ಭಾನುವಾರ, ಸೆಪ್ಟೆಂಬರ್ 27, 2020
21 °C

ಗೊಂದಲದಲ್ಲಿರುವವರಿಗೆ ಮಾರ್ಗದರ್ಶನ: ನವ ಉದ್ಯಮಿಗಳಿಗಾಗಿ ಇಲ್ಲಿದೆ ವೇದಿಕೆ

ರಮೇಶ ಕೆ. Updated:

ಅಕ್ಷರ ಗಾತ್ರ : | |

Prajavani

ಪದವಿ, ತಾಂತ್ರಿಕ ಶಿಕ್ಷಣ ಪಡೆದ ನಂತರ ಉದ್ಯೋಗ ಸಿಗದೇ ಪರಿತಪಿಸುತ್ತಿರುವವರು ಹಾಗೂ ಸ್ವಂತ ಕಿರು ಉದ್ಯಮ ಸ್ಥಾಪಿಸಲು ಮುಂದೆ ಬಂದು ಕೈಸುಟ್ಟುಕೊಂಡವರು ಅಥವಾ ಹೊಸದಾಗಿ ಉದ್ಯಮ ಆರಂಭಿಸುವುದು ಹೇಗೆ? ಎಂಬ ಗೊಂದಲದಲ್ಲಿರುವವರಿಗೆ ಮಾರ್ಗದರ್ಶನ ನೀಡುವ ಕೆಲಸವನ್ನು ಮೈಸೂರಿನ ವೇದಿಕೆಯೊಂದು ಸದ್ದಿಲ್ಲದೇ ಮಾಡುತ್ತಿದೆ.

ಕಿರು ಉದ್ಯಮ ಸ್ಥಾಪಿಸಿ ಯಶಸ್ವಿಯಾದ 10 ಮಂದಿ ಸಮಾನ ಮನಸ್ಕರು ಸೇರಿ ಎರಡು ವರ್ಷಗಳ ಹಿಂದೆ ಆರಂಭಿಸಿದ ಉದ್ಯಮಶೀಲರ ಕಾಳಜಿ ವೇದಿಕೆ (ಎಂಟರ್‌ಪ್ರೆನರ್ ಕೇರ್ ಫೋರಂ) ಇಂಥದೊಂದು ವಿಶೇಷ ಕಾಯಕವನ್ನು ಮೈಸೂರು ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲೂ ಮಾಡುತ್ತಿದೆ.

ಎಲೆಕ್ಟ್ರಿಕಲ್‌ ಹಾಗೂ ಎಲೆಕ್ಟ್ರಾನಿಕ್ಸ್‌ ವಿಷಯದಲ್ಲಿ ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್‌ ಮಾಡಿದವರು ಈ ವೇದಿಕೆಯಲ್ಲಿದ್ದಾರೆ. 

‘ಈ ವೇದಿಕೆಯನ್ನು ಲಾಭದ ಉದ್ದೇಶಕ್ಕಾಗಿ ಮಾಡಿದ್ದಲ್ಲ. ಉದ್ಯಮದಲ್ಲಿ ಏಳುಬೀಳು ಕಂಡವರು ನಾವು. ಆದ್ದರಿಂದ ಮುಂದಿನ ಪೀಳಿಗೆ ಅದರಲ್ಲೂ ಯುವ ಉದ್ಯಮಿಗಳಾಗಲು ಬಯಸುವವರಿಗೆ ದಾರಿದೀಪವಾಗಲು ಮುಂದೆ ಬಂದಿದ್ದೇವೆ. ನಮ್ಮ ತಂಡದಲ್ಲಿ ರಾಜೀವ್‌ ನಾಡಿಗ್, ವಸಂತ್‌ ಹೋಬಳಿದಾರ್‌, ರಾಜಗೋಪಾಲ್‌ ಸೇರಿದಂತೆ ಬಹಳಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ’ ಎನ್ನುತ್ತಾರೆ ವೇದಿಕೆ ಸಂಸ್ಥಾಪಕ ಅನಿಲ್ ಕುಮಾರ್‌ ನಾಡಿಗೇರ್‌.

‘20 ವರ್ಷಗಳ ಹಿಂದೆ ಉದ್ಯಮ ಆರಂಭಿಸಿದಾಗ ತುಂಬಾ ಸಮಸ್ಯೆಯಿತ್ತು, ಅದನ್ನು ಎದುರಿಸಿದೆವು. ಈಗಿನ ಯುವಕರಿಗೆ ಬೆಂಬಲ ಹಾಗೂ ಸಲಹೆ ನೀಡಿದರೆ ಸ್ವಂತ ಉದ್ದಿಮೆಯಲ್ಲಿ ಯಶಸ್ವಿಯಾಗಬಹುದು ಎಂಬ ಕಾಳಜಿಯಿಂದ ವೇದಿಕೆ ಆರಂಭಿಸಿದೆವು’ ಎನ್ನುತ್ತಾರೆ ಅವರು.

ತರಬೇತಿ ನೀಡಲೆಂದು ‘ಡೇರ್‌ ಟು ಎಕ್ಸ್‌ಪ್ಲೋರ್‌’ ಎಂಬ ಕಾರ್ಯಕ್ರಮ ಆರಂಭಿಸಿದ್ದಾರೆ. ಇದರ ಅರ್ಥ ‘ನೀವು ಧೈರ್ಯ ಮಾಡಿ ಸಾಕು ಉಳಿದಿದ್ದೆಲ್ಲ ಆಗುತ್ತದೆ’ ಎಂಬುದು. ಉದ್ಯಮಶೀಲತೆ ಅವಶ್ಯಕತೆ ಎಷ್ಟಿದೆ ಎಂಬುದನ್ನು ಎಂಜಿನಿಯರಿಂಗ್‌ ಕಾಲೇಜುಗಳು ಹಾಗೂ ಇತರೆ ಪದವಿ ಕಾಲೇಜುಗಳಲ್ಲಿ ಕಾರ್ಯಕ್ರಮಗಳ ಮೂಲಕ ತಿಳಿಸಲು ಮುಂದಾಗಿದ್ದಾರೆ. ಇದುವರೆಗೂ 40ಕ್ಕೂ ಹೆಚ್ಚು ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಇಲ್ಲಿ ಹಣ ಪಡೆಯದೇ ಉಚಿತವಾಗಿ ಮಾರ್ಗದರ್ಶನ ನೀಡಲಾಗುತ್ತದೆ.

ಮೈಸೂರು ಮಾತ್ರವಲ್ಲದೇ ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಲಬುರ್ಗಿಯಲ್ಲೂ ಕಾರ್ಯಕ್ರಮ ನೀಡಿದ್ದಾರೆ. 5,000 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪಿದ್ದಾರೆ. ವೃತ್ತಿಪರ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಸೇರಿಕೊಂಡು ಸ್ವ –ಉದ್ಯೋಗ ಆಸಕ್ತರಿಗೂ ತರಬೇತಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ.

ತರಬೇತಿ ಪಡೆದ 10ಕ್ಕೂ ಹೆಚ್ಚು ಮಂದಿ ಕಿರು ಉದ್ಯಮ ಸ್ಥಾಪಿಸಿ ಯಶಸ್ವಿಯಾಗಿದ್ದಾರೆ. ಇರುವ ಉದ್ಯಮವನ್ನೇ ಬಿಟ್ಟು ಹೋಗಲು ತೀರ್ಮಾನಿಸಿದವರು ಇನ್ನಷ್ಟು ಅಭಿವೃದ್ಧಿಪಡಿಸಿಕೊಂಡಿದ್ದಾರೆ.

ಇ–ತ್ಯಾಜ್ಯ ನಿರ್ವಹಣೆ, ದುರಸ್ತಿ ಮತ್ತು ಸೇವಾವಲಯ, ಗೃಹ ಉದ್ಯಮ, ‘ಎಲೆಕ್ಟ್ರಾನಿಕ್‌ ಕಂಟ್ರೋಲ್ ಡಿವೈಸ್‌’ ತಯಾರಿಕೆ ಸೇರಿದಂತೆ ಇನ್ನಿತರೆ ಕ್ಷೇತ್ರಗಳಿಗೆ ಸಂಬಂಧಿಸಿದ ಉದ್ಯಮ ಆರಂಭಿಸಲು ನೆರವಾಗುತ್ತಿದ್ದಾರೆ.

‘ಇಂದು ಉದ್ಯಮಶೀಲತೆ ತುಂಬಾ ಅಗತ್ಯವಾಗಿದೆ. ಸರ್ಕಾರದ ವತಿಯಿಂದ ಅಗತ್ಯ ಇರುವಷ್ಟು ಉದ್ಯೋಗ ಸೃಷ್ಟಿಆಗದೇ ಇರುವುದರಿಂದ ಸಹಜವಾಗಿಯೇ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಪರಿಹಾರ ಸ್ವಂತ ಉದ್ಯಮ ಸ್ಥಾಪಿಸುವುದು. ಆರ್ಥಿಕ ಪ್ರಗತಿ ಮತ್ತು ಉದ್ಯೋಗ ಸೃಷ್ಟಿಯ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದ ಸ್ಟಾರ್ಟ್‌ಅಪ್‌ ಇಂಡಿಯಾ, ಮೇಕ್‌ ಇನ್ ಇಂಡಿಯಾ, ಮುದ್ರಾ ಎಂಬ ಪೂರಕ ಯೋಜನೆಗಳು ನೆರವಾಗುತ್ತವೆ’ ಎಂದು ಸಲಹೆ ನೀಡುತ್ತಾರೆ ಅವರು.

‘ಸರ್ಕಾರದ ಮಾಹಿತಿ ಪ್ರಕಾರ ನಮ್ಮ ದೇಶದಲ್ಲಿ  ವರ್ಷಕ್ಕೆ ಸುಮಾರು 15 ಲಕ್ಷಕ್ಕೂ ಹೆಚ್ಚು ಎಂಜಿನಿಯರಿಂಗ್‌ ಪದವೀಧರರಾಗಿ ಹೊರ ಬರುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು 80 ಸಾವಿರದಿಂದ 1 ಲಕ್ಷ ಮಂದಿ ಎಂಜಿನಿಯರಿಂಗ್‌ ಪದವೀಧರರು ಹೊರ ಬರುತ್ತಿದ್ದಾರೆ. ಇಷ್ಟು ಜನಕ್ಕೆ ಉದ್ಯೋಗ ಸಿಗುವುದು ಕಷ್ಟ. ಸದ್ಯದ ಪರಿಸ್ಥಿತಿಯಲ್ಲಿ ಸ್ವಯಂ ಹಾಗೂ ಕಿರು ಉದ್ಯೋಗ ಹೆಚ್ಚು ಅನುಕೂಲಕರವಾಗಿದೆ. ಇಂದಿನ ಯುವಕರು ಹಾಗೂ ನಿರುದ್ಯೋಗಿಗಳು ಉದ್ಯೋಗ ಆರಂಭಿಸುವ ಧೈರ್ಯ ಮಾಡುವುದಿಲ್ಲ. ಉದ್ಯೋಗಕ್ಕಾಗಿ ಪ್ರಯತ್ನಿಸಿ ಸುಮ್ಮನಾಗುವವರೇ ಹೆಚ್ಚು. ಆದ್ದರಿಂದ ಇವರಿಗೆ ಕಿರು ಉದ್ಯೋಗ ಆರಂಭಿಸುವ ಧೈರ್ಯವನ್ನು ಮೊದಲು ಮಾಡಬೇಕು. ಅದಕ್ಕಾಗಿ ಅವರಿಗೆ ಸರಿಯಾದ ದಾರಿ ತೋರಿಸಬೇಕು’ ಎನ್ನುತ್ತಾರೆ ಅವರು.

‘ಎಲ್ಲಾ ಶಿಕ್ಷಣ ಸಂಸ್ಥೆಗಳು ಕ್ಯಾಂಪಸ್‌ ಇಂಟರ್‌ವ್ಯೂಗಳಿಗೆ ಹೆಚ್ಚು ಒತ್ತು ಕೊಡುತ್ತಿವೆಯೇ ಹೊರತು ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಕೊಡಿ ಅದನ್ನು ಅಭಿವೃದ್ಧಿಪಡಿಸಿ ಎಂದು ಮುಂದೆ ಬರುವುದು ಕಡಿಮೆಯಾಗುತ್ತಿದೆ. ಪೋಷಕರು ಬೆಂಬಲಕ್ಕೆ ಬಂದರೆ ಒಳ್ಳೆಯದು’ ಎಂದು ಸಲಹೆ ನೀಡುತ್ತಾರೆ ಅನಿಲ್‌ ಕುಮಾರ್.
ಮಾಹಿತಿಗೆ: 94498 37309

ಫಲಾನುಭವಿಗಳು ಹೀಗೆನ್ನುತ್ತಾರೆ
‘ಎಂಟರ್‌ಪ್ರೆನರ್ ಕೇರ್ ಫೋರಂನವರು ಆಯೋಜಿಸಿದ್ದ ತರಬೇತಿಯಲ್ಲಿ ಪಾಲ್ಗೊಂಡು ಆಟೊಮೆಟಿಕ್‌ ಸೋಲಾರ್‌ ಎಲ್‌ಇಡಿ ತಯಾರಿಕೆ, ದುರಸ್ತಿ ಬಗ್ಗೆ ತಿಳಿದುಕೊಂಡೆ. ಬೆಂಗಳೂರಿನಲ್ಲಿ ಸನ್‌ ಸ್ಪೇರ್‌ ಟೆಕ್‌ ಹೆಸರಿನ ಉದ್ಯಮ ಆರಂಭಿಸಿದ್ದೇನೆ. ನನ್ನ ಬಳಿ ನಾಲ್ಕು ಮಂದಿ ಕೆಲಸ ಮಾಡುತ್ತಿದ್ದಾರೆ. ಈಗ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನವನ್ನು ಅಭಿವೃದ್ಧಿಪಡಿಸಲಾಗಿದ್ದು, ವಾಹನ ಚಲಿಸುವಾಗ ಚಾರ್ಜ್‌ ಆಗುವುದು ಇದರ ವಿಶೇಷ. ಇದರ ಪೇಟೆಂಟ್‌ ಪಡೆಯಲು ಪ್ರಯತ್ನಿಸುತ್ತಿದ್ದೇನೆ’ ಎಂದರು ವಿನೋದ್.

‘ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸದ ನಂತರ ಟಿ.ವಿ., ಫ್ರಿಜ್‌, ವಾಷಿಂಗ್‌ ಮೆಷಿನ್‌ ರಿಪೇರಿ ಮಾಡುವುದನ್ನು ಕಲಿತಿದ್ದೆ. ಸೋಲಾರ್‌ ವಾಟರ್‌ ಹೀಟರ್‌, ಸೌರವಿದ್ಯುತ್‌ ಬಗ್ಗೆ ಹೆಚ್ಚು ತಿಳಿದುಕೊಂಡು ಹೊಸದಾಗಿ ಏನಾದರೂ ಕಲಿಯಬೇಕು ಎಂಬ ಉತ್ಸಾಹದಿಂದ ಮೈಸೂರಿನಲ್ಲಿ ಕಳೆದ ವರ್ಷ ಉದ್ಯಮಶೀಲರ ಕಾಳಜಿ ವೇದಿಕೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ. ಅಲ್ಲಿ ಸೋಲಾರ್‌ಗೆ ಸಂಬಂಧಪಟ್ಟಂತೆ ಮಾಹಿತಿ ಪಡೆದು ಶರತ್‌ ಎಲೆಕ್ಟ್ರಾನಿಕ್ಸ್‌ ಎಂಬ ಕಿರು ಉದ್ಯಮ ಆರಂಭಿಸಿದೆ. ಸೋಲಾರ್‌ ಲೈಟ್‌, ಹೀಟರ್‌ಗಳನ್ನು ಅಳವಡಿಸುವುದು ಸೇರಿದಂತೆ ರಿಪೇರಿ ಮಾಡುವುದನ್ನು ಕಲಿತಿದ್ದೇನೆ. ಈ ಭಾಗದ ಜನರಲ್ಲಿ ಸೌರ ವಿದ್ಯುತ್ ಬಗ್ಗೆ ಅರಿವು ಮೂಡುತ್ತಿರುವುದರಿಂದ ನಮ್ಮ ಉದ್ಯಮಕ್ಕೂ ಅನುಕೂಲವಾಗಿದೆ’ ಎನ್ನುತ್ತಾರೆ ತಿ.ನರಸೀಪುರದ ಟಿ.ಶಂಕರ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು