ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳಿಗಿರಿ ರಂಗನಬೆಟ್ಟದಲ್ಲಿ ಮೊದಲ ಪ್ರಯೋಗ | ಸೋಲಿಗರಿಂದ ‘ಅಡವಿ’ ಕಾಫಿ

ಸಮಾಜ ಕಲ್ಯಾಣ ಇಲಾಖೆ ನೆರವು
Last Updated 10 ಜುಲೈ 2019, 20:00 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನ ಬೆಟ್ಟದಲ್ಲಿರುವ ಸೋಲಿಗರ ಸಂಘವೊಂದು, ಸಮಾಜ ಕಲ್ಯಾಣ ಇಲಾಖೆಯ ನೆರವು ಪಡೆದು ‘ಅಡವಿ’ ಬ್ರಾಂಡ್‌ ಹೆಸರಿನಲ್ಲಿ ಕಾಫಿ ಮಾರಾಟ ಮಾಡುತ್ತಿದೆ.

ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದ ಸುತ್ತಮುತ್ತ 22 ಪೋಡುಗಳಲ್ಲಿರುವ 625 ಕುಟುಂಬಗಳು ಕಾಫಿ ಕೃಷಿಯಲ್ಲಿ ತೊಡಗಿವೆ. ವಾರ್ಷಿಕ ಒಂದು ಲಕ್ಷ ಕೆ.ಜಿ. ಯಷ್ಟು ಕಾಫಿ ಬೀಜ ಉತ್ಪಾದಿಸಲಾಗುತ್ತದೆ.

ನಾಲ್ಕು ವರ್ಷಗಳ ಹಿಂದೆ,ಅಶೋಕ ಪರಿಸರ ವಿಜ್ಞಾನ ಮತ್ತು ಪರಿಸರ ಸಂಶೋಧನಾ ಸಂಸ್ಥೆಯ ನೆರವಿನಿಂದ ಸೋಲಿಗ ಸಮುದಾಯದವರು ಬಿಳಿಗಿರಿ ರಂಗನಾಥಸ್ವಾಮಿ ಸೋಲಿಗರ ಸಂಸ್ಕರಣಾ ಸಂಘ ಎಂಬ ಸಂಸ್ಥೆ ಆರಂಭಿಸಿದ್ದರು. ಇದರ ಅಡಿಯಲ್ಲಿ ಜೇನು, ನೆಲ್ಲಿಕಾಯಿ ಉಪ್ಪಿನಕಾಯಿ, ಅಂಟುವಾಳ, ಸೀಗೆಕಾಯಿ ಪುಡಿ ಸೇರಿದಂತೆ ಬೇರೆ ಬೇರೆ ರೀತಿಯ 14 ಕಾಡು ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಇದೀಗ ಅದೇ ಸಂಘ ‘ಅಡವಿ’ಯನ್ನು ಹೊರತಂದಿದೆ.

ಸಂಘಕ್ಕೆ ಇಲಾಖೆ ನೆರವು

ಕಾಫಿ ಮತ್ತು ಕರಿಮೆಣಸು ಬೆಳೆಯುವ ಸೋಲಿಗ ಸಮುದಾಯವನ್ನು ಆರ್ಥಿಕವಾಗಿ ಸದೃಢಗೊಳಿಸುವ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆ, ಭಾರತೀಯ ಕಾಫಿ ಮಂಡಳಿ ಮೂಲಕ ರಾಜ್ಯದ 3 ಕಡೆಗಳಲ್ಲಿ ವಿಶೇಷ ಯೋಜನೆ ಆರಂಭಿಸಿದೆ. ಅದರ ಅಡಿಯಲ್ಲಿ ಬಿಳಿಗಿರಿ ರಂಗನಾಥಸ್ವಾಮಿ ಸೋಲಿಗರ ಸಂಘಕ್ಕೂ ₹4 ಕೋಟಿ ನೆರವು ನೀಡಿದೆ. ಕಾಫಿ ಮಂಡಳಿಯ ತಜ್ಞರ ಮಾರ್ಗದರ್ಶನದಲ್ಲಿ ಸಂಘವು ಈ ವರ್ಷದ ಮಾರ್ಚ್‌ನಲ್ಲಿ ಕಾಫಿ ಬ್ರಾಂಡ್‌ ಹೊರ ತಂದಿದೆ.

‘ನಾವು ಇಲ್ಲಿ ಕಾಫಿ ಬೀಜ ಸಂಸ್ಕರಿಸುತ್ತೇವೆ. ಪುಡಿ ಮಾಡಲು ಯಂತ್ರ ಇಲ್ಲದಿರುವುದರಿಂದ ಬೆಂಗಳೂರಿನಲ್ಲಿ ಪುಡಿ ಮಾಡಿ ಪ್ಯಾಕಿಂಗ್‌ ಮಾಡುತ್ತೇವೆ. ಮಾರುಕಟ್ಟೆಗೆ ಬಂದು ಕೆಲವೇ ತಿಂಗಳಾಗಿದೆ. ನಿಧಾನವಾಗಿ ಪ್ರಗತಿ ಕಾಣುತ್ತಿದೆ’ ಎಂದು ಬಿಳಿಗಿರಿ ರಂಗನಾಥಸ್ವಾಮಿ ಸೋಲಿಗರ ಸಂಸ್ಕರಣಾ ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ನೇರ ಖರೀದಿ

‘ಸಂಘದಲ್ಲಿ 14 ನಿರ್ದೇಶಕರು ಹಾಗೂ 100 ಸದಸ್ಯರಿದ್ದು, ಕಾಫಿ ಬೆಳೆಯುವ ಕುಟುಂಬಗಳು ಹಾಗೂ ಸದಸ್ಯರಿಂದ ಕಾಫಿ ಬೀಜವನ್ನು ನೇರವಾಗಿ ಖರೀದಿಸುತ್ತೇವೆ. ಬೆಳೆಗಾರರು ನಮಗೇ ಮಾರಾಟ ಮಾಡಬೇಕು ಎಂಬ ನಿಯಮ ಏನಿಲ್ಲ. ಆದರೆ, ನಮ್ಮಲ್ಲಿ ಮಧ್ಯವರ್ತಿಗಳಿಗೆ ಅವಕಾಶ ಇಲ್ಲದಿರುವುದರಿಂದ ಹಾಗೂ ಮಾರುಕಟ್ಟೆ ದರವನ್ನೇ ನೀಡುವುದರಿಂದ ಹೆಚ್ಚಿನವರು ಸಂಘಕ್ಕೆ ಮಾರಾಟ ಮಾಡುತ್ತಾರೆ’ ಎಂದು ಹೇಳಿದರು.

₹15 ಕೋಟಿ ವೆಚ್ಚ, 2,‌660 ಕುಟುಂಬಗಳಿಗೆ ನೆರವು

ಸಮಾಜ ಕಲ್ಯಾಣ ಇಲಾಖೆ ರೂಪಿಸಿರುವ ಈ ವಿಶೇಷ ಅಭಿವೃದ್ಧಿ ಯೋಜನೆಗೆ ಕೊಡಗು ಜಿಲ್ಲೆಯ ವೀರಾಜಪೇಟೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯನ್ನೂ ಆಯ್ಕೆ ಮಾಡಲಾಗಿದೆ. ಅರಣ್ಯವಾಸಿಗಳಿಗೆ ಕಾಫಿ ಮತ್ತು ಕರಿಮೆಣಸು ಬೆಳೆಯುವ ಮಾಹಿತಿ, ತರಬೇತಿ ಮತ್ತು ತಾಂತ್ರಿಕ ಸಹಾಯವನ್ನು ದೊರಕಿಸಿಕೊಡುವ ಜೊತೆಗೆಉತ್ಪನ್ನಗಳಿಗೆ ನೇರ ಮಾರುಕಟ್ಟೆ ಕಲ್ಪಿಸುತ್ತದೆ. ಈ ಯೋಜನೆಯ ವೆಚ್ಚ ₹15.09 ಕೋಟಿ.

*ಕಾಫಿ ಪುಡಿ ಮಾರಾಟದಿಂದ ಬಂದ ಲಾಭವನ್ನು ಸಮುದಾಯದ ಅಭಿವೃದ್ಧಿಗೆ ಬಳಸಲಾಗುತ್ತದೆ

-ಸಿ.ಮಾದೇಗೌಡ, ಸಂಘದ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT