ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರಡಿ ಕುಣಿತಕ್ಕೆ ಷೇರುಪೇಟೆ ತತ್ತರ

ಹೂಡಿಕೆದಾರರ ಸಂಪತ್ತು: ಒಂದೇ ದಿನ ಕರಗಿದ ಮೊತ್ತ ₹15 ಲಕ್ಷ ಕೋಟಿ
Published 6 ಆಗಸ್ಟ್ 2024, 4:05 IST
Last Updated 6 ಆಗಸ್ಟ್ 2024, 4:05 IST
ಅಕ್ಷರ ಗಾತ್ರ

ಮುಂಬೈ/ ನವದೆಹಲಿ: ಬ್ಯಾಂಕಿಂಗ್‌, ಐ.ಟಿ, ಲೋಹ ಹಾಗೂ ತೈಲ ಮತ್ತು ಅನಿಲದ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಷೇರು ಸೂಚ್ಯಂಕಗಳು ಸೋಮವಾರದ ವಹಿವಾಟಿನಲ್ಲಿ ಶೇ 3ರಷ್ಟು ಕುಸಿತ ಕಂಡಿವೆ. 

ಷೇರು ಸೂಚ್ಯಂಕಗಳ ಇಳಿಕೆಯಿಂದ ಹೂಡಿಕೆದಾರರ ಸಂಪತ್ತು ಒಂದೇ ದಿನ ₹15 ಲಕ್ಷ ಕೋಟಿ ಕರಗಿದೆ.  ಬಿಎಸ್‌ಇ ನೋಂದಾಯಿತ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ (ಎಂ–ಕ್ಯಾಪ್‌) ₹441 ಲಕ್ಷ ಕೋಟಿಗೆ ಇಳಿದಿದೆ. 

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 2,222 ಅಂಶ (ಶೇ 2.74) ಕುಸಿದು, 78,759ಕ್ಕೆ ಸ್ಥಿರಗೊಂಡಿತು. 

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 662 ಅಂಶ (ಶೇ 2.68) ಇಳಿಕೆಯಾಗಿ, 24,055ಕ್ಕೆ ಅಂತ್ಯಗೊಂಡಿತು. 

ಲೋಕಸಭಾ ಚುನಾವಣೆಯ ಫಲಿತಾಂಶದ ದಿನವಾದ ಜೂನ್‌ 4ರಂದು ಸೆನ್ಸೆಕ್ಸ್‌  ಮತ್ತು ನಿಫ್ಟಿ ಶೇ 5ರಷ್ಟು ಕುಸಿತ ಕಂಡಿದ್ದವು. 

ಸೆನ್ಸೆಕ್ಸ್‌ ಗುಚ್ಛದಲ್ಲಿ ಟಾಟಾ ಮೋಟರ್ಸ್‌ ಶೇ 7ರಷ್ಟು ಇಳಿಕೆ ಕಂಡಿದೆ. ಅದಾನಿ ಪೋರ್ಟ್ಸ್‌, ಟಾಟಾ ಸ್ಟೀಲ್‌, ಎಸ್‌ಬಿಐ, ಪವರ್‌ ಗ್ರಿಡ್‌, ಜೆಎಸ್‌ಡಬ್ಲ್ಯು ಸ್ಟೀಲ್‌ ಷೇರಿನ ಮೌಲ್ಯವು ಇಳಿಕೆ ಕಂಡಿದೆ.

ಹಿಂದುಸ್ತಾನ್‌ ಯೂನಿಲಿವರ್‌ ಮತ್ತು ನೆಸ್ಲೆ ಷೇರಿನ ಮೌಲ್ಯದಲ್ಲಿ ಏರಿಕೆ ಆಗಿದೆ. ಬಿಎಸ್‌ಇ ಸ್ಮಾಲ್‌ಕ್ಯಾಪ್‌ ಸೂಚ್ಯಂಕ ಶೇ 4.21 ಮತ್ತು ಮಿಡ್‌ಕ್ಯಾಪ್‌ ಸೂಚ್ಯಂಕ ಶೇ 3.60ರಷ್ಟು ಇಳಿಕೆಯಾಗಿವೆ.

ಏಷ್ಯಾದ ಮಾರುಕಟ್ಟೆಯಲ್ಲಿ ಸೋಲ್‌, ಟೋಕಿಯೊ, ಶಾಂಘೈ ಮತ್ತು ಹಾಂಗ್‌ ಕಾಂಗ್‌ ನಕಾರಾತ್ಮಕ ವಹಿವಾಟು ದಾಖಲಿಸಿವೆ. ಜಪಾನ್‌ ಷೇರುಪೇಟೆ ಸೂಚ್ಯಂಕ ನಿಕ್ಕಿ ಶೇ 12ಕ್ಕೂ ಹೆಚ್ಚು ಇಳಿಕೆ ಕಂಡಿದೆ.

ಸೂಚ್ಯಂಕ ಇಳಿಕೆಗೆ ಕಾರಣವೇನು?:

ಅಮೆರಿಕದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಳ ಮತ್ತು ಜಪಾನ್‌ನ ಯೆನ್‌ ಮೌಲ್ಯ ಏರಿಕೆಯಿಂದ ಅಮೆರಿಕದ  ಆರ್ಥಿಕತೆಯು ಹಿಂಜರಿತದತ್ತ ಸಾಗಬಹುದು  ಎಂಬ ಹೂಡಿಕೆದಾರರ ಕಳವಳಕ್ಕೆ ಜಾಗತಿಕ ಮಾರುಕಟ್ಟೆಗಳು ಸಿಲುಕಿದವು. ಇದರ ಪರಿಣಾಮ ದೇಶೀಯ ಮಾರುಕಟ್ಟೆಯ ಮೇಲೂ ಕಂಡುಬಂದಿದೆ ಎಂದು ಜಿಯೊಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಬ್ಯಾಂಕ್ ಆಫ್ ಜಪಾನ್‌ನ ಬಡ್ಡಿ ದರ ಏರಿಕೆಯು ಜಾಗತಿಕ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಶುಕ್ರವಾರ ನಡೆದ  ವಹಿವಾಟಿನಲ್ಲಿ ₹3,310 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದು ಸಹ ಷೇರು ಸೂಚ್ಯಂಕಗಳ ಇಳಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ರಿಲಯನ್ಸ್‌ಗೆ ₹70,195 ಕೋಟಿ ನಷ್ಟ

ಷೇರು ಸೂಚ್ಯಂಕಗಳ ಇಳಿಕೆಯಿಂದ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರಿನ ಮೌಲ್ಯ ಶೇ 3ಕ್ಕೂ ಹೆಚ್ಚು ಇಳಿದಿದೆ.

ಇದರಿಂದ ಕಂಪನಿಯ ಪ್ರತಿ ಷೇರಿನ ಬೆಲೆ ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ₹2,894 ಆಗಿದೆ. ಷೇರಿನ ಮೌಲ್ಯ ಇಳಿಕೆಯಿಂದ ಕಂಪನಿಯ ಮಾರುಕಟ್ಟೆ ಮೌಲ್ಯ (ಎಂ–ಕ್ಯಾಪ್‌) ₹70,195 ಕೋಟಿ ಕರಗಿದ್ದು, ಒಟ್ಟು ಎಂ–ಕ್ಯಾಪ್‌ ₹19.58 ಲಕ್ಷ ಕೋಟಿಗೆ ಇಳಿದಿದೆ.

ಟಾಟಾ ಮೋಟರ್ಸ್‌ ಷೇರು ಮೌಲ್ಯ ಇಳಿಕೆ

ಟಾಟಾ ಮೋಟರ್ಸ್‌ ಷೇರಿನ ಮೌಲ್ಯ ಶೇ 7ರಷ್ಟು ಇಳಿಕೆಯಾಗಿದೆ. ಇದರಿಂದ ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಷೇರಿನ ಬೆಲೆ ₹1,016 ಆಗಿದೆ.

ಶುಕ್ರವಾರವು ಸಹ ಕಂಪನಿಯ ಷೇರಿನ ಮೌಲ್ಯ ಇಳಿದಿತ್ತು. ಎರಡು ವಹಿವಾಟು ದಿನಗಳಲ್ಲಿ ಮಾರುಕಟ್ಟೆ ಮೌಲ್ಯ ₹42,461 ಕೋಟಿ ಇಳಿಕೆಯಾಗಿದೆ. ಕಂಪನಿಯ ಒಟ್ಟು ಎಂ–ಕ್ಯಾಪ್‌ ₹3.38 ಲಕ್ಷ ಕೋಟಿಗೆ ಇಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT