ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಮೂರ್ತಿಗಳ ‘ಬೌನ್ಸ್‌’ ಯಶೋಗಾಥೆ

Last Updated 3 ಆಗಸ್ಟ್ 2019, 6:57 IST
ಅಕ್ಷರ ಗಾತ್ರ

ದುಬಾರಿ ಬೈಕ್‌ಗಳನ್ನು ಓಡಿಸುವ ಮಧ್ಯಮ ವರ್ಗದ ಯುವಕರ ಕನಸು ನನಸಾಗಿಸಲು ಹಾರ್ಲೆ ಡೇವಿಡ್ಸನ್‌ ಬೈಕ್‌ ಅನ್ನು ಸಾಲ ಮಾಡಿ ಖರೀದಿಸಿ ಬಾಡಿಗೆಗೆ ಕೊಟ್ಟ 2014ರಲ್ಲಿನ ಸಣ್ಣ ಆಲೋಚನೆಯು, ನಗರವಾಸಿಗಳಿಗೆ ಸ್ಕೂಟರ್‌ಗಳನ್ನು ಬಾಡಿಗೆ ನೀಡುವ ದೊಡ್ಡ ಉದ್ದಿಮೆಯಾಗಿ ಬೆಳೆದಿರುವುದಕ್ಕೆ ಬೆಂಗಳೂರು ಮಹಾನಗರಿ ಸಾಕ್ಷಿಯಾಗಿದೆ. ಮೂರು ಕನ್ನಡ ಯುವ ಮನಸ್ಸುಗಳ ಕನಸು, ಚಿಂತನೆ, ಪರಿಶ್ರಮ, ಶ್ರದ್ಧೆ, ಬದ್ಧತೆಯ ಫಲವಾಗಿ ನವೋದ್ಯಮ ‘ಬೌನ್ಸ್‌’ (Bounce) ಯಶಸ್ಸಿನ ಹಾದಿಯಲ್ಲಿ ಸಾಗಿದೆ. ಕಾಸ್ಟ್‌ ಅಕೌಂಟ್‌ ಮತ್ತು ಕಂಪನಿ ಸೆಕ್ರೆಟರಿ ಓದಿರುವ ಬೆಂಗಳೂರಿನ ಅರುಣ್‌ ಗಿರಿ (ಸಿಒಒ) ಮತ್ತು ಹಾಸನದವರಾದ ಚಾರ್ಟೆರ್ಡ್‌ ಅಕೌಂಟಂಟ್‌ ವಿವೇಕಾನಂದ ಹಳ್ಳೆಕೆರೆ (ಸಿಇಒ) ಮತ್ತು ಎಂಜಿನಿಯರಿಂಗ್‌ ಓದಿ ಅಮೆರಿಕದಲ್ಲಿ ಎಂಎಸ್‌ಸಿ ಪೂರ್ಣಗೊಳಿಸಿರುವ ವರುಣ್‌ ಅಗ್ನಿ (ಸಿಟಿಒ) ಜತೆಯಾಗಿ ಈ ನವೋದ್ಯಮ ಕಟ್ಟಿ ಬೆಳೆಸಿ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಕೀ ರಹಿತ (Key Less) ತಂತ್ರಜ್ಞಾನದ ನೆರವಿನಿಂದ ಸ್ಕೂಟರ್‌ಗಳನ್ನು ಬಾಡಿಗೆ ನೀಡುವುದನ್ನು ಸುಲಭವಾಗಿ ನಿರ್ವಹಿಸಬಹುದು ಎನ್ನುವ ವರುಣ್‌ ಅವರ ಚಿಂತನೆಯನ್ನು ಇವರೆಲ್ಲ ಜಂಟಿಯಾಗಿ ಸಾಧ್ಯ ಮಾಡಿತೋರಿಸಿದ್ದಾರೆ. ಮಹಾನಗರಗಳಲ್ಲಿ ‘ಷೇರ್‌ ಮೊಬಿಲಿಟಿ’ ಪರಿಕಲ್ಪನೆ ಸಾಕಾರಗೊಳಿಸಿ, ವಾಹನ ದಟ್ಟಣೆ ಕಡಿಮೆ ಮಾಡುವುದೇ ಈ ಸ್ಟಾರ್ಟ್‌ಅಪ್‌ನ ಉದ್ದೇಶವಾಗಿದೆ. ವಿಶ್ವದ ಪ್ರಥಮ ಪ್ರಯತ್ನ ಇದಾಗಿರುವುದು ಇದರ ಇನ್ನೊಂದು ಹೆಗ್ಗಳಿಕೆಯಾಗಿದೆ.

ಸಮಯ ಉಳಿತಾಯದ, ವಿಶ್ವಾಸಾರ್ಹ, ಅನುಕೂಲಕರ ಮತ್ತು ಅಗ್ಗದ ದರದ ಬಾಡಿಗೆ ಸ್ಕೂಟರ್‌ಗಳನ್ನು ಒದಗಿಸಿ ನಗರವಾಸಿಗಳ ದಿನನಿತ್ಯದ ಸಂಚಾರವನ್ನು ಸುಲಲಿತಗೊಳಿಸುವುದು ಈ ನವೋದ್ಯಮದ ಮುಖ್ಯ ಧ್ಯೇಯವಾಗಿದೆ. 2018ರ ಸೆಪ್ಟೆಂಬರ್‌ನಿಂದ ಪೂರ್ಣ ‍ಪ್ರಮಾಣದಲ್ಲಿ ಸೇವೆ ಒದಗಿಸುತ್ತಿರುವ ಈ ಸ್ಟಾರ್ಟ್‌ಅಪ್‌ನ ವಹಿವಾಟು ವಿಸ್ತರಣೆಗೆ ದೇಶದ ಇತರ ಮಹಾನಗರಗಳಲ್ಲಿಯೂ ವಿಪುಲ ಅವಕಾಶಗಳು ತೆರೆದುಕೊಂಡಿವೆ.

ನಗರದಲ್ಲಿ ಸಮೂಹ ಸಾರಿಗೆ ವ್ಯವಸ್ಥೆಯಾದ ಮೆಟ್ರೊ ಸೌಲಭ್ಯವು ನಾಲ್ಕೂ ದಿಕ್ಕುಗಳಿಗೆ ವಿಸ್ತರಣೆಯಾದಂತೆ, ‘ಬೌನ್ಸ್‌’ನ ವಹಿವಾಟೂ ಬೆಳೆದಿದೆ. ಮೆಟ್ರೊ ನೆಚ್ಚಿಕೊಂಡವರು ಮನೆಯಿಂದ ಮೆಟ್ರೊ ನಿಲ್ದಾಣಕ್ಕೆ, ನಿಲ್ದಾಣದಿಂದ ಮನೆಗೆ ತೆರಳಲು ‘ಬೌನ್ಸ್‌’ ಸ್ಕೂಟರ್‌ಗಳನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ಬೈಕ್‌ಗಳ ಪಾರ್ಕಿಂಗ್‌, ಶುಲ್ಕ ಪಾವತಿ, ವಾಹನ ನಿರ್ವಹಣಾ ವೆಚ್ಚದ ತಲೆನೋವು ಇಲ್ಲದ ಸೇವೆಯನ್ನು ಅಸಂಖ್ಯಾತ ಜನರಿಗೆ ಒದಗಿಸಿರುವ ಹೆಗ್ಗಳಿಕೆ ‘ಬೌನ್ಸ್‌’ಗೆ ಸೇರುತ್ತದೆ. ಮನೆಯಿಂದ ಅಥವಾ ಹೊರಡುವ ಸ್ಥಳದಿಂದ ತಲುಪಬೇಕಾಗಿರುವ ಗಮ್ಯ ಸ್ಥಾನದವರೆಗೆ ಸಂಪರ್ಕ ಕಲ್ಪಿಸುವ ಬಾಡಿಗೆ ಸ್ಕೂಟರ್‌ ಸೌಲಭ್ಯದ ಈ ಸೇವೆಯು ಬೆಂಗಳೂರಿನಲ್ಲಿ ದಿನೇ ದಿನೇ ಜನಪ್ರಿಯವಾಗುತ್ತಿದೆ.

‘ಸವಾರರು ಕೀ ರಹಿತ ಬಾಡಿಗೆ ಸ್ಕೂಟರ್‌ ಅನ್ನು ಎಲ್ಲೆಂದರಲ್ಲಿಗೆ (dock-less) ತೆಗೆದುಕೊಂಡು ಹೋಗುವ ಮತ್ತು ನಗರದ ವ್ಯಾಪ್ತಿಯಲ್ಲಿ ತಮ್ಮಿಷ್ಟದ ಸ್ಥಳಕ್ಕೆ ಹೋಗಿ ರಸ್ತೆ ಬದಿಯಲ್ಲಿ ಸ್ಕೂಟರ್‌ ಬಿಟ್ಟು ಹೋಗುವ (Pay Per Ride) ಸೌಲಭ್ಯ ಇದಾಗಿದೆ. ಪ್ರತಿ ದಿನ ಒಂದು ಬೈಕ್‌ ಅನ್ನು 8 ರಿಂದ 10 ಜನ ಬಳಸುತ್ತಾರೆ. ವಾಹನಕ್ಕೆ ಸಣ್ಣ ಪುಟ್ಟ ಹಾನಿಯಾದರೂ ಸೆನ್ಸರ್‌ಗಳ ಮೂಲಕ ತಿಳಿದುಕೊಳ್ಳುವ ಸೌಲಭ್ಯವೂ ಇಲ್ಲಿದೆ. ಈ ಸ್ಕೂಟರ್‌ಗಳ ಇಂಧನ ದಕ್ಷತೆ ಹೆಚ್ಚು. ಆಟೊ, ಕ್ಯಾಬ್‌ಗೆ ಹೋಲಿಸಿದರೆ ಮಾಲಿನ್ಯ ಪ್ರಮಾಣವು ಶೇ 5ರಷ್ಟು ಕಡಿಮೆಯಾಗಲಿದೆ’ ಎಂದು ಸಂಸ್ಥೆಯ ಸಿಒಒ ಅನಿಲ್‌ ಗಿರಿ (32) ಅವರು ಹೇಳುತ್ತಾರೆ.

2016ರಲ್ಲಿ ಬೈಯಪ್ಪನಹಳ್ಳಿ ಯಿಂದ ಎಂಜಿ ರಸ್ತೆಗೆ ಮೆಟ್ರೊ ಸೇವೆ ಆರಂಭಗೊಂಡಾಗ ‘ಫಸ್ಟ್ ಮೈಲ್‌ ಟು ಲಾಸ್ಟ್‌ ಮೈಲ್‌’ಗೆ ಸಂಪರ್ಕ ಕಲ್ಪಿಸುವ ಸ್ಕೂಟರ್‌ ಬಾಡಿಗೆಗೆ ಸ್ಥಳಾವಕಾಶ ಕೊಡಿ ಎನ್ನುವ ಇವರ ಮನವಿಗೆ ‘ಬಿಎಂಆರ್‌ಸಿಎಲ್‌’ ಸ್ಪಂದಿಸಿತ್ತು. ಇದು ಈ ನವೋದ್ಯಮದ ವಹಿವಾಟಿಗೆ ಭಾರಿ ತಿರುವು ನೀಡಿತು. ದೇಶದ ಇತರ ಮಹಾನಗರಗಳಲ್ಲಿ ಒಂದು ವರ್ಷದಲ್ಲಿ ಈ ಸೇವೆ ವಿಸ್ತರಿಸಿ ಸ್ಕೂಟರ್‌ಗಳ ಸಂಖ್ಯೆಯನ್ನು 1 ಲಕ್ಷಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಈ ನವೋದ್ಯಮವು ಕಾರ್ಯಪ್ರವೃತ್ತವಾಗಿದೆ.

ವೈಯಕ್ತಿಕ ಸಾಲವೇ ಈ ನವೋದ್ಯಮದ ಮೂಲ ಬಂಡವಾಳ. ಈ ನವೋದ್ಯಮದ ಯಶಸ್ಸು ಕಂಡು ವಿದೇಶಿ ಹೂಡಿಕೆದಾರರೂ ಈಗ ಹಣ ತೊಡಗಿಸಿದ್ದಾರೆ. ಆರಂಭಿಕ ಸಾಲ ತೀರಿಸಲಾಗಿದೆ. ಸಂಸ್ಥೆಯಲ್ಲಿ ಈಗ 1400 ಜನ ಸಿಬ್ಬಂದಿ ದುಡಿಯುತ್ತಿರುವುದು ಇದರ ಯಶಸ್ಸಿಗೆ ಕನ್ನಡಿ ಹಿಡಿಯುತ್ತದೆ.

ರಾಜ್ಯದ ಮೈಸೂರು, ಮಣಿಪಾಲ್‌ ಮತ್ತು ಮಹಾರಾಷ್ಟ್ರದ ನಾಗಪುರ ಮತ್ತಿತರ ಕಡೆಗಳಲ್ಲಿಯೂ ಈ ಸೇವೆ ವಿಸ್ತರಣೆಗೆ ಉದ್ದೇಶಿಸಲಾಗಿದೆ. ಸವಾರರು ಹೆಲ್ಮೆಟ್‌ ಹಾಕಿದರೆ ಮಾತ್ರ ವಾಹನ ಸ್ಟಾರ್ಟ್‌ ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗುತ್ತಿದೆ. ವಿದ್ಯಾರ್ಥಿಗಳು, ಉದ್ಯೋಗನಿರತರು, ಗೃಹಿಣಿಯರು, ಸೇಲ್ಸ್‌ಮನ್‌ ಮತ್ತಿತರಿಗೆ ‘ಬೌನ್ಸ್‌’ ಹೆಚ್ಚು ಉಪಯುಕ್ತವಾಗಿದೆ.

ಬಳಕೆ ಹೇಗೆ?

ಮೊಬೈಲ್‌ನಲ್ಲಿ ‘ಬೌನ್ಸ್‌’ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ನೋಂದಣಿ ಮಾಡಿಕೊಂಡು ಸ್ಕೂಟರ್‌ಗೆ ಬೇಡಿಕೆ ಸಲ್ಲಿಸಿದರೆ ಹತ್ತಿರದಲ್ಲಿ ಇರುವ ಸ್ಕೂಟರ್‌ನ ತಾಣವು ಮೊಬೈಲ್‌ನಲ್ಲಿ ಗೋಚರಿಸುತ್ತದೆ. ಅದರ ಬಳಿಗೆ ಸಾಗಿ ಮೊಬೈಲ್‌ಗೆ ಬಂದ ರಹಸ್ಯ ಸಂಖ್ಯೆಯನ್ನು (ಒಟಿಪಿ) ಸ್ಕೂಟರ್‌ನಲ್ಲಿ ಇರುವ ಕೀಪ್ಯಾಡ್‌ನಲ್ಲಿ ನಮೂದಿಸುತ್ತಿದ್ದಂತೆ ದ್ವಿಚಕ್ರ ವಾಹನವು ಅನ್‌ಲಾಕ್‌ ಆಗಿ ಬಳಕೆಗೆ ಸಿದ್ಧಗೊಳ್ಳುತ್ತದೆ. ಜಿಪಿಎಸ್‌ ತಂತ್ರಜ್ಞಾನ ಆಧರಿಸಿ ಸ್ಕೂಟರ್‌ ಎಲ್ಲಿದೆ, ಎಷ್ಟು ದೂರ ಕ್ರಮಿಸಿದೆ ಮತ್ತಿತರ ಮಾಹಿತಿ ಮೇಲೆ ಸಂಸ್ಥೆಯ ಸಿಬ್ಬಂದಿ ನಿರಂತರವಾಗಿ ನಿಗಾ ಇರಿಸಿರುತ್ತಾರೆ.

ಮಹಿಳೆಯರೂ ಸುಲಭವಾಗಿ ಬಳಸುವುದಕ್ಕೆ ನೆರವಾಗಲು ಗೇರ್‌ಲೆಸ್‌ ಸ್ಕೂಟರ್‌ಗಳನ್ನೇ ಬಳಸಲಾಗುತ್ತಿದೆ. ವಾಹನದಲ್ಲಿ ಇರುವ ಸೆನ್ಸರ್‌ಗಳಿಂದ ಇಂಧನದ ಮಾಹಿತಿ ಪಡೆಯುವ ಸಂಸ್ಥೆಯ ಆನ್‌ಗ್ರೌಂಡ್‌ ಸಿಬ್ಬಂದಿಯು ಪೆಟ್ರೋಲ್‌ ಭರ್ತಿ ಮಾಡುತ್ತಾರೆ.

ತುರ್ತು ಸಂದರ್ಭಗಳಲ್ಲಿ ಸವಾರರೂ ಇಂಧನ ಭರ್ತಿ ಮಾಡಿದರೆ ಅವರ ಬಾಡಿಗೆ ದರದಲ್ಲಿಇಂಧನ ವೆಚ್ಚ ಮುರಿದುಕೊಳ್ಳಲಾಗುವುದು. ಬಳಕೆದಾರರ ವಾಹನ ಚಾಲನಾ ಪತ್ರದ (ಡಿಎಲ್‌) ವಿವರಗಳನ್ನು ದಾಖಲಿಸಿಕೊಂಡ ನಂತರವೇ ಸಂಸ್ಥೆಯು ಸ್ಕೂಟರ್‌ ಬಾಡಿಗೆ ಪಡೆಯಲು ಅವಕಾಶಕಲ್ಪಿಸುತ್ತದೆ. ‘ಡಿಎಲ್‌’ ಇಲ್ಲದವರಿಗೆಈ ಸ್ಕೂಟರ್‌ ಬಾಡಿಗೆಗೆದೊರೆಯುವುದಿಲ್ಲ.

ವೈಟ್‌ಫೀಲ್ಡ್‌ನಲ್ಲಿ ಇರುವ ಘಟಕದಲ್ಲಿ ಸ್ಕೂಟರ್‌ಗಳಿಗೆ ಕೀ ಲೆಸ್‌ ಪ್ಯಾಡ್‌ ಅಳವಡಿಸಲಾಗುವುದು. ಸ್ಕೂಟರ್‌ನಲ್ಲಿಯೇ ಹೆಲ್ಮೆಟ್ ಇರುತ್ತದೆ. ಇಬ್ಬರು ಸವಾರರಿದ್ದರೆ ಬಾಡಿಗೆ ದರ ಹೆಚ್ಚಿಗೆ ಇರುವುದಿಲ್ಲ. ಪಿಲಿಯನ್‌ ಸವಾರರಿಗೂ ಹೆಚ್ಚುವರಿ ಹೆಲ್ಮೆಟ್‌ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಸವಾರರು ಹೆಲ್ಮೆಟ್‌ ಮರಳಿ ಇಡುವುದನ್ನೂ ಸೆನ್ಸರ್‌ ಮೂಲಕವೇ ಖಚಿತಪಡಿಸಿಕೊಳ್ಳಲಾಗುವುದು. ಮಾರ್ಗಮಧ್ಯೆ ಹೋಟೆಲ್‌ಗೆ ಭೇಟಿ ನೀಡುವ, ಇನ್ನೊಬ್ಬರನ್ನು ಭೇಟಿಯಾಗುವ ಸಂದರ್ಭಗಳಲ್ಲಿ ವಾಹನದ ಬಳಕೆಗೆ ತಾತ್ಕಾಲಿಕ ತಡೆ ಹಾಕುವ ಸೌಲಭ್ಯವನ್ನೂ ಒದಗಿಸಲಾಗಿದೆ. ಗಮ್ಯ ಸೇರಿದಾಗ ಟ್ರಿಪ್‌ ಎಂಡ್‌ ಮಾಡಬಹುದು.

ದಿನದ 24 ಗಂಟೆಯೂ ಈ ಸೌಲಭ್ಯ ಲಭ್ಯ ಇರಲಿದೆ. ಯಾವುದೇ ಹೊತ್ತಿನಲ್ಲಿ ರಸ್ತೆ ಬದಿಯಲ್ಲಿಯೇ ವಾಹನ ನಿಲ್ಲಿಸುವುದು ಕಡ್ಡಾಯ. ಆ್ಯಪ್‌ನಲ್ಲಿ ಪ್ರಾದೇಶಿಕ ಭಾಷೆಗಳ ಆಯ್ಕೆಗೂ ಅವಕಾಶ ಮಾಡಿಕೊಡಲಾಗುತ್ತಿದೆ.

ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ, ಕೆ. ಆರ್‌. ಪುರಂ, ಎಂಟನೆ ಮೈಲಿ – ಹೀಗೆ ಸ್ಕೂಟರ್‌ ಬಳಕೆಗೆ ವ್ಯಾಪ್ತಿ ನಿಗದಿಪಡಿಸಲಾಗಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ತೆಗೆದುಕೊಂಡು ಹೋಗಲು ವಿಶೇಷ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT