ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರಾಣಿ ಅಂಗಡಿಗಳ ಡಿಜಿಟಲ್‌ ವಹಿವಾಟಿಗೆ ‘ಖಾತಾಬುಕ್‌’

Last Updated 4 ಸೆಪ್ಟೆಂಬರ್ 2021, 12:16 IST
ಅಕ್ಷರ ಗಾತ್ರ

ಡಿಜಿಟಲೀಕರಣದಿಂದಾಗಿ ಸಾಂಪ್ರದಾಯಿಕ ಕಿರಾಣಿ ಅಂಗಡಿಗಳ ವಹಿವಾಟಿನ ಸ್ವರೂಪವೇ ಬದಲಾಗಿದೆ. ಹಣ ಸ್ವೀಕರಿಸುವುದು, ವ್ಯಾಪಾರದ ಲೆಕ್ಕ ಇಡುವುದು ಹೀಗೆ ಪ್ರತಿಯೊಂದೂ ಡಿಜಿಟಲ್‌ ಆಗಿದೆ. ಕಿರಾಣಿ ಅಂಗಡಿಗಳಿಗೆ ಖರೀದಿ–ಮಾರಾಟದ ಲೆಕ್ಕವನ್ನು ಡಿಜಿಟಲ್‌ ರೂಪದಲ್ಲಿ ಇಡಲು ‘ಖಾತಾಬುಕ್‌’ ನವೋದ್ಯಮ ನೆರವಾಗುತ್ತಿದೆ.

ಹಳ್ಳಿಗಳಲ್ಲಿ ಕಿರಾಣಿ ಅಂಗಡಿಗೂ ಜನರಿಗೂ ಒಂದು ವಿಶೇಷ ನಂಟು ಇರುತ್ತದೆ. ಮನೆಗೆ ದಿಢೀರನೆ ಯಾರಾದರೂ ನೆಂಟರು ಬಂದರೆ ಕೈಯಲ್ಲಿ ದುಡ್ಡಿಲ್ಲದೇ ಇದ್ದರೂ ಅಂಗಡಿಗೆ ಹೋಗಿ ಚೀಟಿ ಬರೆಸಿ ಬೇಕಾದ ದಿನಸಿ ತರಬಹುದು. ತಿಂಗಳಿಗೊಮ್ಮೆ ಲೆಕ್ಕ ಚುಕ್ತಾ ಮಾಡಿದರೆ ಆಯ್ತು. ಇಂತಹ ಲೆಕ್ಕಗಳನ್ನು ಗ್ರಾಹಕರಿಗೆ ಚೀಟಿ ಅಥವಾ ಪುಟ್ಟ ಡೈರಿಯಲ್ಲಿ ಬರೆದುಕೊಡುವುದು, ಅಂಗಡಿಯವರು ಅದಕ್ಕೆಂದೇ ಒಂದು ಲೆಕ್ಕದ ಪುಸ್ತಕ ಇಟ್ಟುಕೊಳ್ಳುವುದಿದೆ. ಮೇಲ್ನೋಟಕ್ಕೆ ಇದು ಸುಲಭ ಅಂತ ಕಂಡರೂ ಲೆಕ್ಕದಲ್ಲಿ ಸ್ವಲ್ಪ ವ್ಯತ್ಯಾಸ ಆದರೂ ಅಂಗಡಿ ಮಾಲಿಕ ಇಲ್ಲವೇ ಗ್ರಾಹಕನಿಗೆ ನಷ್ಟ ಆಗುತ್ತದೆ. ಈ ಲೆಕ್ಕದ ವಿಚಾರಕ್ಕೆನೇ ಕೆಲವೊಮ್ಮೆ ಸಣ್ಣಪುಟ್ಟ ಮನಸ್ಥಾಪಗಳೂ ಆಗುತ್ತಿರುತ್ತವೆ. ಸ್ಮಾರ್ಟ್‌ಫೋನ್‌ ಬಳಕೆಯಿಂದಾಗಿ ಇದೀಗ ಇಂತಹ ಲೆಕ್ಕಗಳನ್ನು ಡಿಜಿಟಲ್ ರೂಪದಲ್ಲಿ ಇಡುವ ವ್ಯವಸ್ಥೆ ಜಾರಿಗೆ ಬಂದಿದೆ. ಇಂತಹ ಸಮಸ್ಯೆಗಳನ್ನು ನಿವಾರಿಸಲು ಡಿಜಿಟಲ್‌ ರೂಪದಲ್ಲಿ ಲೆಕ್ಕ ಇಡುವ ಮತ್ತು ಖರೀದಿಸಿದಾಗಲ್ಲಾ ಗ್ರಾಹಕರ ಮೊಬೈಲ್‌ಗೂ ಅದನ್ನು ಕಳುಹಿಸುವ ಸೌಲಭ್ಯವನ್ನು ಖಾತಾಬುಕ್‌ ಒದಗಿಸಿದೆ. ಈ ಸೌಲಭ್ಯವು ಸಂಪೂರ್ಣ ಉಚಿತವಾಗಿದೆ.

‘ಪುಸ್ತಕದಲ್ಲಿ ಪ್ರತಿ ಬಾರಿಯೂ ಲೆಕ್ಕ ಬರೆಯುವುದು, ತಿಂಗಳಿಗೊಮ್ಮೆ ಅಂತಿಮವಾಗಿ ಬರಬೇಕಿರುವ ಬಾಕಿಯನ್ನು ಲೆಕ್ಕ ಮಾಡುವುದು ಎಲ್ಲವೂ ಬಹಳಷ್ಟು ಕಿರಿಕಿರಿ ಆಗುತ್ತಿತ್ತು. ಖಾತಾಬುಕ್‌ ಬಳಕೆ ಆರಂಭಿಸಿದ ಮೇಲೆ ಲೆಕ್ಕ ಇಡುವ ಕೆಲಸ ಸರಳವಾಗಿದೆ’ ಎನ್ನುತ್ತಾರೆ ಬೆಂಗಳೂರಿನ ಹೊರವಲಯದಲ್ಲಿ ಮಾಯಾ ಸೂಪರ್‌ ಸ್ಟೋರ್‌ ನಡೆಸುತ್ತಿರುವ ರಮೇಶ್‌ ಸಿರ್ವಿ.

‘ಸುಮಾರು 150 ಗ್ರಾಹಕರು ನಮ್ಮ ಅಂಗಡಿಯಲ್ಲಿ ಖರೀದಿ ನಡೆಸುತ್ತಾರೆ. ಅವರ ಲೆಕ್ಕವನ್ನು ಇಡುವುದು ಬಹಳ ಸುಲಭ ಆಗಿದೆ. ಖರೀದಿಯ ವಿವರ ಮತ್ತು ಪಾವತಿಸಬೇಕಿರುವ ಮೊತ್ತವು ಸ್ವಯಂಚಾಲಿತವಾಗಿ ಗ್ರಾಹಕರಿಗೆ ವಾಟ್ಸ್‌ಆ್ಯಪ್‌, ಎಸ್‌ಎಂಎಸ್‌ ಹೋಗುವ ವ್ಯವಸ್ಥೆ ಇದೆ. ಇದಕ್ಕೆ ಗ್ರಾಹಕರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಎಷ್ಟು ಬಾಕಿ ಮೊತ್ತ ಪಾವತಿಸಬೇಕಿದೆ ಎಂದು ಗ್ರಾಹಕರು ಕೇಳಿದರೆ, ಖಾತಾಬುಕ್‌ ಆ್ಯಪ್‌ನಲ್ಲಿ ಕೇವಲ ಒಂದು ಬಟನ್‌ ಟಚ್‌ ಮಾಡಿ ಅದನ್ನು ಅವರ ವಾಟ್ಸ್‌ಆಪ್‌ ನಂಬರ್‌ಗೆ ಬಹಳ ಸುಲಭವಾಗಿ ಕಳುಹಿಸಬಹುದು’ ಎಂದು ರಮೇಶ್‌ ವಿವರಿಸುತ್ತಾರೆ.

ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ ಮತ್ತು ಶಿವಮೊಗ್ಗದಲ್ಲಿ ಅತಿ ಹೆಚ್ಚಿನ ವರ್ತಕರನ್ನು ಹೊಂದಿದೆ. 13 ಭಾಷೆಗಳಲ್ಲಿ ಇದು ಬಳಕೆಗೆ ಲಭ್ಯವಿದೆ. ರಾಜ್ಯದಲ್ಲಿ 15.4 ಲಕ್ಷಕ್ಕೂ ಅಧಿಕ ವರ್ತಕರು ಖಾತಾಬುಕ್‌ ಬಳಸುತ್ತಿದ್ದಾರೆ. ದಿನಸಿ ಅಂಗಡಿಗಳು, ಆಹಾರ ಉತ್ಪನ್ನಗಳ ಮಾರಾಟ ಮಳಿಗೆಗಳು, ಜವಳಿ ಮತ್ತು ಮೊಬೈಲ್‌ ಅಂಗಡಿಗಳು ಇದನ್ನು ಬಳಸುತ್ತಿವೆ. ಎಂಎಸ್‌ಎಂಇಗಳಿಗೆ ತಮ್ಮ ವಹಿವಾಟನ್ನು ಡಿಜಿಟಲ್‌ ರೂಪದಲ್ಲಿ ಇಡಲು ಮೈಸ್ಟೋರ್‌ ಆ್ಯಪ್‌ ಮತ್ತು ಪಗಾರ್‌ಖಾತ ಸೌಲಭ್ಯ ನೀಡಲಾಗಿದೆ. ಗ್ರಾಹಕರಿಗೆ ನೀಡುವ ಸಾಲದ ಮಾಹಿತಿ, ಸಿಬ್ಬಂದಿಯ ನಿರ್ವಹಣೆ ಮತ್ತು ವೇತನ ನೀಡುವ ಸಂಬಂಧ ಈ ಆ್ಯಪ್‌ಗಳು ಹೆಚ್ಚು ಉಪಯುಕ್ತವಾಗಿವೆ.

ಗ್ರಾಮೀಣ ಭಾಗದಲ್ಲಿಯೂ 4ಜಿ ನೆಟ್‌ವರ್ಕ್‌ ಲಭ್ಯವಾಗಿದ್ದು, ಡಿಜಿಟಲೀಕರಣಕ್ಕೆ ಹೆಚ್ಚು ಉತ್ತೇಜನ ಸಿಗುವಂತಾಯಿತು. ಇದು ಖಾತಾಬುಕ್‌ ಅನ್ನು ಹಳ್ಳಿಗಳಲ್ಲಿಯೂ ವಿಸ್ತರಿಸಲು ಹೆಚ್ಚಿನ ಅನುಕೂಲ ಆಯಿತು. ಉದ್ರಿ ನೀಡುವ ಅಂಗಡಿಗಳು ಮತ್ತು ಗ್ರಾಹಕರಿಗೆ ಖಾತಾಬುಕ್‌ ಹೆಚ್ಚು ಪ್ರಯೋಜನಕಾರಿ ಆಗಿದೆ. ಪ್ರತಿ ಬಾರಿ ಖರೀದಿ ನಡೆಸಿದಾಗಲೂ ಗ್ರಾಹಕರಿಗೆ ವಾಟ್ಸ್‌ಆ್ಯಪ್, ಎಸ್‌ಎಂಎಸ್‌ ಅಲರ್ಟ್‌ ಬರುತ್ತದೆ. ಒಟ್ಟಾರೆ ಎಷ್ಟು ಮೊತ್ತ ನೀಡಬೇಕಿದೆ ಎನ್ನುವ ಲೆಕ್ಕವೂ ಸಿಗುತ್ತದೆ. ಅಂಗಡಿಯವರಿಗೆ ಗ್ರಾಹಕನ ಬಳಿ ಪದೇ ಪದೇ ಬಾಕಿ ಕೊಡುವಂತೆ ಕೇಳುವ ರಗಳೆ ಇರುವುದಿಲ್ಲ. ಇಷ್ಟು ಬಾಕಿ ಬರಬೇಕಿದೆ ಎನ್ನುವ ಎಸ್‌ಎಂಎಸ್‌ ಕಳುಹಿಸಬಹುದು ಎಂದು ಖಾತಾಬುಕ್‌ನ ಸಹ ಸ್ಥಾಪಕ ರವೀಶ್‌ ನರೇಶ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT