕನಕೊಪ್ಪ, ಎಂ.ಜಿ.ಹೆಗಡೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು