ಮಂಗಳವಾರ, ಮಾರ್ಚ್ 31, 2020
19 °C

ನವೋದ್ಯಮ ‘ಇನಾಸ್ಕಲ್‌’ನ ವಿಶಿಷ್ಟ ವೈದ್ಯಕೀಯ ಸಾಧನ

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

ಭಾರತದಲ್ಲಿ ಶೇ 45ರಷ್ಟು ಮಕ್ಕಳು ಆಸ್ಪತ್ರೆ ಹೊರಗೆ ಜನಿಸುತ್ತವೆ. ಪ್ರತಿ ವರ್ಷ 4 ಲಕ್ಷ ಹಸುಳೆಗಳು ಅವಧಿಗೆ ಮುಂಚೆಯೇ ಜನಿಸುತ್ತವೆ. ಈ ಶಿಶುಗಳಲ್ಲಿ ಉಸಿರಾಟದ ಸಮಸ್ಯೆ ಕಂಡುಬರುತ್ತದೆ. ಶಿಶುಗಳು ತಮ್ಮಷ್ಟಕ್ಕೆ ಉಸಿರಾಡುವುದಿಲ್ಲ. ತುರ್ತು ಚಿಕಿತ್ಸೆಗಾಗಿ ಹಸುಳೆಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಲ್ಲವೇ ಜಿಲ್ಲಾ ಮಟ್ಟದ ಸುಸಜ್ಜಿತ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯೆದಲ್ಲಿಯೇ ಅಸು ನೀಗುತ್ತವೆ. ಇಂತಹ ಶಿಶುಗಳ ಸಾವಿನ ಸಂಖ್ಯೆಯು ವರ್ಷಕ್ಕೆ 1.60 ಲಕ್ಷ ಇದೆ.

ನವಜಾತ ಶಿಶುಗಳಲ್ಲಿ ಕಂಡು ಬರುವ ಈ ಮಾರಣಾಂತಿಕ ಸಮಸ್ಯೆಗೆ ದೇಶೀಯವಾಗಿ ಪರಿಹಾರ ಕಂಡುಕೊಳ್ಳುವಲ್ಲಿ ‘ಇನಾಸ್ಕಲ್‌’ ನವೋದ್ಯಮ ಯಶಸ್ವಿಯಾಗಿದೆ. ಶಿಶುಗಳ ಶ್ವಾಸಕೋಶಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ನೆರವಾಗಿ ಜೀವ ಉಳಿಸುವ ಪುಟ್ಟ ಸಾಧನವನ್ನು ಈ ಸ್ಟಾರ್ಟ್‌ಅಪ್‌ ಅಭಿವೃದ್ಧಿಪಡಿಸಿದೆ. ಉಸಿರಾಟದ ಸಮಸ್ಯೆ ನಿವಾರಿಸಲು ನೆರವಾಗುವ ‘ಸಿ–ಪ್ಯಾಪ್‌’ (Continuous positive airway pressure–CPAP) ಹೆಸರಿನ ಸಣ್ಣ ಗಾತ್ರದ ಸಾಧನ ಅಭಿವೃದ್ಧಿಪಡಿಸಿದೆ.

ಇದೊಂದು ದೇಶಿ ವೈದ್ಯಕೀಯ ತಂತ್ರಜ್ಞಾನ ನವೋದ್ಯಮವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಇದುವರೆಗೆ ನಿರ್ಲಕ್ಷಿಸಲಾಗಿರುವ ವೈದ್ಯಕೀಯ ಪರಿಕರಗಳ ತಯಾರಿಕೆಯತ್ತ ಇದು ತನ್ನ ಗಮನ ಕೇಂದ್ರೀಕರಿಸಿದೆ. ಜಾಗತಿಕವಾಗಿ ಪ್ರಮಾಣೀಕೃತ ಇತರ ವೈದ್ಯಕೀಯ ಸಲಕರಣೆಗಳನ್ನು ತಯಾರಿಸುತ್ತಿದೆ. 6 ವರ್ಷಗಳ ಹಿಂದೆ ಆರಂಭಗೊಂಡಿರುವ ಈ ಸಂಸ್ಥೆ, ಭಾರತದ ಅಗತ್ಯಕ್ಕೆ ತಕ್ಕಂತಹ ವೈವಿಧ್ಯಮಯ ವೈದ್ಯಕೀಯ ಉಪಕರಣಗಳನ್ನು ತಯಾರಿಸುವುದರತ್ತ ಗಮನ ಕೇಂದ್ರೀಕರಿಸಿದೆ.

ಇನಾಸ್ಕಲ್‌ (InnAccel) - ಹೆಸರೇ ಸೂಚಿಸುವಂತೆ ವೈದ್ಯಕೀಯ ಸಾಧನಗಳ ತಯಾರಿಕೆ ಮತ್ತು ಸಂಶೋಧನೆಗಳಿಗೆ ವೇಗೋತ್ಕರ್ಷ (ಇನ್ನೊವೇಷನ್‌ ಆ್ಯಕ್ಸಿಲಿರೇಟ್) ನೀಡುವುದೇ ಈ ನವೋದ್ಯಮದ ಮುಖ್ಯ ಧ್ಯೇಯವಾಗಿದೆ. ವಿಶ್ವದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಈ ಬಗೆಯ ಜೀವರಕ್ಷಕ ಸಾಧನವನ್ನು ಅಭಿವೃದ್ಧಿಪಡಿಸಿರುವ ಹೆಗ್ಗಳಿಕೆ ಈ ನವೋದ್ಯಮದು. ಈ ಸಾಧನಕ್ಕೆ ಭಾರತದಲ್ಲಿ ಪೇಟೆಂಟ್‌ ಕೂಡ ಪಡೆಯಲಾಗಿದೆ.

ವೈದ್ಯಕೀಯ ಉಪಕರಣಗಳ ಅಲಭ್ಯತೆ, ದುಬಾರಿ ಬೆಲೆ, ತರಬೇತಿ ಕೊರತೆ ಮತ್ತಿತರ ಕಾರಣಕ್ಕೆ ಇಂತಹ ವಿದೇಶಿ ನಿರ್ಮಿತ ಸಲಕರಣೆಗಳ ಬಳಕೆ ನಮ್ಮಲ್ಲಿ ಸಮರ್ಪಕವಾಗಿಲ್ಲ. ವಿದೇಶಗಳಲ್ಲಿ ತಯಾರಾಗುವ ಇಂತಹ ಉಪಕರಣಗಳು  ದೇಶಿ ಅಗತ್ಯಗಳನ್ನೂ ಪೂರೈಸುವುದಿಲ್ಲ. ಆ ದೊಡ್ಡ ಕೊರತೆಯನ್ನು ತುಂಬಿಕೊಡಲು ಈ ನವೋದ್ಯಮ ಶ್ರಮಿಸುತ್ತಿದೆ. ಅದರ ಸಂಶೋಧನೆ ಫಲವಾಗಿ ಈ ಪುಟ್ಟ ಸಾಧನ ತಯಾರಿಸಲಾಗಿದೆ. 

‘ದೇಶದಲ್ಲಿ ಪ್ರತಿ ವರ್ಷ ಈ ಸಮಸ್ಯೆಯಿಂದಲೇ 1.60 ಲಕ್ಷ ಶಿಶುಗಳು ಸಾವನ್ನಪ್ಪುತ್ತವೆ. ಚಿಕಿತ್ಸಾ ಕೇಂದ್ರಕ್ಕೆ ಶಿಶುಗಳನ್ನು ಸಾಗಿಸುವ ಮಾರ್ಗಮಧ್ಯೆದಲ್ಲಿಯೇ ಬಹುತೇಕ ಶಿಶುಗಳು ಮೃತಪಡುತ್ತವೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಶಿಶುಗಳು ನಿರಂತರವಾಗಿ ಉಸಿರಾಡಲು ನೆರವಾಗುವ ಈ ಸಾಧನದ ಬಳಕೆಯಿಂದ ಶಿಶುಗಳ ಸಾವಿನ ಸಂಖ್ಯೆಯನ್ನು ಗಮನಾರ್ಹವಾಗಿ ತಗ್ಗಿಸಬಹುದಾಗಿದೆ’ ಎಂದು ಸಂಸ್ಥೆಯ ಮುಖ್ಯ ತಂತ್ರಜ್ಞಾನ ಅಧಿಕಾರಿ (ಸಿಟಿಒ) ಎ. ವಿಜಯರಾಜನ್‌ (65) ಹೇಳುತ್ತಾರೆ.


ಎ. ವಿಜಯರಾಜನ್‌

‘ಆಸ್ಪತ್ರೆಗಳಲ್ಲಿ ಹೆರಿಗೆ ಕೋಣೆಯಿಂದ ನವಜಾತ ಶಿಶುಗಳಿಗಾಗಿಯೇ ಇರುವ ತೀವ್ರ ನಿಗಾ ಘಟಕಕ್ಕೆ (ಐಸಿಯು) ವರ್ಗಾಯಿಸುವ ಸಂದರ್ಭದಲ್ಲಿಯೂ ಈ ಸಾಧನ ನೆರವಿಗೆ ಬರುತ್ತದೆ. ಹೊಸಕೋಟೆ, ಕೋಲಾರ್‌, ಚೆನ್ನೈ ಮತ್ತು ಬೆಂಗಳೂರಿನ ವಾಣಿ ವಿಲಾಸ್‌ ಆಸ್ಪತ್ರೆಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲಾಗಿದೆ. ಸಕಾರಾತ್ಮಕ ಫಲಿತಾಂಶ ಬಂದಿದೆ.

‘ಆರ್ಥಿಕವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿಯೂ ಈ ಸಾಧನ ಬಳಕೆಯ ಅಗತ್ಯ ಹೆಚ್ಚಿಗೆ ಇದೆ. ಅಮೆರಿಕದಲ್ಲಿ ತಯಾರಿಸುವ ಇಂತಹ ವೈದ್ಯಕೀಯ ಉಪಕರಣಗಳನ್ನು ಭಾರತಕ್ಕೆ ತಂದರೆ ಅನೇಕ ಕಾರಣಗಳಿಂದ ಅವು ಸ್ಥಳೀಯ ಅಗತ್ಯಗಳಿಗೆ ಹೊಂದಿಕೊಳ್ಳುವುದಿಲ್ಲ. ಹೀಗಾಗಿ ಸ್ಥಳೀಯ ಅಗತ್ಯಗಳನ್ನು ಪೂರೈಸುವಂತಹ ಸಾಧನಗಳನ್ನು ದೇಶೀಯವಾಗಿಯೇ ಅಭಿವೃದ್ಧಿಪಡಿಸುವ ಅಗತ್ಯ ಇದೆ.

‘ಇದು ಬ್ಯಾಟರಿ, ಆ್ಯಂಬುಲನ್ಸ್‌ನಲ್ಲಿನ ವಿದ್ಯುತ್‌ನಿಂದಲೂ ಕಾರ್ಯನಿರ್ವಹಿಸುತ್ತದೆ. ತಮ್ಮಷ್ಟಕ್ಕೆ ಉಸಿರಾಡಲು ಕಷ್ಟಪಡುವ ಶಿಶುಗಳ ಶ್ವಾಸಕೋಶಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ನೆರವಾಗುವುದೇ ಇದರ ಉದ್ದೇಶ. ಈ ಸಾಧನವು ವಾತಾವರಣದಲ್ಲಿನ ಗಾಳಿಯನ್ನು ಶುದ್ಧೀಕರಿಸಿ ನಿಯಂತ್ರಿತ ಪ್ರಮಾಣದಲ್ಲಿ ಶಿಶುವಿಗೆ ಪೂರೈಸುತ್ತದೆ.

ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಸಾಧನ ಲಭ್ಯ ಇರುವಂತೆ ಮಾಡುವುದು ಸ್ಟಾರ್ಟ್‌ಅಪ್‌ ಸ್ಥಾಪಕರ ಆಲೋಚನೆಯಾಗಿದೆ. ಇದರ ನಿರ್ವಹಣೆಗೆ ಯಾವುದೇ ವೆಚ್ಚ ಇರುವುದಿಲ್ಲ. ಇದರ ತಯಾರಿಕೆಗೆ ಬಳಸಿರುವ ಸಲಕರಣೆಗಳೆಲ್ಲ ಪ್ರಮಾಣಿಕೃತವಾಗಿವೆ. ಎರಡು ವರ್ಷಗಳವರೆಗೆ ಬ್ಯಾಟರಿ ಬಳಕೆ ಇರಲಿದೆ. ಆನಂತರ ಬದಲಿಸಬಹುದು. ಬ್ಯಾಟರಿ ವಿಫಲಗೊಂಡರೆ, ಮ್ಯಾನುವಲ್‌ ಮೋಡ್‌ನಲ್ಲಿ 2 ರಿಂದ 3 ಗಂಟೆಗಳವರೆಗೆ ನಿರಂತರವಾಗಿ ಇದನ್ನು ಬಳಸುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಸಾಧನಕ್ಕೆ ಯುರೋಪ್‌ ಸಿಇ ಸರ್ಟಿಫಿಕೇಟ್‌ ಪಡೆಯಲು ಉದ್ದೇಶಿಸಲಾಗಿದೆ. ಸಾಧನದ ರಫ್ತಿಗೆ ಅವಕಾಶವೂ ಇದೆ. ಸದ್ಯಕ್ಕೆ ಮೈಸೂರಿನಲ್ಲಿ ತಯಾರಿಸಲಾಗುತ್ತಿದೆ. ಇದರ ಬಳಕೆ ಕುರಿತು ತರಬೇತಿ ನೀಡಲಾಗುವುದು. ಈ ಬಗ್ಗೆ ವಿಡಿಯೊ ಕೂಡ ಸಿದ್ಧಪಡಿಸಲಾಗಿದೆ.

ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ 42 ವರ್ಷಗಳ ಅನುಭವ ಹೊಂದಿರುವ ಕಂಪ್ಯೂಟರ್‌ ಸೈನ್ಸ್‌ ಪದವೀಧರರಾಗಿರುವ ಎ. ವಿಜಯರಾಜನ್‌ (65) ಅವರ ವೃತ್ತಿ ಬದುಕು ವೈವಿಧ್ಯಮಯವಾದುದು. ಎಂಎಸ್‌ ಕಾಲೇಜ್‌ನಲ್ಲಿ ಬೋಧಕರಾಗಿ ಕಾರ್ಯ ನಿರ್ವಹಿಸಿದ್ದಾರೆ.  ಸಲಹಾ ಸಂಸ್ಥೆ ನಿರ್ವಹಿಸಿದ್ದಾರೆ. ಜಿಇ ಹೆಲ್ತ್‌ಕೇರ್‌ನಲ್ಲಿ ಕೆಲಸ ಮಾಡಿದ್ದಾರೆ. ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಎಲೆಕ್ಟ್ರಾನಿಕ್‌ ವೈದ್ಯಕೀಯ ದಾಖಲೆಗಳನ್ನು ಸಂಗ್ರಹಿಸಿ ಇಡುವ ಸೌಲಭ್ಯ ಅಭಿವೃದ್ಧಿಪಡಿಸಿದ್ದಾರೆ. 2012ರ ವೇಳೆಗೆ ಅವರು ತಮ್ಮ ಕೈಯಲ್ಲಿದ್ದ ಯೋಜನೆಗಳನ್ನೆಲ್ಲ ಪೂರ್ಣಗೊಳಿಸಿದ್ದರು. ಪಾಲುದಾರರ ಜತೆ ಸೇರಿಕೊಂಡು ವೈದ್ಯಕೀಯ ಕ್ಷೇತ್ರದಲ್ಲಿ ಏನಾದರೂ ಹೊಸತನ್ನು ಮಾಡಬೇಕು ಎಂದು ಹೊರಟಿದ್ದರು. ವೈದ್ಯಕೀಯ ಕ್ಷೇತ್ರದಲ್ಲಿ ಡಿಜಿಟಲ್‌ ಬಳಕೆ ಹೆಚ್ಚಿದ್ದರೂ, ಭೌತಿಕ ಸಾಧನಗಳ ಲಭ್ಯತೆ ಸಾಕಷ್ಟು ಇದ್ದಿರಲಿಲ್ಲ. ಇಂತಹ ಬಹು ಉಪಯುಕ್ತ ಸಾಧನಗಳ ಕೊರತೆ ನಿವಾರಿಸಲು ತಮ್ಮ ಸ್ನೇಹಿತರ ಜತೆ ಸೇರಿಕೊಂಡು ಈ ನವೋದ್ಯಮ ಸ್ಥಾಪಿಸಿದ್ದಾರೆ. 

ಸಂಸ್ಥೆ ತಯಾರಿಸುವ ವೈದ್ಯಕೀಯ ಸಾಧನಗಳಿಗೆಲ್ಲ ಅಮೆರಿಕದ ‘ಎಫ್‌ಡಿಎ’ದ ಪ್ರಮಾಣಪತ್ರ ಪಡೆಯುವುದು ಇವರ ಉದ್ದೇಶವಾಗಿದೆ. ಈ ಸಾಧನ ತಯಾರಿಕೆಗೆ ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ಸಚಿವಾಲಯ ಮತ್ತು ಮಿಲೆನಿಯಂ ಅಲೈಯನ್ಸ್‌ನಿಂದಲೂ  ನೆರವು ಪಡೆಯಲಾಗಿದೆ. ಬ್ಯಾಟರಿ ಇಲ್ಲದಿದ್ದರೂ  ಮ್ಯಾನುವಲ್‌ ಮೋಡ್‌ನಲ್ಲಿ ನಿರ್ವಹಿಸಬಹುದಾದ ಈ ‘ಸಿಪ್ಯಾಪ್‌’ ವಿಶ್ವದಲ್ಲಿಯೇ ಮೊದಲನೆಯದು.  ಮುಂಬರುವ ದಿನಗಳಲ್ಲಿ ವಾಣಿಜ್ಯ ಉದ್ದೇಶದಿಂದ ಇದರ ತಯಾರಿಕೆಗೆ ಗಮನ ಕೇಂದ್ರೀಕರಿಸಲಾಗುವುದು ಎಂದೂ ವಿಜಯರಾಜನ್‌ ಹೇಳುತ್ತಾರೆ.

ವೈದ್ಯಕೀಯ ಉಪಕರಣಗಳ ಮಾರುಕಟ್ಟೆಯು ವಾರ್ಷಿಕ ಶೇ 15ರ ದರದಲ್ಲಿ ಬೆಳೆಯುತ್ತಿದೆ. ಅಭಿವೃದ್ಧಿಹೊಂದಿದ ದೇಶಗಳಲ್ಲಿ – ಸರ್ಕಾರ ಇಲ್ಲವೆ ವಿಮೆ ಕಂಪನಿಗಳು ವ್ಯಕ್ತಿಗಳ ಆರೋಗ್ಯದ ಕಾಳಜಿ ನೋಡಿಕೊಳ್ಳುತ್ತವೆ. ನಮ್ಮಲ್ಲಿ ಜನರು ಎಲ್ಲವನ್ನೂ ಸ್ವಂತ ಖರ್ಚಿನಿಂದಲೇ ಭರಿಸಬೇಕಾಗುತ್ತದೆ. ಎಲ್ಲ ಬಗೆಯ ವಾತಾವರಣದಲ್ಲಿ ಕಾರ್ಯನಿರ್ವಹಿಸುವ, ದಾದಿಯರಿಗೆ ಸುಲಭ ನಿರ್ವಹಣೆಯ, ಕಡಿಮೆ ತಪ್ಪು ಮಾಡಲು ಅವಕಾಶ ಇರುವ ವೈದ್ಯಕೀಯ ಸಾಧನಗಳನ್ನು ತಯಾರಿಸುವುದು ಈ ಸ್ಟಾರ್ಟ್‌ಅಪ್‌ನ ಉದ್ದೇಶವಾಗಿದೆ. ಆಸ್ಪತ್ರೆಗಳಲ್ಲಿನ ‘ಎಥಿಕಲ್‌ ಬೋರ್ಡ್‌’ ಅನುಮತಿ ನೀಡಿದ ನಂತರವೇ ಇದನ್ನು ಪ್ರಾಯೋಗಿಕವಾಗಿ ಬಳಕೆಗೆ ತರಲಾಗಿದೆ. ಸರ್ಕಾರವು ದೊಡ್ಡ ಪ್ರಮಾಣದಲ್ಲಿ ಈ ಸಾಧನ ಖರೀದಿಸಿ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಸಿದರೆ ಅಸಂಖ್ಯ ಶಿಶುಗಳ ಸಾವು ತಡೆಯಬಹುದು ಎಂದೂ ವಿಜಯರಾಜನ್‌ ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು