ಭಾನುವಾರ, ಜೂನ್ 26, 2022
28 °C

ಉದ್ಯಮಿಗೆ ಬೇಕು ಒಳ್ಳೆಯ ಆಲೋಚನೆಗಳು!

ಎಂ. ಶ್ರೀನಿವಾಸ ರಾವ್ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರಿನ ವೆಲ್‌ನೆಸ್‌ ಕೇಂದ್ರಗಳಲ್ಲಿ ಒಂದಾಗಿರುವ ‘ಸಾಲ್ಟ್‌ ವರ್ಲ್ಡ್‌’ ಸಾಲ್ಟ್‌ ಥೆರಪಿ ಕೇಂದ್ರವೊಂದನ್ನು ಆರಂಭಿಸಿದೆ. ಸಾಲ್ಟ್‌ ಥೆರಪಿಯು ವ್ಯಕ್ತಿಯ ಒಟ್ಟಾರೆ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಕೆಲವರಲ್ಲಿ ಇದೆ. ವೆಲ್ಲೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಬಿಬಿಎ ಹಾಗೂ ಓಹಿಯೊ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದಿರುವ ದೀಪ್ತಿ ಬಾಬು ಅವರು 2017ರಲ್ಲಿ ಸಾಲ್ಟ್‌ ವರ್ಲ್ಡ್‌ ಆರಂಭಿಸಿದ್ದರು.


ಎಂ ಶ್ರೀನಿವಾಸ ರಾವ್

‘ವ್ಯಕ್ತಿಗಾಗಲಿ, ಪ್ರಕೃತಿಗಾಗಲಿ ಯಾವುದೇ ದುಷ್ಪರಿಣಾಮ ಬೀರದ ಸಂಸ್ಥೆಯೊಂದನ್ನು ಕಟ್ಟುವ ಇರಾದೆ ನನಗೆ ಇತ್ತು. ಇದು ಆರೋಗ್ಯವಂತ ಸಮುದಾಯವೊಂದನ್ನು ಕಟ್ಟುವ ನನ್ನ ಬಯಕೆಯ ಭಾಗವೂ ಹೌದು. ವಿದೇಶಗಳಲ್ಲಿ ಸಾಲ್ಟ್‌ ಥೆರಪಿ ಬಹಳ ಜನಪ್ರಿಯ. ಆ ಬಗ್ಗೆ ಹೆಚ್ಚು ಅಧ್ಯಯನ ನಡೆಸಿದಾಗ ಥೆರಪಿಯಲ್ಲಿರುವ ಹಲವು ಅನುಕೂಲಕರ ಅಂಶಗಳು ಗೊತ್ತಾದವು. ಆದರೆ ಭಾರತೀಯರಿಗೆ ಇದರ ಪ್ರಯೋಜನಗಳ ಬಗ್ಗೆ ಹೆಚ್ಚು ಅರಿವಿಲ್ಲ. ಇವುಗಳನ್ನು ಆಧಾರವಾಗಿಟ್ಟುಕೊಂಡು 2017ರಲ್ಲಿ ನಾನು ಸಾಲ್ಟ್‌ ವರ್ಲ್ಡ್‌ (www.saltworld.in) ಶುರು ಮಾಡಿದೆ. ಭಾರತದಲ್ಲಿ ಥೆರಪಿಯನ್ನು ಜನಪ್ರಿಯಗೊಳಿಸುವ ಗುರಿಯನ್ನು ಇದು ಹೊಂದಿದೆ’ ಎನ್ನುತ್ತಾರೆ ದೀಪ್ತಿ.

ಭಾರತದ ಆರೋಗ್ಯ ರಕ್ಷಣೆಯ ಕ್ಷೇತ್ರದಲ್ಲಿ ವಹಿವಾಟು ನಡಸುವಾಗ ಕ್ಲಿಷ್ಟ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ತಮ್ಮ ಸಂಸ್ಥೆಯನ್ನು ಬೆಳೆಸುವ ಹಾದಿಯಲ್ಲಿ ದೀಪ್ತಿ ಹಲವು ಸವಾಲುಗಳನ್ನು ಎದುರಿಸಿದ್ದಾರೆ. ಈ ಪಯಣದ ಕುರಿತು ಮಾತನಾಡಿದ ಅವರು ‘ಭಾರತದಲ್ಲಿ ಈ ಥೆರಪಿಯ ಕುರಿತು ಯಾವುದೇ ಮಾಹಿತಿ ಇಲ್ಲದಿದ್ದುದರಿಂದ ಇದರ ಬಗ್ಗೆ ಪ್ರಚಾರ ಮಾಡುವುದೇ ದೊಡ್ಡ ಸವಾಲಾಗಿತ್ತು. ಮಾರುಕಟ್ಟೆಯಲ್ಲಿ ನಮ್ಮದೇ ಆದ ಬ್ರ್ಯಾಂಡ್‌ ಬೆಳೆಸಬೇಕಿತ್ತು. ನಮಗೆ ಬಹಳ ಬೇಗ ಸಕಾರಾತ್ಮಕ ಫಲಿತಾಂಶಗಳು ದೊರೆಯಲಾರಂಭಿಸಿದವು. 2019ರಲ್ಲಿ ಮಾಧ್ಯಮಗಳೂ ನಮ್ಮನ್ನು ಗುರುತಿಸಿದವು. ಇದರಿಂದಾಗಿ ಫ್ರಾಂಚೈಸಿ ಕೋರಿಕೆಗಳು ಬರಲಾರಂಭಿಸಿದವು. ಆಗ ನಾವು ಫ್ರಾಂಚೈಸಿ ನೀಡುವ ಕುರಿತು ಯೋಚಿಸಿಯೇ ಇರಲಿಲ್ಲ! ಮುಂದಿನ ಹಂತವಾಗಿ ಏಷ್ಯದ ಅತಿದೊಡ್ಡ ಫ್ಲೋಟ್‌ ಟ್ಯಾಂಕ್‌ ಹೊಂದುವ ಮೂಲಕ ಫ್ಲೋಟ್‌ ಥೆರಪಿಯನ್ನು ನಾವು ಆರಂಭಿಸಿದೆವು. ಅನಿವಾಸಿ ಭಾರತೀಯರು ಮತ್ತು ವಿದೇಶಿಗರು ಇದರತ್ತ ಆಕರ್ಷಿತರಾದ್ದರಿಂದ ನಮ್ಮ ವಹಿವಾಟಿನ ಸ್ವರೂಪವೇ ಬದಲಾಯಿತು’ ಎನ್ನುತ್ತಾರೆ.

ಸಾಲ್ಟ್‌ ವರ್ಲ್ಡ್‌ ಇನ್ನೇನು ಬಲವಾಗಿ ಬೇರೂರುತ್ತಿದೆ ಎನ್ನುತ್ತಿರುವಾಗಲೇ ಕೋವಿಡ್‌–19 ಸಾಂಕ್ರಾಮಿಕ ಎದುರಾಯಿತು. ‘ಇದರಿಂದಾಗಿ ಇಡೀ ವೆಲ್‌ನೆಸ್‌ ಉದ್ಯಮ ಕಂಗಾಲಾಯಿತು. 2020ರಲ್ಲಿ ಹೊಸ ಫ್ರಾಂಚೈಸಿ ಮಳಿಗೆಗಳನ್ನು ತೆರೆಯುವ ಉದ್ದೇಶವನ್ನು ನಾವು ಹೊಂದಿದ್ದೆವು. ಆದರೆ ಕೋವಿಡ್‌ ಕಾರಣದಿಂದಾಗಿ ನಾವು ಯಾವುದೇ ಹೆಜ್ಜೆ ಇಡಲು ಸಾಧ್ಯವಾಗಲಿಲ್ಲ’ ಎನ್ನುತ್ತಾರೆ ದೀಪ್ತಿ. ಸಾಲ್ಟ್‌ ವರ್ಲ್ಡ್‌ ಬಹಳ ಬೇಗ ಹಳಿಗೆ ಮರಳಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

‘ಮುಂದೆ ಆರೋಗ್ಯ ರಕ್ಷಣೆ ಮತ್ತು ವೆಲ್‌ನೆಸ್‌ ಉದ್ಯಮಗಳಿಗೆ ಒಳ್ಳೆಯ ಭವಿಷ್ಯವಿದೆ ಎಂದು ಮಾರುಕಟ್ಟೆ ಅಂದಾಜಿಸಿದೆ. ಈ ಹಿನ್ನೆಲೆಯಲ್ಲಿ ನಾವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಫ್ರಾಂಚೈಸಿ ಜಾಲವನ್ನು ವಿಸ್ತರಿಸುವ ಉದ್ದೇಶ ಹೊಂದಿದ್ದೇವೆ’ ಎಂದು ಅವರು ಹೇಳುತ್ತಾರೆ.

ಸಕಾರಾತ್ಮಕವಾಗಿ, ಒಳ್ಳೆಯ ಸಂಗತಿಗಳ ಬಗ್ಗೆ ಆಲೋಚಿಸುವುದು, ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂಬ ವಿಶ್ವಾಸದಲ್ಲಿ ಇರುವುದರಿಂದ ಕೂಡ ಯಶಸ್ವಿ ಉದ್ಯಮಿಯಾಗಲು ಸಾಧ್ಯ ಎಂದು ದೀಪ್ತಿ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು