ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆದಾರರ ದಿಕ್ಕುತಪ್ಪಿಸುವ ವಿದ್ಯಮಾನ

Last Updated 7 ಅಕ್ಟೋಬರ್ 2018, 19:56 IST
ಅಕ್ಷರ ಗಾತ್ರ

ಷೇರುಪೇಟೆಯಲ್ಲಿನ ಇತ್ತೀಚಿನ ಚಲನ-ವಲನಗಳು ಬೆಚ್ಚಿ ಬೀಳಿಸುತ್ತಿವೆ. ಷೇರುಪೇಟೆಯಲ್ಲಿ ಪ್ರವೇಶಿಸುವಾಗ ದೀರ್ಘಕಾಲಿಕ ಹೂಡಿಕೆ ಚಿಂತನೆ ಹೊಂದಿದ್ದರೂ, ಪ್ರಕಟವಾಗುವ ವೈವಿಧ್ಯಮಯ ವಿಶ್ಲೇಷಣೆಗಳು ಹೂಡಿಕೆದಾರರ ಚಿಂತನೆಗಳನ್ನು ಬೇರೆಡೆಗೆ ಸೆಳೆಯುತ್ತವೆ. ಹಣ್ಣು ಹಂಪಲು ಖರೀದಿಸುವಾಗ ವಹಿಸುವ ಕಾಳಜಿ ಪೇಟೆಯಲ್ಲಿ ಹೂಡಿಕೆ ಮಾಡುವಾಗ ತೋರಿದರೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ರೇಟಿಂಗ್ ಕಂಪನಿಗಳು ನೀಡುವ ರೇಟಿಂಗ್, ಅಂದಿನ ಸಂದರ್ಭದ ಆಧಾರಿತವಾಗಿರುತ್ತದೆ. ಬದಲಾವಣೆಯ ಈ ಯುಗದಲ್ಲಿ ಪರಿಸ್ಥಿತಿ ಬದಲಾದಂತೆ ರೇಟಿಂಗ್ ಸಹ ಬದಲಾಗುತ್ತದೆ ಎಂಬ ವಿಚಾರ ಗಮನದಲ್ಲಿರಿಸುವುದು ಅನಿವಾರ್ಯ.

ಗುರುವಾರ ಒಂದೇ ದಿನ ಸಂವೇದಿ ಸೂಚ್ಯಂಕ ಸುಮಾರು 950 ಅಂಶಗಳಷ್ಟು ಕುಸಿತಕ್ಕೊಳಗಾಗಿ ಅಂತಿಮವಾಗಿ 806 ಅಂಶಗಳ ಹಾನಿಕಂಡಿತು. ಕುಸಿತ ಎಷ್ಟರ ಮಟ್ಟಿಗೆ ಒತ್ತಡವನ್ನು ಹೇರಿತ್ತೆಂದರೆ ಅಂದು ಅಗ್ರಮಾನ್ಯ ಕಂಪನಿಗಳಾದ ಭಾರ್ತಿ ಏರ್‌ಟೆಲ್‌, ಬಿಎಸ್‌ಇ, ಕೇರ್ ರೇಟಿಂಗ್ಸ್, ಕ್ರಿಸಿಲ್, ಐಷರ್ ಮೋಟರ್, ಗುಜರಾತ್ ಗ್ಯಾಸ್, ಇಂಡಸ್ ಇಂಡ್ ಬ್ಯಾಂಕ್, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್, ಇಂಡಿಗೊ, ಮಾರುತಿ ಸುಜುಕಿ, ಎಂಆರ್‌ಎಫ್‌, ರಿಲಯನ್ಸ್ ಕ್ಯಾಪಿಟಲ್, ಬಾಂಬೆ ಡೈಯಿಂಗ್ ನಂತಹ ಕಂಪನಿಗಳು ವಾರ್ಷಿಕ ಕನಿಷ್ಠಕ್ಕೆ ಕುಸಿದಿದ್ದವು.

ದಿನದ ಅಂತಿಮ ಕ್ಷಣದ ಚಟುವಟಿಕೆಯಲ್ಲಿ ಐಒಸಿ, ಎಚ್‌ಪಿಸಿಎಲ್‌, ಬಿಪಿಸಿಎಲ್‌ ಷೇರುಗಳು ಕಂಡ ಕುಸಿತವು ಗಾಬರಿ ಹುಟ್ಟಿಸುವಂತಿತ್ತು. ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆಯನ್ನು ₹1.50 ರಷ್ಟು ಇಳಿಸುವುದರೊಂದಿಗೆ ಸರ್ಕಾರಿ ವಲಯದ ತೈಲ ಮಾರಾಟ ಕಂಪನಿಗಳು ಪ್ರತಿ ಲೀಟರ್ ಗೆ ₹1 ರಂತೆ ಬೆಲೆ ಇಳಿಸುವುದಾಗಿ ಪ್ರಕಟಿಸಿದ ನಂತರ ಈ ತೈಲ ಮಾರಾಟ ಕಂಪನಿಗಳ ಷೇರಿನ ಬೆಲೆಗಳೂ ಭರ್ಜರಿ ಕುಸಿತಕಂಡವು.

ಷೇರುಪೇಟೆಯ ಸಂವೇದಿ ಸೂಚ್ಯಂಕವು ಸಾರ್ವಕಾಲಿಕ ಗರಿಷ್ಠ 38,989 ಮಟ್ಟ ದಾಖಲಿಸಿ,ಮೇ ತಿಂಗಳ ಮಧ್ಯಂತರದಲ್ಲಿ ಕಂಡಿದ್ದ 34,30 ರ ಗಡಿ ಸಮೀಪಕ್ಕೆ ಹಿಂದಿರುಗಿದೆ. ವಿಪರ್ಯಾಸವೆಂದರೆ ಮೇ ತಿಂಗಳಲ್ಲಿನ ಆ ಸಂದರ್ಭದಲ್ಲಿ ಪೇಟೆಯ ಬಂಡವಾಳೀಕರಣ ಮೌಲ್ಯವು ₹145 ಲಕ್ಷ ಕೋಟಿಯಲ್ಲಿತ್ತು, ಈಗ ಸಂವೇದಿ ಸೂಚ್ಯಂಕ ಹಿಂದಿರುಗಿ ಬಂದಾಗ ಪೇಟೆಯ ಬಂಡವಾಳ ಮೌಲ್ಯ ₹136 ಲಕ್ಷ ಕೋಟಿಗೆ ಕುಸಿದಿದೆ. ಅಂದರೆ ಕುಸಿತದ ಬಿಸಿಯು ಎಲ್ಲಾ ವಲಯದ ಷೇರುಗಳಿಗೆ ತಟ್ಟಿದೆ ಎನ್ನಬಹುದು. ಈ ಕುಸಿತಕ್ಕೆ ಅಂತರರಾಷ್ಟ್ರೀಯ ಬೆಳವಣಿಗೆಗಳು, ಕಚ್ಚಾ ತೈಲ ದರ ಏರಿಕೆ, ರೂಪಾಯಿಯ ಮೌಲ್ಯ ಕುಸಿತ, ವಿದೇಶಿ ವಿತ್ತೀಯ ಸಂಸ್ಥೆಗಳ ನಿರಂತರ ಮಾರಾಟ, ಹೂಡಿಕೆದಾರರಲ್ಲಿ ಉಂಟಾಗಿರುವ ನಂಬಿಕೆಯ ಕೊರತೆ, ನಿಯಂತ್ರಣ ಸಂಸ್ಥೆಗಳ ಕೆಲವು ನಿರ್ಧಾರಗಳು, ಕಂಪನಿಗಳ ನೀತಿಪಾಲನೆಯ ಲೋಪಗಳು, ಮ್ಯೂಚುವಲ್‌ ಫಂಡ್‌ನಿಂದ ಹಣ ಹಿಂದೆಪಡೆಯುವ ಒತ್ತಡಗಳು...ಹೀಗೆ ಪೇಟೆಯು ಕುಸಿತದಲ್ಲಿದ್ದಾಗ ಅನೇಕ ಕಾರಣಗಳು ಸೃಷ್ಟಿಯಾಗುತ್ತವೆ. ಆದರೆ, ಮುಖ್ಯವಾಗಿ ಕಂಪನಿಗಳು ಪ್ರಕಟಿಸಬಹುದಾದ ಕಾರ್ಪೊರೇಟ್ ಫಲಗಳಾದ ಲಾಭಾಂಶ, ಬೋನಸ್ ಷೇರು ಮುಂತಾದವುಗಳು ಕಣ್ಮರೆಯಾಗಿ, ಹೂಡಿಕೆಯ ರುಚಿಯನ್ನೇ ಕೆಡಿಸಿವೆ.

ಷೇರುಪೇಟೆಯ ವಾತಾವರಣ ಎಷ್ಟರ ಮಟ್ಟಿಗೆ ಕಲುಷಿತಗೊಂಡಿದೆ ಎಂದರೆ, ಮೌಲ್ಯಯುತ ಕಂಪನಿಯ ಷೇರು ಅಗಾಧವಾದ ಕುಸಿತ ಕಂಡರೂ, ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಲು ಅನುಮಾನಾಸ್ಪದವಾಗಿ ಕಾಣುವಂತಾಗಿದೆ. ಶುಕ್ರವಾರ ಜೀವನದ ಅಮೂಲ್ಯ ಅವಕಾಶ ಎಂಬಂತೆ ಸರ್ಕಾರಿ ತೈಲ ಮಾರಾಟ ಕಂಪನಿಗಳಲ್ಲಿ ಹೆಚ್ಚು ಬಲಿಷ್ಠವಾದ, ಲಾಭಗಳಿಕೆಯ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್, ದಿನದ ಮಧ್ಯಂತರದಲ್ಲಿ ₹105 ರ ಸಮೀಪಕ್ಕೆ ಕುಸಿದು ನಂತರ ಪುಟಿದೆದ್ದು ₹118 ರ ಸಮೀಪ ಕೊನೆಗೊಂಡಿದೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಷೇರಿನ ಬೆಲೆ ಹಿಂದಿನ ದಿನದ ₹336 ರ ಸಮೀಪದಿಂದ ₹239 ರವರೆಗೂ ಕುಸಿದು ₹265 ರ ಸಮೀಪಕ್ಕೆ ಚೇತರಿಸಿಕೊಡಿತು. ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್ ಷೇರಿನ ಬೆಲೆ ಹಿಂದಿನ ದಿನದ ₹220 ರ ಸಮೀಪದಿಂದ ₹163 ರ ಸಮೀಪಕ್ಕೆ ಕುಸಿದು ₹165 ರಲ್ಲಿ ಕೊನೆಗೊಂಡಿದೆ. ₹10 ರ ಮುಖಬೆಲೆಯ, ಸಾಧನೆಯಾಧಾರಿತ, ಉತ್ತಮ ಭವಿಷ್ಯವುಳ್ಳ ವಲಯದ, ಹೂಡಿಕೆದಾರ ಸ್ನೇಹಿ ಕಂಪನಿಗಳು ಇಷ್ಟು ಅಗ್ಗದ ಬೆಲೆಯಲ್ಲಿ ದೊರೆಯುತ್ತಿರುವಾಗ ನಕಾರಾತ್ಮಕ ಚಿಂತನೆಗಳಿಂದ ದೂರವಾಗಿ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಬಹುದು. ಕೇಂದ್ರ ಸರ್ಕಾರ ಈ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ₹1 ರಷ್ಟು ಇಳಿಸಲು ಸೂಚಿಸಿದ ಕಾರಣ ಈ ಷೇರಿನ ಬೆಲೆಗಳು ಕುಸಿದಿವೆ.

ಪೇಟೆಯ ಭಾರಿ ಕುಸಿತಕ್ಕೆ ಸ್ಥಳೀಯವಾಗಿ ಮೂಲ ಕಾರಣವಾಗಿರುವ ಐಎಲ್‌ ಆ್ಯಂಡ್‌ ಎಫ್‌ಎಸ್‌ ಹಗರಣವು ನೇರವಾಗಿ ಮತ್ತು ಪರೋಕ್ಷವಾಗಿ ವಿತ್ತೀಯ ವಲಯದ ಕಂಪನಿಗಳ ಮತ್ತು ಉತ್ಪಾದನಾ ವಲಯದ ಕಂಪನಿಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರಿದೆ. ಸಂವೇದಿ ಸೂಚ್ಯಂಕದಲ್ಲಿ ಎಂಟು ಕಂಪನಿಗಳು ವಿತ್ತೀಯ ವಲಯಕ್ಕೆ ಸೇರಿದ್ದು, ಕೋಟಕ್ ಬ್ಯಾಂಕ್, ಆ್ಯಕ್ಸಿಸ್‌ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್‌, ಎಸ್‌ಬಿಐ, ಯೆಸ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್ ನಂತಹವು ಇತ್ತೀಚಿಗೆ ಹೆಚ್ಚು ಕುಸಿತಕಂಡಿದ್ದು ಸಹ ಸೂಚ್ಯಂಕದ ಭಾರಿ ಕುಸಿತಕ್ಕೆ ಕಾರಣವಾಗಿದೆ.

ಬ್ಯಾಂಕಿಂಗ್ ವಲಯ ವಸೂಲಾಗದ ಸಾಲಗಳಿಂದ, ವಾಹನ ವಲಯವು ಡಾಲರ್ ಬೆಲೆ ಏರಿಕೆ, ತೈಲ ಬೆಲೆ ಏರಿಕೆಯಿಂದ ಅಲ್ಲದೆ ಇತರೆ ವಲಯಗಳು ವಾಣಿಜ್ಯ ಸಮರದಿಂದ ಬಳಲುತ್ತಿವೆ. ಈ ವಲಯದ ಷೇರುಗಳನ್ನು ಮಾರಾಟ ಮಾಡಿ ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್, ಆಯಿಲ್ ಇಂಡಿಯಾ, ಒಎನ್‌ಜಿಸಿ ಶುಕ್ರವಾರ ಭರ್ಜರಿ ಕುಸಿತ ಕಂಡವು. ಹಿಂದಿನ ದಿನ ₹368 ರಲ್ಲಿದ್ದ ಷೇರು ಶುಕ್ರವಾರ ₹296 ರವರೆಗೂ ಕುಸಿದು ನಂತರ ₹351 ನ್ನು ತಲುಪಿ ₹331 ರ ಸಮೀಪ ಕೊನೆಗೊಂಡಂತಹ ಕಂಪನಿಗಳಿಗೆ ಪರಿವರ್ತಿಸಿಕೊಳ್ಳುವುದು ಸೂಕ್ತವೆನಿಸುತ್ತದೆ. ಯಾವುದಕ್ಕೂ ಅಂದಿನ ಪೇಟೆಯ ವಾತಾವರಣ, ಪರಿಸ್ಥಿತಿಯನ್ನಾಧರಿಸಿ ನಿರ್ಧರಿಸಬೇಕು. ಹೆಚ್ಚಿನ ಅಗ್ರಮಾನ್ಯ ಕಂಪನಿಗಳು ಭಾರಿ ಕುಸಿತ ಕಂಡಿರುವ ಈ ಸಮಯವೂ ಹೂಡಿಕೆಯ ಆಕರ್ಷಣೆಗೆ ಮುಖ್ಯ ಕಾರಣ. ಮುಂದಿನ ದಿನಗಳಲ್ಲಿ ಈ ಕಂಪನಿಗಳು ತಮ್ಮ ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಆ ಸಂದರ್ಭದಲ್ಲಿ ಉತ್ತಮ ಏರಿಕೆ ಕಾಣುವ ಸಾಧ್ಯತೆ ಇದೆ.

ಹೊಸ ಷೇರು:ಇತ್ತೀಚಿಗೆ ಪ್ರತಿ ಷೇರಿಗೆ ₹821 ರಂತೆ ಸಾರ್ವಜನಿಕ ವಿತರಣೆ ಮಾಡಿದ ಆವಾಸ್ ಫೈನಾನ್ಶಿಯರ್ಸ್‌ ಲಿಮಿಟೆಡ್ ಷೇರುಗಳು 8 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಬಿ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿವೆ.ಕೋಲ್ಕತ್ತ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿರುವ ಜೆನರ ಅಗ್ರಿ ಕಾರ್ಪ್ ಲಿಮಿಟೆಡ್ ಕಂಪನಿ ಷೇರುಗಳು 10 ರಿಂದ ಎಕ್ಸ್ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ಬೋನಸ್ ಷೇರು: ಕ್ಯುಪಿಡ್‌ಲಿಮಿಟೆಡ್ ಕಂಪನಿ ವಿತರಿಸಲಿರುವ 1:5 ರ ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 12 ನಿಗದಿತ ದಿನ.ಅಲ್‌ಪೈನ್‌ಹೌಸಿಂಗ್ ಡೆವಲಪ್‌ಮೆಂಟ್‌ ಕಾರ್ಪೊರೇಷನ್ ಕಂಪನಿ ವಿತರಿಸಲಿರುವ 1:3 ರ ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 12 ನಿಗದಿತ ದಿನ.

ವಾರದ ಮುನ್ನೋಟ:ವಾರದ ವಹಿವಾಟಿನ ಮೇಲೆ ಹಣದುಬ್ಬರ, ಕೈಗಾರಿಕಾ ಪ್ರಗತಿ ಸೂಚ್ಯಂಕ (ಐಐಪಿ), ರೂಪಾಯಿ ಮೌಲ್ಯ ಏರಿಳಿತವು ಹೆಚ್ಚು ಪರಿಣಾಮ ಬೀರಲಿವೆ. ಆಗಸ್ಟ್‌ ತಿಂಗಳ ಕೈಗಾರಿಕಾ ಪ್ರಗತಿ ಸೂಚ್ಯಂಕದ ಶುಕ್ರವಾರ ಹೊರಬೀಳಲಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಈಗಾಗಲೇ ದಾಖಲೆ ಮಟ್ಟದ ಕುಸಿತ ಕಾಣುತ್ತಿದ್ದು, 74ರ ಸಮೀಪದಲ್ಲಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಕಚ್ಚಾ ತೈಲ ದರ ಏರುಮುಖವಾಗಿರುವುದೂ ಸೂಚ್ಯಂಕದ ಏರಿಳಿತಕ್ಕೆ ಕಾರಣವಾಗಲಿದೆ.

(ಮೊ: 9886313380, ಸಂಜೆ 4.30 ರನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT