ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೋದ್ಯಮ | ಕೊರೊನಾಗೆ ಅನ್‌ಟಚ್‌ ಬ್ಯಾಂಡ್‌

Last Updated 6 ಮೇ 2020, 21:00 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್‌–19’ ಪಿಡು ಗಿನ ನಿಯಂತ್ರಣದಲ್ಲಿ ಕೈಗಳಿಂದ ಕಣ್ಣು, ಮೂಗು, ಬಾಯಿ ಸ್ಪರ್ಶಿಸುವ ಪ್ರವೃತ್ತಿಗೆ ಕಡಿವಾಣ ಹಾಕುವುದೂ ಮುಖ್ಯ ಪಾತ್ರವಹಿಸುತ್ತಿದ್ದು, ಕೈಗಳು ಮುಖದ ಹತ್ತಿರ ಹೋಗುವುದನ್ನು ತಡೆಯಲು ನೆರವಾಗುವ ಧರಿಸಬಹು ದಾದ ಬ್ಯಾಂಡ್‌ ಅನ್ನು ನಗರದ ನವೋದ್ಯಮ ಬಿಎಚ್‌ಟಿ ಟೆಕ್ನಾಲಜೀಸ್‌ ಅಭಿವೃದ್ಧಿಪಡಿಸಿದೆ.

ಸಾರ್ವಜನಿಕ ಬದುಕಿನಲ್ಲಿ ಹಲ ವಾರು ಜನರು ಸಂಪರ್ಕಕ್ಕೆ ಬರುತ್ತಾರೆ. ಹಣ ಪಾವತಿ, ಸಾರಿಗೆ ಮತ್ತು ಲಿಫ್ಟ್‌ ಬಳಕೆ ಸೇರಿದಂತೆ ಅನೇಕ ಕಡೆಗಳಲ್ಲಿ ಅನಿವಾರ್ಯವಾಗಿ ಬೆರಳು ಮತ್ತು ಕೈಗ ಳನ್ನು ಬಳಸುವುದರಿಂದ ‘ಕೊರೊನಾ–2’ ವೈರಾಣುವಿನ ಸಂಪರ್ಕಕ್ಕೆ ಬರುವ ಸಾಧ್ಯತೆ ಹೆಚ್ವಿಗೆ ಇರುತ್ತದೆ. ಇದೇ ಕಾರಣಕ್ಕೆ ಕೈಗಳನ್ನು ಪದೇ ಪದೇ ನೀರಿನಿಂದ ತೊಳೆದುಕೊಳ್ಳಲು ಸೂಚಿಸಲಾಗಿದೆ. ಅದೇ ರೀತಿ ಕೈಗಳಿಂದ ಪದೇ ಪದೇ ಮುಖ ಸ್ಪರ್ಶಿಸುವ ಪ್ರವೃತ್ತಿಗೂ ಕಡಿವಾಣ ಹಾಕುವ ಪ್ರವೃತ್ತಿ ರೂಢಿಸಿಕೊಳ್ಳುವುದು ಮುಖ್ಯವಾಗಿದೆ. ಇಂತಹ ಅನಿವಾರ್ಯತೆಗೆ ಈ ನವೋ ದ್ಯಮವು ಧರಿಸಬಹುದಾದ ಬ್ಯಾಂಡ್‌ ರೂಪದಲ್ಲಿ ಪರಿಹಾರ ಕಂಡುಕೊಂಡಿದೆ.

‘ಪ್ರತಿ ಬಾರಿ ವ್ಯಕ್ತಿಯ ಕೈ ಮುಖದ ಬಳಿ ಹೋಗುತ್ತಿದ್ದಂತೆ ಕೈಗೆ ಧರಿಸಿರುವ ಅನ್‌ಟಚ್‌ ( Untouch) ಹೆಸರಿನ ಬ್ಯಾಂಡ್‌ ಕಂಪಿ ಸುತ್ತದೆ. ಇದು ಮುಖ ಸ್ಪರ್ಶಿಸದಂತೆ ಎಚ್ಚರಿಸುವ ಗಂಟೆಯಾಗಿರುತ್ತದೆ. ವ್ಯಕ್ತಿಯೊಬ್ಬ ಒಂದು ಗಂಟೆ ಅವಧಿಯಲ್ಲಿ ತನಗರಿವಿಲ್ಲದಂತೆ 16 ರಿಂದ 25 ಬಾರಿ ಮುಖ ಮುಟ್ಟಿಕೊಳ್ಳುತ್ತಾನೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಪ್ರತಿ ಬಾರಿ ಕೈಗಳು ಮುಖದ ಹತ್ತಿರ ಹೋಗುತ್ತಿದ್ದಂತೆ ಈ ಬ್ಯಾಂಡ್‌ ಕಂಪಿಸುವುದರಿಂದ ಅಪ್ರಜ್ಞಾಪೂರ್ವಕವಾದ ಇಂತಹ ನಡವಳಿಕೆಗೆ ಸಹಜವಾಗಿಯೇ ಕಡಿವಾಣ ಬೀಳಲಿದೆ’ ಎಂದು ನವೋದ್ಯಮದ ಸಹ ಸ್ಥಾಪಕ ಶ್ರೀಶೈಲ ಪತ್ತಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಬ್ಯಾಂಡ್‌ನಲ್ಲಿ ವ್ಯಕ್ತಿಯ ದೇಹದ ಉಷ್ಣತೆ ತಿಳಿಸುವ ಸೆನ್ಸರ್‌ ಅಳವಡಿಸಲಾಗಿದೆ. ದೇಹದ ಉಷ್ಣತೆ ಏರಿಳಿತಗೊಂಡರೆ ಆ ಮಾಹಿತಿ ಮೊಬೈಲ್‌ ಆ್ಯಪ್‌ಗೆ ರವಾನೆಯಾಗುತ್ತದೆ. ಕೋವಿಡ್‌ ಪೀಡಿತರ ಕೈಗೆ ಈ ಬ್ಯಾಂಡ್‌ ಕಟ್ಟಿದ್ದರೆ ದಾದಿಯರು ದೂರದಿಂದಲೇ ರೋಗಿಯ ದೇಹದ ಉಷ್ಣತೆ ತಿಳಿದುಕೊಳ್ಳಬಹುದು.

’ರೀಚಾರ್ಜೆಬಲ್‌ ಬ್ಯಾಂಡ್‌ ಪ್ರಾಯೋಗಿಕವಾಗಿ ಪರೀಕ್ಷೆಯಲ್ಲಿ ಪಾಸ್‌ ಆಗಿದೆ. ಇಂಡಿಯಾ ಇನೊವೇಷನ್‌ ಫೌಂಡೇಷನ್‌ ಏರ್ಪಡಿಸಿರುವ ಕೋವಿಡ್‌ ಸಂಬಂಧಿಸಿದ ಸ್ಪರ್ಧೆಯ ಅಂತಿಮ ಸುತ್ತಿಗೆ ಈ ಉತ್ಪನ್ನ ಆಯ್ಕೆಯಾಗಿದೆ. ಈ ಬ್ಯಾಂಡ್‌ ಅನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಸದ್ಯದಲ್ಲೇ ಮಾರುಕಟ್ಟೆಗೆ ಲಭ್ಯವಾಗಲಿದೆ.

‘ಧರಿಸಬಹುದಾದ ಬ್ರ್ಯಾಂಡೆಡ್‌ ಬ್ಯಾಂಡ್‌ಗಳಲ್ಲಿ ಇರುವ ಸೌಲಭ್ಯಗಳೆಲ್ಲವನ್ನೂ ಇದರಲ್ಲಿ ಅಳವಡಿಸಬಹುದು. ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸುವ ಇತರ ಸೌಲಭ್ಯಗಳನ್ನೂ ಸಾಫ್ಟ್‌ವೇರ್ ನವೀಕರಿಸುವ ಮೂಲಕ ಸುಲಭವಾಗಿ ಬಳಸುವ ರೀತಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

‘ಮಕ್ಕಳಲ್ಲಿ ಕಂಡು ಬರುವ ಬೆರಳು ಚೀಪುವ, ಉಗುರು ಕಡಿಯುವ ಮತ್ತು ಸಾಮಾಜಿಕ ಜಾಲ ತಾಣಗಳನ್ನು ಗಂಟೆಗಟ್ಟಲೆ ಜಾಲಾಡುವ ವಯಸ್ಕರ ಪ್ರವೃತ್ತಿಗೆ ಕಡಿವಾಣ ಹಾಕುವ ಬಗೆ ಯಲ್ಲಿಯೂ ಬಳಕೆದಾರರನ್ನು ಎಚ್ಚರಿ ಸುವ ರೀತಿಯಲ್ಲಿ ಈ ಸಾಧನ ಅಭಿವೃದ್ಧಿಪ ಡಿಸಲಾಗುತ್ತಿದೆ.

‘ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ನಿಗದಿತ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯವಾಗಿ ಪಾಲಿಸಲೂ ಇದು ನೆರವಾಗಲಿದೆ. ವ್ಯಕ್ತಿಗಳ ನಡುವಣ ಅಂತರ 3 ಅಡಿಗಳಿಗಿಂತ ಕಡಿಮೆ ಆಗುತ್ತಿದ್ದಂತೆ ಬೀಪ್‌ ಸದ್ದು ಹೊರಡಿಸುವ ಸೌಲಭ್ಯವೂ ಇದರಲ್ಲಿ ಇರಲಿದೆ. ಆರಂಭದಲ್ಲಿ ಇದಕ್ಕೆ ₹ 2,000 ವೆಚ್ಚ ಬರಬಹುದು. ತಯಾರಿಕೆ ಹೆಚ್ಚುತ್ತಿದ್ದಂತೆ ಖಂಡಿತವಾಗಿಯೂ ಬೆಲೆ ಅಗ್ಗವಾಗಲಿದೆ. ಸಹ ಸ್ಥಾಪಕರಾದ ರವಿ ಪೂಜಾರಿ ಮತ್ತು ಇಫ್ತಿಕಾರ್‌ ಖಾನ್‌ ಜತೆಯಾಗಿ ಈ ಬ್ಯಾಂಡ್ ಅಭಿವೃದ್ಧಿಪಡಿಸಲಾಗಿದೆ’ ಎಂದು ಶ್ರೀಶೈಲ ಭರವಸೆ ನೀಡುತ್ತಾರೆ. ಮಾಹಿತಿಗೆ https://untouch.band/ ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದು ಇಲ್ಲವೆ 9739076766 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT